Connect with us

Dvgsuddi Kannada | online news portal | Kannada news online

ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ;  ಸರ್ಕಾರಿ ಸೌಲಭ್ಯಗಳು ಯಾವುದೇ ಮಧ್ಯವರ್ತಿಗಳಿಲ್ಲದೇ ಸಿಗುವಂತಾಗಬೇಕು

ದಾವಣಗೆರೆ

ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ;  ಸರ್ಕಾರಿ ಸೌಲಭ್ಯಗಳು ಯಾವುದೇ ಮಧ್ಯವರ್ತಿಗಳಿಲ್ಲದೇ ಸಿಗುವಂತಾಗಬೇಕು

ದಾವಣಗೆರೆ: ಜನರಿಗೆ ಸರ್ಕಾರ ನೀಡಿರುವ ಸೌಲಭ್ಯಗಳು ಯಾವುದೇ ಮಧ್ಯವರ್ತಿ,  ಏಜೆಂಟರ ಹಾವಳಿ ಇಲ್ಲದೇ  ಸಿಗುವಂತಾಗಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.

ಚನ್ನಗಿರಿ ತಾಲ್ಲೂಕಿನ ತಿಪ್ಪಗೊಂಡನಹಳ್ಳಿ ಮತ್ತು ರಾಜಗೊಂಡನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ನೇತೃತ್ವದ ಅಧಿಕಾರಿಗಳ ತಂಡದೊಂದಿಗೆ ಶಾಸಕ ಕೆ.ಮಾಡಾಳ್ ವಿರೂಪಾಕ್ದಪ್ಪ, ಜಿ.ಪಂ ಸಿಇಓ ಡಾ.ವಿಜಯ ಮಹಾಂತೇಶ ದಾನಮ್ಮನವರ್, ಜಿ.ಪಂ ಉಪಾಧ್ಯಕ್ಷೆ ಸಾಕಮ್ಮ ಗಂಗಾಧರ ನಾಯ್ಕ  ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಸಾಥ್ ನೀಡಿದರು.

ಅನಗತ್ಯವಾಗಿ ತಾಲ್ಲೂಕು ಮತ್ತು ಜಿಲ್ಲೆಯ ಕಚೇರಿಗಳಿಗೆ ಜನರು ಅಲೆದಾಡುವುದನ್ನು ತಪ್ಪಿಸಲು ಸರ್ಕಾರ ಜಿಲ್ಲಾಧಿಕಾರಿಗಳ ನಡೆ-ಹಳ್ಳಿಗಳ ಕಡೆಗೆ ಎಂಬ ವಿನೂತನ ಮತ್ತು ಅತ್ಯುತ್ತಮವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದರು.

ಸರ್ಕಾರದಿಂದ ನೀಡುವ ವಿವಿಧ ಪಿಂಚಣಿ ಮತು ವೇತನವನ್ನು ಅನೇಕರು ಪಡೆಯುತ್ತಿದ್ದು, ಇನ್ನೂ ಕೆಲವರು ಅವಕಾಶ ವಂಚಿತರಾಗಿದ್ದರು. ಅಂತಹವರಿಂದ ಖುದ್ದು ಅಧಿಕಾರಿಗಳೇ ಅರ್ಜಿ ಪಡೆದು ಸೌಲಭ್ಯವನ್ನು ಇಂದು ಅವರಿಗೆ ವಿತರಿಸಲಾಗುತ್ತಿದೆ. ಮಾವಿನಹೊಳೆಯಲ್ಲಿ ಇಂದು ಹೊಸದಾಗಿ 115 ಜನರಿಗೆ ಸೌಲಭ್ಯ ವಿತರಣೆ ಮಾಡಲಾಗುತ್ತಿದೆ. ಯಾವುದೇ ಮಧ್ಯವರ್ತಿಗಳ ಹಾವಳಿ ಮತ್ತು ಅಡೆತಡೆ ಇಲ್ಲದೇ ಜಿಲ್ಲಾಡಳಿತವೇ ತಮ್ಮ ಮನೆ ಬಾಗಿಲಿಗೆ ಸೌಲಭ್ಯ ನೀಡಲು ಮತ್ತು ಸಮಸ್ಯೆ ಆಲಿಸಲು ಮುಂದಾಗಿರುವ ಈ ಗ್ರಾಮವಾಸ್ತವ್ಯ ಕಾರ್ಯಕ್ರಮದ ಪ್ರಯೋಜನವನ್ನು ಅರ್ಹರೆಲ್ಲರೂ ಪಡೆಯಬೇಕು.

