Connect with us

Dvgsuddi Kannada | online news portal | Kannada news online

ದಾವಣಗೆರೆ: ಹೊಸ ಲೇಔಟ್ ನಿರ್ಮಾಣ ಸಂದರ್ಭದಲ್ಲಿ ಕಸ ನಿರ್ವಹಣೆಗೆ ಶೇ.5 ರಷ್ಟು ಭೂಮಿ ಮೀಸಲಿಡಿ: ಸುಭಾಷ್ ಬಿ.ಅಡಿ

ದಾವಣಗೆರೆ

ದಾವಣಗೆರೆ: ಹೊಸ ಲೇಔಟ್ ನಿರ್ಮಾಣ ಸಂದರ್ಭದಲ್ಲಿ ಕಸ ನಿರ್ವಹಣೆಗೆ ಶೇ.5 ರಷ್ಟು ಭೂಮಿ ಮೀಸಲಿಡಿ: ಸುಭಾಷ್ ಬಿ.ಅಡಿ

ದಾವಣಗೆರೆ: ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆ ಕುರಿತು ಸಾರ್ವಜನಿಕರಲ್ಲಿ  ಅರಿವು ಮೂಡಿಸಬೇಕೆಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಅಧ್ಯಕ್ಷ  ಸುಭಾಷ್ ಬಿ.ಅಡಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಪರಿಸರ ಅಧಿಕಾರಿಗಳು, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಇತರೆ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿರುವ ವಿಶೇಷ ಟಾಸ್ಕ್‍ಫೋರ್ಸ್ ಸಮಿತಿಯು ನಿಯಮಿತವಾಗಿ ಸಭೆ ಕರೆದು ತ್ಯಾಜ್ಯ ನಿರ್ವಹಣೆ ಕುರಿತು ಪರಿಶೀಲನೆ ನಡೆಸಬೇಕು. ಹಾಗೂ ತ್ಯಾಜ್ಯ ನಿರ್ವಹಣೆ ನಿಯಮಾವಳಿಗಳ ಬಗ್ಗೆ ಐಇಸಿ ಚಟುವಟಿಕೆಗಳನ್ನು ಹೆಚ್ಚಿಸಬೇಕು.

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಬೇಕು. ಸ್ಥಳಾವಕಾಶ ಇಲ್ಲದಿದ್ದರೆ ಎರಡು ಸ್ಥಳೀಯ ಸಂಸ್ಥೆಗಳು ಕೂಡಿ ಸ್ಥಾಪಿಸಬಹುದು. ಹಸಿಕಸ, ಒಣಕಸ ಮತ್ತು ಹಾನಿಕಾರಕ ಕಸಗಳನ್ನು ಮನೆಗಳಲ್ಲೇ ಪ್ರತ್ಯೇಕಗೊಳಿಸಿ ನೀಡಬೇಕು. ಈ ಬಗ್ಗೆ ಸ್ಥಳೀಯ ಸಂಸ್ಥೆಗಳ ವತಿಯಿಂದ ಜನರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು ಎಂದರು.

