ದಾವಣಗೆರೆ: ನೌಕರರ ಸೇವೆ ಖಾಯಂ, ಸಮಾನ ಕೆಲಸಕ್ಕೆ ಸಮಾನ ವೇನತ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ದಾವಣಗೆರೆ ವಿಶ್ವ ವಿದ್ಯಾಲಯ ಹೊರಗುತ್ತಿಗೆ ಸಿ ಮತ್ತು ಡಿ ಗ್ರೂಪ್ ನೌಕರರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ದಾವಣಗೆರೆ ವಿಶ್ವವಿದ್ಯಾಲಯ ಆವರಣದಲ್ಲಿ ಅಹೋರಾತ್ರಿ ಮುಷ್ಕರ ಹಮ್ಮಿಕೊಂಡಿದ್ದೇವೆ. ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಹಲವಾರು ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಸಿ ಮತ್ತು ಡಿ ಗ್ರೂಫ್ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದೇವೆ. ನೌಕರರ ಸೇವೆ ಖಾಯಂ ಆಗುವವರೆಗೂ ನೌಕರರನ್ನು ಸಂಚಿತ ವೇತನದಡಿಯಲ್ಲಿ ನೇಮಕ ಮಾಡಿಕೊಂಡು ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂದು 4 ವರ್ಷಗಳಿಂದ ವಿಶ್ವವಿದ್ಯಾನಿಲಯಕ್ಕೆ ಮನವಿ ಪತ್ರಗಳನ್ನು ನೀಡಲಾಗಿದ್ದರೂ ಸಹ ಯಾವುದೇ ಪ್ರಯೋಜನ ಅಗಿಲ್ಲ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಹೊರಗುತ್ತಿಗೆಯಲ್ಲಿದ್ದ ನಾಲ್ಕು ಜನ ಸಿಬ್ಬಂದಿಗಳನ್ನು ಸಂಚಿತ ವೇತನದ ಆಧಾರದ ಮೇಲೆ ಹಂಗಾಮಿ ನೌಕರರನ್ನಾಗಿ ಮಾಡಿಕೊಂಡು ವೇತನ ನೀಡಲಾಗುತ್ತಿದೆ. ಇದು ತಾರತಮ್ಯದಿಂದ ಕೂಡಿದೆ. ಹತ್ತಾರು ವರ್ಷಗಳಿಂದ ಕಡಿಮೆ ವೇತನಕ್ಕೆ ಅತ್ಯಂತ ಪರಿಶ್ರಮದಿಂದ ಕೆಲಸ ನಿರ್ವಹಿಸಿಕೊಂಡು ಬಂದ ನೌಕರರ ಪ್ರಾಮಾಣಿಕತೆಗೆ ಮಾಡಿದ ದ್ರೋಹವಾಗಿದೆ. ಇದನ್ನು ಸರಿಪಡಿಸಲು ಕುಲಪತಿ, ಕುಲಸಚಿವರಿಗೆ ಹಲವು ಬಾರಿ ಮನವಿ ಪತ್ರಗಳನ್ನು ನೀಡಿ ಮತ್ತು ಪ್ರತಿಭಟನೆ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಎಐಯುಟಿಯುಸಿ ಜಿಲ್ಲಾಧ್ಯಕ್ಷ ಮಂಜುನಾಥ್ ಕೈದಾಳೆ, ಜಿಲ್ಲಾ ಉಪಾಧ್ಯಕ್ಷ ಶಿವಾಜಿ ರಾವ್, ತಿಪ್ಪೇಸ್ವಾಮಿ ಅಣಬೇರು, ಪ್ರಕಾಶ್, ವಿನುತಾ, ಸುಮಿತ್ರಾ, ವಿರೇಶ್, ವಿಜಯಮ್ಮ, ಪುಷ್ಪ, ಲಿಂಗರಾಜ್ ನಾಯ್ಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



