ದಾವಣಗೆರೆ: ಬೆಂಬಲ ಬೆಲೆ ಯೋಜನೆಯಡಿ ವಿವಿಧ ಬೆಳೆ ಖರೀದಿಸಲು ಸರ್ಕಾರ 500 ಕೋಟಿ ರೂ. ಅನುದಾನ ಒದಗಿಸಿದ್ದು, ಮೆಕ್ಕೆಜೋಳವನ್ನು ಬೆಂಬಲ ಬೆಲೆಯಡಿ ಖರೀದಿಸುವುದಕ್ಕೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಶೀಘ್ರವೇ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಭೈರತಿ ಬಸವರಾಜ ಹೇಳಿದರು. ಇದಲ್ಲದೆ, ಈ ಬಾರಿ ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿಸದೆ ದೀಪವನ್ನು ಹಚ್ಚುವ ಮೂಲಕ ದೀಪಾವಳಿ ಹಬ್ಬ ಆಚರಿಸುವಂತೆ ಮನವಿ ಮಾಡಿದರು.
- ಬೆಂಬಲ ಬೆಲೆಯಲ್ಲಿ ಭತ್ತ, ಶೇಂಗಾ ಖರೀದಿಗೆ 500 ಕೋಟಿ ಅನುದಾನ
- ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಸಿಎಂ ಜತೆ ಚರ್ಚೆ
- ಮಕ್ಕೆಜೋಳ ಖರೀದಿ ಬಗ್ಗೆ ಶೀಘ್ರವೇ ಸೂಕ್ತ ನಿರ್ಧಾರ
ಚನ್ನಗಿರಿಯ ಸರ್ಕಾರಿ ತಾಲ್ಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ತಾಲ್ಲೂಕು ಮಟ್ಟದ ಜನಸ್ಪಂದನ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ಹೀಗಾಗಿ ರೈತರು ಬೆಳೆದ ಬೆಳೆಗಳು ಉತ್ತಮ ಇಳುವರಿ ಕಂಡಿವೆ. ರೈತರ ಪರವಾಗಿರುವ ನಮ್ಮ ಸರ್ಕಾರ ಈಗಾಗಲೆ ಬೆಂಬಲ ಬೆಲೆಯಡಿ ಭತ್ತ, ಶೇಂಗಾ ಸೇರಿದಂತೆ ವಿವಿಧ ಬೆಳೆ ಖರೀದಿಗಾಗಿ ಖರೀದಿ ಕೇಂದ್ರ ಆರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಇದಕ್ಕಾಗಿ 500 ಕೋಟಿ ರೂ. ಗಳನ್ನು ಅನುದಾನ ಒದಗಿಸಿದೆ.

ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಹಾವೇರಿ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೆಕ್ಕೆಜೋಳ ಬೆಳೆಯೂ ಕೂಡ ಈ ಬಾರಿ ಉತ್ತಮವಾಗಿ ಬಂದಿದ್ದು, ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾದಲ್ಲಿ, ಬೆಂಬಲ ಬೆಲೆ ನೀಡಿ ಖರೀದಿಸುವಂತೆ ರೈತರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ರೈತರ ಮನವಿಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು, ಅವರೊಂದಿಗೆ ಚರ್ಚಿಸಿ, ಶೀಘ್ರವೇ ನಿರ್ಧಾರ ಕೈಗೊಳ್ಳಲಿದೆ. ಕೋವಿಡ್ ಸಂದರ್ಭದಲ್ಲಿ ನಷ್ಟ ಅನುಭವಿಸಿದ ಹೂವು, ಹಣ್ಣು ಬೆಳೆಗಾರರಿಗೆ ಪ್ರತಿ ಹೆಕ್ಟೇರ್‍ಗೆ 25 ಸಾವಿರ ರೂ. ಗಳ ಪರಿಹಾರ ನೀಡುವ ಯೋಜನೆಯಡಿ ಈಗಾಗಲೆ ಸಾಕಷ್ಟು ರೈತರಿಗೆ ನೆರವು ದೊರೆತಿದೆ. ಜಿಲ್ಲೆಯಲ್ಲಿ ಯಾವುದೇ ಅರ್ಹ ರೈತರು ಈ ಯೋಜನೆಯಿಂದ ವಂಚಿತರಾಗದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಬಿ.ಎ. ಬಸವರಾಜ ಅವರು ಹೇಳಿದರು.
