Connect with us

Dvgsuddi Kannada | online news portal | Kannada news online

ದಾವಣಗೆರೆ: ಅಪಘಾತ ತಗ್ಗಿಸಲು ಕಠಿಣ ಕ್ರಮ; ಹೆದ್ದಾರಿಯಲ್ಲಿ ಜಾಹೀರಾತು ಫಲಕ ರದ್ದು- ಕರ್ಕಶ ಹಾರನ್, ಎಲ್‍ಇಡಿ ಬಲ್ಬ್ ಬಳಸುವಂತಿಲ್ಲ; ಡಿಸಿ ಎಚ್ಚರಿಕೆ

davangere dc 7

ದಾವಣಗೆರೆ

ದಾವಣಗೆರೆ: ಅಪಘಾತ ತಗ್ಗಿಸಲು ಕಠಿಣ ಕ್ರಮ; ಹೆದ್ದಾರಿಯಲ್ಲಿ ಜಾಹೀರಾತು ಫಲಕ ರದ್ದು- ಕರ್ಕಶ ಹಾರನ್, ಎಲ್‍ಇಡಿ ಬಲ್ಬ್ ಬಳಸುವಂತಿಲ್ಲ; ಡಿಸಿ ಎಚ್ಚರಿಕೆ

ದಾವಣಗೆರೆ: ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ರಸ್ತೆಗಳಿದ್ದು, ಇಲ್ಲಿ ಸಂಭವಿಸುವ ಅಪಘಾತಗಳಲ್ಲಿ ಸರಾಸರಿ ದಿನಕ್ಕೊಂದು ಸಾವಿನ ಪ್ರಕರಣಗಳು ವರದಿಯಾಗುತ್ತಿರುವುದು ಕಳವಳಕಾರಿಯಾಗಿದೆ. ಅಪಘಾತ ಪ್ರಮಾಣ ತಗ್ಗಿಸಲೇಬೇಕಾದ ಅನಿವಾರ್ಯತೆಯಿಂದ ಕಠಿಣ ಕ್ರಮ ಅನಿವಾರ್ಯವಾಗಿದೆ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ.ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಾರ್ಷಿಕವಾಗಿ ನೋಡಿದಾಗ 2022 ರಲ್ಲಿ ರಸ್ತೆ ಅಪಘಾತದಲ್ಲಿ 308, 2023 ರಲ್ಲಿ 293 ಮತ್ತು 2024 ರಲ್ಲಿ 283 ಮರಣಗಳು ಸಂಭವಿಸಿದ್ದು ಕಳೆದ ಮೂರು ವರ್ಷಗಳಲ್ಲಿ ಸರಾಸರಿ 57 ಅಪಘಾತ ಪ್ರಮಾಣ ಕಡಿಮೆಯಾಗಿವೆ. ಆದರೂ ಸಹ ಅಪಘಾತ ಪ್ರಮಾಣವನ್ನು ತೀವ್ರವಾಗಿ ತಗ್ಗಿಸಲು ರಸ್ತೆ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳು ಸಭೆಯನ್ನು ಕರೆದು ಪರಿಶೀಲನೆ ನಡೆಸಲಾಗುತ್ತದೆ ಎಂದರು.

ಜಿಲ್ಲೆಯಲ್ಲಿ ಈಗಾಗಲೇ ಅಪಘಾತ ವಲಯಗಳನ್ನು ಗುರುತಿಸಲಾಗಿದ್ದು ಒಂದೇ ಸ್ಥಳದಲ್ಲಿ ಹೆಚ್ಚು ಅಪಘಾತವಾಗಿರುವ ಸ್ಥಳಗಳನ್ನು ಗುರುತಿಸಿ ಅಲ್ಲಿ ರಸ್ತೆ ಅಭಿವೃದ್ದಿ, ವೇಗ ನಿಯಂತ್ರಕ, ಸೂಚನಾ ಫಲಕಗಳನ್ನು ಅಳವಡಿಸಲಾಗುತ್ತದೆ. ವಾಹನ ಚಾಲಕರು ಅಜಾಗರೂಕತೆಯಿಂದ ವಾಹನ ಚಲಾಯಿಸುವುದು, ರಸ್ತೆ ನಿಯಮಗಳನ್ನು ಪಾಲನೆ ಮಾಡದಿರುವುದು ಕಂಡು ಬಂದಿದ್ದು ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳು ಕಡ್ಡಾಯವಾಗಿ ಸರತಿ ಲೈನ್ ನಿಯಮಗಳನ್ನು ಅನುಸರಿಸಬೇಕು, ಇಲ್ಲವಾದಲ್ಲಿ ಹೆದ್ದಾರಿ ಗಸ್ತು ವಾಹನದ ಮೂಲಕ ಅಂತಹ ವಾಹನಗಳ ಮೇಲೆ ದಂಡ ವಿಧಿಸಲಾಗುತ್ತದೆ ಎಂದರು.

