ದಾವಣಗೆರೆ: ಜಿಲ್ಲೆಯಲ್ಲಿ ಅತಿಯಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಂಕಷ್ಟಕ್ಕೊಳಗಾಗಿರುವ ಜನ ಜಾನುವಾರುಗಳ ಸೂಕ್ತ ರಕ್ಷಣೆಗೆ ತಾಲ್ಲೂಕು ಹಂತದಲ್ಲಿ ಕಾರ್ಯಪಡೆ ರಚಿಸಿ ಕಾರ್ಯೋನ್ಮುಖರಾಗಿ, ಯಾವುದೇ ಅನಾಹುತಗಳಿಗೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹೇಳಿದರು.
ಚನ್ನಗಿರಿ ಪಟ್ಟಣದ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮಳೆ ಹಾನಿ ಕುರಿತು ವಿವಿಧ ಇಲಾಖೆಗಳ ವರದಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲೆಯಾದ್ಯಂತ ಮಳೆಯಿಂದ ಹಾನಿಗೊಳಗಾದ ಸಂತ್ರಸ್ತರಿಗೆ ತುರ್ತಾಗಿ ಎನ್.ಡಿ.ಆರ್.ಎಫ್ ಅನ್ವಯ ಸೂಕ್ತ ಪರಿಹಾರ ಒದಗಿಸಿ ಉತ್ತಮ ಮಳೆ ಆಗುತ್ತಿರುವುದರಿಂದ ರೈತರಿಗೆ ಬಿತ್ತನೆ ಕುರಿತು ಸೂಕ್ತ ಸಲಹೆ ಹಾಗೂ ಮಾರ್ಗದರ್ಶನಗಳನ್ನು ನೀಡಬೇಕು. ಜಿಲ್ಲೆಯಲ್ಲಿ ಯಾವುದೇ ರಸಗೊಬ್ಬರ ಹಾಗೂ ಬಿತ್ತನೆ ಬೀಜದ ಸಮಸ್ಯೆ ಉಂಟಾಗದಂತೆ ಸಂಬಂಧಪಟ್ಟ ಇಲಾಖೆಯವರು ಜಾಗೃತೆ ವಹಿಸಬೇಕು.
ಬೆಳೆಹಾನಿ ಉಂಟಾದ ಪ್ರದೇಶಗಳಿಗೆ ಉಪವಿಭಾಗಾಧಿಕಾರಿಗಳ ತಂಡ ಭೇಟಿ ನೀಡಿ ಸರಿಯಾದ ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು, ಜೋರಾಗಿ ಮಳೆ ಬೀಳುವ ಸಂದರ್ಭದಲ್ಲಿ ವಿದ್ಯುತ್ ಅವಘÀಡಗಳು ಉಂಟಾದರೆ ತಕ್ಷಣವೇ ಸ್ಪಂದಿಸಿ ಸಮಸ್ಯೆ ಪರಿಹರಿಸಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಯಾವುದೇ ತಾಲೂಕುಗಳಲ್ಲಿ ಸರ್ಕಾರಿ ಶಾಲೆ ಅಥವಾ ಕಾಲೇಜುಗಳು ಮಳೆಯಿಂದಾಗಿ ಹಾನಿಗೆ ಒಳಗಾಗಿದ್ದರೆ, ಅಂತಹ ಶಾಲೆಗಳ ಕುರಿತು ಸಂಪೂರ್ಣ ವರದಿ ತಯಾರಿಸಿ ನಮ್ಮ ಗಮನಕ್ಕೆ ತಂದರೆ ಪರಿಹಾರ ದೊರಕಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಬಗರ್ ಹುಕುಂ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಅರಣ್ಯ ಇಲಾಳೆಯವರು ತೊಂದರೆ ಮಾಡಬಾರದು, ಸರ್ಕಾರ ಶೀಘ್ರದಲ್ಲಿ ಈ ಬಗ್ಗೆ ಆದೇಶ ನೀಡಲಿದ್ದು ಆದೇಶ ಬರುವವರಗೆ ರೈತರಿಗೆ ತೊಂದರೆ ನೀಡಬಾರದು ಎಂದರು.
ಕರ್ನಾಟಕ ಸಾಬೂನು ಮತ್ತು ಮಾರ್ಜಕ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕ ಕೆ.ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ನಗರ, ಪಟ್ಟಣ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು.
