ದಾವಣಗೆರೆ: ಜಿಲ್ಲಾಧಿಕಾರಿಗಳ ನಡೆ, ಹಳ್ಳಿಕಡೆ ಕಾರ್ಯಕ್ರಮದ ಮೂಲಕ ಗ್ರಾಮ ವಾಸ್ತವ್ಯ ಮಾಡುವುದರಿಂದ ಸ್ಥಳೀಯ ಸಮಸ್ಯೆಗಳನ್ನು ತಿಳಿದುಕೊಂಡು ಸ್ಥಳದಲ್ಲೇ ಪರಿಹಾರ ಕೈಗೊಳ್ಳಲು ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದರು.
ಆಗಸ್ಟ್ 26 ರಂದು ಜಗಳೂರು ತಾಲ್ಲೂಕಿನ ಪಲ್ಲಾಗಟ್ಟಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸರ್ಕಾರದ ವಿವಿಧ ಸವಲತ್ತುಗಳನ್ನು ಜನರಿಗೆ ವಿತರಣೆ ಮಾಡುವ ಮೂಲಕ ಸಾರ್ವಜನಿಕರಿಂದ ಕುಂದು ಕೊರತೆಗಳ ಅಹವಾಲು ಸ್ವೀಕರಿಸಿದ ನಂತರ ಏರ್ಪಡಿಸಿದ ಸಮಾರಂಭದಲ್ಲಿ ಮಾತನಾಡಿದರು. ಹೆಚ್ಚು ಜನಸಂಖ್ಯೆಯಿಂದ ಕೂಡಿದ ದೇಶ ನಮ್ಮದಾಗಿದ್ದು ಸ್ವಾತಂತ್ರ್ಯ ಬಂದಾಗಿನಿಂದ ಅನೇಕ ಅಭಿವೃದ್ದಿಯನ್ನು ಸರ್ಕಾರ ಮಾಡುತ್ತಾ ಬಂದಿದೆ. ಆದರೆ ಜನಸಂಖ್ಯೆಗೆ ತಕ್ಕಂತೆ ಉತ್ಪಾದನೆಯು ಹೆಚ್ಚಾಗಬೇಕು. ಜನಸಂಖ್ಯೆ ಹೆಚ್ಚಬಹುದು, ಆದರೆ ಇರುವ ಭೂ ವಿಸ್ತೀರ್ಣ ಹೆಚ್ಚುವುದಿಲ್ಲ. ಆದರೆ ಜನರಿಗೆ ಬೇಕಾದ ಆಹಾರ ಉತ್ಪಾದನೆ ಮಾಡಲೇಬೇಕು. ಸ್ವಾತಂತ್ರ್ಯ ನಂತರದಲ್ಲಿ ದೇಶ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಇಂದು ಸ್ವಾವಲಂಭಿಗಳಾಗಿದ್ದೇವೆ, ಆದರೂ ಸಹ ಜನರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಭಿವೃದ್ದಿ ಜೊತೆಗೆ ಮೂಲಭೂತ ಸೌಕರ್ಯಗಳ ಅಭಿವೃದ್ದಿಯೂ ಆಗಬೇಕಾಗಿದೆ.
ಸರ್ಕಾರ ಜನರ ಕಲ್ಯಾಣಕ್ಕೆ ಅನೇಕ ಯೋಜನೆಗಳನ್ನು ನೀಡುತ್ತಿದ್ದು ಈ ಎಲ್ಲಾ ಸೌಲಭ್ಯಗಳು ಎಲ್ಲಾ ವರ್ಗದ ಜನರಿಗೆ ಮುಟ್ಟಬೇಕಾಗಿದೆ. ಅಧಿಕಾರ ವಿಕೇಂದ್ರೀಕರಣದ ಮೂಲಕ ಸ್ಥಳೀಯ ಅಭಿವೃದ್ದಿಯನ್ನು ಜನರೇ ಮಾಡಿಕೊಳ್ಳುವ ನಿಟ್ಟಿನಲ್ಲಿ ಸ್ಥಳೀಯ ಆಡಳಿತಕ್ಕೆ ಜನರಿಗೆ ಅಧಿಕಾರ ನೀಡಿದೆ ಎಂದರು.
