ದಾವಣಗೆರೆ: ಚಿಕ್ಕನಹಳ್ಳಿ ಹೊಸ ಬಡಾವಣೆಯ ಶ್ರೀ ಸರ್ವಜ್ಞ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆನರಾ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್ ವತಿಯಿಂದ ಸಾಮಾಜಿಕ ಕಳಕಳಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಊಟದ ತಟ್ಟೆಗಳನ್ನು ವಿತರಿಸಲಾಯಿತು.
ಸಮಾಜದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿ ಇರುವವರಿಗೆ ಕೆನರಾ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್ ಸಹಕಾರ ನೀಡುತ್ತಿರುವುದು ಪ್ರಶಂಸನೀಯವಾಗಿದೆ. ನಾವು ಎಷ್ಟು ಸಂಪಾದನೆ ಮಾಡುತ್ತೇವೆ ಅನ್ನುವುದು ಮುಖ್ಯವಲ್ಲ. ನಮ್ಮ ಸಂಪಾದನೆಯನ್ನು ಹೇಗೆ ಸದ್ಬಳಕೆ ಮಾಡುತ್ತೇವೆ ಎನ್ನುವುದು ಮುಖ್ಯವಾಗುತ್ತದೆ ಎಂದು ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಹೆಚ್.ಜಿ.ಅವರಗೆರೆ ಉಮೇಶ್ ಅಭಿಪ್ರಾಯಪಟ್ಟರು.
ಆರ್ಥಿಕವಾಗಿ ಹಿಂದುಳಿದ ಹಾಗೂ ಕಾರ್ಮಿಕ ಕುಟುಂಬದಿಂದ ಬಂದಿರುವಂತಹ ವಿದ್ಯಾರ್ಥಿಗಳೇ ಹೆಚ್ಚಿರುವ ಈ ಶಾಲೆಯನ್ನು ಆಯ್ಕೆಮಾಡಿ ಸಹಾಯ ನೀಡುತ್ತಿರುವುದು ಸಮ ಸಮಾಜವನ್ನು ನಿರ್ಮಾಣ ಮಾಡುವ ನಮ್ಮ ಕಾರ್ಮಿಕ ಸಂಘಟನೆಗಳ ಪ್ರಯತ್ನಕ್ಕೆ ಇನ್ನಷ್ಟು ಬಲ ನೀಡಿದೆ ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಲೀಡ್ ಬ್ಯಾಂಕ್ ವಿಭಾಗೀಯ ಪ್ರಬಂಧಕ ಜಿ.ಜಿ.ದೊಡ್ಡಮನಿ ಮಾತನಾಡಿ, ಶಿಕ್ಷಣ ಪಡೆಯುವುದು ಪ್ರತಿಯೊಬ್ಬರ ಮೂಲಭೂತ ಹಕ್ಕು. ಅದೇ ರೀತಿ ಬ್ಯಾಂಕ್ ಸೌಲಭ್ಯಗಳನ್ನು ಪಡೆಯುವುದು ಕೂಡಾ ಪ್ರತಿಯೊಬ್ಬ ನಾಗರಿಕನ ಹಕ್ಕಾಗಬೇಕು ಎನ್ನುವ ನಿಟ್ಟಿನಲ್ಲಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘವು ಹೋರಾಡುತ್ತಿದೆ. ಅದರ ಅಂಗ ಸಂಸ್ಥೆಯಾದ ಕೆನರಾ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್ ಸಹ ಅದೇ ರೀತಿ ಸಾಮಾಜಿಕ ಸೇವೆಗಳನ್ನು ಸಹ ಮಾಡುತ್ತಿದೆ. ಕೋವಿಡ್ ಸಂಕಷ್ಟದ ಸಮಯದಲ್ಲೂ ಬ್ಯಾಂಕ್ ನೌಕರರು ಸಮಾಜ ಸೇವೆಯನ್ನು ಮಾಡಿದ್ದರು. ಇದು ಬೇರೆ ಕಾರ್ಮಿಕ ಸಂಘಟನೆಗಳಿಗೆ ಮಾದರಿಯಾಗಿದೆ ಎಂದು ಮೆಚ್ವುಗೆ ವ್ಯಕ್ತಪಡಿಸಿದರು.
