ದಾವಣಗೆರೆ: ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಜೀನಹಳ್ಳಿ ಗ್ರಾಮದ ದೊಡ್ಡಿಯೊಂದರಲ್ಲಿ ಏಕಾಏಕಿ 52 ಕುರಿಗಳು ಸಾವನ್ನಪ್ಪಿದ್ದು, ವಿಷಾಹಾರ ಸೇವನೆ ಶಂಕೆ ವ್ಯಕ್ತವಾಗಿದೆ.
ಗ್ರಾಮದ ಮಹೇಶ್ವರಪ್ಪ ಇಂಡಿ ಎಂಬುವರ ಕುರಿಗಳು ಮೃತಪಟ್ಟಿವೆ. ಬೆಳಗ್ಗೆ ಕುರಿ ಮೇಯಿಸಿಕೊಂಡು ಬಂದು ದೊಡ್ಡಿಯಲ್ಲಿ ಕೂಡಿಹಾಕಲಾಗಿತ್ತು. ಮರು ದಿನ ಬೆಳಗ್ಗೆ ನೋಡಿದಾಗ ಕುರಿ ಮರಿ ಸೇರಿ 50 ಕ್ಕೂ ಹೆಚ್ವು ಕುರಿಗಳು ಸತ್ತು ಬಿದ್ದಿದ್ದವು. ಇನ್ನೂ ಕೆಲವು ತೀವ್ರ ಅಸ್ವಸ್ಥಗೊಂಡಿವೆ. ನಾಯಿ ದಾಳಿಯಿಂದ ಸಾವನ್ನಪ್ಪಿರಬಹುದು ಎಂದು ಕುರಿ ಮಾಲೀಕ ಪಶು ಇಲಾಖೆಗೆ ಮಾಹಿತಿ ನೀಡಿದ್ದರು.
ಮೇಯಲು ಹೋದಾಗ ವಿಷ ಆಹಾರ ಸೇವನೆ ಶಂಕೆ
ನ್ಯಾಮತಿ ಮುಖ್ಯ ಪಶು ವೈದ್ಯಾಧಿಕಾರಿ ಚಂದ್ರಶೇಖರ ಹೊಸಮನಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ನಾಯಿಗಳು ಕಚ್ಚಿ ಸತ್ತಿವೆ ಎಂದು ಕುರಿಗಳ ಮಾಲೀಕ ಹೇಳುತ್ತಿದ್ದಾರೆ. ಆದರೆ, ಇಷ್ಟೊಂದು ಕುರಿಗಳನ್ನು ನಾಯಿಗಳು ಸಾಯಿಸಲು ಸಾಧ್ಯವಿಲ್ಲ. ಮೇಯಲು ಹೋದಾಗ ವಿಷಪೂರಿತ ಆಹಾರ. ಇಲ್ಲವೇ ಕ್ರಿಮಿನಾಶಕ ಸಿಂಪಡಿಸಿದ ಆಹಾರವನ್ನು ಸೇವಿಸಿ ಸತ್ತಿರಬಹುದು ಎಂಬ ಶಂಕೆ ಇದೆ. ಮರಣೋತ್ತರ ಪರೀಕ್ಷೆ ನಡೆಸಿ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದರು.
ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ
ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಶಾಸಕ ಡಿ.ಜಿ.ಶಾಂತನಗೌಡ, ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ ಹಿಟ್ನಾಳ್ ಅವರು, ಘಟನೆಯ ಮಾಹಿತಿ ತಿಳಿದು ಗ್ರಾಮಕ್ಕೆ ಭೇಟಿ ನೀಡಿದರು. ಕುರಿ ಮಾಲೀಕನಿಗೆ ಸಾಂತ್ವನ ಹೇಳಿದರು. ಸರ್ಕಾರದಿಂದ ಸಿಗುವ ಪರಿಹಾರವನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಉಪ ವಿಭಾಗಾಧಿಕಾರಿ ವಿ.ಅಭಿಷೇಕ್, ಪಶುಪಾಲನ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಡಾ.ಎಚ್.ಎಂ.ಮಹೇಶ, ಪ್ರಾಣಿ ಆರೋಗ್ಯ ಮತ್ತು ಜೈವಿಕ ಸಂಸ್ಥೆ ಡಾ.ನಾಗರಾಜ, ಕುರಿಮಂಡಳಿ ಮುಖ್ಯ ಪಶುವೈದ್ಯಾಧಿಕಾರಿ ಡಾ.ಲೀನಾ ಸಜ್ಜನ, ಸ್ಥಳಿಯ ವೈದ್ಯ ಡಾ. ಕಾಂತೇಶ ಜಲ್ಲದ್, ನ್ಯಾಮತಿ ತಹಶೀಲ್ದಾರ್ ಎಂ.ಪಿ.ಕವಿರಾಜ, ಹೊನ್ನಾಳಿ ತಹಶೀಲ್ದಾರ್ ಪಟ್ಟೇಗೌಡ,ಹೊನ್ನಾಳಿ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ. ವಿಶ್ವನಟೇಶ, ಗ್ರಾಮ ಆಡಳಿತ ಅಧಿಕಾರಿ ಇದ್ದರು.



