ದಾವಣಗೆರೆ: ಉಪಲೋಕಾಯುಕ್ತರ ಭೇಟಿ ಎಫೆಕ್ಟ್; ಸೂಳೆಕೆರೆ ಒತ್ತುವರಿ ತೆರವಿಗೆ ಒತ್ತು; 27 ಅಧಿಕಾರಿಗಳ ಮೇಲೆ ದೂರು ದಾಖಲು

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
4 Min Read

ದಾವಣಗೆರೆ: ಕರ್ನಾಟಕ ಉಪಲೋಕಾಯುಕ್ತ ಹಾಗೂ ನ್ಯಾಯಮೂರ್ತಿ ಬಿ.ವೀರಪ್ಪ ಏಪ್ರಿಲ್ 22 ರಿಂದ 26 ರ ವರೆಗೆ ದಾವಣಗೆರೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡ ವೇಳೆ ಆಡಳಿತದಲ್ಲಿ ನ್ಯೂನ್ಯತೆ ಕಂಡು ಬಂದು ಪ್ರಕರಣಗಳನ್ನು ಪತ್ತೆಹಚ್ಚಿ 13 ವಿವಿಧ ಇಲಾಖೆ ಅಧಿಕಾರಿಗಳ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಅನುಪಾಲನಾ ವರದಿ ನೀಡಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ತಿಳಿಸಿದ್ದಾರೆ.

ಉಪಲೋಕಾಯುಕ್ತರು ಮತ್ತು ಲೋಕಾಯುಕ್ತ ಅಪರ ನಿಬಂಧಕರು, ಉಪನಿಬಂಧಕರು ಸೇರಿದಂತೆ ಲೋಕಾಯುಕ್ತ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರವಾಸದ ವೇಳೆ ಭಾಗಿಯಾಗಿದ್ದರು. ಈ ವೇಳೆ ವಿವಿಧ ಇಲಾಖೆಗಳಿಗೆ ಭೇಟಿ ನೀಡಲಾಗಿತ್ತು. ಮತ್ತು ಶಾಂತಿಸಾಗರ ಕೆರೆ ಸೇರಿದಂತೆ ಕಲ್ಲುಗಣಿಗಾರಿಕೆ ಮಾಡುತ್ತಿರುವ ಸ್ಥಳಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಲೋಪದೋಷಗಳು ಕಂಡು ಬಂದ ಇಲಾಖೆ ಅಧಿಕಾರಿಗಳ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದ್ದು ಮುಂದುವರೆದಿದೆ.

ಶಾಂತಿಸಾಗರ ಕೆರೆ ಒತ್ತುವರಿ

ಶಾಂತಿಸಾಗರ ಕೆರೆ (ಸೂಳೆ ಕೆರೆ) 5447.10 ಎಕರೆ ವಿಸ್ತೀರ್ಣ ಹೊಂದಿದೆ. ಆದರೆ ಚಿಕ್ಕೋಡಾ ಹಿನ್ನೀರಿನಲ್ಲಿ 146 ಎಕರೆ ಹಿನ್ನೀರಿನಲ್ಲಿ ಒತ್ತುವರಿಯಾಗಿದೆ ಎಂದು ಕಂಡು ಬಂದಿರುತ್ತದೆ. ಮತ್ತು ಕೆರೆಯಲ್ಲಿನ ಹೂಳು ತೆಗೆದು ಹೆಚ್ಚಿನ ನೀರು ಸಂಗ್ರಹಿಸಲು ಅವಕಾಶ ಇದೆ. ಇಲ್ಲಿ ಪ್ರವಾಸೋದ್ಯಮ ಅಭಿವೃದ್ದಿ, ಪರಿಸರ ಸಂರಕ್ಷಣೆ ಸೇರಿದಂತೆ ಸುತ್ತಮುತ್ತಲಿನ 41 ಗ್ರಾಮಗಳು ಬರಲಿದ್ದು ನೈರ್ಮಲ್ಯತೆ ಕಾಪಾಡಿಕೊಳ್ಳುವುದು ಮತ್ತು ಶೌಚಾಲಯದ ನೀರನ್ನು ಕೆರೆಗೆ ಬಿಡದಂತೆ ಕ್ರಮವಹಿಸಬೇಕು. ಈ ಬಗ್ಗೆ ಹೊನ್ನಾಳಿ ಎಸಿ, ಚನ್ನಗಿರಿ ತಹಶೀಲ್ದಾರ್, ಪಂಚಾಯತ್ ರಾಜ್ ಇಂಜಿನಿಯರಿಂಗ್, ಗ್ರಾಮೀಣ ಕುಡಿಯುವ ನೀರು, ಜಲಸಂಪನ್ಮೂಲ, ಪರಿಸರ, ಪ್ರವಾಸೋದ್ಯಮ ಇಲಾಖೆ ಸೇರಿದಂತೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಸೇರಿದಂತೆ 12 ನ್ಯೂನ್ಯತೆಗಳನ್ನು ಉಲ್ಲೇಖಿಸಿ 27 ಅಧಿಕಾರಿಗಳ ಮೇಲೆ ದೂರು ದಾಖಲಿಸಲಾಗಿದೆ.