ಪಲ್ಲಾಗಟ್ಟಿ ಗ್ರಾಮಕ್ಕೆ ಕೆ.ಎಸ್.ಆರ್.ಟಿ.ಸಿ. ಬಸ್ ಸೌಕರ್ಯ ಬೇಕೆಂದು ವಿದ್ಯಾರ್ಥಿಗಳು ಮೂರುಭಾರಿ ಕಚೇರಿಗೆ ಬಂದು ಕೇಳಿದ್ದರು. ಆವಾಗ ಕೆ.ಎಸ್.ಆರ್.ಟಿ.ಸಿ.ಡಿಸಿಗೆ ಕರೆ ಮಾಡಿ ತಿಳಿಸಿದ್ದರೂ ಮೊದಲ ಭಾರಿ ಏನು ಕೆಲಸವಾಗಿರಲಿಲ್ಲ. ಮತ್ತೊಮ್ಮೆ ಈ ಗ್ರಾಮದ ವಿದ್ಯಾರ್ಥಿನಿ ಬಂದು ನೆನಪು ಮಾಡಿದಾಗ ಮತ್ತೆ ಕರೆ ಮಾಡಿ ತಿಳಿಸಿದ್ದು ಈಗ ಈ ಗ್ರಾಮಕ್ಕೆ ಬಸ್ ಬರುತ್ತಿದೆ ಎನ್ನುವುದು ತಿಳಿಯಿತು. ಈ ಬಸ್ ಸಂಚರಿಸುವ ಸಮಯ ಬದಲಾವಣೆಯೆ ಬಗ್ಗೆ ವಿದ್ಯಾರ್ಥಿಗಳು ತಿಳಿಸಿದ್ದು ಪರಿಶೀಲಿಸಲಾಗುತ್ತದೆ ಎಂದರು.
ಪಲ್ಲಾಗಟ್ಟಿ ಗ್ರಾಮಕ್ಕೆ 24 ಗಂಟೆಯು ಕಾರ್ಯನಿರ್ವಹಿಸುವ ಆಸ್ಪತ್ರೆ ಹಾಗೂ ಅಂಬುಲೆನ್ಸ್ ವ್ಯವಸ್ಥೆಯನ್ನು ಕೇಳಿದ್ದು ಇದನ್ನು ಮಾಡಿಕೊಡಲಾಗುತ್ತದೆ ಎಂದ ಅವರು ಶತಮಾನದ ಶಾಲೆ ಈ ಗ್ರಾಮದಲ್ಲಿದ್ದು ಇದರ ಅಭಿವೃದ್ದಿಗೂ ಶಿಕ್ಷಣ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎ.ಚನ್ನಪ್ಪ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ಬಂದು ತಲುಪಿಸಬೇಕು ಎಂಬ ಉದ್ದೇಶದಿಂದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಯೋಜನೆಯನ್ನು ಜಾರಿಗೆ ತರಲಾಗಿದೆ. ಗ್ರಾಮದ ಅಭಿವೃದ್ಧಿಗೆ ಎಲ್ಲರೂ ಒಗ್ಗೂಡಬೇಕು, ಸ್ವಚ್ಛತೆ ವಿಷಯದಲ್ಲಿ ಪರಾವಲಂಬನೆ ಬಿಟ್ಟು ಸ್ವಯಂ ಪ್ರೇರಿತರಾಗಿ ತೊಡಗಿಸಿಕೊಳ್ಳಬೇಕು. ಸ್ವ-ಸಹಾಯ ಸಂಘಗಳ ಸದಸ್ಯರು ಸರ್ಕಾರದ ಸಹಾಯಧನ ಸದುಪಯೋಗ ಪಡಿಸಿಕೊಂಡು ಸ್ವಾವಲಂಬಿತರಾಗಿ ಆರ್ಥಿಕವಾಗಿ ಸಬಲೀಕರಣ ಹೊಂದಬೇಕು. ವಿವಿಧ ಇಲಾಖೆಯಡಿ ದೊರೆಯುವ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಜೀವನ ನಡೆಸುವಂತಾಬೇಕು ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪೋಷಣ್ ಅಭಿಯಾನ ಯೋಜನೆಯಡಿ 50 ಗರ್ಭಿಣಿಯರಿಗೆ ಉಚಿತವಾಗಿ ಸೀರೆ ನೀಡುವ ಮೂಲಕ ಸೀಮಂತ ಕಾರ್ಯಕ್ರಮವನ್ನು ನೆರವೇರಿಸಿದರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ಸುಕನ್ಯ ಸಮೃದ್ದಿ ಯೋಜನೆಯಡಿ ಅಂಚೆ ಕಚೇರಿ ಪಾಸ್ ಪುಸ್ತಕ ವಿತರಿಸಲಾಯಿತು. ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಮಂಜೂರಾದ ಸೌಲಭ್ಯಗಳ ಆದೇಶ ಪ್ರತಿ ನೀಡಲಾಯಿತು. ಅರಣ್ಯ ಇಲಾಖೆಯ ವತಿಯಿಂದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಸಿ ನೇಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹಾಗೂ ಆರೋಗ್ಯ ಇಲಾಖೆಯಿಂದ ಸಾರ್ವಜನಿಕರಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಯಿತು.
