ದಾವಣಗೆರೆ: ವಾಯುಭಾರ ಕುಸಿತದಿಂದ ಮಳೆಯಾಗುತ್ತಿದ್ದು, ಪ್ರಸ್ತುತ ಅಡಿಕೆ ತೋಟಗಳಲ್ಲಿ ಆತಂರಿಕ ಉಷ್ಣಾಂಶ ಕಡಿಮೆಯಾಗಿ ಹರಳು ಕಟ್ಟುವ ಸಂಭವ ಹೆಚ್ಚಿದೆ. ಇದು ಅಡಿಕೆ ಬೆಳೆಯ ಇಳುವರಿ ಹೆಚ್ಚಿಸಲು ಸಹಾಯವಾಗುತ್ತಿದೆ ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿಗಳಾದ ಶ್ರೀ ಬಸವನಗೌಡ ಎಂ.ಜಿ. ರವರು ಅಭಿಪ್ರಾಯಪಟ್ಟರು.
ದಾವಣಗೆರೆ ತಾಲ್ಲೂಕು ಅಗಸನಕಟ್ಟೆ ಗ್ರಾಮದಲ್ಲಿ ಕೇಂದ್ರದಿಂದ ಹಮ್ಮಿಕೊಂಡ ಅಡಿಕೆ ಬೆಳೆಯಲ್ಲಿ ಸಮಗ್ರ ನಿರ್ವಹಣೆ ಬಗ್ಗೆ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಗ್ರಾಮದ ವಿವಿಧ ಅಡಿಕೆ ತೋಟಗಳಿಗೆ ಭೇಟಿ ನೀಡಿ ಮಾಹಿತಿ ನೀಡಿದರು. ಪ್ರಸ್ತುತ ದಾವಣಗೆರೆ ತಾಲ್ಲೂಕಿನಲ್ಲಿ 7.9 ಮಿ.ಮೀ. ಮಳೆಯಾಗಿದೆ. ರೈತರು ಈಗಾಗಲೇ ತೋಟಗಳ ಸ್ವಚ್ಚತೆಯನ್ನು ಕೈಗೊಂಡಿದ್ದು ಮುಂಗಾರಿಗೆ ಬೇಕಾದ ಪೋಷಕಾಂಶಗಳನ್ನು ನೀಡಲು ಸಿದ್ದತೆ ನಡೆಸುತ್ತಿದ್ದಾರೆ. ಮೇ ತಿಂಗಳಿನಲ್ಲಿ ರಸಗೊಬ್ಬರಗಳನ್ನು ನೀಡಬಾರದು. ಈಗೇನಿದ್ದರೂ ಸಾವಯವ ಗೊಬ್ಬರಗಳಾದ ಕೊಟ್ಟಿಗೆ ಗೊಬ್ಬರ, ಕುರಿಗೊಬ್ಬರಗಳನ್ನು ಈ ತಿಂಗಳಿನಲ್ಲಿ ದಾಸ್ತಾನು ಮಾಡಿ, ಜೂನ್ ತಿಂಗಳ ಮೊದಲ ವಾರದಲ್ಲಿ ಹತ್ತು ವರ್ಷಕ್ಕೂ ಮೇಲ್ಪಟ್ಟ ಗಿಡಗಳಿಗೆ 15-15-15 ಗೊಬ್ಬರ 200 ಗ್ರಾಂ., ಎಂ.ಓ.ಪಿ.- 100 ಗ್ರಾಂ. ಲಘು ಪೋಷಕಾಂಶಗಳ ಮಿಶ್ರಣ 100 ಗ್ರಾಂ ಪ್ರತೀ ಗಿಡಕ್ಕೆ ನೀಡಬೇಕು.
ಈಗಾಗಲೇ ತೋಟವನ್ನು ಸ್ವಚ್ಚಗೊಳಿಸಿರುವವರು ಸೆಣಬು (20 ಕೆಜಿ) / ಡಯಾಂಚ (20 ಕೆಜಿ) ಅಥವಾ ವೆಲೆವೆಟ್ ಬೀನ್ಸ್ (5 ಕೆಜಿ) ಪ್ರತೀ ಎಕರೆ ಪ್ರದೇಶದಲ್ಲಿ ಬೆಳೆದು ಭೂಮಿಯ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಬೇಕೆಂದು ಮಾಹಿತಿ ನೀಡಿದರು. ಭೇಟಿಯ ಸಂದರ್ಭದಲ್ಲಿ ರೈತರಾದ ಶ್ರೀ ಚನ್ನಪ್ಪ, ಶ್ರೀ ಮರುಳಸಿದ್ದಪ್ಪ, ಶ್ರೀ ಬಸವರಾಜಪ್ಪ, ಶ್ರೀ ಕಲ್ಲಪ್ಪ ಇತರರು ಹಾಜರಿದ್ದರು.