ಕೋವಿಡ್ ಸಂಕಷ್ಟ ಕಾಲದಲ್ಲಿಯೂ ಚನ್ನಗಿರಿ ಕ್ಷೇತ್ರ ಅಭಿವೃದ್ಧಿಯತ್ತ ಸಾಗಿದೆ. ಇಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಕಾಲಕಾಲಕ್ಕೆ ಅನುದಾನ ನೀಡಿದೆ. ಚನ್ನಗಿರಿ ಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆಗಾಗಿ ಯೋಜನೆಗೆ ಮಂಜೂರಾತಿ ನೀಡಲಾಗಿದ್ದು, ಶೀಘ್ರವೇ ಕಾಮಗಾರಿಗೆ ಚಾಲನೆ ನೀಡಲಾಗುವುದು. ಶೀಘ್ರದಲ್ಲಿಯೇ ಗ್ರಾಮ ಪಂಚಾಯತ್, ಬಳಿಕ ತಾಲ್ಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್‍ಗಳಿಗೆ ಚುನಾವಣೆ ಬರಲಿದ್ದು, ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿಯ ವೇಗ ಹೆಚ್ಚಿಸಲು ಕ್ರಮ ವಹಿಸಲಾಗುವುದು. ಜಿಲ್ಲೆಯಲ್ಲಿ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖ ಕಂಡುಬಂದಿದ್ದು, ಸಮಾಧಾನಕರ ಸಂಗತಿಯಾಗಿದೆ. ಈ ಬಾರಿಯ ದೀಪಾವಳಿ ಹಬ್ಬ ಎಲ್ಲರ ಬಾಳಲ್ಲಿ ಹೊಸ ಬೆಳಕು ಚೆಲ್ಲಲಿ ಎಂದು ಶುಭಾಶಯ ಕೋರಿದ ಸಚಿವರು, ಕೋವಿಡ್ ಸಂಕಷ್ಟ ಕಾಲದಲ್ಲಿ ಆರೋಗ್ಯ ಹಾಗೂ ಪರಿಸರದ ಹಿತದೃಷ್ಟಿಯಿಂದ ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿಸದೆ, ದೀಪವನ್ನು ಹಚ್ಚುವ ಮೂಲಕ ದೀಪಾವಳಿ ಹಬ್ಬ ಆಚರಿಸುವಂತೆ ಮನವಿ ಮಾಡಿದರು.