ಉಳ್ಳವರು ಮನೆಯ ಯಜಮಾನ ತೀರಿದ ತಕ್ಷಣ ತಮ್ಮ ಹೆಸರಿಗೆ ಖಾತೆ ಮಾಡಿಸುತ್ತಾರೆ. ಆದರೆ ಬಡವರು, ಅರಿವಿನ ಕೊರತೆ ಇರುವವರು ಮರಿ ಮಕ್ಕಳು ಬಂದರೂ ಪೌತಿ ಖಾತೆ ಬದಲಾವಣೆ ಮಾಡಿಕೊಂಡಿಲ್ಲ. ಈ ಭಾಗದಲ್ಲಿ ಇಂತಹ 13 ಪೌತಿ ಖಾತೆಗಳ ಪೈಕಿ 10 ಖಾತೆಯನ್ನು ವಿಲೇವಾರಿ ಮಾಡಲಾಗಿದೆ.ಅರಣ್ಯ ಹಕ್ಕುಗಳಿಗೆ ಸಂಬಂಧಿಸಿದಂತೆ ಬಹಳಷ್ಟು ಕೆಲಸ ಆಗಬೇಕಿದ್ದು, ಇಲ್ಲಿನ 68 ಮನೆಗಳಿಗೆ ಸಂಬಂಧಿಸಿದಂತೆ ಪ್ರಕರಣ ಉಪವಿಭಾಗಾಧಿಕಾರಿಗಳ ಬಳಿ ಇದ್ದು ಈ ಬಗ್ಗೆ ಡಿಸಿಎಫ್ ರವರು ಎಸಿಎಫ್‍ರವರಿಗೆ ಸೂಚನೆ ನೀಡಿ ಪರಿಶೀಲಿಸಲು ತಿಳಿಸಿದ್ದೇನೆ. ಬಹಳಷ್ಟು ವರ್ಷಗಳ ಸಮಸ್ಯೆಗಳನ್ನು ಪರಿಹರಿಸುವ ವೇದಿಕೆಯಾಗಿ ಗ್ರಾಮವಾಸ್ತವ್ಯ ಕೆಲಸ ಮಾಡುತ್ತಿರುವುದು ವಿಶಿಷ್ಟವಾಗಿದೆ. ಸ್ಮಶಾನ, ಮನೆ, ನಿವೇಶನಕ್ಕಾಗಿ ಅರ್ಜಿಗಳು ಬಂದಿದ್ದು, ಇಲ್ಲಿನ ಶಾಸಕರು ಸಹ ಅತ್ಯಂತ ಉತ್ಸುಕತೆಯಿಂದ, ಆಸಕ್ತಿಯಿಂದ ಕೆಲಸ ಮಾಡುವ ಮೂಲಕ ನಮಗೆ ಬೆಂಬಲವಿತ್ತಿದ್ದು ಎಲ್ಲ ಅಧಿಕಾರಿಗಳು ಶ್ರದ್ದೆಯಿಂದ ಕೆಲಸ ಮಾಡುತ್ತೇವೆ ಎಂದರು.

