Connect with us

Dvgsuddi Kannada | online news portal | Kannada news online

ದಾವಣಗೆರೆ: ವಚನ ಸಾಹಿತ್ಯ ಸಂರಕ್ಷಣೆಯಲ್ಲಿ ಫ.ಗು.ಹಳಕಟ್ಟಿ ತ್ಯಾಗ ಅವಿಸ್ಮರಣೀಯ: ಜಿಲ್ಲಾಧಿಕಾರಿ ಡಾ.ವೆಂಕಟೇಶ್

ದಾವಣಗೆರೆ

ದಾವಣಗೆರೆ: ವಚನ ಸಾಹಿತ್ಯ ಸಂರಕ್ಷಣೆಯಲ್ಲಿ ಫ.ಗು.ಹಳಕಟ್ಟಿ ತ್ಯಾಗ ಅವಿಸ್ಮರಣೀಯ: ಜಿಲ್ಲಾಧಿಕಾರಿ ಡಾ.ವೆಂಕಟೇಶ್

ದಾವಣಗೆರೆ: ವಿಶ್ವ ವಚನ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿರುವ ಡಾ; ಫ.ಗು.ಹಳಕಟ್ಟಿ ಅವರು ಕನ್ನಡ ವಚನ ಸಾಹಿತ್ಯವನ್ನು ಸಂಗ್ರಹಿಸಿ, ಸಂರಕ್ಷಿಸಿ ಜನತೆಗೆ ಪರಿಚಯಿಸುವ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಅವಿಸ್ಮರಣೀಯವಾದ ಕೊಡುಗೆ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್.ಎಂ.ವಿ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಡಾ|| ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಜನ್ಮದಿನಾಚರಣೆ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿ ಮಾತನಾಡಿದರು.

ಹನ್ನೆರಡನೇ ಶತಮಾನದ ವಚನ ಸಾಹಿತ್ಯ ನಮಗೆ ಇಷ್ಟೊಂದು ಸುಲಭವಾಗಿ ಸಿಗುತ್ತಿವೆ, ಅಂದರೆ ಅದಕ್ಕೆ ಮೂಲ ಕಾರಣ ಡಾ|| ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ರವರು. ನಶಿಸಿ ಹೋಗುತ್ತಿದ್ದ ವಚನ ಸಾಹಿತ್ಯದ ಮೂಲ ಪ್ರತಿಗಳಾದ ಅಮೂಲ್ಯವಾದ ತಾಳೆಗರಿಗಳನ್ನು ರಾಜ್ಯ ಹಾಗೂ ದೇಶದ ವಿವಿಧ ಭಾಗಗಳಿಗೆ ತೆರಳಿ, ಹುಡುಕಿ, ಸಂಗ್ರಹಿಸಿ ಅವುಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಅವುಗಳನ್ನು ಗ್ರಂಥರೂಪದಲ್ಲಿ ಎಲ್ಲರೂ ಓದಲು ಅನುಕೂಲವಾಗುವಂತೆ ಮುದ್ರಿಸಿದ ಫ.ಗು.ಹಳಕಟ್ಟಿಯವರ ಕಾರ್ಯದಿಂದಾಗಿ ಇಂದು ಅಮೂಲ್ಯ ವಚನ ಭಂಡಾರ ಎಲ್ಲರಿಗೂ ತಲುಪಲು ಸಾಧ್ಯವಾಗಿದೆ ಎಂದರು.

