ದಾವಣಗೆರೆ: ಒಳ ಮೀಸಲಾತಿ ಕಲ್ಪಿಸಲು ಪರಿಶಿಷ್ಟ ಜಾತಿಗಳ ಸಮೀಕ್ಷೆ ನಡೆಸಲು ಸರ್ಕಾರ ತೀರ್ಮಾನಿಸಿದೆ. ಈ ವೇಳೆ ವೀರಶೈವ ಜಂಗಮರು ಬೇಡ ಜಂಗಮ ಎಂದು ಬರೆಸಿ, ಪರಿಶಿಷ್ಟ ಜಾತಿಯಲ್ಲಿ ಸೇರುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಸಮೀಕ್ಷೆಯಲ್ಲಿ ವೀರಶೈವ ಜಂಗಮರನ್ನು ಬೇಡ ಜಂಗಮರೆಂದು ಪರಿಗಣಿಸಬಾರದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ, ದಲಿತ ಸಂಘಟನೆಗಳ ಒಕ್ಕೂಟ ಒತ್ತಾಯಿಸಿವೆ.
ಆಯೋಗ ಅವಕಾಶ ನೀಡಬಾರದು
ಈ ಬಗ್ಗೆ ಜಿಲ್ಲಾಡಳಿತ ಮೂಲಕ ಆಯೋಗಕ್ಕೆ ಸಂಘಟನೆ ಮುಖಂಡರು ಮನವಿ ಮಾಡಿದ್ದಾರೆ. ಒಳ ಮೀಸಲಾತಿ ಕಲ್ಪಿಸಲು ಪರಿಶಿಷ್ಟ ಜಾತಿಗಳ ಮೊದಲ ಹಂತದ ಸಮೀಕ್ಷೆ ಮೇ 5ರಿಂದ 17ರವರೆಗೆ ನಡೆಯಲಿದೆ. ವೀರಶೈವ ಜಂಗಮರನ್ನು ಬೇಡ ಜಂಗಮರೆಂದು ಪರಿಶಿಷ್ಟ ಜಾತಿಯಲ್ಲಿ ದಾಖಲಿಸುವ ಸಾಧ್ಯತೆ ಇದೆ. ಇದಕ್ಕೆ ನ್ಯಾಯಮೂರ್ತಿ ನಾಗಮೋಹನ ದಾಸ್ ಅವರ ಏಕ ಸದಸ್ಯ ವಿಚಾರಣಾ ಆಯೋಗವು ಅವಕಾಶ ನೀಡಬಾರದು ಆಗ್ರಹಿಸಿದ್ದಾರೆ.
ಸುಳ್ಳು ಜಾತಿ ಪ್ರಮಾಣಪತ್ರ
ವೀರಶೈವ ಲಿಂಗಾಯತ ಜಂಗಮರ ಸಮುದಾಯದ ಕೆಲವರು ಬೇಡ ಜಂಗಮ ಎಂಬುದಾಗಿ ಬರೆಸಿ, ಅಕ್ರಮವಾಗಿ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಸೇರುವ ಅಪಾಯವಿದೆ. ಜಿಲ್ಲೆಯಲ್ಲಿ ವೀರಶೈವ ಜಂಗಮರು ಈಗಾಗಲೇ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವಾಗ ಬೇಡ ಜಂಗಮ ಎಂಬುದಾಗಿ ಬರೆಸಿರುವ ಉದಾಹರಣೆಗಳಿವೆ. ಅದೇ ರೀತಿ ಅನೇಕರು ಬೇಡ ಜಂಗಮ ಎಂಬುದಾಗಿ ಸುಳ್ಳು ಜಾತಿ ಪ್ರಮಾಣಪತ್ರಗಳನ್ನು ಪಡೆದಿರುವ ಪ್ರಕರಣಗಳೂ ಜಗಜ್ಜಾಹೀರಾಗಿವೆ. ನೈಜವಾದ ಬೇಡ ಜಂಗಮರು ಅಲೆಮಾರಿಗಳಾಗಿದ್ದು, ಅರಣ್ಯ ವಾಸಿಗಳಾಗಿರುತ್ತಾರೆ. ಅಂತಹ ಬೇಡ ಜಂಗಮರು ಮಾಂಸಾಹಾರಿಗಳು ಎಂದರು.
ದಲಿತರಿಗೆ ಅನ್ಯಾಯ
ವೀರಶೈವ ಜಂಗಮರು ವೀರಶೈವರಿಗೆ ಗುರುಗಳಾಗಿದ್ದು, ಆರ್ಥಿಕವಾಗಿ ಸ್ಥಿತಿವಂತರಾಗಿದ್ದಾರೆ. ಜನವಸತಿ ಪ್ರದೇಶಗಳ ನಿವಾಸಿಗಳಾಗಿರುತ್ತಾರೆ. ಒಂದೊಮ್ಮೆ ವೀರಶೈವ ಜಂಗಮರು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿದರೆ ಅಸ್ಪೃಶ್ಯ ಸಮುದಾಯಗಳಿಗೆ ತೀವ್ರ ಅನ್ಯಾಯವಾಗಲಿದೆ. ಆದ್ದರಿಂದ ಗಣತಿದಾರರು ಯಾವುದೇ ಕಾರಣಕ್ಕೂ ವೀರಶೈವ ಜಂಗಮರನ್ನು ಪರಿಶಿಷ್ಟ ಜಾತಿ ಸಮೀಕ್ಷೆಯಲ್ಲಿ ಪರಿಗಣಿಸಬಾರದು. ಈ ಬಗ್ಗೆ ಆಯೋಗವೂ ಜಿಲ್ಲಾಡಳಿತ, ಗಣತಿದಾರರಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಹೆಗ್ಗೆರೆ ರಂಗಪ್ಪ, ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಸಿ.ಬವರಾಜ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಜಿಗಳಿ ಹಾಲೇಶ, ಪ್ರಧಾನ ಕಾರ್ಯದರ್ಶಿ ಎಚ್.ಸಿ.ಸಿದ್ದೇಶ ಬಾತಿ, ತಾಲೂಕು ಅಧ್ಯಕ್ಷ ಎನ್.ಮಲ್ಲೇಶ ಚಿಕ್ಕನಹಳ್ಳಿ, ಉಪಾಧ್ಯಕ್ಷ ಎಚ್.ಕೃಷ್ಣಪ್ಪ ಹಳೆ ಚಿಕ್ಕನಹಳ್ಳಿ, ಪ್ರಧಾನ ಕಾರ್ಯದರ್ಶಿ ನಾಗರಾಜ ಎಚ್.ಚಿಕ್ಕನಹಳ್ಳಿ, ಕಲಾ ಮಂಡಳಿ ಜಿಲ್ಲಾಧ್ಯಕ್ಷ ದೊಡ್ಡಪ್ಪ ಆವರಗೊಳ್ಳ ಸೇರಿದಂತೆ ಮತ್ತಿತರರು ಇದ್ದರು.