ಮೊದಲಿಗೆ ಮಲ್ಲಿಗೆರೆಯಲ್ಲಿ ಗ್ರಾಮ ವಾಸ್ತವ್ಯದ ಉದ್ಘಾಟನೆ ನೆರವೇರಿಸಲಾಯಿತು. ಈ ವೇಳೆ ಶಾಸಕರು ಮಾತನಾಡಿ, ತಿಪ್ಪಗೊಂಡನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಮಲ್ಲಿಗೆರೆಯ ಅನೇಕ ಗ್ರಾಮಸ್ಥರು ಸುಮಾರು ವರ್ಷಗಳಿಂದ ಬಗರ್‍ಹುಕುಂ ಸಾಗುವಳಿ ಮಾಡುತ್ತಿದ್ದು, ಇವರಿಗೆ ಹಕ್ಕು ಪತ್ರ ನೀಡಿಲ್ಲ. ಯಾವಾಗ ತಮ್ಮನ್ನು ಅರಣ್ಯ ಇಲಾಖೆಯವರು, ಪೊಲೀಸರು ಒಕ್ಕಲೆಬ್ಬಿಸುತ್ತಾರೋ ಎಂಬ ಭಯದಲ್ಲಿ ಜನರು ಇದ್ದಾರೆ. ಇವರಿಗೆ ಹಕ್ಕು ಪತ್ರ ನೀಡಿದಲ್ಲಿ ನೆಮ್ಮದಿಯಿಂದ ಬದುಕುತ್ತಾರೆ ಎಂದರು.

ಲಂಬಾಣಿ, ಕುರುಬ, ಲಿಂಗಾಯತ, ಪ್ರವರ್ಗ-1 ಮತ್ತು ಮುಸ್ಲಿಂ ಸಮುದಾಯಕ್ಕೆ ಸೇರಿದ ಒಟ್ಟು 149 ಜನರು ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆ ಇದು ಗೋಮಾಳವಾಗಿದ್ದು ಅರಣ್ಯ ಇಲಾಖೆಯವರು ಇಲ್ಲಿ ಅಕೇಶಿಯಾ ಇನ್ನಿತರೆ ಗಿಡ ಮರ ಬೆಳೆದು ತಮ್ಮ ಇಲಾಖೆಗೆ ಸೇರಿಸಿಕೊಂಡಿದ್ದು ಈಗ ಇದು ಮೈನರ್ ಅರಣ್ಯ ಇಲಾಖೆಗೆ ಸೇರಿದೆ. ಇವರಿಗೆ ಹಕ್ಕು ಪತ್ರ ನೀಡಲು ಕೇಂದ್ರದ ನೀತಿಯನ್ವಯ ದಾಖಲಾತಿಗಳನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಕೇಳುತ್ತಿದ್ದಾರೆ ಎಂದರು.

ಸುಮಾರು 112 ವಯೋಮಾನದ ರಾಮಾನಾಯ್ಕ ಎಂಬ ವಯೋವೃದ್ದರು ಮೊದಲು ಇಲ್ಲಿ ಊರು ಇತ್ತು ಎಂದು ದಾಖಲೆ ನೀಡಿದ್ದಾರೆ. ಇದರ ಆಧಾರದ ಮೇಲೆ ಹಕ್ಕು ಪತ್ರ ನೀಡಬೇಕೆಂದರು.ಈ ಭಾಗದಲ್ಲಿ ಸುಮಾರು 68 ಜನರು ಮನೆ ಕಟ್ಟಿಕೊಂಡು ಹಲವಾರು ವರ್ಷಗಳಿಂದ ವಾಸಿಸುತ್ತಿದ್ದಾರೆ. ಈ ಮನೆಗಳು ಕೂಡ ಅರಣ್ಯ ವ್ಯಾಪ್ತಿಯಲ್ಲಿ ಬರಲಿವೆ ಎಂಬ ಕಾರಣಕ್ಕೆ ಈ ಮನೆಗಳಿಗೆ ಇದುವರೆಗೆ ಖಾತೆ ನೀಡಿಲ್ಲ. ಜಿಲ್ಲಾಧಿಕಾರಿಗಳಿಗೆ ಇದನ್ನು ಡಿನೋಟಿಫೈ ಮಾಡುವ ಅಧಿಕಾರ ಇದ್ದು, ಹಿರಿಯರ ದಾಖಲೆಗಳನ್ನು ಕೇಳಿಕೊಂಡು ಅರಣ್ಯ ಭೂಮಿಯನ್ನು ಡಿನೋಟಿಫೈ ಮಾಡಿ ಇವರಿಗೆ ಇ-ಸ್ವತ್ತು ಆಗುವಂತೆ ಸಹಕರಿಸಬೇಕೆಂದರು.