ವಚನಗಳಲ್ಲಿರುವ ಮಾನವೀಯ ಮೌಲ್ಯಗಳು, ಜೀವನ ಸಂದೇಶಗಳು, ವಿಶ್ವಶಾಂತಿ, ವಿಶ್ವಪ್ರೇಮ ಮೂಡಿಸುತ್ತದೆ. ಶರಣರು ತಮ್ಮ ಜೀವನದ ಅನುಭವಗಳನ್ನು ವೇದ-ಉಪನಿಷತ್ತುಗಳನ್ನು ಜನಸಾಮಾನ್ಯರಿಗೆ ತಿಳಿಯುವಂತೆ ವಚನಗಳ ಮೂಲಕ ರಚಿಸುತ್ತಿದ್ದರು. ಸಮಾಜದಲ್ಲಿ ನಡೆಯುವ ದೌರ್ಜನ್ಯಗಳನ್ನು ತಡೆಯಲು ಸಾಹಿತ್ಯದಿಂದ ಮಾತ್ರ ಸಾಧ್ಯ ಎಂದು ತಿಳಿದ ಹಳಕಟ್ಟಿಯವರು ಸಾಕಷ್ಟು ಸಂಶೋಧನೆ ನಡೆಸಿ ವಚನಗಳನ್ನು ಸಂರಕ್ಷಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷೆ ಸುಮತಿ ಜಯಪ್ಪ ಉಪನ್ಯಾಸ ನೀಡಿ, ಬಾಲ್ಯದಿಂದಲೂ ತಂದೆಯ ಸಾಹಿತ್ಯ ವಲಯದಲ್ಲಿ ತಮ್ಮನ್ನು ಒಗ್ಗೂಡಿಸಿಕೊಂಡು ಬೆಳೆದವರು ಹಳಕಟ್ಟಿಯವರು, ಅವರ ಕುಟುಂಬದಲ್ಲಿ ಕಿತ್ತು ತಿನ್ನುವ ಬಡತನ, ಅನಾರೋಗ್ಯ, ಸಾಲು ಸಾಲು ಸಾವುಗಳಾದರೂ ಧೃತಿಗೆಡದೆ ಅವರು ಓಲೆಗರಿ, ಹಸ್ತಪ್ರತಿಗಳಲ್ಲಿದ್ದ ವಚನ ಸಾಹಿತ್ಯಗಳನ್ನು ಸಂಗ್ರಹಿಸಿ, ವಿಶ್ಲೇಷಿಸಿ ಅವುಗಳನ್ನು ಪ್ರಕಟಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಒಂದು ಸೈಕಲ್‍ನ ಸಹಾಯದಿಂದ ಹಲವಾರು ಕಡೆ ಸುತ್ತಾಡಿ ಸಂಗ್ರಹಿತ ತಾಳೆಗರಿಗಳನ್ನು ಹಸ್ತಪ್ರತಿಗಳನ್ನು ಕೊಳ್ಳುವ ಮೂಲಕ ಸಂರಕ್ಷಿಸಿದರು. 1923 ರಲ್ಲಿ ಬೆಳಗಾವಿಯ ಮಹಾವೀರ ಮುದ್ರಣಾಲಯದಲ್ಲಿ ಇವರ ವಚನ ಸಾಹಿತ್ಯ ಸಂಪುಟ-1 ಪ್ರಕಟವಾಯಿತು. 1925 ರಲ್ಲಿ ತಮ್ಮ ಸ್ವ ಗೃಹದಲ್ಲಿಯೇ ಹಿತಸಾಹಿತ್ಯ ಮುದ್ರಣಾಲಯ ಸ್ಥಾಪಿಸಿ ಸುಮಾರು 175 ಕೃತಿಗಳು ಹಾಗೂ ಹರಿಹರ ಕವಿಯವರ 42 ರಗಳೆಗಳನ್ನು ಮುದ್ರಣ ಮಾಡಿ ಪ್ರಸಾರ ಮಾಡಿದರು. ಇದಕ್ಕಾಗಿ ಕರ್ನಾಟಕ ವಿಶ್ವವಿದ್ಯಾಲಯ ವತಿಯಿಂದ ಇವರಿಗೆ 1956 ರಲ್ಲಿ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಾಯಿತು.

ಇದೇ ವೇಳೆ ಶಿವಾನಂದ ಗುರೂಜಿ ಕುಂಬಳೂರು, ಚಿಕ್ಕೋಳ್ ಈಶ್ವರಪ್ಪ, ಹಿರೇಕೊಗಲೂರು, ಎಂ.ಕೆ ಬಕ್ಕಪ್ಪ ವಚನ ಸಾಧಕರಿಗೆ ಸನ್ಮಾನಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಾಮದೇವಪ್ಪ ಶರಣಪ್ಪ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ್ ಮಠದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಸಂತೋಷ ಉಪಸ್ಥಿತರಿದ್ದರು.

Dvgsuddi.com is a live Kannada news portal. Kannada news online. political, Informative, Education, job, local (davangere), crime, agriculture, Sports News in Kannada. ಡಿವಿಜಿಸುದ್ದಿ. ಕಾಂ ‌ಆನ್ ಲೈನ್ ನ್ಯೂಸ್ ಪೋರ್ಟಲ್‌ ಆಗಿದ್ದು, ಸ್ಥಳೀಯ (ದಾವಣಗೆರೆ) ಸುದ್ದಿ ಜೊತೆ ಇನ್ಫೋರ್ಮೆಟಿವ್ ಸುದ್ದಿ‌ ಕೊಡುವುದು ಮೊದಲ ಆದ್ಯತೆ. ಸ್ಥಳೀಯ ಸುದ್ದಿ, ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಜೊತೆ ಕೃಷಿ, ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top