Connect with us

Dvgsuddi Kannada | online news portal | Kannada news online

ದಾವಣಗೆರೆ: ಮಹನೀಯರ ಸ್ಮರಣೆಗಾಗಿ ಅಮೃತಭಾರತಿಗೆ ಕನ್ನಡದಾರತಿ ಕಾರ್ಯಕ್ರಮ: ಜಿ.ಎಂ ಸಿದ್ದೇಶ್ವರ

ದಾವಣಗೆರೆ

ದಾವಣಗೆರೆ: ಮಹನೀಯರ ಸ್ಮರಣೆಗಾಗಿ ಅಮೃತಭಾರತಿಗೆ ಕನ್ನಡದಾರತಿ ಕಾರ್ಯಕ್ರಮ: ಜಿ.ಎಂ ಸಿದ್ದೇಶ್ವರ

ದಾವಣಗೆರೆ: ಸ್ವಾತಂತ್ರ್ಯ ಬಂದು 75 ವರ್ಷವಾಗಿದೆ. ಹೋರಾಡಿದವರು, ಜೈಲಿಗೆ ಹೋದವರು ಬಹಳಷ್ಟು ಹಿರಿಯರಿದ್ದಾರೆ. ಅನೇಕರು ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಹೋರಾಟ ಮಾಡಿದ ಎಲ್ಲಾ ಮಹನೀಯರ ನೆನಪಿಗಾಗಿ ರಾಜ್ಯದೆಲ್ಲೆಡೆ ಅಮೃತಭಾರತಿಗೆ ಕನ್ನಡದಾರತಿ ಕಾರ್ಯಕ್ರಮ ಮಾಡಲಾಗುತ್ತಿದೆ. ಇದೊಂದು ವಿಶೇಷವಾದ ಕಾರ್ಯಕ್ರಮ ನಾವೆಲ್ಲರೂ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಮಾಡಬೇಕು. ಜಿಲ್ಲೆಯಲ್ಲಿ ಈ ಸಮಾರಂಭದ ಮೂಲಕ ಹೋರಾಟಗಾರರಿಗೆ ಗೌರವ ನೀಡಲಾಗುತ್ತಿದೆ. ಇದೇ ವೇಳೆ ಹೋರಾಟಗಾರರಿಗೆ ಸನ್ಮಾನ ಮಾಡಬೇಕು ಎಂದು ಸಂಸದ ಜಿ.ಎಂ.‌ಸಿದ್ದೇಶ್ವರ ಹೇಳಿದರು.

ನಗರದ ಮಹಾನಗರ ಪಾಲಿಕೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ “ಅಮೃತ ಭಾರತಿಗೆ ಕನ್ನಡದಾರತಿ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾಷಣಕ್ಕಿಂತ ಕೃತಿ ಮುಖ್ಯ. ಇದನ್ನು ನಿರೂಪಿಸಿದವರು ಪ್ರಧಾನಿ ನರೇಂದ್ರ ಮೋದಿ. ಕೋವಿಡ್ ಸಮಯದಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತರು ಜೀವದ ಹಂಗು ತೊರೆದು ಕೆಲಸ ಮಾಡಿದರು. ವೈದ್ಯರು, ಶ್ರುಶೂಷಕರೆಲ್ಲರ ಶ್ರಮದಿಂದ ನಾವಿಂದು ಕೋವಿಡ್ ನಿಯಂತ್ರಣ ಮಾಡಲು ಸಾಧ್ಯವಾಗಿದೆ. ಹೊರದೇಶದವರು ಇನ್ನೂ ಕೊವಿಡ್ ನಿರ್ಮೂಲನೆ ಮಾಡಲು ಸಾಧ್ಯವಾಗಿಲ್ಲ ಆದರೆ ನಮ್ಮ ದೇಶ ಕೋವಿಡ್ ನಿರ್ವಹಣೆಯಲ್ಲಿ ಯಶಸ್ಸು ಕಂಡಿದೆ. ಪ್ರಧಾನಿಯವರು ರೈತರ ಆದಾಯ ದ್ವಿಗುಣಗೊಳಿಸಲು ಕೃಷಿ ಸಂಚಾರಿ, ಪ್ರಧಾನ ಮಂತ್ರಿ ಆವಾಜ್ ಯೋಜನೆ ಹೀಗೆ ಹಲವಾರು ಯಶಸ್ವಿ ಯೋಜನೆಗಳ ರೂಪಿಸುವ ಮೂಲಕ ಮನೆಮಾತಾಗಿದ್ದಾರೆ. ಬೇರೆ ದೇಶಕ್ಕೆ ಹೊಲಿಸಿದರೆ ನಮ್ಮ ದೇಶದಲ್ಲಿ ಕಡಿಮೆ ದರದಲ್ಲಿ ರಸಗೊಬ್ಬರ ನೀಡುತ್ತಿದೆ. ದೇಶ ಸುಭಿಕ್ಷೆಯಾಗಿದೆ ಹಾಗೂ ಇನ್ನು ಕೆಲವೇ ವರ್ಷದಲ್ಲೇ ದೇಶ ಮುಂಚೂಣಿಯಲ್ಲಿರಲಿದೆ ಎಂದರು.