ಮನೆ ಮನೆಗೆ ಕುಡಿಯುವ ನೀರು ಒದಗಿಸುವ ಜಲ ಜೀವನ್ ಮಿಷನ್ ಯೋಜನೆಯಡಿ ನಲ್ಲಿಗೆ ಮೀಟರ್ ಹಾಕಲಾಗುತ್ತಿದೆ. ತೋಟಗಳಿಗೆ ಕಾಡಾನೆ ಮತ್ತು ಇತರೆ ಕಾಡು ಪ್ರಾಣಿಗಳು ನುಗ್ಗಿ ಬೆಳೆ ಹಾನಿಯಾಗದಂತೆ ಕಾಡು ಪ್ರಾಣಿ ತಡೆ ಯೋಜನೆಗೆ ಈಗಾಗಲೇ ಟೆಂಡರ್ ಆಗಿದೆ. ಹಾಗೂ ತಿಪ್ಪನಗೊಂಡನಹಳ್ಳಿ ಮತ್ತು ರಾಜಗೊಂಡನಹಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿ ಅನೇಕ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಗ್ರಾಮಸ್ಥರು ಮನೆ ಬಾಗಿಲಿಗೆ ಸೌಲಭ್ಯ ಒದಗಿಸುವ ಈ ವಿನೂತನ ಕಾರ್ಯಕ್ರಮವಾದ ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಜಿ.ಪಂ ಸಿಇಓ ವಿಜಯ ಮಹಾಂತೇಶ ದಾನಮ್ಮನವರ್ ಮಾತನಾಡಿ, ಆಡಳಿತ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಬಹಳಷ್ಟು ಸೌಲಭ್ಯಗಳು ಆನ್‍ಲೈನ್ ಆಗಿದ್ದರೂ ಸಹ ಜನರು ತಾಲ್ಲೂಕು ಮತ್ತು ಜಿಲ್ಲಾಡಳಿತದ ಕಚೇರಿಗಳಿಗೆ ಅಲೆಯುವುದು ತಪ್ಪಿಲ್ಲ. ಜನರು ಅನಾವಶ್ಯಕವಾಗಿ ಕಚೇರಿಗಳಿಗೆ ಅಲೆದಾಡುವುದು ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಉದ್ದೇಶದಿಂದ ಸರ್ಕಾರ, ಜಿಲ್ಲಾಧಿಕಾರಿಗಳ ತಂಡವೇ ಗ್ರಾಮಕ್ಕೆ ಬಂದು ಗ್ರಾಮವಾಸ್ತವ್ಯದಂತಹ ಉತ್ತಮ ಕಾರ್ಯಕ್ರಮ ತಂದಿದ್ದು, ಇಲ್ಲಿ ಜನರ ಪ್ರಸ್ತಾವಿತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ ಶೀಘ್ರ ಪರಿಹಾರ ಮತ್ತು ಅರ್ಹರಿಗೆ ಸೌಲಭ್ಯವನ್ನು ತಕ್ಷಣವೇ ನೀಡಲಾಗುವುದು. ಶಾಸಕರು ಹೇಳಿದ 68 ಮನೆಗಳ ಕುರಿತಂತೆ ಸಂಪೂರ್ಣ ಮಾಹಿತಿ ಪಡೆದು ಡಿನೋಟಿಫೈ ಮಾಡುವ ಬಗ್ಗೆ ತುರ್ತಾಗಿ ಕ್ರಮ ಕೈಗೊಳ್ಳುತ್ತೇವೆ ಎಂದರು.

