ಭರಮಸಾಗರ: ಸಿರಿಗೆರೆಯ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಸಂಕಲ್ಪದಂತೆ ಭರಮಸಾಗರದ ಐತಿಹಾಸಿಕ ಭರಮಣ್ಣನಾಯಕನ ಕೆರೆಗೆ ತುಂಗಭದ್ರ ನದಿಯಿಂದ ಏತನೀರಾವರಿ ಮೂಲಕ ಇಂದು ಮಧ್ಯಾಹ್ನ 3 ಗಂಟೆಗೆ ನೀರು ಹರಿಸಲಾಯಿತು. ಬರದನಾಡಿಗೆ ಬಂದ ತುಂಗೆಯನ್ನು ಕಂಡ ರೈತರ ಹರ್ಷಗೊಂಡರು.
2018 ರ ಭರಮಸಾಗರ ವ್ಯಾಪ್ತಿಯ 42 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರನ್ನು ತುಂಬಿಸುವ ಯೋಜನೆ ಇದಾಗಿದೆ. ರಾಜನಹಳ್ಳಿಯಿಂದ ನೀರು ತುಂಬಿಸುವ ಭರಮಸಾಗರ ಏತನೀರಾವರಿ ಯೋಜನೆಯು ತರಳಬಾಳು ಶ್ರೀಗಳ ಕನಸಾಗಿತ್ತು. ಶ್ರೀಗಳ ಒತ್ತಾಸೆಯಂತೆ ರೂ.565 ಕೋಟಿ ರೂ.ಗಳ ಈ ಬೃಹತ್ ಯೋಜನೆಗೆ ಸರ್ಕಾರದಿಂದ ಅನುಷ್ಠಾನಗೊಂಡಿದೆ. ಭರಮಸಾಗರ ಕೆರೆಗೆ ಸೀಮಿತವಾಗಿ ನೇರ ಪೈಪ್ ಲೈನ್ ಅಳವಡಿಕೆಯ ಕಾಮಗಾರಿಯು ವೈಜ್ಞಾನಿಕ ಮಾನದಂಡದಡಿ ಭರದಿಂದ ಮುಕ್ತಾಯವಾಗಿದೆ.
ಕೊರೊನಾ ಮಹಾಮಾರಿ ಸಮಸ್ಯೆ ಎದುರಾಗದಿದ್ದರೆ ಆಗಸ್ಟ್ ವೇಳೆಗೆ 1000 ಎಕರೆಯಲ್ಲಿ ಪಸರಿಸಿರುವ ಭರಮಸಾಗರದ ದೊಡ್ಡ ಕೆರೆಯಲ್ಲಿ ತುಂಗಭದ್ರೆ ಅವಿರ್ಭವಿಸುತ್ತಿದ್ದಳು. ಆದರೂ ಕೆರೆತುಂಬಿಸುವ ಶ್ರೀಗಳು ನಿರಂತರ ಒತ್ತಾಸೆಯ ಫಲವಾಗಿ ಪೈಪ್ ಲೈನ್ ಅಳವಡಿಕೆ ಕಾರ್ಯವು ತ್ವರಿತವಾಗಿ ಮುಕ್ತಾಯವಾಗಿದೆ. ನದಿಯಿಂದ ನೀರು ಹರಿಸುವ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು ಪ್ರತಿ ಸೆಕೆಂಡಿಗೆ 2790 ಲೀಟರ್ ನೀರು ಹರಿದು ಬರುತ್ತಿದೆ.
ಇಂದು ಮಧ್ಯಾಹ್ನ 3 ಗಂಟೆಗೆ ನೀರು ಹರಿಯಲು ಆರಂಭವಾಗಿದೆ. ಸಂಪೂರ್ಣ ಕೆರೆ ತುಂಬಲು ಕೇವಲ 23 ದಿನ ಸಾಕಾಗುತ್ತದೆ. ಭರದ ನಾಡಿನ ಭಗೀರಥರಾದ ಡಾ. ಶಿವಮೂರ್ತಿ ಶಿವಾಚಾರ್ಯ ಸಂಕಲ್ಪ ಶಕ್ತಿಯ ಆಶೀರ್ವಾದದಿಂದ ಭರಮಸಾಗರ ವ್ಯಾಪ್ತಿಯ 40 ಕ್ಕೂ ಹೆಚ್ಚು ಕೆರೆಗಳು ತುಂಬಿಸುವ ಯೋಜನೆ ಸಾಕಾರಗೊಂಡಿದೆ. ಈ ಭಾಗದ ಜನರ ಬಹುದಿನಗಳ ಕನಸು ನನಸಾಗಿದೆ. ಕೆರೆ ತುಂಬುವುದನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ಕೆರೆಯ ಬಳಿ ಬೆಳಗ್ಗೆಯಿಂದಲೇ ಜಮಾಯಿಸಿದ್ದರು. ರೈತರು ಶ್ರೀಗಳ ಕಾರ್ಯ ಕಂಡು ಧನ್ಯತಾ ಭಾವದಿಂದ ನೆನೆದು ಭಾವುಕರಾದರು.