ಹಾನಿಕಾರಕ ವೇಸ್ಟ್‍ಗಳಾದ ಸ್ಯಾನಿಟರಿ ನ್ಯಾಪ್ಕಿನ್, ಡೈಪರ್, ಔಷಧೀಯ ವೇಸ್ಟ್ಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಅವಶ್ಯಕತೆ ಇರುವೆಡೆ ಸ್ಯಾನಿಟರಿ ನ್ಯಾಪ್ಕಿನ್ ನಾಶಮಾಡುವ(800 ಡಿಗ್ರಿ ಶಾಖದಲ್ಲಿ ಸುಡುವ) ಇನ್‍ಸ್ಯಾನಿಟೈಸರ್ಸ್ ಅಳವಡಿಸಬೇಕು. ಹಾಗೂ ಕಟ್ಟಡ ನಿರ್ಮಾಣದ ಸಿ&ಡಿ ತ್ಯಾಜ್ಯ ನಿರ್ವಹಣೆ ಕುರಿತು ಸಹ ಕಠಿಣ ಕ್ರಮ ಕೈಗೊಳ್ಳಬೇಕು .  ಚೌಲ್ಟ್ರಿಗಳು, ಇವೆಂಟ್ ಮ್ಯಾನೇಜ್‍ಮೆಂಟ್‍ಗಳು ಮತ್ತು ಇತರೆ ದೊಡ್ಡ ಇವೆಂಟ್ ನಡೆಸುವವರು ತಾವು ಉತ್ಪಾದಿಸುವ ಕಸವನ್ನು ತಾವೇ ಸಮರ್ಪಕವಾಗಿ ನಿರ್ವಹಿಸಬೇಕು. ಕಸ ವಿಂಗಡಣೆ ಮಾಡದ ಸಾರ್ವಜನಿಕರು ಹಾಗೂ ಸಂಸ್ಥೆಗಳ ವಿರುದ್ದ ಸೂಕ್ತ ದಂಡ ಮತ್ತು ಕ್ರಮವನ್ನು ಸ್ಥಳೀಯ ಸಂಸ್ಥೆಗಳು ವಹಿಸಬೇಕು. ಹಾಗೂ ಹೊಸದಾಗಿ ಲೇಔಟ್ ನಿರ್ಮಾಣವಾದಲ್ಲಿ, 5 ಲಕ್ಷ ಟನ್‍ಗೂ ಅಧಿಕ ಕಸ ಸಂಗ್ರಹವಾಗುವೆಡೆ ಶೇ.5 ರಷ್ಟು ಭೂಮಿಯನ್ನು ತ್ಯಾಜ್ಯ ನಿರ್ವಹಣೆಗೆ ಮೀಸಲಿಡಬೇಕು. ಜೊತೆಗೆ ರಾಜ್ಯ ಮಾಲಿನ್ಯ ಮಂಡಳಿಯಿಂದ ಇಸಿ(ಎನ್‍ವೈರ್ನಮೆಂಟಲ್ ಕ್ಲಿಯರೆನ್ಸ್)ಪಡೆಯಬೇಕು ಎಂದು ತಿಳಿಸಿದರು.

ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ ಮಾತನಾಡಿ, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ರಸ್ತುತ ಹಸಿ ಕಸ ಮತ್ತು ಒಣ ಕಸವನ್ನು ಪ್ರತಿ ಮನೆ ಮನೆಯಿಂದ ಸಂಗ್ರಹಿಸಲಾಗುತ್ತಿದೆ. ಹಾಗೂ ಹಾನಿಕಾರಕ ಕಸದ ಕುರಿತು ಜನರಲ್ಲಿ ಅರಿವು ಮೂಡಿಸಲಾಗಿದ್ದು ಇನ್ನು ಮುಂದೆ ಹಾನಿಕಾರಕ ಕಸವನ್ನೂ ಬೇರ್ಪಡಿಸಿ ತೆಗೆದುಕೊಳ್ಳಲಾಗುವುದು. ಕಸ ವಿಂಗಡಣೆ ಮತ್ತು ತ್ಯಾಜ್ಯ ನಿರ್ವಹಣೆ ಕುರಿತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅರಿವು ಮೂಡಿಸಲು ಐಇಸಿ ಚಟುವಟಿಕೆಗಳಾದ ಗೋಡೆಬರಹ, ಪೋಸ್ಟರ್, ಬೀದಿನಾಟಕ, ಘೋಷಣೆಗಳನ್ನು ಮಾಡಿಸಲಾಗಿದೆ. ಕಸ ವಿಂಗಡಣೆ ಮಾಡದವರಿಗೆ ದಂಡ ಸಹ ವಿಧಿಸಲಾಗುವುದು ಎಂದರು.

