ದಾವಣಗೆರೆ: ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ವತಿಯಿಂದ ರಾಜ್ಯಮಟ್ಟದ ವೈದ್ಯರ ಕ್ರಿಕೆಟ್ ಪಂದ್ಯಾವಳಿ ಏಪ್ರಿಲ್ 1 ರಿಂದ ಮೂರು ದಿನ ನಡೆಯಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಚಂದನ್ ಗಿರಿಯಪ್ಪ ತಿಳಿಸಿದರು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐಎಂಎ 25 ವರ್ಷಗಳಿಂದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುತ್ತಾ ಬರುತ್ತಿದ್ದು, ಇದೇ ಮೊದಲ ಬಾರಿಗೆ ದಾವಣಗೆರೆ ಶಾಖೆಯಿಂದ ಆರೋಗ್ಯ ಕಾಳಜಿ ಮೂಡಿಸುವ ನಿಟ್ಟಿನಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಪಂದ್ಯಾವಳಿಯಲ್ಲಿ 35 ತಂಡಗಳು ಪಾಲ್ಗೊಳ್ಳಲಿದ್ದು, 450ಕ್ಕೂ ಹೆಚ್ಚು ವೈದ್ಯರು ಭಾಗಿಯಾಗಲಿದ್ದಾರೆ. ಏಕ ಕಾಲದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ , ಬಿಐಇಟಿ ಕಾಲೇಜಿನಲ್ಲಿ, ಎಸ್.ಎಸ್. ಹೈಟೆಕ್ ಆಸ್ಪತ್ರೆ ಮೈದಾನ, ಶಾಮನೂರು ಕೆಎಸ್ ಸಿಇ ಮೈದಾನ ಹಾಗೂ ವಿಶ್ವವಿದ್ಯಾಲಯ ಮೈದಾನಗಳಲ್ಲಿ ಪಂದ್ಯಾವಳಿಗಳು ನಡೆಯಲಿವೆ.
ಕ್ವಾರ್ಟರ್ ಫೈನಲ್, ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯಾವಳಿಗಳು ಎಸ್.ಎಸ್. ಹೈಟೆಕ್ ಆಸ್ಪತ್ರೆ ಮೈದಾನದಲ್ಲಿ ನಡೆಯಲಿದೆ. ಯುಗಾದಿ ಹಬ್ಬದ ಸಂಜೆ ನಡೆಯುವ 4 ಪಂದ್ಯಗಳು ಹೊನಲು ಬೆಳಕಿನ ಪಂದ್ಯಾವಳಿಗಳಾಗಿದೆ. ಏ.1 ರ ಬೆಳಗ್ಗೆ 7.30 ಕ್ಕೆ ಎಲ್ಲಾ ಮೈದಾನಗಳಲ್ಲೂ ಉದ್ಘಾಟನೆ ನೆರವೇರಲಿದೆ. ಏ.3 ರಂದು ಸಂಜೆ 6 ಗಂಟೆಗೆ ಎಸ್.ಎಸ್. ಹೈಟೆಕ್ ಆಸ್ಪತ್ರೆ ಮೈದಾನದಲ್ಲಿ ನಡೆಯುವ ಸಮಾರೋಪ ಸಮಾರಂಭ ನಡೆಯಲಿದೆ. ಪಂದ್ಯಾವಳಿಗಳನ್ನು ಜಿಲ್ಲೆಯ ಉದ್ಯಮಿಗಳು, ಮೆಡಿಕಲ್ ಫಾರ್ಮಾ ಗಳು ಹಾಗೂ ದಾನಿಗಳ ನೆರವಿನಿಂದ ನಡೆಸುತ್ತಿದ್ದು, ಇತರೆ ಜಿಲ್ಲೆಗಳಿಂದ ಆಗಮಿಸುವ ಆಟಗಾರರಿಗೆ ಐಎಂಎ ವತಿಯಿಂದ ಊಟ, ಉಪಹಾರದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಖಜಾಂಚಿ ಡಾ. ಅಖಿಲ್ ಎಂ. ಕುಲಕರ್ಣಿ, ಸಂಘದ ಪದಾಧಿಕಾರಿ ಡಾ. ಅಪೂರ್ವ, ಡಾ. ಅನಿಲ್ ರಾಜ್, ಡಾ ನಿಹಾಲ್ ನಾಡಗೌಡ ಉಪಸ್ಥಿತರಿದ್ದರು.