ದಾವಣಗೆರೆ: ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ 125 ಕೋಟಿ ರೂ. ವೆಚ್ಚದಲ್ಲಿ ಒಟ್ಟು 49 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ದಾವಣಗೆರೆ ನಗರ ಸಮಗ್ರ ಅಭಿವೃದ್ಧಿ ಹೊಂದಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಭಾನುವಾರ ನಗರದ ಪಿಜಿ ಬಡಾವಣೆಯ ಡಾ.ಎಂ.ಸಿ.ಮೋದಿ ರಸ್ತೆಯಲ್ಲಿ ಮಹಾನಗರಪಾಲಿಕೆಯ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಹಾಗೂ ಶಿಲನ್ಯಾಸ ನೆರವೇರಿಸುವ ಮೂಲಕ ಚಾಲನೆ ನೀಡಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ 1500 ಕೋಟಿ ರೂ. ವೆಚ್ಚದಲ್ಲಿ ರಾಜ್ಯದ 10 ನಗರಪಾಲಿಕೆಗಳಲ್ಲಿ ಕಾಮಗಾರಿ ನಡೆಸಲಾಗುತ್ತಿದ್ದು, ಯಡಿಯೂರಪ್ಪ ನಾಯಕತ್ವದಲ್ಲಿ ಈಗಾಗಲೇ ಹಲವು ಯೋಜನೆ ನೆರವೇರಿದೆ. ಕೇಂದ್ರ ಸರ್ಕಾರವು ರಾಜ್ಯದ ಹಲವು ಯೋಜನೆಗಳಿಗೆ ಹೆಚ್ಚಾಗಿ ಪ್ರೋತ್ಸಾಹ ನೀಡುವ ಉದ್ದೇಶ ಹೊಂದಿದ್ದು, ಈ ಕುರಿತು ವಾಣಿಜ್ಯ ಮತ್ತು ಕೈಗಾರಿಕ ಸಚಿವರಾದ ಪಿಯೂಷ್ ಗೋಯಲ್ ಜೊತೆ ಮಾತನಾಡಿದ್ದೇನೆ ಎಂದ ಅವರು, ಉದ್ಯೋಗ ಸೃಷ್ಟಿಸುವ ಉದ್ಯಮಗಳಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ 8 ರಿಂದ 10 ಜಿಲ್ಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮೆಗಾ ಟೆಕ್ಸ್‍ಟೈಲ್ ಪಾರ್ಕ್‍ಗಳನ್ನು ಮಾಡಬೇಕು. ಹಾಗೂ ರಾಜ್ಯಕ್ಕೆ 3 ಮೆಗಾ ಟೆಕ್ಸ್‍ಟೆಲ್ ಆಗಬೇಕು. ಆಟೋ ಮೊಬೈಲ್ ಕ್ಷೇತ್ರಗಳಲ್ಲಿ ಕ್ಲಸ್ಟರ್ ಹೆಚ್ಚಿಗೆ ಮಾಡಬೇಕು ಎನ್ನುವ ಉದ್ದೇಶದಿಂದ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದು, ಹಂತ ಹಂತವಾಗಿ ಇವುಗಳನ್ನು ಸಾಕಾರ ಮಾಡುವ ಭರವಸೆ ಹೊಂದಿದ್ದೇನೆ ಎಂದು ಹೇಳಿದರು.
ಅಮೃತ ಗ್ರಾಮಗಳ ಯೋಜನೆಯಡಿ ಹಲವು ಹಣಕಾಸಿನ ಯೋಜನೆಗಳನ್ನು ರೂಪಿಸಿ ಕೆಲಸ ಮಾಡಿದಾಗ ಹೆಚ್ಚುವರಿಯಾಗಿ ಪ್ರತೀ ಗ್ರಾಮ ಪಂಚಾಯಿತಿಗೆ ರೂ.25 ಲಕ್ಷ ಅನುದಾನ ಸಿಗಲಿದೆ. ಮಧ್ಯ ಕರ್ನಾಟಕ ಹಾಗೂ ಉತ್ತರ ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ರೈತರು ರೇಷ್ಮೆ ಕೃಷಿಯನ್ನು ಅಭಿವೃದ್ಧಿ ಪಡಿಸಿದ್ದು, ಶ್ರೇಷ್ಠ ಗುಣಮಟ್ಟದ ರೇಷ್ಮೆ ಬೆಳೆಯುತ್ತಿದ್ದು, ವಿದೇಶದಿಂದ ಆಮದಾಗುವ ರೇಷ್ಮೆಗೆ ಸರಿಸಮಾನವಾಗಿದ್ದರಿಂದ ಹೆಚ್ಚಿನ ಬೇಡಿಕೆಯಿದೆ ಎಂದು ತಿಳಿಸಿದರು.
ಸ್ಮಾರ್ಟ್ ಸಿಟಿಯೊಂದಿಗೆ ಹಲವಾರು ಕಾಮಗಾರಿಗಳನ್ನು ಒಂದೆ ಕಡೆ ಮಾಡಿದ್ದು, ದಾವಣಗೆರೆಯ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಎಸ್.ಸಿ.ಎಸ್.ಪಿ (ಪರಿಶಿಷ್ಟ ಜಾತಿ)ಯಡಿ ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆಗೆ 360 ಲಕ್ಷ ರೂ., ಕಾಮಗಾರಿಗಳಿಗೆ 1440 ಲಕ್ಷ ರೂ., ಹಾಗೂ ಟಿಎಸ್‍ಪಿ (ಪರಿಶಿಷ್ಟ ಪಂಗಡ) ದಡಿ ಪೌರಕಾರ್ಮಿಕರಿಕರ ಗೃಹ ಭಾಗ್ಯ ಯೋಜನೆಗೆ 146.10 ಲಕ್ಷ ರೂ., ಕಾಮಗಾರಿಗಳಿಗೆ 584.40 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಇನ್ನೂ ಸಾಮಾನ್ಯ ಕಾಮಗಾರಿಗಳಿಗೆ 5469.50 ಲಕ್ಷ ರೂ. ಮೀಸಲಿಡಲಾಗಿದೆ ಎಂದರು.
ಮಹಾನಗರ ಪಾಲಿಕೆಯ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ 10 ಉದ್ಯಾನವನಗಳು, 2 ಕಾಲೇಜುಗಳಿಗೆ ಪರಿಕರ ಒದಗಿಸುವುದು, 74.995 ಕಿ.ಮೀ ಸಿ.ಸಿ. ಚರಂಡಿ ನಿರ್ಮಾಣ, 03.750 ಕಿ.ಮೀ ಒಳಚರಂಡಿ ನಿರ್ಮಾಣ, 18.551 ಕಿ.ಮೀ ಡಾಂಬಾರ್ ರಸ್ತೆ, 17.932 ಕಿ.ಮೀ ಕಾಂಕ್ರಿಟ್ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ, ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಎಸ್.ಎ.ರವೀಂದ್ರನಾಥ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಎ.ಶಿವಯೋಗಿ ಸ್ವಾಮಿ, ಮಹಾನಗರಪಾಲಿಕೆ ಮಹಾಪೌರರಾದ ಎಸ್.ಟಿ.ವೀರೇಶ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ.ರಿಷ್ಯಂತ್, ಮಹಾನಗರಪಾಲಿಕೆ ಉಪಮೇಯರ್ ಸೌಮ್ಯ ನರೇಂದ್ರಕುಮಾರ್, ನಗರಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಪಾಲಿಕೆ ಸದಸ್ಯರಾದ ಪ್ರಸನ್ನ ಕುಮಾರ್, ಕೆ.ಟಿ.ವೀರೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.