ಸಂಸದ ಜಿ.ಎಂ. ಸಿದ್ದೇಶ್ವರ ಅವರು ಮಾತನಾಡಿ, ಸಾಮಾಜಿಕ ಭದ್ರತೆ ಯೋಜನೆಯಡಿ ನೀಡಲಾಗುವ ವಿವಿಧ ಮಾಸಾಶನವನ್ನು ಫಲಾನುಭವಿಗಳಿಗೇ ನೇರವಾಗಿ ತಲುಪಿಸಲು ಜನಸ್ಪಂದನ ಕಾರ್ಯಕ್ರಮ ಸಹಕಾರಿಯಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಗಳಾದ ಆತ್ಮ ನಿರ್ಭರ್, ಕೃಷಿ ಸಿಂಚಾಯಿ, ಉಜ್ವಲ, ಕಿಸಾನ್ ಸಮ್ಮಾನ್ ಮುಂತಾದ ಯೋಜನೆಗಳು ಬಡವರು, ರೈತರ ಪಾಲಿಗೆ ವರವಾಗಿ ಪರಿಣಮಿಸಿವೆ. 2023 ರ ವೇಳಗೆ ಪ್ರತಿಯೊಂದು ಮನೆಗೂ ಶುದ್ಧ ಕುಡಿಯುವ ನೀರು, 05 ಕೋಟಿ ಜನರಿಗೆ ಸೂರು ಕಲ್ಪಿಸಲು ಯೋಜನೆ ರೂಪಿಸಿದ್ದು, ಈ ಯೋಜನೆಗಳು ರೈತರು, ಬಡವರು ಆರ್ಥಿಕವಾಗಿ ಸದೃಢರಾಗುವಂತೆ ಮಾಡುವಲ್ಲಿ ಪರಿಣಾಮಕಾರಿಯಾಗಲಿವೆ. ದೆಹಲಿ, ಕೇರಳ ರಾಜ್ಯಗಳಲ್ಲಿ ಈಗಾಗಲೆ ಕೋವಿಡ್ ಸೋಂಕಿನ ಎರಡನೇ ಅಲೆ ಕಂಡುಬಂದಿದ್ದು, ಅಲ್ಲಿ ನಿತ್ಯ 8 ರಿಂದ 10 ಸಾವಿರ ಹೊಸ ಪ್ರಕರಣಗಳು ದಾಖಲಾಗುತ್ತಿವೆ. ರಾಜ್ಯದಲ್ಲಿಯೂ ಸಾರ್ವಜನಿಕರು ಎಚ್ಚರ ತಪ್ಪಿದರೆ ಇಲ್ಲಿಯೂ ಮತ್ತೆ ಸೋಂಕು ಉಲ್ಬಣಗೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ ಜಿಲ್ಲೆ ಹಾಗೂ ರಾಜ್ಯದಲ್ಲಿ ಕೋವಿಡ್‍ನ ಪ್ರಕರಣಗಳು ಶೂನ್ಯಕ್ಕೆ ಇಳಿಯುವವರೆಗೂ ಎಲ್ಲರೂ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಅನಿವಾರ್ಯವಾಗಿದೆ ಎಂದರು.

ಚನ್ನಗಿರಿ ಕ್ಷೇತ್ರದ ಶಾಸಕರು ಹಾಗೂ ಕೆಎಸ್‍ಡಿಎಲ್ ನಿಗಮದ ಅಧ್ಯಕ್ಷರಾದ ಕೆ. ಮಾಡಾಳ್ ವಿರೂಪಾಕ್ಷಪ್ಪ ಅವರು ಮಾತನಾಡಿ, ಸರ್ಕಾರದ ಹಲವು ಯೋಜನೆಗಳು ಜನರ ಗಮನಕ್ಕೆ ಬರುವುದಿಲ್ಲ. ಜನಸ್ಪಂದನದಂತಹ ಕಾರ್ಯಕ್ರಮಗಳು ಇಂತಹ ಯೋಜನೆಗಳನ್ನು ಜನರಿಗೆ ತಿಳಿಸುವ ಹಾಗೂ ಸೌಲಭ್ಯಗಳನ್ನು ಯಾವುದೇ ಮಧ್ಯವರ್ತಿಗಳ ಕಾಟವಿಲ್ಲದೆ ಅರ್ಹರಿಗೆ ತಲುಪಿಸುವ ವೇದಿಕೆಗಳಾಗಿವೆ. ತಾಲ್ಲೂಕಿನ ದೇವರಹಳ್ಳಿಯಲ್ಲಿ ರೈತರಿಗೆ ಅನುಕೂಲವಾಗಲು 7.5 ಕೋಟಿ ರೂ. ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್ ಘಟಕ ಸ್ಥಾಪಿಸಲು ಸರ್ಕಾರ ಮಂಜೂರಾತಿ ನೀಡಿದ್ದು, ಶೀಘ್ರವೇ ಕಾಮಗಾರಿ ಪ್ರಾರಂಭವಾಗಲಿದೆ. ಕೆಎಸ್‍ಡಿಎಲ್‍ನ ಸಿಎಸ್‍ಆರ್ ನಿಧಿಯಡಿ ಇಲ್ಲಿನ ಶಿಕ್ಷಣ ಕ್ಷೇತ್ರಕ್ಕೆ 2.30 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದರು.