ಗ್ರಾಮ ವಾಸ್ತವ್ಯ ಕಾರ್ಯಕ್ರಮದ ವೇಳೆ ಗ್ರಾಮಸ್ಥರಿಂದ ಸುಮಾರು 77 ಕುಂದುಕೊರತೆಯ ಅರ್ಜಿಗಳು ಸ್ವೀಕೃತವಾಗಿವೆ. ಇದರಲ್ಲಿ ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ದಿ ಇಲಾಖೆಗೆ ಸಂಬಂಧಿಸಿದಂತೆ ಮನೆ, ನಿವೇಶನ, ರಸ್ತೆ, ಚರಂಡಿ ನಿರ್ಮಾಣಕ್ಕೆ ಸಂಬಂಧಿಸಿದವುಗಳಿವೆ. ಕಂದಾಯ ಇಲಾಖೆಗೆ ಪೋಡಿ, ಪಹಣಿ ತಿದ್ದುಪಡಿಗೆ ಸಂಬಂಧಿಸಿದವು ಹಾಗೂ ಶಿಕ್ಷಣ ಇಲಾಖೆಗೆ ಕಾಂಪೌಂಡ್ ನಿರ್ಮಾಣ, ಬೆಸ್ಕಾಂಗೆ ವಿದ್ಯುತ್ ಕಂಬ ಸ್ಥಳಾಂತರ ಹಾಗೂ ಡಾ; ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮಕ್ಕೆ ಸಂಬಂಧಿಸಿದ ಅರ್ಜಿಗಳು ಸ್ವೀಕೃತಗೊಂಡಿವೆ.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಗ್ರಾಮಸ್ಥರು ವಿವಿಧ ಕಲಾ ತಂಡದ ವಾದ್ಯಗೋಷ್ಠಿಯೊಂದಿಗೆ ಅಧಿಕಾರಿಗಳನ್ನು ಸ್ವಾಗತಿಸಿದರು. ನಂತರ ಜಿಲ್ಲಾಧಿಕಾರಿಗಳು ಗ್ರಾಮದ ವಿವಿಧ ಕಾಲೋನಿಗಳಿಗೆ ಭೇಟಿ ನೀಡಿ ಮೂಲಭೂತ ಸೌಕರ್ಯಗಳ ಕುರಿತು ಜನರಿಂದ ಮಾಹಿತಿ ಪಡೆದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷೆ ಗಾಯಿತ್ರಿ ಹನುಮಂತಪ್ಪ, ಉಪವಿಭಾಗಾಧಿಕಾರಿ ದುರ್ಗಾಶ್ರೀ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗರಾಜ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ವಾಸಂತಿ ಉಪ್ಪಾರ್, ತಹಶೀಲ್ದಾರ್ ಸಂತೋಷ್ ಕುಮಾರ್, ಗ್ರಾ.ಪಂ ಉಪಾಧ್ಯಕ್ಷರಾದ ಮಂಜಮ್ಮ ಪ್ರಕಾಶ್, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಮಹೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಸೇರಿದಂತೆ ವಿವಿಧ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಗ್ರಾ.ಪಂ ಸದಸ್ಯರು, ವಿದ್ಯಾರ್ಥಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.