ಹೆದ್ದಾರಿ ಫಲಕ ತೆರವಿಗೆ ಸೂಚನೆ; ಲೋಕೋಪಯೋಗಿ ಇಲಾಖೆಯಿಂದ ರಸ್ತೆಗಳಲ್ಲಿ ಅಳವಡಿಸಲು ನೀಡಲಾಗಿದ್ದ ಖಾಸಗಿ ಹೆದ್ದಾರಿ ಫಲಕ, ಜಾಹೀರಾತು ಫಲಕಗಳನ್ನು ಅಳವಡಿಸಲು ನೀಡಿದ್ದ ಅನುಮತಿಯನ್ನು ಕೂಡಲೇ ರದ್ದುಮಾಡಲು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಾಹಿರಾತು ಪ್ರಚಾರಕ್ಕಾಗಿ ಜಿಲ್ಲೆಯಲ್ಲಿ ನೂತನವಾಗಿ ಬೈಲಾ ಮಾಡುವ ಮೂಲಕ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪರವಾನಗಿ ಪಡೆದು ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಅಳವಡಿಸಲು ಹೊಸ ಮಾರ್ಗಸೂಚಿಯನ್ನು ಸಿದ್ದಪಡಿಸಲಾಗುತ್ತದೆ. ಆದರೆ ಲೋಕೋಪಯೋಗಿ ಇಲಾಖೆಯವರು ರಸ್ತೆಗಳಲ್ಲಿ ಅಳವಡಿಸಲು ಎನ್‍ಓಸಿಯನ್ನು ಮಾತ್ರ ಅವಕಾಶ ಇದ್ದು ಪರವಾನಗಿ ನೀಡುವ ಪ್ರಾಧಿಕಾರವಾಗಿರುವುದಿಲ್ಲ ಎಂದರು.

ಕರ್ಕಶ ಹಾರನ್, ಎಲ್‍ಇಡಿ ಬಲ್ಬ್ ಬಳಸುವಂತಿಲ್ಲ; ಮೋಟಾರು ವಾಹನ ಕಾಯ್ದೆಯನ್ವಯ ಯಾವುದೇ ವಾಹನಗಳಲ್ಲಿ ಕರ್ಕಶವಾದ ಹಾರನ್ ಬಳಕೆ ಮಾಡುವಂತಿಲ್ಲ ಮತ್ತು ಹೆಚ್ಚಿನ ಬೆಳಕಿಗಾಗಿ ಎಲ್‍ಇಡಿ ಬಲ್ಬ್ ಬಳಕೆ ಮಾಡಲು ಅವಕಾಶ ಇಲ್ಲ. ಮತ್ತು ಅನೇಕ ವಾಹನಗಳ ಹಿಂದೆ ವಿವಿಧ ಭಾವಚಿತ್ರಗಳ ಅಳವಡಿಕೆ ಮಾಡಿಕೊಂಡಿರುತ್ತಾರೆ. ಇದರಿಂದ ಹಿಂದೆ, ಮುಂದೆ, ಅಕ್ಕ-ಪಕ್ಕದಲ್ಲಿ ಹೋಗುವ ವಾಹನಗಳು ಕಾಣದೇ ಅಪಘಾತಗಳು ಸಂಭವಿಸುತ್ತವೆ. ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮೋಟಾರ್ ವಾಹನ ಕಾಯ್ದೆಯ ನಿಯಮಗಳನ್ನು ಪಾಲನೆ ಮಾಡದ ವಾಹನಗಳ ಮೇಲೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.

ರಸ್ತೆ ಒತ್ತುವರಿ ತೆರವಿಗೆ ಕ್ರಮ; ಲೋಕೋಪಯೋಗಿ ರಸ್ತೆ ಅನೇಕ ಕಡೆ ಒತ್ತುವರಿ ಮತ್ತು ನಗರ, ಪಟ್ಟಣ ಪ್ರದೇಶದಲ್ಲಿ ರಸ್ತೆ ಒತ್ತುವರಿ ಮಾಡಿರುವುದರಿಂದ ಕಿರಿದಾದ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗುವ ಕಾರಣ ಅಪಘಾತಗಳು ಸಂಭವಿಸುತ್ತವೆ. ಅಪಘಾತ ತಡೆಗಟ್ಟಲು ಒತ್ತುವರಿ ರಸ್ತೆಗಳನ್ನು ತೆರವು ಮಾಡಲು ಮತ್ತು ನಗರ, ಪಟ್ಟಣಗಳ ಪುಟ್‍ಪಾತ್ ಒತ್ತುವರಿಯಾಗಿರುವುದರಿಂದ ಪಾದಚಾರಿಗಳು ರಸ್ತೆಯ ಮೇಲೆ ಸಂಚರಿಸುವರು. ಇದರಿಂದಲೂ ಅಪಘಾತ ಸಂಭವಿಸಲಿರುವುದರಿಂದ ಅನಿವಾರ್ಯವಾಗಿ ತೆರವು ಮಾಡಬೇಕಾಗಿದೆ ಎಂದರು.

ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top