ಗಣಿ ಮತ್ತು ಭೂ ವಿಜ್ಞಾನ

ಬುಳ್ಳಾಪುರ, ಪಂಜೇನಹಳ್ಳಿ, ಹೆಬ್ಬಾಳ,ಆಲೂರು ಸರ್ವೆ ನಂಬರ್‍ಗಳಲ್ಲಿ ಕಲ್ಲುಗಣಿಗಾರಿಕೆ ನಡೆಯುತ್ತಿದ್ದು ಬಫರ್ ಝೋನ್, ಗಡಿನಾಶ, ಮಿನರಲ್ ಸಾಗಣಿ ನಿಯಮ ಉಲ್ಲಂಘನೆ ಸೇರಿದಂತೆ ವಿವಿಧ 36 ನ್ಯೂನ್ಯತೆಗಳನ್ನು ಉಲ್ಲೇಖಿಸಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ಬೆಸ್ಕಾಂ, ಸಾರಿಗೆ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳನ್ನು ಒಳಗೊಂಡ 18 ಅಧಿಕಾರಿಗಳ ಮೇಲೆ ದೂರು ದಾಖಲಿಸಲಾಗಿದೆ.ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಭೇಟಿ ನೀಡಿದಾಗ ಸರಿಯಾಗಿ ಕಡತ ತೋರಿಸದ ಮತ್ತು ನಿರ್ವಹಣೆ ಮಾಡದ ಕಾರಣ 15 ವಿವಿಧ ನ್ಯೂನ್ಯತೆ ಪರಿಗಣಿಸಿ ಹಿರಿಯ ಭೂ ವಿಜ್ಞಾನಿ ಅಧಿಕಾರಿ ಮೇಲೆ ದೂರು ದಾಖಲಿಸಿಕೊಳ್ಳಲಾಗಿದೆ.

ಮಹಾನಗರ ಪಾಲಿಕೆ ಮೇಲೆ 2 ದೂರು

ಮಹಾನಗರ ಪಾಲಿಕೆ ಮೇಲೆ ಘನತ್ಯಾಜ್ಯ ವಿಳೇವಾರಿ ಘಟಕದಲ್ಲಿ ಸಂಸ್ಕರಣೆ ಮತ್ತು ನಿರ್ವಹಣೆ ಲೋಪದೋಷ ಸೇರಿ 8 ನ್ಯೂನ್ಯತೆ, ಪಾಲಿಕೆಯಲ್ಲಿ ಹಾಜರಾತಿಯ ವ್ಯತ್ಯಾಸ, ಖಾಸಗಿ ವ್ಯಕ್ತಿಯಿಂದ ಕಡತ ನಿರ್ವಹಣೆ ಸೇರಿ 15 ವಿವಿಧ ನ್ಯೂನ್ಯತೆ ಗಮನಿಸಿ ಮೊದಲ ದೂರು ಪಾಲಿಕೆಯ ಕಾರ್ಯಪಾಲಕ ಇಂಜಿನಿಯರ್ ಮತ್ತು ಇನ್ನೊಂದು ಉಪ ಆಯುಕ್ತರ ಮೇಲೆ ದೂರು ದಾಖಲಿಸಲಾಗಿದೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ; ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಅಂಗಡಿಯವರು ಬಿಳಿಚೀಟಿ ಮೇಲೆ ಬಿಲ್ ಬರೆಯುವುದು ಮತ್ತು ರೈತರಿಂದ ಶೇ 3 ರಿಂದ 8 ರಷ್ಟು ಕಮೀಷನ್ ಪಡೆಯುವುದು, ಅಲ್ಲಿನ ಕಾರ್ಮಿಕರಿಗೆ ಸೌಲಭ್ಯಗಳನ್ನು ಕಲ್ಪಿಸದೇ ಇರುವುದು ಸೇರಿ 15 ನ್ಯೂನ್ಯತೆಗಳನ್ನು ಗಮನಿಸಿ ಎಪಿಎಂಸಿ ಕಾರ್ಯದರ್ಶಿಯ ಮೇಲೆ ಸ್ವಯಂ ಪ್ರೇರಿತ ದೂರು ದಾಖಲಿಸಲಾಗಿದೆ.

