ದಾವಣಗೆರೆ : ಹರಿಹರ ತಾಲ್ಲೂಕು ಸಾರಥಿ-ಕುರುಬರಹಳ್ಳಿ ಕೈಗಾರಿಕಾ ವಸಾಹತುವಿನಲ್ಲಿ ಅಭಿವೃದ್ಧಿಪಡಿಸಲಾಗಿರುವ ನಿವೇಶನಗಳ ದರ ಪರಿಷ್ಕರಿಸುವುದರ ಕುರಿತು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಕರ್ನಾಟಕ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಅಭಿವೃದ್ಧಿ ನಿಗಮದ (ಕೆಎಸ್‍ಎಸ್‍ಐಡಿಸಿ) ಅಧಿಕಾರಿಗಳಿಗೆ ಸೂಚನೆ ನೀಡಿದರು. ದಾವಣಗೆರೆ: ಫೆ. 18 ರಿಂದ ಮತ್ತೆ ಜನಸ್ಪಂದನ ಸಭೆ ಆರಂಭ
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಹರಿಹರ ತಾಲ್ಲೂಕು ಕುರುಬರಹಳ್ಳಿ ಬಳಿ ಕೆಎಸ್‍ಎಸ್‍ಐಡಿಸಿ ವತಿಯಿಂದ ಕೈಗಾರಿಕಾ ವಸಾಹತು ಸ್ಥಾಪಿಸಿ 95 ನಿವೇಶನಗಳನ್ನು ಅಭಿವೃದ್ಧಿಪಡಿಸಿದ್ದು, ಇದುವರೆಗೆ 26 ನಿವೇಶನಗಳು ಮಾತ್ರ ಹಂಚಿಕೆ ಮಾಡಲಾಗಿದೆ. 57 ನಿವೇಶನಗಳು ಹಂಚಿಕೆಯಾಗದೆ ಖಾಲಿ ಇವೆ.
ಧಾರವಾಡ ಅಪಘಾತದಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ; ದಾವಣಗೆರೆಯಿಂದ ಅಪಘಾತ ಸ್ಥಳದವರೆಗೆ ಜಾಥಾ
ಈ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪನೆಗೆ ನಿವೇಶನ ಪಡೆಯಲು ಪ್ರತಿ ಎಕರೆಗೆ ಸುಮಾರು 2.20 ಕೋಟಿ ರೂ. ವೆಚ್ಚವನ್ನು ಉದ್ಯಮಿಗಳು ಭರಿಸಬೇಕಿದೆ. ಇಷ್ಟೊಂದು ದೊಡ್ಡ ಮೊತ್ತ ನೀಡಿ ನಿವೇಶನ ಪಡೆಯಲು ಯಾರೂ ಮುಂದೆ ಬಾರದ ಕಾರಣ ಖಾಲಿ ಉಳಿದಿದ್ದು, ಈಗಾಗಲೇ ನಿವೇಶನ ಪಡೆದವರಲ್ಲಿಯೂ ಕೈಗಾರಿಕೆ ಚಟುವಟುಕೆ ಪ್ರಾರಂಭಿಸಿಲ್ಲ. ಪ.ಜಾತಿ, ಪಂಗಡದವರಿಗೆ ಶುಲ್ಕದಲ್ಲಿ ಶೇ. 50 ರಷ್ಟು ಸಬ್ಸಿಡಿ ಇರುವುದರಿಂದ ಕೇವಲ ಪ.ಜಾತಿ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಿದ್ದು, ಈವರೆಗೆ 18 ಜನ ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಇಲ್ಲಿನ ಕೈಗಾರಿಕಾ ವಸಾಹತುವಿನಲ್ಲಿ ನಿವೇಶನ ಪಡೆಯುವುದು ದುಬಾರಿಯಾಗಿದ್ದು, ದರವನ್ನು ಕಡಿಮೆ ನಿಗದಿಪಡಿಸುವಂತೆ ಈ ಹಿಂದೆಯೂ ಮನವಿ ಸಲ್ಲಿಸಲಾಗಿತ್ತು. ಆದರೆ ಯಾವುದೇ ಕ್ರಮ ಆಗಿಲ್ಲ. ದರ ಕಡಿಮೆಗೊಳಿಸಿದರೆ, ತ್ವರಿತವಾಗಿ ಉದ್ಯಮಗಳು ಸ್ಥಾಪನೆಯಾಗಿ ಉದ್ಯೋಗ ಸೃಷ್ಟಿಯ ಜೊತೆಗೆ ಜಿಲ್ಲೆಯ ಅಭಿವೃದ್ಧಿಯಾಗಿ, ಬಂಡವಾಳ ಹರಿದುಬರಲಿದೆ. ಆದ್ದರಿಂದ ನಿವೇಶನದ ದರ ಪರಿಷ್ಕರಿಸುವಂತೆ ಸಣ್ಣ ಕೈಗಾರಿಕೆಗಳ ಮಾಲೀಕರ ಸಂಘದ ಕಾರ್ಯದರ್ಶಿ ಹನುಮಂತರಾವ್ ಸೇರಿದಂತೆ ಸಂಘದ ಪದಾಧಿಕಾರಿಗಳು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು, ದರ ಪರಿಷ್ಕರಣೆ ಕೋರಿ ಸರ್ಕಾರಕ್ಕೆ ಕೂಡಲೆ ಪ್ರಸ್ತಾವನೆ ಸಲ್ಲಿಸುವಂತೆ ಕೆಎಸ್‍ಎಸ್‍ಐಡಿಸಿ ಅಧಿಕಾರಿಗೆ ನಿರ್ದೇಶನ ನೀಡಿದರು.