ಮಳೆಗಾಲ ಮುಗಿಯುವವರೆಗೂ ಚರಂಡಿ ಮತ್ತು ವಾಟರ್ ಟ್ಯಾಂಕ್ಗಳನ್ನು ಆಗಿಂದಾಗ್ಗೆ ಸ್ವಚ್ಛಗೊಳಿಸುತ್ತಿರಬೇಕು.ಬ್ಲೀಚಿಂಗ್ ಪೌಡರ್ ಬಳಸಿ ಸೊಳ್ಳೆಗಳು ನಿಂತ ನೀರಿನಲ್ಲಿ ಇರದಂತೆ ನೋಡಿಕೊಳ್ಳಬೇಕು, ಮೂಲಭೂತ ಸೌಲಭ್ಯ ಒದಗಿಸಲು ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾಹಿತಿ ನೀಡಿ, ಮುಂಗಾರು ಮಳೆ ಬಿದ್ದಂತಹ ಸಂದರ್ಭದಲ್ಲಿ ಭತ್ತ ಹಾಗು ಎಲೆಬಳ್ಳಿ ಬೆಳೆಗಳಿಗೆ ಹೆಚ್ಚಿನ ಹಾನಿಯಾಗಿತ್ತು. ಚನ್ನಗಿರಿ ತಾಲೂಕಿನಲ್ಲಿ ಜೂನ್ ಅಂತ್ಯದ ವೇಳೆಗೆ ಒಟ್ಟು 67 ಮನೆಗಳಿಗೆ ಹಾನಿಯಾಗಿತ್ತು, ಹಾನಿಗೊಳಗಾದ ಸಂತ್ರಸ್ತರಿಗೆ 13,35,000 ಪರಿಹಾರ ವಿತರಣೆ ಮಾಡಲಾಗಿದೆ ಎಂದು ಹೇಳಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಮಾಹಿತಿ ನೀಡಿ,ಮುಂಗಾರಿನಲ್ಲಿ ಶೇಕಡ 90 ರಷ್ಟು ಹೆಚ್ಚು ಮಳೆಯಾಗಿದ್ದು, ಮುಂಗಾರಿನಲ್ಲಿ 46194 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು ಈಗಾಗಲೇ 19658 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಅಡಿಕೆ ಬೆಳೆ ಮಧ್ಯದಲ್ಲಿ ತೊಗರಿಯನ್ನು ಅಂತರ ಬೆಳೆಯಾಗಿ ನಾಟಿ ಮಾಡಲಾಗುತ್ತಿದೆ, ಅದರಂತೆ 3600 ಎಕರೆ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದೆ. ಈ ಬಾರಿ ಹೊಸಾಗಿ ಸೋಯಾಬೀನ್ ಪ್ರಯೋಗ ಮಾಡಲಾಗಿದೆ ಎಂದರು.
ತೋಟಗಾರಿಕೆ ಇಲಾಖೆ ಅಧಿಕಾರಿ ಮಾಹಿತಿ ನೀಡಿ,ಹಿಂದಿನ ವರ್ಷದ ಬೆಳೆಹಾನಿ ಪರಿಹಾರವನ್ನು ರೈತರ ಖಾತೆಗೆ ಜಮಾ ಮಾಡಲಾಗಿದೆ, ಚನ್ನಗಿರಿ ತಾಲ್ಲೂಕಿನ 1600 ರೈತರ ಖಾತೆಗೆ 95 ಲಕ್ಷ 56 ಸಾವಿರ ಜಮಾ ಮಾಡಲಾಗಿದೆ ಎಂದರು. ಇಆ ಬಾರಿ 2.45 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಇದ್ದು 1.28 ಲಕ್ಷ ಹೆಕ್ಷೇರ್ ಗುರಿ ಸಾಧನೆಯಾಗಿದೆ ಎಂದರು.
ಸಭೆಯಲ್ಲಿ ಜಿ.ಪಂ.ಸಿಇಒ ಡಾ.ಎ.ಚನ್ನಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ, ತಹಶೀಲ್ದಾರ್(ಗ್ರೇಡ್-2) ರುಕ್ಮಿಣಿಬಾಯಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.