ಮಾಯಕೊಂಡ ಕ್ಷೇತ್ರ ಶಾಸಕ ಪ್ರೊ. ಲಿಂಗಣ್ಣ ಅವರು ಮಾತನಾಡಿ, ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ರೈತರಿಗೆ, ಬಡವರಿಗೆ ಸರ್ಕಾರ ಹಲವಾರು ಸೌಲಭ್ಯ ನೀಡುತ್ತಿದ್ದು, ಯೋಜನೆಗಳ ಸದುಪಯೋಗ ಪಡೆದು, ಅವರು ಆರ್ಥಿಕವಾಗಿ ಸಬಲರಾಗಬೇಕು. ಕೇವಲ ಕೃಷಿಯಿಂದ ಮಾತ್ರ ಆದಾಯ ನಿರೀಕ್ಷಿಸದೆ, ರೈತರು ಉಪಕಸುಬುಗಳನ್ನು ಕೈಗೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದರು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಕೋವಿಡ್ ಸಂಕಷ್ಟವನ್ನು ಎದುರಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದಿಯಾಗಿ, ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು ಜಿಲ್ಲಾಡಳಿತದೊಂದಿಗೆ ಉತ್ತಮವಾಗಿ ಸ್ಪಂದಿಸಿ ಸಹಕರಿಸಿದ್ದಾರೆ. ಕೊರೋನಾ ನಿಯಂತ್ರಿಸುವುದರ ಜೊತೆ ಜೊತೆಗೆ ನಾವು ಅಭಿವೃದ್ದಿ ಹಾಗೂ ದೈನಂದಿನ ಜೀವನ ಮತ್ತು ಆರ್ಥಿಕ ಚೇತರಿಕೆ ಕಾಣುವಂತಹ ಚಟುವಟಿಕೆಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ ಎಂದರು.
ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಸಾಕಮ್ಮ ಗಂಗಾಧರ ನಾಯಕ್, ತಾ.ಪಂ. ಅಧ್ಯಕ್ಷೆ ಕವಿತಾ ಕಲ್ಲೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪದ್ಮಾ ಬಸವಂತಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಸೇರಿದಂತೆ ಜಿಲ್ಲಾ ಪಂಚಾಯತ್, ತಾಲ್ಲೂಕಾ ಪಂಚಾಯತ್, ಪುರಸಭೆ ಸದಸ್ಯರುಗಳು, ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ 01 ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ಪಿಯು ಕಟ್ಟಡ, 50 ಲಕ್ಷ ರೂ. ವೆಚ್ಚದಲ್ಲಿ ತಾಲ್ಲೂಕು ಆಯುರ್ವೇದಿಕ್ ಆಸ್ಪತ್ರೆ ಕಟ್ಟಡ, 23.50 ಕೋಟಿ ರೂ. ವೆಚ್ಚದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, 3.6 ಕೋಟಿ ರೂ. ವೆಚ್ಚದಲ್ಲಿ ಎಸ್.ಟಿ. ಹಾಸ್ಟೆಲ್ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಅಲ್ಲದೆ ಸುಮಾರು 2100 ಕ್ಕೂ ಹೆಚ್ಚು ಫಲಾನುಭವಿಗಳಿಗೆ ಸರ್ಕಾರದ ವಿವಿಧ ಸವಲತ್ತುಗಳ ಮಂಜೂರಾತಿ ಪತ್ರ, ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್, ರೈತ ಫಲಾನುಭವಿಗಳಿಗೆ ಕೃಷಿ ಯಂತ್ರಗಳನ್ನು ವಿತರಿಸಲಾಯಿತು.