ಮೂಲಭೂತ ಸೌಕರ್ಯಕ್ಕೆ ಸೂಚನೆ :ಹರಿಹರ ಕೈಗಾರಿಕಾ ಪ್ರದೇಶಕ್ಕೆ ಚರಂಡಿ, ರಸ್ತೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಂದಾಯ ಬಾಕಿ ಪಾವತಿಗೆ ನಗರಸಭೆಯಿಂದ ದಿನಾಂಕ ನಿಗದಿಪಡಿಸಿದಲ್ಲಿ, ವಸಾಹತು ಸ್ಥಳದಲ್ಲಿಯೇ ಕಂದಾಯ ಪಾವತಿಸಲಾಗುವುದು ಎಂದು ಕೈಗಾರಿಕೆಯ ಮಾಲೀಕರು ಒಪ್ಪಿಗೆ ಸೂಚಿಸಿದರು.
ದಾವಣಗೆರೆಯ ಕರೂರು ಕೈಗಾರಿಕಾ ಪ್ರದೇಶಕ್ಕೆ ಕಳೆದ ನಾಲ್ಕು ತಿಂಗಳಿನಿಂದ ನೀರು ಪೂರೈಕೆ ಸ್ಥಗಿತಗೊಂಡಿದ್ದು, ವಾಷಿಂಗ್ ಯುನಿಟ್, ಕುಡಿಯುವ ನೀರು ಹಾಗೂ ಬಳಕೆಗೂ ನೀರು ಇಲ್ಲದ ಕಾರಣ ಗಾರ್ಮೆಂಟ್ ಉದ್ದಿಮೆ ನಡೆಸುವುದು ದುಸ್ತರವಾಗಿದೆ. ಮಹಾನಗರಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ ಎಂದು ಗಾರ್ಮೆಂಟ್ ಉದ್ಯಮಿಗಳು ಸಭೆಯ ಗಮನಕ್ಕೆ ತಂದರು. ಜಿಲ್ಲಾಧಿಕಾರಿಗಳು ಸ್ಪಂದಿಸಿ, ಕೆಐಎಡಿಬಿ ಅಧಿಕಾರಿಗಳು ಕೂಡಲೆ ಮಹಾನಗರಪಾಲಿಕೆ ಆಯುಕ್ತರೊಂದಿಗೆ ಚರ್ಚಿಸಿ, ನೀರಿನ ಪೂರೈಕೆಗೆ ತಕ್ಷಣ ಕ್ರಮ ವಹಿಸಬೇಕು ಎಂದು ತಾಕೀತು ಮಾಡಿದರು.
