Connect with us

Dvgsuddi Kannada | online news portal | Kannada news online

ದಾವಣಗೆರೆ: 8 ವರ್ಷದಲ್ಲಿ ಕೇಂದ್ರ ಸರ್ಕಾರ 18 ಸಾವಿರಕ್ಕೂ ಅಧಿಕ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ : ಶಾಸಕ ರವೀಂದ್ರನಾಥ್

ದಾವಣಗೆರೆ

ದಾವಣಗೆರೆ: 8 ವರ್ಷದಲ್ಲಿ ಕೇಂದ್ರ ಸರ್ಕಾರ 18 ಸಾವಿರಕ್ಕೂ ಅಧಿಕ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ : ಶಾಸಕ ರವೀಂದ್ರನಾಥ್

ದಾವಣಗೆರೆ: ದೇಶಕ್ಕೆ ಸ್ವಾತಂತ್ರ್ಯ ದೊರೆತು ಆರು ದಶಕ ಕಳೆದರೂ ವಿದ್ಯುತ್ ಸಂಪರ್ಕ ಕಾಣದ 18‌ ಸಾವಿರ ಹಳ್ಳಿಗಳಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಎಂಟು ವರ್ಷಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿದೆ ಎಂದು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ ರವೀಂದ್ರನಾಥ್ ಹೇಳಿದರು.

ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ, ‘ಉಜ್ವಲ ಭಾರತ-ಉಜ್ವಲ ಭವಿಷ್ಯ’ ವಿದ್ಯುತ್ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭಾರತಕ್ಕೆ ಸ್ವಾತಂತ್ರ್ಯ ದೊರೆತು ಅನೇಕ ವರ್ಷಗಳು ಕಳೆದರೂ ಕೂಡ ದೇಶದ ಎಷ್ಟೋ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವಿರಲಿಲ್ಲ. ಇದನ್ನು ಮನಗಂಡ ಕೇಂದ್ರ ಸರ್ಕಾರ ಕಳೆದ ಎಂಟು ವರ್ಷಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲದ ಸಾವಿರಾರು ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದೆ ಎಂದರು.

ನಮ್ಮ ದಿನ ನಿತ್ಯದ ಚಟುವಟಿಕೆಗಳನ್ನು ಕೈಗೊಳ್ಳಲು ಪ್ರಸ್ತುತ ದಿನಮಾನಗಳಲ್ಲಿ ವಿದ್ಯುತ್ ಅತಿ ಮುಖ್ಯವಾಗಿದೆ. 1960ರ ಕಾಲಘಟ್ಟದಲ್ಲಿ ಜನರು ರಾತ್ರಿಯ ಸಮಯದಲ್ಲಿ ಬೆಳಕಿಗಾಗಿ ಬುಡ್ಡಿ ದೀಪ, ಲಾಟೀನ್ ನಂತಹ ಉಪಕರಣಗಳನ್ನು ಬಳಸುತ್ತಿದ್ದರು. ತಾಂತ್ರಿಕವಾಗಿ ಮುಂದುವರಿದ ಪ್ರಸ್ತುತ ಕಾಲಘಟ್ಟದಲ್ಲಿ ವಿದ್ಯುತ್ ಬಳಸಿ ಬೆಳಕನ್ನು ಪಡೆಯುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಭಾರತ ಪ್ರಪಂಚದಲ್ಲಿಯೇ ಅತಿ ಹೆಚ್ಚು ವಿದ್ಯುತ್ ಉತ್ಪಾದಿಸುವ ರಾಷ್ಟ್ರವಾಗಿ ಹೊರಹೊಮ್ಮಲಿ ಎಂದು ಆಶಿಸಿದರು.

ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಮಾತನಾಡಿ, ವಿದ್ಯುತ್ ಬಳಕೆದಾರರು ಅನಗತ್ಯವಾಗಿ ವಿದ್ಯುತ್ ವ್ಯರ್ಥ ಮಾಡದೆ, ಅವಶ್ಯಕತೆಗೆ ತಕ್ಕಷ್ಟು ಮಾತ್ರ ಉಪಯೋಗಿಸಿಕೊಳ್ಳಬೇಕು. ಆಧುನಿಕ ಕಾಲಘಟ್ಟದಲ್ಲಿ ಎಲ್ಲ ಕೆಲಸ ಕಾರ್ಯಗಳಿಗೂ ವಿದ್ಯುತ್ ಅತ್ಯವಶ್ಯಕವಾಗಿ ಬೇಕಾಗಿದೆ. ಹಿಂದೆ 8 ರಿಂದ 10 ಹಳ್ಳಿಗಳನ್ನು ಒಳಗೊಂಡು ಒಂದು ಪವರ್ ಲೈನ್ ಮೂಲಕ ವಿದ್ಯುತ್ ಪೂರೈಕೆ ಮಾಡಲಾಗುತ್ತಿತ್ತು. ಆದರೆ ಪ್ರಸ್ತುತ ಪ್ರತಿ ಹಳ್ಳಿಗೂ ಪ್ರತ್ಯೇಕ ವಿದ್ಯುತ್ ಪೂರೈಕೆ ಲೈನ್‍ಗಳನ್ನು ಅಳವಡಿಸಲಾಗಿದೆ. ಹೊಸ ಹೊಸ ತಂತ್ರಜ್ಞಾನಗಳನ್ನು ಉಪಯೋಗಿಸಿಕೊಂಡು ವಿದ್ಯುತ್ ಇಲಾಖೆಗಳು ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಬೇಕು. ಮುಂದಿನ ದಿನಗಳಲ್ಲಿ ಗಾಳಿ ಮತ್ತು ಸೌರ ವಿದ್ಯುತ್ ಬಳಕೆಗೆ ಮುಂದಾಗಬೇಕು. ಪವರ್ ಗ್ರಿಡ್ ಎಂಬುದು ದೇಶದ ವಿವಿಧ ಭಾಗಗಳಲ್ಲಿ ಉತ್ಪಾದನೆಯಾಗುವ ವಿದ್ಯುತ್ತನ್ನು ಕೊರತೆ ಇರುವಡೆಗೆ ಪೂರೈಸುವ ಒಂದು ವಿನೂತನ ಯೋಜನೆಯಾಗಿದೆ ಎಂದರು.

ಪವರ್ ಗ್ರೀಡ್ ಕಾರ್ಪೋರೇಷನ್ ಆಫ್ ಇಂಡಿಯಾ ಸಂಸ್ಥೆ ನಾಮ ನಿರ್ದೇಶಿತ ಸದಸ್ಯ ಓಂಕಾರಪ್ಪ ಕೆ.ಎನ್ ಮಾತನಾಡಿ, ಪವರ್ ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾ ಕಂಪನಿಯು ದೇಶದ ವಿವಿಧ ರಾಜ್ಯಗಳಲ್ಲಿ ವಿದ್ಯುತ್ ಸಂಬಂಧಿತ ಅನೇಕ ಕಾರ್ಯಗಳನ್ನು ಕೈಗೊಂಡಿದೆ. ಕಂಪನಿ ವತಿಯಿಂದ ಸಾಕಷ್ಟು ಲೈನ್, ಗ್ರಿಡ್ ಹಾಕಲು ಅವಕಾಶವಿದೆ. ಆದ್ದರಿಂದ ಅಧಿಕಾರಿಗಳು ಅವಶ್ಯಕವಿರುವ ಅನುದಾನದ ಕುರಿತು ಸಮಗ್ರ ವರದಿ ತಯಾರಿಸಿ ಸಲ್ಲಿಸಿದರೆ, ಬೇಡಿಕೆಗೆ ತಕ್ಕಷ್ಟು ಅನುದಾನ ಮಂಜೂರು ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದೆಂದರು. ನಿರಂತರವಾಗಿ ವಿದ್ಯುತ್ ಒದಗಿಸುವುದರ ಹಿಂದೆ ಲೈನ್‍ಮ್ಯಾನ್‍ಗಳ ಶ್ರಮ ಸಾಕಷ್ಟಿದೆ, ಹಗಲು ರಾತ್ರಿ ಎನ್ನದೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವವರು ಲೈನ್‍ಮ್ಯಾನ್‍ಗಳು. ಅನೇಕರು ಇದಕ್ಕಾಗಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ, ಆದ್ದರಿಂದ ಇನ್ನಷ್ಟು ರಕ್ಷಣಾ ಸುಧಾರಣೆಗಳನ್ನು ರೂಪಿಸಬೇಕು. ಸಾರ್ವಜನಿಕರು ವಿದ್ಯುತ್ ಸರಬರಾಜಿನಲ್ಲಿ ಅಡೆತಡೆಗಳಾದಾಗ ಲೈನ್‍ಮ್ಯಾನ್‍ಗಳ ಜೊತೆಗೆ ಸಂಯಮದಿಂದ ವರ್ತಿಸಬೇಕು ಎಂದರು.