ಪ್ರಾಧ್ಯಾಪಕಿ ಡಾ. ವನಜಾಕ್ಷಿ ಮಾತನಾಡಿ, ಕರ್ನಾಟಕದ ಒಂದೊಂದು ಊರುಗಳು ಒಂದೊಂದು ಸ್ವಾತಂತ್ರ್ಯದ ಕಥೆ ಹೇಳುತ್ತವೆ, ಅಂಕೋಲದ ಉಪ್ಪಿನ ಸತ್ಯಾಗ್ರಹ,ಈಸೂರು ರೈತ ಚಳವಳಿ, ವಿದುರಾಶ್ವಥದಲ್ಲಿ ನಡೆದ ಗೋಲಿಬಾರ್, ಹಲಗಲಿಯ ಬೇಡರ ದಂಗೆ ಸೇರಿದಂತೆ ನೂರಾರು ಹೋರಾಟಗಳಿಗೆ ನಮ್ಮ ರಾಜ್ಯ ಸಾಕ್ಷಿಯಾಗಿದೆ ಎಂದರು.
ಇತಿಹಾಸ ಅರಿತವರು ಮಾತ್ರ ಇತಿಹಾಸ ನಿರ್ಮಿಸಲು ಸಾಧ್ಯ. ಈ ಕಾರಣದಿಂದ ನಾವುಗಳು ದೇಶ ನಡೆದು ಬಂದ ಹಾದಿಯನ್ನು ಅರಿಯಬೇಕು ಎಂದರಲ್ಲದೇ,ಮಹಾತ್ಮ ಗಾಂಧಿಯವರು ಎಲ್ಲರನ್ನೂ ಜೋಡಿಸುವ ಕಾರ್ಯ ಮಾಡಿದರು. ತಿಲಕರು ಸ್ವಾತಂತ್ರ್ಯ ಭಿಕ್ಷೆಯಲ್ಲ, ಸ್ವಾತಂತ್ರ್ಯ ನನ್ನ ಜನ್ಮ ಸಿದ್ದ ಹಕ್ಕು ಅದನ್ನು ಪಡೆದೇ ತೀರುತ್ತೇನೆ ಎಂದರು. ಅಖಂಡ ಭಾರತದ ಪರಿಕಲ್ಪನೆ ತಂದವರು ವಲ್ಲಭಭಾಯ್ ಪಟೇಲ್ ತಮ್ಮ ದಿಟ್ಟತನದಿಂದ ದೇಶದೊಳಗಿದ್ದು ದೇಶದ ವಿರುದ್ದ ಮಾತನಾಡುತಿದ್ದ ಜುನಾಘಡ, ಹೈದರಾಬಾದ್ನಂತಹ ಸಂಸ್ಥಾನಗಳನ್ನು ಬಲಪ್ರಯೋಗದ ಮೂಲಕ ಒಳ ಸೇರಿಸಿಕೊಳ್ಳುವುದರೊಂದಿಗೆ ಭಾರತ ಒಗ್ಗೂಡಲು ಕಟಿಬದ್ದರಾಗಿದ್ದರು. ಅವರಂತೆಯೇ ಸಂವಿಧಾನದ ಮೂಲಕ ರಾಷ್ಟ್ರವನ್ನು ಕಟ್ಟಲು ಅಂಬೇಡ್ಕರ್ ಮುಂದಾದರು ಎಂದು ತಿಳಿಸಿದರು.