2020-21 ನೇ ಸಾಲಿನಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಚನ್ನಗಿರಿಗೆ ಇದ್ದ ಗುರಿ 17 ಆದರೂ 32 ಅರ್ಜಿಗಳನ್ನು ಗುರುತಿಸಿ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಕಳುಹಿಸಿಕೊಡಲಾಗಿದೆ. 2020-21 ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ 11 ಸಾವಿರ ಮಾನವ ದಿನಗಳ ಸೃಜನೆ ಗುರಿ ಪೂರ್ಣಗೊಂಡಿದ್ದು ಮುಂದಿನ ಸಾಲಿಗೆ 344 ವೈಯಕ್ತಿಕ ಕಾಮಗಾರಿ ಬೇಡಿಕೆ ಇದೆ. ಹಾಗೂ ದುಡಿಯೋಣ ಬಾರಾ ಎಂಬ ಕಾರ್ಯಕ್ರಮದಡಿ ಸತತವಾಗಿ 60 ದಿನಗಳ ಕೂಲಿಗೆ ರೂ.16500 ವೇತನವನ್ನು ಜೂನ್ ವೇಳೆಗೆ ನೀಡಲಾಗುವುದು. ಇದರಿಂದ ಮಕ್ಕಳ ಶಿಕ್ಷಣಕ್ಕೆ ಸಹಾಯವಾಗಲಿದ್ದು ಗ್ರಾಮಸ್ಥರು ಇದರ ಸದುಪಯೋಗ ಪಡೆಯಬೇಕೆಂದರು.

ಸೌಲಭ್ಯ ವಿತರಣೆ ವಿವರ: ತಿಪ್ಪಗೊಂಡನಹಳ್ಳಿ ಮತ್ತು ರಾಜಗೊಂಡನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಗ್ರಾಮಸ್ಥರಿಗೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಿಮಿತ್ತ ಸಂಧ್ಯಾ ಸುರಕ್ಷಾ ಯೋಜನೆ, ವೃದ್ದಾಪ್ಯ, ವಿಧವಾ ವೇತನ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಯಡಿ ಒಟ್ಟು 115 ಜನರಿಗೆ ಸೌಲಭ್ಯ ವಿತರಣೆ ಮಾಡಲಾಯಿತು. 10 ಪೌತಿ ಖಾತೆ ವಿಲೇವಾರಿ. ರಾಜಗೊಂಡನಳ್ಳಿ ಸರ್ವೇ ನಂ.2 ರಲ್ಲಿ 2 ಎಕರೆ ಸ್ಮಶಾನ ಉದ್ದೇಶಕ್ಕೆ ಭೂಮಿ ಕಾಯ್ದಿರಿಸಲಾಗಿದೆ. ದಂಡಿಗೇನಹಳ್ಳಿ ಸರ್ವೇ ನಂ 7 ರಲ್ಲಿ 1 ಎಕರೆ ಮತ್ತು ಮಾವಿನಹೊಳೆ ಸರ್ವೇ ನಂ 10 ರಲ್ಲಿ 2 ಎಕರೆ ಜಮೀನು ಸ್ಮಶಾನಕ್ಕೆ ಮೀಸಲು. 16 ಜನರಿಗೆ ಅತಿವೃಷ್ಟಿ ಪರಿಹಾರ ವಿತರಣೆ ಮಾಡಲಾಯಿತು.

ತಳಿರು-ತೋರಣದಿಂದ ಸಿಂಗಾರಗೊಂಡಿದ್ದ ಗ್ರಾಮಗಳು : ಗ್ರಾಮ ವಾಸ್ತವ್ಯದ ನಿಮಿತ್ತ ತಿಪ್ಪಗೊಂಡನಹಳ್ಳಿ ಮತ್ತು ರಾಜಗೊಂಡನಹಳ್ಳಿ ವ್ಯಾಪ್ತಿಯ ಗ್ರಾಮಗಳು ತಳಿರು-ತೋರಣಗಳಿಂದ ಸಿಂಗಾರಗೊಂಡು ಹಬ್ಬದಂತೆ ಸಂಭ್ರಮಿಸಿದ ದೃಶ್ಯ ಕಂಡುಬಂದಿತು.

ಕಾರ್ಯಕ್ರಮದಲ್ಲಿ ಜಿ.ಪಂ ಉಪಾಧ್ಯಕ್ಷೆ ಸಾಕಮ್ಮ ಗಂಗಾಧರ ನಾಯ್ಕ, ಜಿ.ಪಂ ಸದಸ್ಯರಾದ ಯಶೋಧಮ್ಮ ಮರುಳಪ್ಪ, ಚನ್ನಗಿರಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಕವಿತಾ, ಜನಪ್ರತಿನಿಧಿಗಳು, ಜಿಲ್ಲಾ ಮಟ್ಟದ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top