ಕೆನರಾ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್‌ನ ರಾಜ್ಯ ಸಹ ಕಾರ್ಯದರ್ಶಿ ಕೆ.ರಾಘವೇಂದ್ರ ನಾಯರಿ ಮಾತನಾಡಿ ಸಂಘವು 1951 ರಲ್ಲಿ ಉದಯವಾಯಿತು. 2001 ರಲ್ಲಿ ಸಂಘವು ಸುವರ್ಣ ಮಹೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ ನಮ್ಮ ಸದಸ್ಯರ ರಕ್ಷಣೆಗಾಗಿ, ಹಿತಕ್ಕಾಗಿ, ಸೌಲಭ್ಯಕ್ಕಾಗಿ ಹೋರಾಡುವುದರ ಜೊತೆಗೆ ಸಮಾಜದಲ್ಲಿ ಕಷ್ಟದಲ್ಲಿ ಇರುವ ಸಂಘ-ಸಂಸ್ಥೆಗಳಿಗೆ, ವ್ಯಕ್ತಿಗಳಿಗೆ ಸಹಾಯ ಮಾಡುವುದರ ಮೂಲಕ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕೆಂದು ನಿರ್ಧರಿಸಲಾಯಿತು. ಈ ಪ್ರಕಾರವಾಗಿ 2001 ರಿಂದ “ಸಾಮಾಜಿಕ ಕಳಕಳಿ ಕಾರ್ಯಕ್ರಮ” ಎನ್ನುವ ಪರಿಕಲ್ಪನೆಯೊಂದಿಗೆ ದೇಶದಾದ್ಯಂತ ಆಯ್ದ ಸ್ಥಳಗಳಲ್ಲಿ ವರ್ಷಕ್ಕೆ ಸರಿಸುಮಾರು 50 ಲಕ್ಷ ರೂಪಾಯಿಗಳನ್ನು ವ್ಯಯಿಸಲಾಗುತ್ತಿದೆ.
ಇದು ಕೆನರಾ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್‌ನ ಸದಸ್ಯರ ನೆರವಿನಿಂದಲೇ ನಡೆಯುತ್ತಿರುವ ಕಾರ್ಯಕ್ರಮವಾಗಿದೆ. ಸಮಾಜಮುಖಿಯಾದ ಈ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಹೋಗುವ ಇರಾದೆ ನಮ್ಮ ಸಂಘಕ್ಕಿದೆ. ಅಸಮಾನತೆ, ಶೋಷಣೆ, ಜಾತಿರಹಿತವಾದ ಸಮ ಸಮಾಜದ ನಿರ್ಮಾಣ ಮಾಡುವುದೇ ನಮ್ಮ ಕನಸಾಗಿದೆ ಎಂದು ಕೆ.ರಾಘವೇಂದ್ರ ನಾಯರಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಬಿ.ಆನಂದಮೂರ್ತಿ ಮಾತನಾಡಿ ಶಿಕ್ಷಣವನ್ನು ಪಡೆಯುವುದರಿಂದ ಯಾರೊಬ್ಬರೂ ವಂಚಿತರಾಗಬಾರದು. ಸರಕಾರದ ಜೊತೆಗೆ ಸಂಘ ಸಂಸ್ಥೆಗಳು ಕೂಡಾ ಸಹಕರಿಸಿದಲ್ಲಿ ಶಿಕ್ಷಣವು ಎಲ್ಲರಿಗೂ ಸಿಗುವಂತಾಗುವುದು. ಸರಕಾರವು ಕೂಡಾ ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಬೇಕು ಮತ್ತು ಅಲ್ಲಿನ ಮೂಲಸೌಕರ್ಯವನ್ನು ಹೆಚ್ಚಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಊಟದ ತಟ್ಟೆ ಮತ್ತು ಸಿಹಿ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಪಿ.ಚಂದ್ರಶೇಖರ್, ಮುಖ್ಯ ಶಿಕ್ಷಕ ಆರ್.ಎಂ. ಸುರೇಶ್, ಶಿಕ್ಷಕರಾದ ಕೆ.ಸಿದ್ದನಗೌಡ, ಎಂ.ಆರ್.ಜಗದೀಶ್ ಹಾಗೂ ಸಿಬ್ಬಂದಿಗಳಾದ ಕೆ.ಪದ್ಮಾವತಿ ಮೊದಲಾದವರು ಹಾಜರಿದ್ದು ಕೆನರಾ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್ ಸದಸ್ಯರ ಕೊಡುಗೆಯನ್ನು ಸ್ವೀಕರಿಸಿ ಮುಂದೆಯೂ ಶಾಲೆಯ ಅಭಿವೃದ್ಧಿಗೆ ಸಹಕರಿಸಲು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್‌ನ ಪದಾಧಿಕಾರಿಗಳಾದ ಕೆ.ವಿಶ್ವನಾಥ್ ಬಿಲ್ಲವ, ಆರ್.ಆಂಜನೇಯ, ಪರಶುರಾಮ, ಕಾಡಜ್ಜಿ ಎನ್.ವೀರಪ್ಪ, ಸುರೇಶ್ ಚೌಹಾಣ್, ಪವನಕುಮಾರ್ ಗೌಡ, ಎಂ.ಎಂ.ಸಿದ್ದವೀರಯ್ಯ, ವಿ.ಆರ್.ಹರೀಶ್, ಎಮ್.ಸತೀಶ್, ಜ್ಞಾನೇಶ್ವರ ಮಾಲವಾಡೆ, ರಮೇಶ್, ಹೆಚ್.ವಿನಯ್ ಮತ್ತಿತರರು ಉಪಸ್ಥಿತರಿದ್ದರು.