Connect with us

Dvgsuddi Kannada | online news portal | Kannada news online

ಬಿಜೆಪಿ ನಾಯಕರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಬಿಟ್ಟು ಅಭಿವೃದ್ಧಿ ಕಡೆ ಗಮನ ಕೊಡಲಿ: ಡಿ. ಬಸವರಾಜ್

ದಾವಣಗೆರೆ

ಬಿಜೆಪಿ ನಾಯಕರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಬಿಟ್ಟು ಅಭಿವೃದ್ಧಿ ಕಡೆ ಗಮನ ಕೊಡಲಿ: ಡಿ. ಬಸವರಾಜ್

ದಾವಣಗೆರೆ: ಜಿಲ್ಲಾ ಬಿಜೆಪಿ ನಾಯಕರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಕೈ ಬಿಟ್ಟು ಅಭಿವೃದ್ಧಿ ಕಡೆ ಗಮನ ಕೊಡಲಿ. ಎಸ್.ಎಸ್. ಹೈಟೆಕ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ಸಾರ್ವಜನಿಕ ರಸ್ತೆಗಳಿದ್ದರೆ ಬಂದು ತೋರಿಸಲಿ, ನಾವು ಜಿ.ಎಂ.ಐ.ಟಿ. ಇನ್ನಿತರ ಕಡೆ ರಸ್ತೆಗಳನ್ನು ತೋರಿಸುತ್ತೇವೆ. ಎಸ್.ಎಸ್. ಮಾಲ್ ಬಗ್ಗೆಯೂ ಪದೇ ಪದೇ ಸುಳ್ಳು ಆರೋಪ ನಿಲ್ಲಿಸಲಿ ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಕೆಲ ದಿನಗಳಿಂದ ಅಭಿವೃದ್ಧಿ ಕಡೆಗೆ ಗಮನ ಕೊಡದೆ ಕೇವಲ ಕಾಂಗ್ರೆಸ್ ನಾಯಕರಾದ ಶಾಸಕ ಶಾಮನೂರು ಶಿವಶಂಕರಪ್ಪ ಕುಟುಂಬದ ಬಗ್ಗೆ ಅಪಪ್ರಚಾರ ಮಾಡುವುದೇ ಬಿಜೆಪಿಯ ನಾಯಕರ ಸಾಧನೆಯಾಗಿದೆ. ದಾವಣಗೆರೆ ಜಿಲ್ಲೆಯ ಅಭಿವೃದ್ಧಿಯಲ್ಲಿ ಎಸ್. ಎಸ್. ಮಲ್ಲಿಕಾರ್ಜುನ್ ಹಾಗೂ ಶಾಮನೂರು ಶಿವಶಂಕರಪ್ಪ ಅವರಿಂದ ಸ್ಮಾರ್ಟ್ ಸಿಟಿ, ಜಲಸಿರಿ, ಸಿಮೆಂಟ್ ರಸ್ತೆ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದರು. ಇಂದಿಗೂ ಕಾಂಗ್ರೆಸ್ ಸರ್ಕಾರದ ಅನುದಾನ ಕಾಮಗಾರಿಗಳು ನಡೆಯುತ್ತಿವೆ.ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿಯದ್ದು ಖಾಲಿ ಡಬ್ಬ ಸೌಂಡ್ ಜಾಸ್ತಿ. ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರೆ ಎಂದರು.