ಹೆಚ್.ಬಿ ಮಂಜುನಾಥ್ ಮತಾನಾಡಿ, ಸ್ವಾತಂತ್ರ್ಯ ಹೋರಾಟಕ್ಕೆ ದಾವಣಗೆರೆಯ ಕೊಡುಗೆಯೂ ಸಾಕಷ್ಟಿದೆ.ಮಹಾತ್ಮ ಗಾಂಧಿಯವರು ದಾವಣಗೆರೆಗೆ 2 ಬಾರಿ ಭೇಟಿಕೊಟ್ಟಿದ್ದಾರೆ. ನಗರದ ಆದಿಕರ್ನಾಟಕ ಜನಾಂಗದ ಸಂಘದ ಆವರಣದಲ್ಲಿ ಹಾಸ್ಟೆಲ್ ಕಟ್ಟಡಕ್ಕೆ ಅಡಿಗಲ್ಲು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಿವಪುರ ಅರಣ್ಯ ಸತ್ಯಗ್ರಹ ಹಾಗೂ ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭದಲ್ಲಿ ಬ್ರಿಟಿಷರ ವಿರುದ್ಧ ದಾವಣಗೆರೆಯ ಜಡೆ ಕೃಷ್ಣರಾಯ, ಜಾಧವ್ ನೀಲಪ್ಪ, ಹಳ್ಳೂರು ರಂಗಪ್ಪ, ಕೀರ್ತಿ ಕೇಶಿ, ಹದಡಿ ಲಿಂಗಪ್ಪ, ಬಳ್ಳಾರಿ ಸಿದ್ದಮ್ಮ, ಇಟ್ಟಿಗಿ ಶಿವಪ್ಪ ಸೇರಿದಂತೆ ಹಲವಾರು ಮಹನೀಯರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ ಎಂದರು.

ಶಾಸಕ ಎಸ್.ಎ ರವೀಂದ್ರನಾಥ್ ಮಾತನಾಡಿ, ಅನೇಕ ಮಹನೀಯರ ಹೋರಾಟದ ಫಲವಾಗಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು, ದೇಶದ ಕೆಲಸ ಮಾಡುವಾಗ ಅಭಿಮಾನದಿಂದ ಕೆಲಸ ಮಾಡಬೇಕು. ನಾವು ದೇಶಕ್ಕೆ ಏನಾದರೂ ಉತ್ತಮ ಕೊಡುಗೆ ಕೊಡಬೇಕು ಮಹಾತ್ಮರ ಆದರ್ಶಗಳನ್ನು ಅಳವಡಿಸಿಕೊಂಡು ದೇಶದ ಸೇವೆಗೆ ಮುಂದಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸಂಕಲ್ಪವಿಧಿ ಬೋಧನೆ ಮಾಡಿದರು, ಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿ ಸ್ವಾಗತಿಸಿದರು. ದೀಪಾ ನಿರೂಪಿಸಿದರು.
ಸಮಾರಂಭದಲ್ಲಿ ಮೇಯರ್ ಜಯಮ್ಮಗೋಪಿನಾಯ್ಕ್, ಉಪಮೇಯರ್ ಗಾಯತ್ರಿಬಾಯಿ, ಮಾಜಿ ಸಚೇತಕರಾದ ಶಿವಯೋಗಿಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಚನ್ನಪ್ಪ, ಅಪರ ಜಿಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಉಪವಿಭಾಗಾಧಿಕಾರಿ ದುರ್ಗಾಶ್ರೀ, ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ಮಾಜಿ ಮೇಯರ್ ಎಸ್.ಟಿ ವೀರೇಶ್ ಸೇರಿದಂತೆ ಮತ್ತಿತರರಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top