ದಾವಣಗೆರೆ : ಮಳೆ ನೀರಿನಿಂದ ಅಡಿಕೆ ತೋಟ ಜಲಾವೃತವಾಗಿದ್ದು, ತೆಪ್ಪದ ಸಹಾಯದಿಂದ ರೈತರು ಜಲಾವೃತವಾಗಿದ್ದ ತೋಟದಲ್ಲೇ ಅಡಿಕೆ ಕೊಯ್ಲು ಮಾಡಿದ್ದಾರೆ.
ಭಾರೀ ಮಳೆಗೆ ದಾವಣಗೆರೆ ತಾಲೂಕಿನ ಅಣಜಿ ಗ್ರಾಮ ಕೆರೆ ಕೋಡಿ 40 ರವರ್ಷದ ನಂತರ ಬಿದ್ದಿದೆ. ಕೆರೆ ಪೂರ್ಣ ತುಂಬಿದ್ದರ ಪರಿಣಾಮ ಅಣಜಿ ಬಳಿಯ ಕೆರೆಯ ಅಗಲ ಹಳ್ಳಿಯ ಅಡಿಕೆ ತೋಟಗಳು ಜಲಾವೃತವಾಗಿವೆ. ಇದರಿಂದ ಅಡಿಕೆ ತೋಟದಲ್ಲಿ ರೈತರು ಫಸಲಿಗೆ ಬಂದ ಅಡಕೆ ಕೊಯ್ಲು ಮಾಡಲು ಪರದಾಡುತ್ತಿದ್ದರು. ಆಗ ತೆಪ್ಪದ ಸಹಾಯದಿಂದಲೇ ಅಡಿಕೆ ಕೊಯ್ಲು ಮಾಡಿದ್ದಾರೆ.
ತೆಪ್ಪ ಹಾಗೂ ಉದ್ದನೆಯ ಕೋಲು ಬಳಸಿ ಅಡಕೆ ಕೊಯ್ಯುತ್ತಿದ್ದಾರೆ. ಜಲಾವೃತವಾಗಿರುವ ತೋಟಗಳಲ್ಲಿ ಅಡಕೆಯನ್ನು ಹಾಗೇ ಬಿಟ್ಟರೆ ಕೊಳೆ ರೋಗಕ್ಕೆ ತುತ್ತಾಗುವ ಆತಂಕ ರೈತರಿಗೆ ಎದುರಾಗಿತ್ತು.ಮಾರುಕಟ್ಟೆಯಲ್ಲಿ ಅಡಕೆ ಕ್ವಿಂಟಾಲ್ಗೆ 50 ರಿಂದ 58 ಸಾವಿರ ರೂ. ತಲುಪಿದೆ. ಹೀಗಾಗಿ ಬಂಗಾರದಂತಹ ಬೆಳೆ ಜಲಾವೃತವಾಗಿದ್ದರೂ ರೈತರು ಅಡಕೆ ಕೊಯ್ಲು ಮಾಡುತ್ತಿದ್ದಾರೆ.