ಚಿತ್ರದುರ್ಗ: ತರಳಬಾಳು ಬೃಹನ್ಮಠ ದಿಂದ (Sri Taralabalu Jagadguru Brihanmath) ಫೆ.4ರಿಂದ 12ರವರೆಗೆ ಜಿಲ್ಲೆಯ ಭರಮಸಾಗರದಲ್ಲಿ ನಡೆಯುವ ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಸಕಲ ಸಿದ್ಧತೆ ನಡೆಯುತ್ತಿದ್ದು, ಹುಣ್ಣಿಮೆ ನಡೆಯುವ ಮಹಾಮಂಟಪವನ್ನು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವೀಕ್ಷಿಸಿದರು.
- ಬಿಚ್ಚುಗತ್ತಿ ಭರಮಣ್ಣ ನಾಯಕ ಮಹಾಮಂಟಪ
- ರಾಜ್ಯದ ವಿದ್ವಾಂಸರಲ್ಲದೆ ಸ್ವಿಡ್ಜರ್ ಲ್ಯಾಂಡ್, ಆಸ್ಟ್ರಿಯಾ ದೇಶಗಳ ವಿದ್ವಾಂಸರು ಭಾಗಿ
- 10 ಹುತಾತ್ಮ ಯೋಧರಿಗೆ ತಲಾ 1 ಲಕ್ಷ ರೂ. ಅನುಕಂಪ ನಿಧಿ
- ಒಟ್ಟು 53 ಲಕ್ಷ ದೇಣಿಗೆ ಸಂಗ್ರಹ
ರಾಜ್ಯದ ವಿವಿಧ ಕ್ಷೇತ್ರದ ವಿದ್ವಾಂಸರು ಸೇರಿದಂತೆ ಸ್ವಿಡ್ಜರ್ ಲ್ಯಾಂಡ್, ಆಸ್ಟ್ರಿಯಾ ದೇಶಗಳ ವಿದ್ವಾಂಸರು ಕಾರ್ಯಕ್ರಮಕ್ಕೆ ಆಗಮಿಸಲಿದ್ದು, ಈ ಬಾರಿ ತರಳಬಾಳು ಹುಣ್ಣಿಮೆ ಕಾರ್ಯಕ್ರಮಕ್ಕೆ ಅಂತಾರಾಷ್ಟ್ರೀಯ ಮೆರಗು ಸಿಗಲಿದೆ ಎಂದು ಶ್ರೀಗಳು ಹೇಳಿದರು.
ಈ ಬಾರಿ ತರಳಬಾಳು ಹುಣ್ಣಿಮೆಯ ಸ್ಥಳ ತುಂಬಾ ವಿಶಾಲವಾಗಿದ್ದು, ಪ್ರತಿದಿನ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದೆ. ನಿವೃತ ನ್ಯಾಯಾಧೀಶ ಸಂತೋಷ್ ಹೆಗಡೆ, ಜಯದೇವ ಆಸ್ಪತ್ರೆಯ ಡಾ.ಮಂಜುನಾಥ್, ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
ಹುಣ್ಣಿಮೆ ಕಾರ್ಯಕ್ರಮಕ್ಕೆ ಭಕ್ತಾದಿಗಳಿಂದ ಒಟ್ಟು 23 ಲಕ್ಷ ಹಾಗೂ ನಾನಾ ಗ್ರಾಮಗಳಿಂದ ಸುಮಾರು 30 ಲಕ್ಷಕ್ಕೂ ಹೆಚ್ಚು ರೂ. ದೇಣಿಗೆ ಸಂಗ್ರಹವಾಯಿತು. ಪ್ರತಿ ವರ್ಷದಂತೆ ಹುತಾತ್ಮ ಯೋಧರಿಗೆ ಶ್ರೀಮಠದಿಂದ 1 ಲಕ್ಷ ರೂ. ಅನುಕಂಪ ನಿಧಿಯನ್ನು ಕರ್ನಾಟಕದ 8 ಹಾಗೂ ಮಹಾರಾಷ್ಟ್ರ 1, ಪಂಜಾಬ್ 1 ಸೇರಿ ಒಟ್ಟು 10 ಕುಟುಂಬಗಳಿಗೆ ನೀಡಲಾಗುವುದು ಎಂದರು.
ಬಿಚ್ಚುಗತ್ತಿ ಭರಮಣ್ಣ ನಾಯಕ ಮಹಾ ಮಂಟಪ: 300 ವರ್ಷಗಳ ಹಿಂದೆ ಭರಮಸಾಗರದ ಕೆರೆಯ ನಿರ್ಮಾತೃವಾದ ಭರಮಣ್ಣನಾಯಕನ ಸ್ಮರಣೆಗಾಗಿ ಮಂಟಪಕ್ಕೆ ಬಿಚ್ಚುಗತ್ತಿ ಭರಮಣ್ಣನಾಯಕ ಮಹಾಮಂಟಪ ಎಂದು, ಮಹಾದ್ವಾರಕ್ಕೆ ಚಿತ್ರದುರ್ಗದ ಧೀರಮಹಿಳೆ ಒನಕೆ ಓಬವ್ವನ ಮಹಾದ್ವಾರ ಹಾಗೂ ವೇದಿಕೆಗೆ ಚಿನ್ಮೂಲಾದ್ರಿ ಗುರುರೇವಣಸಿದ್ದರ ವೇದಿಕೆ ಎಂದು ಶ್ರೀಗಳು ಸೂಚಿಸಿದರು.