ಮಾಯಕೊಂಡ ವಿಧಾನ ಸಭಾ ಶಾಸಕರು ಹಾಗೂ ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಪ್ರೊ.ಎನ್.ಲಿಂಗಣ್ಣ ಮಾತನಾಡಿ, ನೀರು, ಸೌರ, ಗಾಳಿಯಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ವಿದ್ಯುತ್ ಉತ್ಪಾದನೆಯಾಗಲಿ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಇದಕ್ಕಾಗಿ ಸಾಕಷ್ಟು ಉತ್ತೇಜನ ನೀಡುತ್ತಿದೆ. ರೈತರಿಗೆ ವಿದ್ಯುತ್ ತುಂಬಾ ಅವಶ್ಯಕವಾಗಿದೆ, ಆದ್ದರಿಂದ ರೈತರು ಅಥವಾ ಸಾರ್ವಜನಿಕರು ಕರೆ ಮಾಡಿದಾಗ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸಬೇಕು. ಸಾರ್ವಜನಿಕರು ಸಹ ವಿದ್ಯುತ್ ಪೂರೈಕೆಯಲ್ಲಿ ತೊಂದರೆಗಳು ಉಂಟಾದಾಗ ಅಧಿಕಾರಿ ಮತ್ತು ಲೈನ್‍ಮ್ಯಾನ್‍ಗಳೊಂದಿಗೆ ಸಹನೆಯಿಂದ ತಮ್ಮ ದೂರನ್ನು ಹೇಳಿ ಪರಿಹಾರ ಕಂಡುಕೊಳ್ಳಬೇಕು ಎಂದರು.

ದಾವಣಗೆರೆ ವೃತ್ತ ಬೆಸ್ಕಾಂ ಅಧೀಕ್ಷಕ ಅಭಿಯಂತರರಾದ ಬಿ.ಎಸ್ ಜಗದೀಶ್ ಪ್ರಾಸ್ತಾವಿಕವಾಗಿ ಮಾತನಾಡಿ, 75ನೇ ಸ್ವಾತಂತ್ರ್ಯದ ಮಹೋತ್ಸವ ಹಿನ್ನೆಲೆಯಲ್ಲಿ ಉಜ್ವಲ ಭಾರತ ಉಜ್ವಲ ಭವಿಷ್ಯ ಎಂಬ ವಿದ್ಯುತ್ ಮಹೋತ್ಸವವನ್ನು ಆಯೋಜಿಸಲಾಗಿದೆ. ಕೇಂದ್ರ ಸರ್ಕಾರ ಬಿಪಿಎಲ್ ಗ್ರಾಹಕರಿಗೆ ಉಚಿತ ವಿದ್ಯುತ್ ಒದಗಿಸುವ ಉದ್ದೇಶದಿಂದ ‘ಸೌಭಾಗ್ಯ’ ಯೋಜನೆ ಜಾರಿಗೆ ತಂದಿದೆ. ಹಾಗೂ ರಾಜ್ಯ ಸರ್ಕಾರವು ಬೆಳಕು ಯೋಜನೆ ಅಡಿಯಲ್ಲಿ ಬಿಪಿಎಲ್ ಮತ್ತು ಎಪಿಎಲ್ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಜಾರಿ ಮಾಡಿದೆ. ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 9254 ಸಂಖ್ಯೆಗಳ ಗೃಹಪಯೋಗಿ ಸ್ಥಾವರಗಳಿಗೆ ಬೆಳಕು ಯೋಜನೆಯಲ್ಲಿ ಉಚಿತ ವಿದ್ಯುತ್ ಸಂಪರ್ಕವನ್ನು ನೀಡಲಾಗಿದೆ. ಗ್ರಾಹಕರಿಗೆ ಉತ್ತಮ ಮಟ್ಟದ ವಿದ್ಯುತ್ ತಲುಪಬೇಕು. ಯಾವುದೇ ತೊಂದರೆ ಆಗದಂತೆ ಪ್ರತಿ ತಿಂಗಳ ಮೂರನೇ ಶನಿವಾರ ವಿದ್ಯುತ್ ಅದಾಲತ್ ಕಾರ್ಯಕ್ರಮ ಆಯೋಜಿಸಿ ಸ್ಥಳದಲ್ಲಿಯೇ ಸಮಸ್ಯೆಯನ್ನು ಪರಿಹರಿಸಲಾಗುತ್ತಿದೆ. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು 1912 ನ ಗ್ರಾಹಕ ಸೇವಾ ಕೇಂದ್ರದ ಮೂಲಕವು ಪರಿಹರಿಸಿಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಬೆಸ್ಕಾಂ ಕಾರ್ಯಪಾಲಕ ಅಭಿಯಂತರರಾದ ಎಂ.ಹೆಚ್ ವಿಜಯಲಕ್ಷ್ಮೀ, ಹರಿಹರ ಬೆಸ್ಕಾಂನ ಕಾರ್ಯಪಾಲಕ ಅಭಿಯಂತರರಾದ ವಿನಯ್ ಕುಮಾರ್ ಸೇರಿದಂತೆ ಬೆಸ್ಕಾಂ ಸಿಬ್ಬಂದಿಗಳು, ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top