ದುಬೈ: ಆಸ್ಟ್ರೇಲಿಯಾದಲ್ಲಿ ನಡೆಯಬೇಕಾಗಿದ್ದ ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್ ಟೂರ್ನಿಯನ್ನು ಕೋವಿಡ್ –19 ಕಾರಣದಿಂದ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಸೋಮವಾರ ಮುಂದೂಡಿದೆ.
ಟಿ-20 ವಿಶ್ವಕಪ್ ಮುಂದೂಡಿದ್ದರಿಂದ ಐಪಿಎಲ್ ಕ್ರಿಕೆಟ್ ಟೂರ್ನಿ ಆಯೋಜಿಸಲು ಬಿಸಿಸಿಐ ಹಾದಿ ಸುಗಮವಾಗಿದೆ. ಅಕ್ಟೋಬರ್–ನವೆಂಬರ್ ತಿಂಗಳಲ್ಲಿ ಟೂರ್ನಿಯ ಪಂದ್ಯಗಳನ್ನು ಆಯೋಜಿಸುವ ಸಾಧ್ಯತೆ ಇದೆ.
ಆನ್‌ಲೈನ್ ಮೂಲಕ ನಡೆದ ಸಭೆಯಲ್ಲಿ ಟ್ವೆಂಟಿ–20 ವಿಶ್ವಕಪ್ ಟೂರ್ನಿಯ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು. ಅಕ್ಟೋಬರ್ 18ರಿಂದ ನವೆಂಬರ್ 15ರ ವರೆಗೆ ವಿಶ್ವಕಪ್ ಆಯೋಜಿಸಲು ಐಸಿಸಿ ನಿರ್ಧರಿಸಿತ್ತು. ಆದರೆ ಕೊರೊನಾ ಸೋಂಕು ಮುಂದುವರಿದ ಕಾರಣ ಪ್ರೇಕ್ಷಕರಿಗೆ ನಿರ್ಬಂಧ ಹಾಕಿ ಇಂಥ ಮಹತ್ವದ ಟೂರ್ನಿಯನ್ನು ಆಯೋಜಿಸಲು ಕಷ್ಟವಾಗಬಹುದು ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿತ್ತು.
ಆಸ್ಟ್ರೇಲಿಯಾದ ನಿರ್ಧಾರ ಐಸಿಸಿಯನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಆದರೆ ಅದು ಟೂರ್ನಿಯ ಕುರಿತು ಅಂತಿಮ ನಿರ್ಧಾರ ಪ್ರಕಟಿಸಿರಲಿಲ್ಲ. ಹೀಗಾಗಿ ಐಪಿಎಲ್ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲು ಬಿಸಿಸಿಐಗೂ ಸಾಧ್ಯವಾಗಿರಲಿಲ್ಲ. ಇದೀಗ ವಿಶ್ವಕಪ್ ಮುಂದೂಡಿರುವುದರಿಂದ ಐಪಿಎಲ್ ಟೂರ್ನಿಯನ್ನು ಸೆಪ್ಟೆಂಬರ್ ಕೊನೆಯ ವಾರದಲ್ಲಿ ಆರಂಭಿಸಿ ನವೆಂಬರ್ ಎರಡನೇ ವಾರದಲ್ಲಿ ಮುಗಿಸುವ ಸಾಧ್ಯತೆ ಇದೆ.



