ಡಿವಿಜಿ ಸುದ್ದಿ, ಬಾಗಲಕೋಟೆ: ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ರಾಜಾಹುಲಿ ಎಂದು ಕರೆಯುತ್ತಾರೆ. ಆದರೆ, ರಾಜಾಹುಲಿಯನ್ನು ಬಿಜೆಪಿ ಹೈಕಮಾಂಡ್ ಬೋನಿನಿಂದ ಹೊರಬಿಡುತ್ತಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ ವ್ಯಂಗ್ಯವಾಡಿದರು.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ಹಿರಿಯರಿದ್ದಾರೆ. ನನಗೂ ಅವರ ಬಗ್ಗೆ ಗೌರವವಿದೆ. ನಿಜಲಿಂಗಪ್ಪನವರಂತೆ ನಾಲ್ಕು ಬಾರಿ ಸಿಎಂ ಆಗಿದ್ದಾರೆ. ಆದರೆ, ಅವರಿಗೆ ಕೆಲಸ ಮಾಡಲು ಹೈಕಮಾಂಡ್ ಅವಕಾಶ ಕೊಡುತ್ತಿಲ್ಲ ಎಂದರು.
ಬಿಜೆಪಿ ಸರ್ಕಾರದಲ್ಲಿ ಸಂಪುಟ ಪುನಾರಚನೆ ವಿಚಾರ ಕಗ್ಗಂಟಾಗಿದೆ. ಈ ಹಿಂದೆ ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುತ್ತೆ ಅಂತಾ ಮಾತನಾಡುತ್ತಿದ್ದರು. ಆದ್ರೀಗ ಯಡಿಯೂರಪ್ಪ ಹೈಕಮಾಂಡ್ ಆದೇಶಕ್ಕೆ ಕಾಯುವಂತಾಗಿದೆ.ರಾಜ್ಯದ ಜನತೆ ಹಿತ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಬೇಗನೇ ಮಂತ್ರಿಮಂಡಲ ರಚನೆ ಮಾಡಬೇಕು ಎಂದು ಆಗ್ರಹಿಸಿದರು.
ಕೆಳಮನೆ, ಮೇಲ್ಮನೆ ಸೇರಿ 300 ಶಾಸಕರಿದ್ದಾರೆ. ವರ್ಷಕ್ಕೆ ₹ 2 ಕೋಟಿ ಪ್ರದೇಶಾಭಿವೃದ್ಧಿ ನಿಧಿ ಕೊಡಬೇಕು. 2019-20ನೇ ಸಾಲಿನ ಹಣಕಾಸು ವರ್ಷದ 10 ತಿಂಗಳು ಈಗಾಗಲೇ ಕಳೆದಿದೆ. ಹಣಕಾಸು ವರ್ಷ ಮುಗಿಯುವುದಕ್ಕೆ ಎರಡು ತಿಂಗಳು ಬಾಕಿ ಉಳಿದಿದೆ. ಶಾಸಕರ ಪ್ರದೇಶಾಭಿವೃದ್ಧಿ ನಿಧಿ ₹ 2 ಕೋಟಿಯಲ್ಲಿ ₹ 50 ಲಕ್ಷ ಮಾತ್ರ ಕೊಟ್ಟಿದ್ದಾರೆ. ಕೂಡಲೇ ಉಳಿದ ಹಣ ಬಿಡುಗಡೆ ಮಾಡಬೇಕು ಎಂದರು,