ಜಿಲ್ಲಾ ಆಸ್ಪತ್ರೆ ಮತ್ತು ಔಷಧ ಉಗ್ರಾಣ

ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತಿನಿತ್ಯ 1500 ಕ್ಕಿಂತಲೂ ಹೆಚ್ಚು ಹೊರರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರೂ ಪ್ರಮುಖ ಪರೀಕ್ಷಾ ಸಾಧನಗಳಿಲ್ಲ, ಎಂಆರ್‍ಐ ಇಲ್ಲ, ಮಹಿಳೆಯರಿಗೆ ಪ್ರತ್ಯೇಕ ಸರತಿ ಸಾಲಿನ ವ್ಯವಸ್ಥೆ ಇಲ್ಲ, ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ಮಾಡುವ ವೇಳೆ ತ್ಯಾಜ್ಯವನ್ನು ಚರಂಡಿಗೆ ನೇರವಾಗಿ ಬಿಡಲಾಗುತ್ತಿದೆ. ಶೌಚಾಲಯಗಳ ಸ್ವಚ್ಚತೆ ಇಲ್ಲ, ಆಹಾರದ ವಿತರಣೆಯಲ್ಲಿ ಗುಣಮಟ್ಟ ಕಾಪಾಡಿಕೊಳ್ಳುತ್ತಿಲ್ಲ ಎಂದು ವಿವಿಧ 20 ನ್ಯೂನ್ಯತೆಗಳನ್ನು ಗಮನಿಸಿ ಜಿಲ್ಲಾ ಸರ್ಜನ್ ಮೇಲೆ ದೂರು ದಾಖಲಿಸಲಾಗಿದೆ.

ಔಷಧ ಉಗ್ರಾಣದಲ್ಲಿ ಔಷಧ ನಾಶಪಡಿಸುವಾಗ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ, ಅವಧಿ ಮೀರಿದ ಔಷಧಿಗಳಿವೆ. ಸಿಬ್ಬಂದಿಗಳು ಗುರುತಿನ ಚೀಟಿ ಧರಿಸಿಲ್ಲ ಎಂಬಿತ್ಯಾದಿ 4 ನ್ಯೂನ್ಯತೆಗಳನ್ನು ಪರಿಗಣಿಸಿ ಹಿರಿಯ ಫಾರ್ಮಸಿ ಅಧಿಕಾರಿ ಮೇಲೆ ದೂರು ದಾಖಲಿಸಲಾಗಿದೆ.

ಬಾಬುಜಗಜೀವರ್ ರಾಂ ಭವನ

ಕೋಟ್ಯಾಂತರ ರೂ.ಗಳ ತೆರಿಗೆ ಹಣದಿಂದ ಬಾಬು ಜಗಜೀವನ್ ರಾಂ ಭವನ ನಿರ್ಮಾಣ ಮಾಡಿದ್ದರೂ ಇದರ ಉಪಯೋಗ ಮಾಡುವಲ್ಲಿ ಸಮಾಜ ಕಲ್ಯಾಣ ಇಲಾಖೆ ನಿರ್ಲಕ್ಷ್ಯತೆ ವಹಿಸಿದೆ. ಇದನ್ನು ಪರಿಗಣಿಸಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರ ಮೇಲೆ ದೂರು ದಾಖಲಿಸಲಾಗಿದೆ.

ಸಾರಿಗೆ ಕಚೇರಿ

ಸಾರಿಗೆ ಇಲಾಖೆಗೆ ಭೇಟಿ ನೀಡಿದ ವೇಳೆ ಎಫ್‍ಸಿ ಇಲ್ಲದ ವಾಹನಗಳು, ಮಿನರಲ್ ಸಾಗಣೆ ಮಾಡುವಾಗ ತಪಾಸಣೆ ಮಾಡಿದ ಬಗ್ಗೆ, ಶಾಲಾ ವಾಹನಗಳು ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿ ಅಳವಡಿಕೆ, ಷರತ್ತುಗಳ ಪೂರೈಕೆ ಮಾಡಿದ ಮಾಹಿತಿ, ಖನಿಜ ಸಾಗಣೆ ವಾಹನಗಳ ಪರ್ಮಿಟ್ ನೀಡಿಕೆ, ಖನಿಜ ಸಾಗಣೆ ವಾಹನಗಳಿಗೆ ಎಂಡಿಪಿ ಮತ್ತು ಜಿಪಿಎಸ್ ಅಳವಡಿಕೆ, ಖಾಸಗಿ ವಾಹನಗಳ ಮೇಲೆ ಕಾನೂನಿನಲ್ಲಿ ಅವಕಾಶ ಇಲ್ಲದೇ ಇದ್ದರೂ ಅಧ್ಯಕ್ಷರು, ಕಾರ್ಯದರ್ಶಿ ಎಂದು ನಂಬರ್ ಪ್ಲೇಟ್ ಮೇಲೆ ಹೆಸರು ಅಳವಡಿಸಿದ ವಾಹನಗಳ ಮೇಲೆ ತೆಗೆದುಕೊಂಡ ಕ್ರಮದ ಮಾಹಿತಿ ಸೇರಿದಂತೆ ಸರಿಯಾದ ಮಾಹಿತಿ ನೀಡದ ಕಾರಣ 12 ನ್ಯೂನ್ಯತೆಗಳನ್ನು ಗುರುತಿಸಿ ಸಾರಿಗೆ ಅಧಿಕಾರಿಯವರ ಮೇಲೆ ದೂರು ದಾಖಲಿಸಲಾಗಿದೆ.