ಬಿಜೆಪಿ ಅಧಿಕಾರ ಅವಧಿಯಲ್ಲಿ ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿತ್ತು. ಅದನ್ನು ಸರಿಪಡಿಸಿಕೊಳ್ಳದೇ ನೊಣ ಬಿದ್ದಿರುವುದನ್ನು ತೋರಿಸುತ್ತಿದ್ದಾರೆ. ಅವರಿಗೆ ಅಪಾದನೆ ಮಾಡುವುದಷ್ಟೇ ಬಿಜೆಪಿ ಕೆಲಸ. ಜನತೆ ಮುಂದಿನ ದಿನಗಳಲ್ಲಿ ತೀರ್ಮಾನಿಸುತ್ತಾರೆ. ಕಾಂಗ್ರೆಸ್ ಅವಧಿಯಲ್ಲಿ ಶರವೇಗದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದವು. ಬಿಜೆಪಿ ನಾಯಕರು ಆಪಾದನೆ ಮಾಡುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಹೈಟೆಕ್ ಆಸ್ಪತ್ರೆ, ಎಸ್. ಎಸ್. ಮಾಲ್ ನಲ್ಲಿ ಸಾರ್ವಜನಿಕ ರಸ್ತೆಗಳಿವೆ ಎಂದು ಪ್ರಾಧಿಕಾರದ ಅಧ್ಯಕ್ಷರು ಪದೇ ಪದೇ ಹೇಳುತ್ತಿದ್ದಾರೆ. ಅವು ಎಲ್ಲಿವೇ ಎಂದು ಅವರು ಬಂದು ತೋರಿಸಲಿ ನಾವು ಅವರಿಗೆ ಸಂಸದ ಜಿ.ಎಂ. ಸಿದ್ದೇಶ್ವರ್ ಒಡೆತನದ ಜಿ.ಎಂ.ಐ.ಟಿ. ಇಂಜಿನಿಯರಿಂಗ್ ಕಾಲೇಜ್ ಹಾಗೂ ಅರುಣ ಚಿತ್ರಮಂದರಿದ ಎದುರು ಇರುವ ಅವರ ನಿವೇಶನದಲ್ಲಿ ಎಲ್ಲೆಲ್ಲಿ ಸಾರ್ವಜನಿಕ ರಸ್ತೆಗಳಿವೆ ಎಂದು ನಾವು ತೋರಿಸುತ್ತೇವೆ ಅವರು ತಿಳಿಸಿದರು.

ಎಸ್.ಎಸ್. ಮಲ್ಲಿಕಾರ್ಜುನ್‌ ಅವರು ಕೋಟ್ಯಾಂತರ ರೂಪಾಯಿ ಹಣ ನೀಡಿ ಹೈಟೆಕ್ ಆಸ್ಪತ್ರೆ ಮತ್ತು ಕಾಲೇಜ್‌ಗಾಗಿ ಭೂಮಿ ಖರೀದಿಸಿದ್ದಾರೆ. ಆದರೆ, ಸಂಸದ ಜಿ.ಎಂ. ಸಿದ್ದೇಶ್ವರ ಸಣ್ಣ ಕೈಗಾರಿಕೋದ್ಯಮಗಳಿಗೆ ಮೀಸಲಾಗಿದ್ದ ಜವಳಿ ಪಾರ್ಕ್ ನಲ್ಲಿ 12 ಎಕರೆ ಜಮೀನು ಲಪಟಾಯಿಸಿ ಕಾಲೇಜು ಕಟ್ಟಿದ್ದಾರೆ. ಬಿಜೆಪಿಯವರು ಆತ್ಮ ವಿಮರ್ಶೆ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯ ದೇವರಮನಿ ಶಿವಕುಮಾರ್‌ವರು 2012ರಲ್ಲಿ ನಿವೇಶನಕ್ಕಾಗಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ, 2018 ರಲ್ಲಿ ಪ್ರಾಧಿಕಾರ ನಡೆಸಿದ ಲಾಟರಿ ಮುಖಾಂತರ ನಿವೇಶನವನ್ನು ಪಡೆದಿರುತ್ತಾರೆ. ಇವರ ಬಗ್ಗೆ ಈಗಿನ ಪ್ರಾಧಿಕಾರದ ಅಧ್ಯಕ್ಷರು ಅಪಾದನೆ ಮಾಡಿದ್ದಾರೆ. ಇವರು ಸೈಟ್ ಪಡೆಯುವ ಮುನ್ನ ಶಿವಕುಮಾರ್‌ರವರ ಹೆಸರಿಗೆ ಒಂದಿಚ್ಚು ಜಾಗ ಇರುವುದು ತೋರಿಸಿದರೆ ಶಿವಕುಮಾರ್‌ರವರು ರಾಜಕೀಯ ನಿವೃತ್ತಿ ಪಡೆಯುತ್ತಾರೆ ಎಂದರು.

ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಡಿ. ಮಲತೇಶ್ ಪೈಲ್ವಾನ್‌ ಮಾತನಾಡಿ, ನಾನು ಅಧ್ಯಕ್ಷರಾದ ಅವಧಿಯಲ್ಲಿ ಎಸ್.ಎಸ್.ಹೈಟೆಕ್ ಆಸ್ಪತ್ರೆಗೆ ಅನುಮೋದನೆ ನೀಡಿದ್ದು, ಆ ಸಂದರ್ಭದಲ್ಲಿ ಯಾವುದೇ ರಸ್ತೆಗಳು ಅಲ್ಲಿ ಇರಲಿಲ್ಲ. ಸಿಡಿಪಿ 2008ಕ್ಕೆ ಬಂದಿದ್ದು ಎಸ್.ಎಸ್. ಹೈಟೆಕ್ ಆಸ್ಪತ್ರೆಗೆ ಇದು ಅನ್ವಯಿಸುವುದಿಲ್ಲ. ಯಶವಂತರಾವ್ ಜಾಧವ್ ಪ್ರಾಧಿಕಾರದ ಅಧ್ಯಕ್ಷರಾದಾಗ ಎಸ್. ನಿಜಲಿಂಗಪ್ಪ ಬಡಾವಣೆಯಲ್ಲಿ ಮೂಲ ನಿವೇಶನಗಳನ್ನು ಹರಾಜು ಮಾಡಿದ ಸಂದರ್ಭದಲ್ಲಿ ಅವರ ಅತ್ತೆಯವರ ಹೆಸರಿಗೆ ನಿವೇಶ ಸಂಖ್ಯೆ 556ನ್ನು ಮಾಡಿಸಿಕೊಂಡು ನಂತರ ಅವರ ಹೆಂಡತಿ ಹೆಸರಿಗೆ ದಾನ ಪತ್ರ ಮಾಡಿಸಿಕೊಂಡು ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರ ನಡೆಸಿದ್ದಾರೆ. ಇಲ್ಲಿ ಈಗ ಅವರು ವಾಣಿಜ್ಯ ಸಂಕಿರಣ ನಿರ್ಮಿಸಿಕೊಂಡಿದ್ದು ಯಾವುದೇ ಸೆಟ್ ಬ್ಯಾಕ್ ಬಿಟ್ಟಿಲ್ಲ.

ದಾವಣಗೆರೆ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜಿ.ಹೆಚ್. ರಾಮಚಂದ್ರಪ್ಪ ಮಾತನಾಡಿ, ತಮ್ಮ ಅವಧಿಯಲ್ಲಿ ಯಾವುದೇ ಭ್ರಷ್ಟಾಚಾರ ನಾನು ಮಾಡಿಲ್ಲ ನಾನು ಬಡವರಿಗೆ ಸೈಟು ಹಂಚಲು ಹೊಲದ ಮಾಲೀಕರಿಗೆ ಮಾತುಕತೆ ಮಾಡಿದ್ದೆ. ಬಿಜೆಪಿಯವರು ಈ ಮಾತುಕತೆಯನ್ನು ಮುರಿದರು. ನನ್ನ ಅವಧಿಯಲ್ಲಿ ನಾನು ಭ್ರಷ್ಟಾಚಾರ ಮಾಡಿದ್ದೇನೆಂದು ರಾಜನಹಳ್ಳಿ ಶಿವಕುಮಾರ್ ಆರೋಪ ಮಾಡಿದ್ದಾರೆ. ನಾನು ಅವರು ಕರೆದು ಯಾವುದೇ ದೇವಸ್ಥಾನಕ್ಕೆ ಬಂದು ನಾನು ಭ್ರಷ್ಟಾಚಾರವೆಸಗಿಲ್ಲವೆಂದು ದೇವರ ಮುಂದೆ ಪ್ರಮಾಣ ಮಾಡುತ್ತೇನೆ. ಅವರು ಬಂದು ಪ್ರಮಾಣ ಮಾಡಲಿ ಎಂದು ಸವಾಲು ಎಸೆದರು.

