ದಾವಣಗೆರೆ: ಕೊರೊನಾ ಕಾರಣದಿಂದಾಗಿ ಈ ವರ್ಷ ಜಿಲ್ಲೆಯಲ್ಲಿ ಒಟ್ಟು 7500 ಹೆಚ್ಚುವರಿ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಗೆ ದಾಖಲಾಗಿದ್ದಾರೆ. 49 ಶಾಲೆಗಳು ಶತಮಾನ ಪೂರೈಸಿದ್ದು, ಇವುಗಳ ಮೂಲಭೂತ ಸೌಲಭ್ಯಕ್ಕೆ ಅನುದಾನ ಬಿಡುಗಡೆ ಕೋರಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ. ಜಿಲ್ಲೆಯಲ್ಲಿ ಒಟ್ಟು 1399 ಹೆಚ್ಚುವರಿ ಶಾಲಾ ಕೊಠಡಿಗಳ ಬೇಡಿಕೆಗೆ ಈಗಾಗಲೆ ಕ್ರಿಯಾ ಯೋಜನೆ ತಯಾರಿಸಿ, ಶಿಕ್ಷಣ ಇಲಾಖೆಗೆ ಸಲ್ಲಿಸಿದ್ದು, ರಾಜ್ಯದಿಂದ 109 ಹಾಗೂ ಕೆಎಸ್‍ಡಿಎಲ್ ನಿಂದ 17 ಶಾಲಾ ಕೊಠಡಿಗಳಿಗೆ ಮಂಜೂರಾತಿ ದೊರೆತು, ಕಾಮಗಾರಿ ನಡೆದಿದೆ. ಹೆಚ್ಚಿನ ಮಳೆಯಿಂದಾಗಿ ಜಿಲ್ಲೆಯ ಒಟ್ಟು 366 ಶಾಲಾ ಕೊಠಡಿಗಳಿಗೆ ತೀವ್ರ ಹಾನಿಯಾಗಿದ್ದು, ತುರ್ತಾಗಿ ದುರಸ್ತಿ ಆಗಬೇಕಿದೆ. ಆದರೆ ಪಿಆರ್‍ಇಡಿ ಇಲಾಖೆಯಿಂದ ಕೇವಲ 64 ಕೊಠಡಿಗಳಿಗೆ ಮಾತ್ರ ಕ್ರಿಯಾಯೋಜನೆ ಮಾಡಿಕೊಟ್ಟಿದ್ದಾರೆ ಎಂದು ಡಿಡಿಪಿಐ ಪರಮೇಶ್ವರಪ್ಪ ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಮಾಹಿತಿ ನೀಡಿದರು. ಸಂಸದ ಜಿ.ಎಂ. ಸಿದ್ದೇಶ್ವರ್ ಅವರು ಪ್ರತಿಕ್ರಿಯಿಸಿ, ಎಲ್ಲ 366 ಶಾಲೆ ಕೊಠಡಿಗಳಿಗೆ ಆರ್‍ಡಿಪಿಆರ್ ಅವರು ಕೂಡಲೇ ಕ್ರಿಯಾಯೋಜನೆ ತಯಾರಿಸಿ ಸಲ್ಲಿಸಬೇಕು. ಅನುದಾನ ಬಿಡುಗಡೆಗೆ ಕ್ರಮ ವಹಿಸಲಾಗುವುದು. ಜಿಲ್ಲೆಯಲ್ಲಿ ಒಟ್ಟು 193 ಶಾಲೆಗಳಿಗೆ ಕಾಂಪೌಂಡ್ ನಿರ್ಮಿಸಲು ಕ್ರಿಯಾಯೋಜನೆಗೆ ಈಗಾಗಲೆ ಅನುಮೋದನೆ ನೀಡಿದ್ದು, ಕೂಡಲೆ ನರೇಗಾ ಯೋಜನೆಯಲ್ಲಿ ಕಾಂಪೌಂಡ್ ಪೂರ್ಣಗೊಳಿಸಬೇಕು. ಜಿಲ್ಲೆಯಲ್ಲಿ ಯಾವುದೇ ಸರ್ಕಾರಿ ಶಾಲೆಗಳು ಕಾಂಪೌಂಡ್ ಹಾಗೂ ಶೌಚಾಲಯ ರಹಿತ ಇರಬಾರದು ಎಂದರು. ಜಿ.ಪಂ. ಉಪಕಾರ್ಯದರ್ಶಿ ಆನಂದ್ ಪ್ರತಿಕ್ರಿಯಿಸಿ, ನರೇಗಾ ಯೋಜನೆಯಡಿ ಕೂಲಿ ಹಾಗೂ ಮಟರೀಯಲ್ ನಲ್ಲಿ 60 : 40 ಅನುಪಾತ ಕಾಯ್ದುಕೊಂಡಲ್ಲಿ ಮಾತ್ರ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತದೆ. ಹೀಗಾಗಿ ಈ ಅನುಪಾತ ಕಾಯ್ದುಕೊಂಡು, ಆದಷ್ಟು ಶೀಘ್ರ ಶಾಲೆ ಕಾಂಪೌಂಡ್ ಹಾಗೂ ಶೌಚಾಲಯ ಕಾಮಗಾರಿಗಳನ್ನು ಕೈಗೊಂಡು, ಮಾರ್ಚ್ ವೇಳೆಗೆ ಪೂರ್ಣಗೊಳಿಸುತ್ತೇವೆ ಎಂದರು.