ಮೆಗಾ ಟೆಕ್ಸ್‍ಟೈಲ್ ಪಾರ್ಕ್‍ಗೆ ಶಿಫಾರಸು : ದಾವಣಗೆರೆ ಜಿಲ್ಲೆಯಲ್ಲಿ ಜವಳಿ ಉದ್ಯಮಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಸಲುವಾಗಿ ನ್ಯಾಷನಲ್ ಟೆಕ್ಸ್‍ಟೈಲ್ ಕಾರ್ಪೋರೇಷನ್‍ಗೆ (ಎನ್‍ಟಿಸಿ) 138 ಎಕರೆ ಭೂಮಿ ನೀಡಲಾಗಿದೆ. ಕೇಂದ್ರ ಸರ್ಕಾರ ದೇಶದಲ್ಲಿ ಈ ವರ್ಷ 7 ಮೆಗಾ ಟೆಕ್ಸ್‍ಟೈಲ್ ಪಾಕ್ ಸ್ಥಾಪನೆಗೆ ನೆರವು ನೀಡಲು ಉದ್ದೇಶಿಸಿದ್ದು, ದಾವಣಗೆರೆ ಜಿಲ್ಲೆಯಲ್ಲಿ ಈಗಾಗಲೆ ಎನ್‍ಟಿಸಿ ಬಳಿ 138 ಎಕರೆ ಭೂಮಿ ಇದೆ. ಈ ಪ್ರದೇಶದಲ್ಲಿ ಮೆಗಾ ಟೆಕ್ಸ್‍ಟೈಲ್ ಪಾರ್ಕ್ ಸ್ಥಾಪನೆಗೆ ಉತ್ತಮ ಅವಕಾಶವಿದೆ ಎಂದು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ಜಿಲ್ಲೆಯಲ್ಲಿ ಮೆಗಾ ಟೆಕ್ಸ್‍ಟೈಲ್ ಪಾರ್ಕ್ ಸ್ಥಾಪನೆಗೆ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಿಂದ ಸಂಬಂಧಪಟ್ಟ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದರು.
ಗೃಹಕೈಗಾರಿಕೆಗೆ ನಿರಾಕ್ಷೇಪಣೆ : ಗೃಹ ಆಧಾರಿತ ಜವಳಿ ಉದ್ಯಮವನ್ನು ಜಿಲ್ಲೆಯಲ್ಲಿ ವಸತಿಗೃಹ ಪ್ರದೇಶದಲ್ಲಿ ನಡೆಸಲಾಗುತ್ತಿದ್ದು, ಸಬ್ಸಿಡಿ ಪಡೆಯಲು ಪರಿಸರ ಇಲಾಖೆಯಿಂದ ನಿರಾಕ್ಷೇಪಣೆ ಪತ್ರದ ಅಗತ್ಯವಿದೆ. ಆದರೆ ಪರಿಸರ ಅಧಿಕಾರಿಗಳು ಎನ್‍ಒಸಿ ನೀಡುತ್ತಿಲ್ಲ ಎಂದು ಜವಳಿ ಉದ್ಯಮಿಗಳು ಸಭೆಯಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪರಿಸರ ಅಧಿಕಾರಿಗಳು, ಜವಳಿ ಉದ್ಯಮವನ್ನು ಕೈಗಾರಿಕಾ ಪ್ರದೇಶದಲ್ಲಿ ನಡೆಸಬೇಕು, ವಸತಿಗೃಹ ಪ್ರದೇಶದಲ್ಲಿ ಅವಕಾಶವಿಲ್ಲ ಹೀಗಾಗಿ ನೀಡಿಲ್ಲ ಎಂದು ಉತ್ತರಿಸಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಗೃಹ ಕೈಗಾರಿಕೆಗಳು ಗೃಹದಲ್ಲಿಯೇ ನಡೆಯುತ್ತವೆ. ದೊಡ್ಡ ಪ್ರಮಾಣದಲ್ಲಿ ಅವರು ಮಾಡುವುದಿಲ್ಲ. ಅವರಿಂದ ಪರಿಸರಕ್ಕೆ ಯಾವುದೇ ಹಾನಿಯಿಲ್ಲ. ಕೂಡಲೆ ಅಂತಹವರಿಗೆ ನಿರಾಕ್ಷೇಪಣೆ ಪತ್ರ ನೀಡುವಂತೆ ಪರಿಸರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿನಿರ್ದೇಶಕ ಹೆಚ್.ಎಸ್. ಜಯಪ್ರಕಾಶ್ ನಾರಾಯಣ್, ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ಸುರೇಶ್, ಕೆಐಎಡಿಬಿ ಅಧಿಕಾರಿ ಶ್ರೀಧರ್ ಸೇರಿದಂತೆ ವಿವಿಧ ಕೈಗಾರಿಕೋದ್ಯಮಿಗಳು ಪಾಲ್ಗೊಂಡಿದ್ದರು.