ಜಿ.ಪಂ ಸಿಇಓ ಡಾ.ವಿಜಯ ಮಹಾಂತೇಶ ದಾನಮ್ಮನವರ್ ಮಾತನಾಡಿ, ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ಮೊದಲನೇ ಹಂತದಲ್ಲಿ ಬಯಲು ಬಹಿರ್ದೆಷೆಮುಕ್ತ ಜಿಲ್ಲೆಯಾಗಿ ಘೋಷಣೆಯಾಗಿದ್ದು, 2ನೇ ಹಂತದಲ್ಲಿ ಸ್ವಚ್ಚ ಗ್ರಾಮ ಸ್ವಸ್ಥಗ್ರಾಮ ಧ್ಯೇಯವಾಕ್ಯದೊಂದಿಗೆ ಘನ ತ್ಯಾಜ್ಯ ನಿರ್ವಹಣೆ ಘಟಕಗಳನ್ನು ಗ್ರಾ.ಪಂ ಮಟ್ಟದಲ್ಲಿ ಸ್ಥಾಪಿಸಲಾಗುತ್ತಿದೆ. 195 ಗ್ರಾ.ಪಂ ಗಳಲ್ಲಿ ಪ್ರತಿ ಮನೆಗಳಿಗೆ ಕಸ ಸಂಗ್ರಹಿಸುವ ಬುಟ್ಟಿ ನೀಡಲಾಗಿದೆ ಹಾಗೂ ಕಸ ಸಂಗ್ರಹಿಸಲು 131 ವಾಹನಗಳನ್ನು ಖರೀದಿಸಲಾಗಿದೆ. ನರೇಗಾ ಯೋಜನೆಯಡಿ 89 ಗ್ರಾ.ಪಂ ಗಳಲ್ಲಿ ಸ್ವಚ್ಚ ಸಂಕೀರ್ಣ ಘಟಕ ಸ್ಥಾಪಿಸಿದ್ದು ಚೀಲೂರು ಘಟಕ ಮಾದರಿಯಾಗಿದೆ ಎಂದರು.

ಗ್ರಾಮೀಣ ಭಾಗದಲ್ಲಿ ತ್ಯಾಜ್ಯ ನೀರಿನ ನಿರ್ವಹಣೆಗಾಗಿ ಸುಮಾರು ರೂ.10 ಕೊಟಿ ವೆಚ್ಚದಲ್ಲಿ 118 ಗ್ರಾಮಗಳಲ್ಲಿ ಘಟಕ ಸ್ಥಾಪಿಸಲು ಕ್ರಿಯಾ ಯೋಜನೆ ಸಿದ್ದಪಡಿಸಲಾಗುತ್ತಿದೆ. ನರೇಗಾ ಯೋಜನೆಯಡಿ ಇದುವರೆಗೆ 5619 ಇಂಗುಗುಂಡಿ ನಿರ್ಮಾಣ ಮಾಡಲಾಗಿದೆ. ಹಾಗೂ ತ್ಯಾಜ್ಯ ನಿರ್ವಹಣೆ ಮಾಡಲು ಐಇಸಿ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಪ್ರತಿ ತಿಂಗಳು ಸಮಿತಿ ಸಭೆ ನಡೆಸಿ ವರದಿ ನೀಡಲಾಗುವುದು. ಹಾಗೂ ಹಾನಿಕಾರಕ ಕಸ ವಿಂಗಡಣೆಯ ಕುರಿತು ಅರಿವು ಮೂಡಿಸಿ ಕ್ರಮ ವಹಿಸಲಾಗುವುದು. ಸಿ&ಡಿ ತ್ಯಾಜ್ಯ ನಿರ್ವಹಣೆ ಸೇರಿದಂತೆ ನಿಯಮಾನುಸಾರ ಎಲ್ಲ ಕ್ರಮವನ್ನು ವಹಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಎಸ್‍ಪಿ ಸಿ.ಬಿ.ರಿಷ್ಯಂತ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಪೌರಾಡಳಿತ ನಿರ್ದೇಶನಾಲಯದ ಘನತ್ಯಾಜ್ಯ ವಿಲೇವಾರಿ ಕಾರ್ಯಪಾಲಕ ಅಭಿಯಂತರರಾದ ಸ್ನೇಹಲತ, ಹಿರಿಯ ಪರಿಸರ ಅಧಿಕಾರಿ ಮುರಳೀಧರ್, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಮಹೇಶ್ವರಪ್ಪ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹಾಜರಿದ್ದರು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top