ದಾವಣಗೆರೆ: ಗ್ರಾಮ ಪಂಚಾಯತಿ ಅಧ್ಯಕ್ಷರ ಸಹಿ ತಾನೇ ಮಾಡಿ ಗುತ್ತಿಗೆದಾರರಿಗೆ ಹಣ ನೀಡಿರುವುದು ಮತ್ತು ವಿವಿಧ ಯೋಜನೆಯಲ್ಲಿ 27.51 ಲಕ್ಷ ಹಣ ದುರುಪಯೋಗ ಆರೋಪ ಹಿನ್ನೆಲೆ ಪಿಡಿಒ ವಿರುದ್ಧ ಜಗಳೂರು ತಾಲ್ಲೂಕಿನ ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಜಿಲ್ಲೆಯ ಜಗಳೂರು ತಾಲೂಕಿನ ದೊಣ್ಣಿಹಳ್ಳಿ ಗ್ರಾಪಂ ಪಿಡಿಓ ಟಿ. ಸಿದ್ದಪ್ಪ ವಿರುದ್ಧ ದೂರು ದಾಖಲಾಗಿದೆ. ಈಗಿನ ಬಿಳಿಚೋಡು ಹಾಗೂ ಬಸವನಕೋಟೆ ಪಿಡಿಓ ಗಳು ವಂಚನೆ ಬಗ್ಗೆ ವರದಿ ನೀಡಿದ್ದು, ಹಾಲಿ ಜಗಳೂರು ತಾಲೂಕಿನ ದೊಣ್ಣಿಹಳ್ಳಿ ಗ್ರಾಪಂ ಪಿಡಿಓ ಕಾರ್ಯ ನಿರ್ವಹಿಸುವ ಟಿ. ಸಿದ್ದಪ್ಪ ವಿರುದ್ಧ ದೂರು ದಾಖಲಾಗಿದೆ. ಬಿಳಿಚೋಡು ಗ್ರಾಮ ಪಂಚಾಯಿತಿಯಲ್ಲಿ ಕೆರೆ ಅಭಿವೃದ್ಧಿಗೆ ಮೀಸಲಾಗಿದ್ದ ಹಣವನ್ನು ಈ ಹಿಂದಿನ ಪಿಡಿಒ ಟಿ. ಸಿದ್ದಪ್ಪ ನಿಯಮಬಾಹಿಯವಾಗಿ 27.51 ಲಕ್ಷ ದುರುಪಯೋಗ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
2022 -23ನೇ ಸಾಲಿನಲ್ಲಿ ಬಿಳಿಚೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭಾರಿ ಮಳೆ ಮತ್ತು ಪ್ರವಾಹದಿಂದ ಹಾನಿಯಾದ ಕೆರೆಗಳ ದುರಸ್ತಿಗೆ 2.84 ಲಕ್ಷ ರೂಪಾಯಿ ಹಣ ಬಿಡುಗಡೆಯಾಗಿತ್ತು. ಆಗ ಬಿಳಿಚೋಡು ಗ್ರಾಪಂ ಪ್ರಭಾರ ಪಿಡಿಒ ಆಗಿದ್ದ ಪ್ರಸ್ತುತ ದೊಣ್ಣೆಹಳ್ಳಿ ಗ್ರಾಪಂ ಕಾರ್ಯದರ್ಶಿಯಾಗಿರುವ ಟಿ. ಸಿದ್ದಪ್ಪ ಅನ್ಯ ಉದ್ದೇಶಕ್ಕೆ ಬಳಕೆ ಮಾಡಿದ ಬಗ್ಗೆ ದೂರು ದಾಖಲಾಗಿತ್ತು.
ಬಸವನಕೋಟೆ ಗ್ರಾಮ ಪಂಚಾಯಿತಿಯ 15ನೇ ಹಣಕಾಸು ಯೋಜನೆ ಅನುದಾನವನ್ನು ಅಧ್ಯಕ್ಷರ ಸಹಿಯನ್ನು ನಕಲು ಮಾಡಿರುವ ತಿಮ್ಮಣ್ಣ ಅವರು ಗುತ್ತಿಗೆದಾರರಿಗೆ ಅನುದಾನ ಬಿಡುಗಡೆ ಮಾಡಿದ್ದರು. ಪರಿಶೀಲನೆ ನಡೆಸಿದಾಗ 2024 -25 ನೇ ಸಾಲಿಗೆ 15ನೇ ಹಣಕಾಸು ಯೋಜನೆಯಡಿ ಗ್ರಾಮ ಪಂಚಾಯಿತಿಗೆ ಬಿಡುಗಡೆಯಾದ ಅನುದಾನದಲ್ಲಿ ಒಟ್ಟು 24,67,000 ರೂ.ಗಳನ್ನು ಚೆಕ್ ಮೂಲಕ ವಿವಿಧ ಸಂಸ್ಥೆಗಳು ಮತ್ತು ಗುತ್ತಿಗೆದಾರರಿಗೆ ಬಿಡುಗಡೆ ಮಾಡಿದ ಆರೋಪ ಕೇಳಿಬಂದಿದೆ.