ದೂಡಾ ಮಾಜಿ ಅಧ್ಯಕ್ಷ ಅಯೂಬ್‌ ಪೈಲ್ವಾನ್‌ ಮಾತನಾಡಿ, ಹೆಗಡೆ ನಗರಕ್ಕೆ 1.25 ಕೋಟಿ ಹಣ ಮಂಜೂರಾತಿ ಆಗಿದ್ದು ನಿಜ. ಅಲ್ಲಿ ಶೆಡ್‌ಗಳನ್ನು ನಿರ್ಮಿಸಿದ್ದು ನಿಜ. ಆದರೆ, ಕೆಲವರು ಹೈಕೋರ್ಟಿಗೆ ಹೋಗಿ ಶೆಡ್ ನಿರ್ಮಿಸಿದ ಜಾಗದಲ್ಲಿ ಕ್ರೀಡಾಂಗಣಕ್ಕೆ ಮೀಸಲಿಡಬೇಕೆಂದು ತಡೆಯಾಜ್ಞೆ ತಂದಿರುತ್ತಾರೆ. ಇದರಿಂದ ಅಲ್ಲಿ ನಿರ್ಮಿಸಿದ ಶೆಡ್‌ಗಳ ಸಾಮಾಗ್ರಿಗಳನ್ನು ಅಲ್ಲಿನ ಜನರು ಕೊಂಡೊಯ್ಯುತ್ತಿದ್ದಾರೆ. ನಿರ್ಮಿತಿ ಕೇಂದ್ರದ ಬಳಿ ಸ್ವಲ್ಪ ಸಾಮಾಗ್ರಿಗಳು ಇವೆ. ಈ ಕಾಮಗಾರಿ ನಿರ್ವಹಿಸಿದ್ದು ನಿರ್ಮಿತಿ ಕೇಂದ್ರ ಅಧ್ಯಕ್ಷರು, ಜಿಲ್ಲಾಧಿಕಾರಿಗಳೇ ಆಗಿರುತ್ತಾರೆ. ಇಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಬಿಜೆಪಿಯ ಮಾಜಿ ಅಧ್ಯಕ್ಷ ಯಶವಂತರಾವ್ ಮತ್ತು ಈಗ ಹಾಲಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಅವರೇ ಭ್ರಷ್ಟಾಚಾರಿಗಳು ನಾವಲ್ಲವೆಂದು ಟೀಕಿಸಿದರು.

ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಮಾತನಾಡಿ, ಪ್ರಾಧಿಕಾರದ ಮಾಜಿ ಅಧ್ಯಕ್ಷ ಯಶವಂತರಾವ್ ಯಾವುದೇ ಉದ್ಯೋಗ ಮಾಡುತ್ತಿಲ್ಲ. ಆದರೆ ಕೋಟ್ಯಾಂತರ ರೂಪಾಯಿ ಆಸ್ತಿ ಮಾಡಿದ್ದಾರೆ. ಅದು ಎಲ್ಲಿಂದ ಗಳಿಸಿದ್ದಾರೆಂದು ಅವರು ತಿಳಿಸಲಿ ಅವರು ನಗರ ಸಭೆ ಅಧ್ಯಕ್ಷರಾಗಿದ್ದಾಗ ಹಾಗೂ ಪ್ರಾಧಿಕಾರದ ಅಧ್ಯಕ್ಷರಾದಾಗ ಭಾರೀ ಭ್ರಷ್ಟಾಚಾರ ನಡೆಸಿದ್ದಾರೆ. ಅವರು ನಡೆಸಿದ ಭ್ರಷ್ಟಾಚಾರದ ಪ್ರಕರಣಗಳು ಲೋಕಾಯುಕ್ತ ನ್ಯಾಯಾಲಯದಲ್ಲಿ ಇಂದಿಗೂ ವಿಚಾರಣೆ ನಡೆಯುತ್ತಿವೆ. ಇಂತಹ ಭ್ರಷ್ಟರು ಕಾಂಗ್ರೆಸ್ ಟೀಕಿಸಲು ಯಾವುದೇ ನೈತಿಕ ಹಕ್ಕಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

ದಾವಣಗೆರೆ ಮಹಾನಗರ ಪಾಲಿಕೆ ವಿಪಕ್ಷದ ನಾಯಕ ಎ.ನಾಗರಾಜ್‌, ಮಹಾನಗರ ಪಾಲಿಕೆಯ ಸದಸ್ಯರುಗಳಾದ ಕೆ. ಚಮನ್ ಸಾಬ್, ಗಡಿಗುಡಾಳ್ ಮಂಜುನಾಥ್, ಕಾಂಗ್ರೆಸ್ ಮುಖಂಡರುಗಳಾದ ಶಾಮನೂರು ಟಿ. ಬಸವರಾಜ್, ನಿಟ್ಟುವಳ್ಳಿಯ ಗಣೇಶ್ ಹುಲ್ಲಮನಿ, ರವಿಧಣಿ, ಕೆ.ಎಂ. ಮಂಜುನಾಥ್, ಮಲ್ಲಿಕಾರ್ಜುನ ಇಂಗಳೇಶ್ವರ್, ಡಿ. ಶಿವಕುಮಾರ್, ಬಿ.ಹೆಚ್. ಉದಯ್‌ಕುಮಾರ್, ಕೊಡಪಾನ ದಾದಾಪೀರ್, ಮೊಟ್ಟೆ ದಾದಾಪೀರ್, ಬುಡೇನ್‌ಸಾಬ್, ಇತರರು ಹಾಜರಿದ್ದರು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top