ಕಾರ್ಮಿಕ ಇಲಾಖೆ

ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕರಿಗೆ ಇರುವ ಸೌಲಭ್ಯಗಳ ಸಮರ್ಪಕ ಮಾಹಿತಿ ಇಲ್ಲ, ಸಹಾಯಕ ಆಯುಕ್ತರಿಗೆ 16 ಅರ್ಜಿಗಳ ಆದೇಶಕ್ಕೆ ಇಟ್ಟಿದ್ದರೂ ಸಹ ಆದೇಶ ಮಾಡಿರುವುದಿಲ್ಲ. ನೊಂದಾಯಿತ ಅಂಗಡಿಗಳು ಹೆಚ್ಚಿದ್ದರೂ ಸಹ ಕೆಲವು ಮಾತ್ರ ತಪಾಸಣೆ ಮಾಡಲಾಗಿದೆ ಎಂಬ ನ್ಯೂನ್ಯತೆ ಸೇರಿದಂತೆ 9 ಅಂಶಗಳನ್ನು ಗಮನಿಸಿ ಕಾರ್ಮಿಕ ಇಲಾಖೆ ಸಹಾಯಕ ಕಾರ್ಮಿಕ ಆಯುಕ್ತರ ಮೇಲೆ ದೂರು ದಾಖಲಿಸಲಾಗಿದೆ.

ನೊಂದಣಿ ಇಲಾಖೆ

ದಾವಣಗೆರೆ ಉಪನೊಂದಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದಾಗ ಕಚೇರಿಯಲ್ಲಿ ನಗದು ನಿರ್ವಹಣೆ ಸರಿಯಾಗಿ ಮಾಡಿರುವುದಿಲ್ಲ. ಸಿಬ್ಬಂದಿಗಳ ಹಾಜರಾತಿ ವಹಿಯಲ್ಲಿ ವೈಟ್ನರ್ ನಿಂದ ತಿದ್ದಲಾಗಿದೆ. ಹೊರಗುತ್ತಿಗೆ ಸಿಬ್ಬಂದಿ ವೇತನಕ್ಕಿಂತ ಹೆಚ್ಚು ಯುಪಿಐನಲ್ಲಿ ವಹಿವಾಟು ಮಾಡಿರುವುದು ಸೇರಿದಂತೆ 8 ಅಂಶಗಳನ್ನು ಉಲ್ಲೇಖಿಸಿ ಉಪನೊಂದಣಾಧಿಕಾರಿಗಳ ಮೇಲೆ ದೂರು ದಾಖಲಿಸಲಾಗಿದೆ.

ತಾಲ್ಲೂಕು ಕಚೇರಿ

ದಾವಣಗೆರೆ ತಾಲ್ಲೂಕು ಕಚೇರಿಗೆ ಭೇಟಿ ನೀಡಿದ್ದ ವೇಳೆ ಸಿಬ್ಬಂದಿಯವರು ಗೈರು ಹಾಜರಾಗಿದ್ದರೂ ಹಾಜರಾತಿವಹಿಯಲ್ಲಿ ಸಹಿಯನ್ನು ಮಾಡಿರುವುದಿಲ್ಲ ಮತ್ತು ರಜೆಯನ್ನು ದಾಖಲು ಮಾಡದೇ ಖಾಲಿ ಬಿಡಲಾಗಿತ್ತು. ವಿವಿಧ 4 ಅಂಶಗಳನ್ನು ಪರಿಗಣಿಸಿ ತಹಶೀಲ್ದಾರರ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಸಲಾಗಿದೆ.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *