Connect with us

Dvg Suddi-Kannada News

ಹೊಯ್ಸಳರ ರಾಜಧಾನಿ ಹಳೇಬೀಡಿನಲ್ಲಿ ಸಾರ್ಥಕ್ಯ ಕಾಣಲಿದೆ ತರಳಬಾಳು ಹುಣ್ಣಿಮೆ

ಅಂಕಣ

ಹೊಯ್ಸಳರ ರಾಜಧಾನಿ ಹಳೇಬೀಡಿನಲ್ಲಿ ಸಾರ್ಥಕ್ಯ ಕಾಣಲಿದೆ ತರಳಬಾಳು ಹುಣ್ಣಿಮೆ

ಭಾರತೀಯ ಭವ್ಯ ಇತಿಹಾಸದ ಕಾಲಗರ್ಭದಲ್ಲಿ ಶಾಂತಿಕಾರಕ ,ಕ್ರಾಂತಿಕಾರಕ ,ಲೋಕ ಮೆಚ್ಚುವ ಘಟನೆಗಳಿಗೆ ಕಾರಣವಾಗಿದ್ದು 12 ನೇ ಶತಮಾನ . ಈ ಘಟನಾವಳಿಗಳಲ್ಲಿ ಧಾರ್ಮಿಕ, ವೈಚಾರಿಕ, ಸಾಮಾಜಿಕ ಕಾಳಜಿಯ ಅನಿವಾರ್ಯತೆಯ ಸ್ಪಷ್ಟತೆದ್ದು.  ಈ ಸಂದೇಶಗಳ  ಬೀಜಾಂಕುರ ವಾಗಿದ್ದು  ನಮ್ಮ ಕನ್ನಡ ನಾಡಿನ ಮಣ್ಣಿನಿಂದ ಎಂದು ಹೆಮ್ಮೆಯಿಂದ ಎದೆಯುಬ್ಬಿಸಿ ಹೇಳಬಹುದು.

ಸಕಲರಿಗೂ ಲೇಸನ್ನು ಬಯಸಿದ ಅಣ್ಣ ಬಸವಣ್ಣನವರ ಹಿರಿಯ ಸಮಕಾಲೀನರಾದ, ಸಮತೆಯ ತತ್ವದ ಸಮಾನತೆಯ ಸಂಕೇತದ ಮೂಲಪುರುಷರಾಗಿ ವಿಶ್ವಕ್ಕೇ ಬಂಧುವಾದವರು ಮರುಳಸಿದ್ದರು. ನೊಂದಮನಗಳಿಗೆ ಬೆಂದ ಹೃದಯಗಳಿಗೆ ಸಾಂತ್ವನ ನೀಡುವ ಆಶಯದಿಂದ  ಸದ್ದರ್ಮ ಪೀಠವನ್ನು ಸ್ಥಾಪಿಸಿ,ತರಳ-ಬಾಳು ಎನ್ನುವ ಪಂಚಾಕ್ಷರಿ ಮಂತ್ರದ ಮೂಲಕ  ಮನುಕುಲದ ಅಭ್ಯುದಯದ ಸಂದೇಶ ಸಾರಿದ ಸುವರ್ಣಗಳಿಗೆಯ ಶುಭ ದಿನವೇ ತರಳಬಾಳು  ಹುಣ್ಣಿಮೆಯೆಂದು ಸುಪ್ರಸಿದ್ದಿಯಾಗಿದೆ. ಜಾತಿ-ಮತ,ಪಂಥ-ಪಂಗಡಗಳ ಎಲ್ಲೆಯನ್ನು  ಮೀರಿ ನಾಡಿನ ಎಲ್ಲಾ ಧಾರ್ಮಿಕ ಕರ‍್ಯಕ್ರಮಗಳಿಗೆ  ಮಾತೃ ಸ್ವರೂಪದಂತಿರುವ, ಭಾವೈಕ್ಯತಾ ಪರಿಷತ್, ನಡೆದಾಡುವ ವಿಶ್ವವಿದ್ಯಾನಿಲಯ ರೂಪದ    ಜ್ಞಾನ ದಾಸೋಹದ ದಿವ್ಯ ನನಸೇ ತರಳಬಾಳು ಹುಣ್ಣಿಮೆ.

ಮರುಳಸಿದ್ದನ ಇತಿಹಾಸ

ವಚನ ಸಾಹಿತ್ಯದ ಮೂಲಕ ಲೋಕದ ಜನರ ಮನದ ಡೊಂಕನ್ನು ತಿದ್ದುವ ದಿಟ್ಟ ಹೆಜ್ಜೆಯನ್ನಿಟ್ಟ ಶರಣರಿಗೆ ಅಡಿಪಾಯವಾಗಿದ್ದು ಮರುಳಸಿದ್ದನ ಸಮಾನತೆಯ ಸಾಮಾಜಿಕ ಚಳುವಳಿ. ಅಂದಿನ ಸಮಾಜದಲ್ಲಿ ಅಂದಶ್ರದ್ಧೆಗಳನ್ನು ಭಿತ್ತಿ ತಮ್ಮ ಅಸ್ತಿತ್ವದ ಸಾರ್ವಭೌಮತೆಯ ಉತುಂಗದಲ್ಲಿದ್ದ ಪುರೋಹಿತಶಾಹಿ ವ್ಯವಸ್ಥೆಯ ವಿರುದ್ದ  ತೊಡೆ ತಟ್ಟಿ , ಧ್ವನಿ ಎತ್ತಿ ಜನರನ್ನು ಸಂಘಟಿಸಿ ಅಸಮಾನತೆಯ ವಿರುದ್ಧದ ಸಾಮಾಜಿಕ ಚಳುವಳಿಗೆ ಜನರನ್ನು  ಅಣಿಗೊಳಿಸಿದ ಕಾರಣೀಪುರುಷನೇ  ಈ ಮರುಳಸಿದ್ದ.

ಅಸ್ಪೃಶ್ಯ ಕುಲದ, ಕುಚಿಮಾರ- ಸುಪ್ರಭೆ ದಂಪತಿಗಳ ಪುಣ್ಯ ಗರ್ಭದಲ್ಲಿ,  ವಿಜಯನಗರ ಸಾಮ್ರಜ್ಯದ ರಾಜದಾನಿಯಾದ ಹಂಪೆಯ ದಕ್ಷಿಣ ದಿಕ್ಕಿನ ಕೂಗಳತೆಯ  ದೂರದ ಕಗ್ಗಲ್ಲುಪುರದಲ್ಲಿ ಜನಿಸಿದ ಮರುಳಸಿದ್ದ ,ತನ್ನ ತಂದೆ ತಾಯಿಗಳನ್ನು ಕಣ್ಣು ಬಿಡುವ ಮೊದಲೇ ಕಳೆದುಕೊಂಡ .ಈ ಕಾರಣೀಪುರುಷನಿಗೆ ಅನ್ನ ಹಾಕಿ ,ಸಾಕಿ ಸಲುಹಿದವರು ಕಗ್ಗಲ್ಲುಪುರದ ಬಾಚಣ್ಣಗೌಡ. ಗೌಡನ ಮನೆಯ ಮಗನಾಗಿ ಗೋವುಗಳನ್ನು ಕಾಯುವ ಗೋಪಾಲಕನಾಗಿ ಮರುಳಸಿದ್ದ ಬೆಳೆಯುತ್ತಿದ್ದ. ದನ ಕರುಗಳ ನಾಡಿ ಮಿಡಿತವನ್ನು , ಬಾವನೆಗಳನ್ನು ಬಾಂಧವ್ಯದ ಮೂಲಕ ಅಭಿವ್ಯಕ್ತಿಗೊಳಿಸುವ  ಮೂಲಕ ಅವುಗಳ ಪ್ರೀತಿಯ ಒಡೆನಾಡಿಯಾಗಿದ್ದನು, ಈ ಸಂಧರ್ಭದಲ್ಲಿ ತಮ್ಮೂರಿನ ಮಾರಿ ಜಾತ್ರೆಗೆ ಕೋಣವೊಂದು ಬಲಿಕೊಡುವ ವಿಷಯ ತಿಳಿದು ಅವನ ಮನ ಕುದಿಯುತ್ತದೆ,  ಹೃದಯ ಮಿಡಿಯುತ್ತದೆ.ದನ-ಕರುಗಳ ಪ್ರೀತಿಯ ಗೋಪಾಲಕನಾಗಿ ಬೆಳೆದ ಅವನಿಗೆ ಅವುಗಳ ಭಾವನೆಗಳು ಅರ್ಥವಾಗಿರಲೇಬೇಕು. ಕೋಣನ ಬಲಿಯನ್ನು ತಡೆಯುವ ನಿಟ್ಟಿನಲ್ಲಿ  ಏಕಾಂಗಿಯಾಗಿ ಅಲ್ಲಿನ ಪುರೋಹಿತ , ವೈಧಿಕ ಸಂಸ್ಖೃತಿಯನ್ನು ಪ್ರಶ್ನಿಸುತ್ತಾ. ಆದರೆ  ಅಲ್ಲಿನ ಪಟ್ಟಭದ್ರಹಿತಾಸಕ್ತಿಗಳ ಪರವಾದ ವಾತವರಣವಿದ್ದುದರಿಂದ ಮರುಳಸಿದ್ದನ ಹೋರಾಟಕ್ಕೆ ಹಿನ್ನಡೆಯಾಗುತ್ತದೆ. ಈ ಕಾರಣದಿಂದ  ಎದೆಗುಂದದೆ ಆ ಊರನ್ನು ತೊರೆದು,  “ ಜ್ಯೋತಿ ಮುಟ್ಟಿ ತಾ  ಜ್ಯೋತಿಯಾಗುವಂತೆ,ಚಿನ್ಮೂಲಾದ್ರಿಯ ಗುರು  ರೇವಣಸಿದ್ದರ ಸಾಮಿಪ್ಯಧೀಕ್ಷೆಯಿಂದ , ಲೋಕಸೇವಾ ದೀಕ್ಷೆಯನ್ನು ಕೈಗೊಂಡು ವೈಧಿಕ ಪರಂಪರೆಯಲ್ಲಿದ್ದ   ಜನಮಾರಕ ಸಂಸ್ಕೃತಿಯ ವಿರುದ್ದ ಹೋರಾಡಿದ ಕ್ರಾಂತಿಕಾರಕ ಪವಾಡ ಸದೃಶ್ಯವಾದ ನೂರಾರು  ಘಟನೆಗಳನ್ನು ಉದಾಹರಿಸಬಹುದು.

ಉತ್ತರದಿಂದ ಪಶ್ಚಿಮದ ದಿಕ್ಕಿನವರೆಗೆ ಅಗಾದ ಲೋಕಸಂಚಾರ ಮುಗಿಸದ ತರುವಾಯ ತನ್ನ ನಂತರವು  ಅಜ್ಞಾನದ ಕತ್ತಲನ್ನು  ಹೊಡೆದೋಡಿಸುವ ಸಲುವಾಗಿ ತೆಲುಗುಬಾಳಿಗೆ  ಬಂದು ಮೂಕ ಸಿದ್ದಯ್ಯನನ್ನು ವಟುವಾಗಿ ಸ್ವೀಕರಿಸಿ ಮಾತನಾಡುವ ಸಿದ್ದಯ್ಯನನ್ನಾಗಿಸಿ  ಕಗ್ಗಲ್ಲುಪುರದ  ಬಾಚಣ್ಣಗೌಡನಿಂದ  ನವ ಪಾದಗಳ  ಭೂಮಿಯನ್ನು ಪಡೆದು ಆ ಸ್ಥಳವನ್ನು ಉಜ್ಜಯನಿ ಕ್ಷೇತ್ರವನ್ನಾಗಿಸಿ ಅಲ್ಲಿ ಸದ್ದರ್ಮ ಪೀಠವನ್ನು ಸ್ಥಾಪಿಸಿ  ಶ್ರೀ ಪೀಠದಿ  ತೆಲುಗುಬಾಳು ಸಿದ್ದಯ್ಯನನ್ನು ಕೂರಿಸಿ  ತರಳಾ-ಬಾಳು ಎಂದು ಆಶೀರ್ವದಿಸುವ ಮೂಲಕ  ತರಳಬಾಳು ಜಗದ್ಗುರು ಸದ್ದರ್ಮ ಪೀಠದ ಮೂಲ ಜಗದ್ಗುರು ಎನಿಸಿದ್ದಾರೆ. ಅಂದಿನಿಂದ  ಶ್ರೀ ಮದ್ದುಜ್ಜಯನಿ ಸದ್ಧರ್ಮಸಿಂಹಾಸನದ ಸುವರ್ಣ ಶಕೆ ಆರಂಭವಾಗುತ್ತದೆ

 ತರಳಬಾಳು ಹುಣ್ಣಿಮೆ ಮಹೋತ್ಸವ

ಜಾತಿ –ಮತ, ಮೇಲು-ಕೀಳು, ದಲಿತ-ಬಲಿತ ಎಂಬ ಭೇದ  ಭಾವವಿಲ್ಲದೆ ಇವ ನಮ್ಮವ ಇವ ನಮ್ಮವ ಎಂಬ ಅಣ್ಣನ ಆಣತಿಗನುಗುಣವಾಗಿ,ವಿಶ್ವ ಮಾನವತೆಯ ಸಂಧೇಶ ಸಾರುವ ಸತ್ಯ ಸಂಕಲ್ಪವೇ ತರಳಬಾಳು ಹುಣ್ಣಿಮೆ. ಮರುಳಸಿದ್ದನ ತರುವಾಯ ಪೀಠದ ಎಲ್ಲಾ ಶ್ರೀಗಳು ಮೂಲ ಆಶಯದಂತೆ ದಿಟ್ಟ ಹೆಜ್ಜೆಯ ಧೀರಪ್ರಭುಗಳಾಗಿ ಜನಸೇವಾ ಕರ‍್ಯಗಳೇ ತರಳಬಾಳು ಮಠದ  ಹೆಜ್ಜೆಗುರುತುಗಳಾಗಿ ದಾಖಲಾಗಿವೆ. ಈ ಮಹೋತ್ಸವವು ಬದಲಾದ ಸಂಧರ್ಭಕ್ಕನುಗುಣವಾಗಿ ಆಧುನಿಕ ಸ್ಪರ್ಷತೆಯೊಂದಿಗೆ, ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಿ,ಜನಮುಖಿ ಕರ‍್ಯಕ್ರಮವನ್ನಾಗಿಸಿ,ಜನರ ಧ್ವನಿಗೆ ಬಲನೀಡಿ, ಸಮಸ್ಯೆಗಳಿಗೆ ಪರಿಹಾರದ ಸದಾಶಯದ ಸಂದೇಶದ ಮೂಲಕ ಜಗದಗಲ ಹರಡಿಸಿ ,ಅರ್ಥಪರ‍್ಣ ಕರ‍್ಯಕ್ರಮವನ್ನಾಗಿಸಿದವರು ಪ್ರಸ್ತುತ ಜಗದ್ಗುರುರ‍್ಯರಾದ  ಲೋಕಪೂಜನೀಯ  ಶ್ರೀ ಮದುಜ್ಜಯನಿ ಸದ್ದರ್ಮ ಸಿಂಹಾಸನಾಧೀಶ ಶ್ರೀ ಶಿವಮೂರ್ತಿ ಶಿವಾಚಾರ್ಯ ವiಹಾಸ್ವಾಮಿಗಳವರು. ಸಂಕಲ್ಪ ಸನ್ನಿಧಾನದಿಂದ.

ಕಳೆದ  ಏಳು ದಶಕಕ್ಕು ಹೆಚ್ಚು ಕಾಲದಿಂದ ಪ್ರತಿವರ್ಷ ನಾಡಿನ ಒಳ-ಹೊರಗೆ ಯಶಸ್ವಿಯಾಗಿ ಜ್ಞಾನದಾಸೋಹವನ್ನು ನವದಿನಗಳಕಾಲ ಉಣಬಡಿಸುತ್ತಿರುವ ಈ ಸಮಾರಂಭದಲ್ಲಿ ನಾಡಿನ ಹೆಸರಾಂತ, ಧರ್ಮಗುರುಗಳು, ವಿದ್ವಾಂಸರು, ಸಾಹಿತಿಗಳು ಕಲಾವಿದರು, ಜನನಾಯಕರುರಿಗೆ ಧನ್ಯತಾ ಭಾವನೆಯನ್ನು ಮೂಡಿಸಿರುವದೇ ಇದರ ಸಾರ್ಥಕತೆಗೆ  ಸಾಕ್ಷಿ

1950 ನೇ ಇಸವಿಯಿಂದ ಜಗಳೂರಿನಲ್ಲಿ ಪ್ರಾರಂಭವಾದ ಈ ಮಹೋತ್ಸವ  ಅಂದಿನಿAದ ಇಂದಿನವರೆಗೆ  ನೆನಪಿನ ಮಜಲುಗಳನ್ನೆ ಸೃಷ್ಟಿಸಿರುವುದಕ್ಕೆ ಕಾರಣ ಅದರ ಸವಿನೆನಪಿಗಾಗಿ ಕಟ್ಟಿರುವ ಆಸ್ಪತ್ರೆಗಳು, ಕಲ್ಯಾಣ ಮಂಟಪಗಳು, ಶಾಲಾ-ಕಾಲೇಜುಗಳು, ಉಚಿತ ವಿದ್ಯಾರ್ಥಿನಿಲಯಗಳು,ಕುಡಿಯುವ ನೀರಿನ ಪೂರೈಕಾ ಕರ‍್ಯಕ್ರಮಗಳು, ನೀರಾವರಿ ಯೋಜನೆಗಳು,ಕೆರೆ ತುಂಬಿಸಲು ಕೈಗೊಂಡ ಯಶಸ್ವಿ ಕಾರಯಯೋಜನೆಗಳು  ಹೀಗೆ ಹತ್ತು ಹಲವು ಸಮಾಜ ಮುಖಿ ಕೈಂರ‍್ಯಗಳು ತರಳಬಾಳು ಹುಣ್ಣಿಮೆಯ ನಿಮಿತ್ತ ಅನುಷ್ಠಾನಗೊಂಡು ಸಮಾರಂಭದ ಸಾರ್ಥಕತೆಯನ್ನು ಮೆರೆಯುತ್ತಾ ಇವೆ.

ಪ್ರತಿ  ಸುಪ್ರಭಾತದ ಶುಭೋದಯವು ಸರ್ವರ ಬಾಳಿನಲ್ಲಿ ಸುಖಕರವಾಗಿರಲೆಂಬ ಸದಾಶಯದಿ  ನಾಡಿನ ವಿವಿದೆಡೆ ಆಚರಿಸುವ ಈ ಮಹೋತ್ಸವವು ಈ ವರ್ಷ ಹೊಯ್ಸಳ ಸಾಮ್ರಾಜ್ಯದ ರಾಜಧಾನಿ , ನೃತ್ಯರಾಣಿ ಶಾಂತಲಾ ದೇವಿಯ ಆಡಂಬೊಲವಾಗಿದ್ದ ಶಿಲ್ಪಕಲೆಯಲ್ಲಿ ಜಗದ್ವಿಖ್ಯಾತಿ ಪಡೆದಿರುವ ಹಳೇಬಿಡಿನಲ್ಲಿ ನಡೆಯುತ್ತಿರುವುದು, ಹಾಸನ ಜಿಲ್ಲೆಯ ಸೌಭಾಗ್ಯವೇ ಆಗಿದೆ.

68 ವರ್ಷಗಳ ನಂತರ ಹಳೇಬಿಡಿಗೆ ತರಳಬಾಳು ಹುಣ್ಣಿಮೆಯ ಭಾಗ್ಯ : 1951 ರಲ್ಲಿ ಶ್ರೀ ತರಳಬಾಳು ಜಗದ್ಗುರು ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ನೇತೃತ್ವದಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವವು ನಡೆದಿತ್ತು. 2017 ರ ಜಗಳೂರಿನಲ್ಲಿ ನಡೆದ ಹುಣ್ಣಿಮೆ ಮಹೋತ್ಸವದ ಒಂಭತ್ತನೆಯ ದಿನದ ಆಶೀರ್ವಚನದಲ್ಲಿ ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು 2018 ರ ಫೆಬ್ರವರಿಯಲ್ಲಿ ತರಳಬಾಳು ಹುಣ್ಣಿಮೆಯನ್ನು ಹಳೇಬೀಡಿನಲ್ಲಿ ಆಚರಿಸುವುದಾಗಿ ಘೋಷಿಸಿದಾಗ, ಲಕ್ಷಾಂತರ ಭಕ್ತರು ಹರ್ಷದಿಂದ ಸ್ವಾಗತಿಸಿದ್ದರು

.

ಆ ಸಮಯದಲ್ಲಿ ಈ ಭಾಗದಲ್ಲಿ  ಉದ್ಭವಿಸಿದ ಭೀಕರ ಬರಗಾಲದ ಛಾಯೆಯು, ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೂ ಪರಿತಪಿಸುವ ಸಂಧರ್ಭ ಮನಗಂಡ ಪೂಜನೀಯ ಶ್ರೀ ತರಳಬಾಳು ಜಗದ್ಗುರುಗಳವರು ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ಮೂಂದೂಡಿ ಸಿರಿಗೆರೆಯಲ್ಲಿ ಸರಳವಾಗಿ ಆಚರಿಸಿರುವುದು ಸರ್ವವಿಧಿತ ಸಂಗತಿ. ಕಳೆದ ಅನೇಕ ವರ್ಷಗಳಿಂದ ಈ ಭಾಗದ ರೈತಪರ ಯೋಜನೆಯಾದ ರಣಘಟ್ಟ ನೀರಾವರಿ ಯೋಜನೆಯು ನೆನೆಗುದಿಗೆ ಬಿದ್ದಿರುವುದನ್ನು ಗಮನಿಸಿದ ಶ್ರೀ ಜಗದ್ಗುರುಗಳು ಹಳೇಬೀಡು ಕೆರೆಗೆ ನೀರು ತುಂಬಿಸಿದ ನಂತರವೇ , ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ಆಚರಿಸಬೇಕೆಂದು ನಿರ್ಧರಿಸಿ, ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಕರ್ನಾಟಕ ಸರ್ಕಾರದ ಮೇಲೆ ಒತ್ತಡ ತಂದು ತಾತ್ವಿಕ ಒಪ್ಪಿಗೆ ಪಡೆದು, ಶ್ರೀ ಜಗದ್ಗುರುಗಳ ಸೂಚನೆಯಂತೆ ಆರಂಭಿಕ ಹಂತವಾಗಿ 120 ಕೋಟಿ ರೂ.ಗಳನ್ನು ಬಿಡುಗಡೆಗೆ ಮಂಜೂರಾತಿ ನೀಡಿರುವುದು. ಈ ಭಾಗದ ದಶಕಗಳ ಬಿಡುಗಡೆಗೆ ಮುಕ್ತಿ ಸಿಕ್ಕಿರುವುದಕ್ಕೆ ಕಾರಣರಾದ ಶ್ರೀ ತರಳಬಾಳು ಜಗದ್ಗುರುಗಳವರಿಗೆ ಭಕ್ತಿ ಅರ್ಪಣೆಯನ್ನು ತರಳಬಾಳು ಹುಣ್ಣಿಮೆ ಮಹೋತ್ಸವದ  ಮೂಲಕ ಸಲ್ಲಿಸಲು ಈ ಭಾಗದ ಜನತೆ ಅಪಾರ ಸಂತೋಷದಿಂದ ಸಮಾರಂಭವನ್ನು ಎದರು ನೋಡುತ್ತಿದ್ದಾರೆ.

ಈ ವರ್ಷ ಶ್ರೀಗುರುಗಳ ಸಂಕಲ್ಪ ಮತ್ತು ದೈವ ಕೃಪೆಯಿಂದ ಮಳೆಬಂದು ಹಳೇಬೀಡಿನ ಕೆರೆಯೂ ತುಂಬಿದ್ದು ಶಿಲ್ಪಕಲೆಯ ಬೀಡಾದ ಹಳೇಬಿಡಿನಲ್ಲಿ ಫೆಬ್ರವರಿ 1 ರಿಂದ 9ರವರೆಗೆ ಸರ್ವಧರ್ಮ ಸಮನವಯತೆಯಬಾವೈಕ್ಯತೆಯಬೆಸುಗೆಯೊಂದಿಗೆ, ವಿಶ್ವಪೂಜ್ಯಶ್ರೀ ಮದುಜ್ಜಯನಿ ಸದ್ದರ್ಮ ಸಿಂಹಾಸನಾಧೀಶ  ಶ್ರೀ ತರಳಬಾಳು ಜಗದ್ಗುರು 1108 ಡಾ|| ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಕರಣಧಾರತ್ವದಿ, ಹಳೇಬೀಡಿನ ಹೊರವಲಯದಲ್ಲಿರುವ ಮಾಯಗೊಂಡನಹಳ್ಳಿ ಹೆಲಿಪ್ಯಾಡ್ ವಿಶಾಲ  ಪ್ರದೇಶದಲ್ಲಿ   ಅತ್ಯಾಕರ್ಷಕವಾಗಿ  ನಿರ್ಮಾಣವಾಗುತ್ತಿರುವ ಮಹಾಮಂಟಪದಲ್ಲಿ ನಡೆಯಲಿದೆ.

ಒಂದು ಕೋಟಿಗೂ ಅಧಿಕ ವಾಗ್ದಾನ: ತರಳಬಾಳು ಗುರುಪರಂಪರಯಲ್ಲಿ ಸಾಗಿಬಂದ ಗುರುರ‍್ಯರೆಲ್ಲಾ ಭಕ್ತಿ ಕಾಣಿಕೆಯನ್ನು ಎಂದೂ ಕೇಳಿ ಪಡೆದಿಲ್ಲ. ಆದರೆ ಶ್ರೀಮಠದ  ಸದ್ಭಕ್ತ ಶಿಷ್ಯಬಂಧುಗಳು ಕೇಳಿಸಿಕೊಳ್ಳದೇ ಕೊಡುವ ಉದಾರಿಗಳಾಗಿದ್ದಾರೆ. ಮೊದಲ ಭಾರಿ ಮುಖ್ಯಮಂತ್ರಿಗಳಾಗಿ ಶ್ರೀ ಬಿ.ಎಸ್.ಯಡಿಯೂರಪ್ಪನವರು ಬಜೆಟ್ ಮಂಡನೆಯ ಪೂರ್ವದ ಸಮಯದಲ್ಲಿ ಶ್ರೀ ಜಗದ್ಗುರುಗಳವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಶ್ರೀ ಮಠಕ್ಕೆ ೨೫.೦೦ ಕೋಟಿ ರೂಗಳನ್ನು ನೀಡುವುದಾಗಿ ತಿಳಿಸಿ ಇದಕ್ಕೆ ತಾವು ಅನುಮತಿಸಬೇಕೆಂದು ವಿನಂತಿಸಿಕೊAಡಾಗ, ಸರ್ಕಾರದ ಹಣವನ್ನು ಯಾವ ಮಠಗಳಿಗೂ ಕೊಡುವ ಕೆಟ್ಟ ಸಂಪ್ರದಾಯವನ್ನು ನೀವು ಅನುಸರಿಸಬಾರದು, ಮಠಕ್ಕೆ ಕೊಡಲು ಭಕ್ತರಿದ್ದಾರೆ ಮಠ ಹೇಳಿದ ಸಾರ್ವಜನಿಕ ಕರ‍್ಯಕ್ರಮಗಳಿಗೆ ನಿಮ್ಮ ಹಣ ಉಪಯೋಗವಾಗಬೇಕು ಎಂದು ಎಚ್ಚರಿಸಿ, ನಿರಾಕರಿಸಿದ ಈಗಿನ ಶ್ರೀತರಳಬಾಳು ಜಗದ್ಗುರುಗಳು, ಅನುದಾನಕ್ಕೆ ಮಂತ್ರಿಮಹೋಧಯರ ಮನೆಗಳಿಗೆ ಎಡತಾಕಿ, ಅಭೆ ಸಮಾರಂಭಗಳಿಗೆ ಬಹಿರಂಗವಾಗಿ ಮಠಗಳಿಗೆ ಹಣ ಕೊಡುವಂತೆ ಕೇಳಿ,ತಮ್ಮ ಸ್ಥಾನ ಗೌರವಕ್ಕೆ ಚ್ಯುತಿ ಬರುವಂತೆ ನಡೆದುಕೊಳ್ಳುವ ಅನೇಕ ಮಠಾಧೀಪತಿಗಳಿಗೆ ಆದರ್ಶರಾಗಿದ್ದಾರೆ.

ಈಚೆಗೆ ನಡೆದ ಹುಣ್ಣಿಮೆಯ ಪೂರ್ವಭಾವಿ ಸಭೆಯಲ್ಲಿ ಹುಣ್ಣಿಮೆಯ ಯಶಸ್ಸಿಗೆ ಭಕ್ತರು ನಾಮುಂದು ತಾಮುಂದು ಎಂದು ಧನ ಸಹಾಯದ ವಾಗ್ದಾನ ಮಾಡಿದರು. ಕೆಲವರು ೧೦ ಲಕ್ಷಕ್ಕೂ ಅಧಿಕ ಹಣವನ್ನು ತರಳಬಾಳು ಹುಣ್ಣಿಮೆ ನಿಧಿಗೆ ನೀಡುವುದಾಗಿ ಒಪ್ಪಿಕೊಂಡರು. ಸಭೆಯಲ್ಲೇ ಒಟ್ಟು ೧ ಕೋಟಿ ರೂಪಾಯಿಗೂ ಹೆಚ್ಚು ನಿಧಿ ನೀಡುವ ವಾಗ್ದಾನ ಮಾಡಿರುವುದು ಭಕ್ತರು ತರಳಬಾಳು ಗುರುಪರಂಪರೆಯ ಮೇಲಿಟ್ಟಿರುವ ಭಕ್ತಿಯ ನಂಬಿಕೆಯ ದ್ಯೋತಕವಾಗಿದೆ. ತರಳಬಾಳು ಮಠದ ಕೀರ್ತಿಯನ್ನು ವಿಶ್ವದೆತ್ತರಕ್ಕೆ ಪಸರಿಸಿದ  ಡಾ|| ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.

ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠವನ್ನು ವಿಶ್ವ ವ್ಯಾಪಿಯನ್ನಾಗಿಸಿದ ಭಕ್ತಿಕೀರ್ತಿಯು ಪೂಜ್ಯ ಶ್ರೀ ತರಳಬಾಳು ಜಗದ್ಗುರು ೧೧೦೮  ಡಾ|| ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರಿಗೆ  ಸಲ್ಲುತ್ತದೆ.  ಕನ್ನಡ ನಾಡಿನ ರೈತ ಮೆಚ್ಚಿದ ಗುರು ಎಂದೇ ಸುಪ್ರಿದ್ದರಾಗಿದ್ದಾರೆ.

                       “ಗಗನಂ ಗಗನಾಕಾರಂ, ಸಾಗರಂ ಸಾಗರೋಪಮಃ|

                       ರಾಮರಾವಣಯೋರ್ಯುದ್ಧಂ ರಾಮರಾವಣಯೋರಿವ”-

                       ಆಕಾಶ, ಆಕಾಶದ ಹಾಗೆ,ಸಮುದ್ರ ಸಮುದ್ರದ ಹಾಗೆ,

                      ರಾಮ-ರಾವಣರ ಯುದ್ಧ, ರಾಮ-ರಾವಣರ ಯುದ್ಧದ ಹಾಗೆ-

      ಎಂದು ಹೇಳುವ ಹಾಗೆ ಡಾ||ಶ್ರೀ ಶಿವಮೂರ್ತಿ ಶ್ರೀಗಳು ಹೇಗೆ ಎಂದು ಕೇಳಿದರೆ  ಡಾ|| ಶಿವಮೂರ್ತಿಶ್ರೀಗಳು  ಹಾಗೆಯೆ ಎಂದು ಹೇಳಬೇಕು ಅಷ್ಟೆ.  ಅವರನ್ನು “ಅವರ ಹಾಗೆ, ಇವರ ಹಾಗೆ” ಎಂದೂ ಹೋಲಿಸಿ ಹೇಳುವದಕ್ಕೆ ಸಾಧ್ಯವಾಗುವುದಿಲ್ಲ ಶ್ರೀಗಳ ಸಮಾಜ ಜೀವನ, ವಿದ್ವತ್ತು, ವ್ಯಕ್ತಿತ್ವ, ಲೋಕಮುಖಿ ಸಾಧನೆಗೆ ಪರ್ಯಾಯ ಹೋಲಿಕೆ ಇಲ್ಲವೇ ಇಲ್ಲ !!

12ನೇ ಶತಮನದ ಶರಣರ ಹಿರಿಯ ಸಮಕಾಲೀನರಾದ ಶ್ರೀ ವಿಶ್ವಬಂಧು ಮರುಳಸಿದ್ಧರಾದಿ ಬಳಿವಿಡಿದು ಯುಗ ಪುರುಷ ಕ್ರಾಂತಿಕಾರಿ ಬಸವಣ್ಣನವರ ತತ್ವಾದರ್ಶಗಳ ಆಶಯದಂತೆ ವೈಚಾರಿಕತೆ ಮತ್ತು “ಕಾಯಕವೇ ಕೈಲಾಸ”ದ ಹಾದಿಯಲ್ಲಿ ಶೈಕ್ಷಣಿಕ, ಸಾಮಾಜಿಕ, ಹಾಗೂ ಧಾರ್ಮಿಕ ದಾಸೋಹಿಯಾಗಿ ಜಾತ್ಯಾತೀಥ, ಧರ್ಮಾತೀಥ, ಪಕ್ಷಾತೀಥರಾಗಿ ಅಕ್ಷರ ಅನ್ನ ಅಸರೆಯ ಸಕಾರರೂಪಿಯಾಗಿ, ಸಾಂದರ್ಭಿಕ್ಕನುಗುಣವಾಗಿ ಜನಪರ ಕಾರ್ಯಗಳಲ್ಲಿ  ಡಾ||ಶ್ರೀ ಶಿವಮೂರ್ತಿ ಶಿವಾಚಾರ್ಯ ಶ್ರೀಗಳವರ ದಿಟ್ಟ ಹೆಜ್ಜೆ ತೆಗೆದುಕೊಂಡ ನಿಲುವುಗಳು ಎಂದಿಗೂ ಪ್ರಶ್ನಾತೀತ. ತರಳ-ಬಾಳು  ಪಂಚಾಕ್ಷರಿ ಮಂತ್ರದಂತೆ ಮನುಕುಲದ ಉನ್ನತಿಯೇ ತರಳಬಾಳು ಮಠದ ಸಂವಿಧಾನ ೯ ಶತಮಾನಗಳ ಭವ್ಯ ಇತಿಹಾಸ ಹೊಂದಿ ಜನಪರ ನಿಲುವುಗಳಿಂದ ದೇಶ-ವಿದೇಶಗಳಲ್ಲಿ ಅಸಂಖ್ಯಾ ಭಕ್ತ ಸಮುದಾಯ ಹೊಂದಿರುವ ತರಳಬಾಳು ಜಗದ್ಗುರು ಬೃಹನ್ಮಠಕ್ಕೆ ೨೧ನೇಯ ಪೀಠಾಧಿಪತಿಗಳಾಗಿ ಕಳೆದ ೪ ದಶಕಗಳಿಂದಲೂ ಸರ್ವರ ಹಿತ ಕಾಯುತ್ತಿರುವ ಶ್ರೀಗಳ ಕರ್ತವ್ಯದ ಕಾಣಿಕೆ ಅನನ್ಯವಾದುದು.

ಭಕ್ತರ ಹೃದಯ ಸಿಂಹಾಸನಧಿ ಶಾಶ್ವತ ವಿರಾಜಮಾನರಾಗಿ ಶ್ರೀ ತರಳಬಾಳು ಮಠದ ಸುವರ್ಣ ಇತಿಹಾಸದ ಕಳಶಪ್ರಾಯದಂತೆ ಬಿದ್ದ ಸಮಾಜವನ್ನು ಎದ್ದು ನಿಲ್ಲಿಸಿದ ಕೀರ್ತಿ ಪ್ರಾಯರಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಪೀಠಕ್ಕೆ ಮತ್ತು ಸಮಾಜಕ್ಕೆ ನೀಡಿದ ಬಹುದೊಡ್ಡ ಕೊಡುಗೆ ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರನ್ನ ೧೯೭೯ ಫೆಬ್ರವರಿ ೧೧ ರಂದು ಪಟ್ಟಾಭಿಷಿಕ್ತರನ್ನಾಗಿಸಿ ಸಮಾಜ ಸೇವೆಯ ದೀಕ್ಷೆಯನ್ನು ಕರುಣಿಸಿದ್ದು.ಶ್ರೀ ಮಠದ ಸಮಾಜದ ಬಹುದೊಡ್ಡ ಜವಬ್ದಾರಿಯನ್ನು ವಹಿಸಿಕೊಂಡು ಮಠದ ಸಮಾಜದ ಕಾರ್ಯಗಳಿಗೆ ಅರ್ಥಪೂರ್ಣ ಆಧುನಿಕ ಲೇಪನದೊಂದಿಗೆ ಶ್ರೀಗಳು ಸಾಗುವ ಜೊತೆಯಲ್ಲಿಯೇ ಮಠದ ಬಿಡುವಿಲ್ಲದ ಕಾರ್ಯಗಳು ೨೫೦ಕ್ಕೂ ಹೆಚ್ಚೂ ಶಿಕ್ಷಣ ಸಂಸ್ಥೆಗಳ ನಿರ್ವಹಣೆ ಭಕ್ತರ ಹಾಗೂ ಗಣ್ಯರ ಬಿಡುವಿಲ್ಲದ ಭೇಟಿ, ರಾಜ್ಯ ದೇಶ ಹಾಗೂ ವಿದೇಶಗಳಲ್ಲಿ ಅಸಂಖ್ಯಾ ಕಾರ್ಯಕ್ರಮಗಳಲ್ಲಿ ಸಾನಿಧ್ಯವಹಿಸುವುದು ಮಠದ ಆರ್ಥಿಕ ಪರಿಸ್ಥಿತಿಯನ್ನು ಸೋರಿಕೆಯಾಗದಂತೆ ಶಿಸ್ತಿನ ಉತ್ಕೃಷ್ಠತೆಗೆ ತಂದಿದ್ದು ವಿದ್ಯಾರ್ಥಿ ನಿಲಯಗಳ ಸಮರ್ಪಕ ನಿರ್ವಹಣಾ ಕೌಶಲ್ಯ, ಗ್ರಾಮೀಣ ಪ್ರದೇಶದಲ್ಲಿದ್ದ ಶ್ರೀ ತರಳಬಾಳು ವಿದ್ಯಾ ಸಂಸ್ಥೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಆಧುನಿಕತೆಯ ಸೌಲಭ್ಯಗಳನ್ನು ನೀಡಿ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಹಗಲಿರುಳು ದಣಿವರಿಯದೆ ಕಾರ್ಯನಿರ್ವಹಿಸುತ್ತಿರುವುದು ದೂರದರ್ಶಿತ್ವಕ್ಕೆ ಹಿಡಿದ ಕೈಗನ್ನಡಿ.

ಅಂತರಾಷ್ಟ್ರೀಯ ಧಾರ್ಮಿಕ ವಿಚಾರ ಸಂಕೀರ್ಣಗಳಲ್ಲಿ 

ನೂರಾರು ದೇಶಗಳ ಅಂತರಾಷ್ಟ್ರೀಯ ಧಾರ್ಮಿಕ ವಿಚಾರ ಸಂಕೀರ್ಣಗಳಲ್ಲಿ ಭಾರತ ದೇಶದ ಧಾರ್ಮಿಕ ಪ್ರತಿನಿಧಿಯಾಗಿ ವಿದೇಶಗಳ ಸಂಘ ಸಂಸ್ಥೆಗಳ ಅಸಂಖ್ಯಾ ಧಾರ್ಮಿಕ,ವೈಚಾರಿಕ,ಶೈಕ್ಷಣಿಕ ಮತ್ತು ಅಂತರಾಷ್ಟ್ರೀಯ ಜ್ವಲಂತ ಸಮಸ್ಯೆಗಳ ಸಂಕೀರ್ಣಗಳಲ್ಲಿ ನೇತೃತ್ವವಹಿಸಿ ಭಾರತ ದೇಶದ ಹೆಮ್ಮೆಯ ಪುತ್ರರೆನಿಸಿ ತಮ್ಮ ವಿದ್ವತ್ಪೂರ್ಣ ಸಂದೇಶಗಳನ್ನು ವಿಶ್ವಕ್ಕೆ ಸಾರಿ ವಿಶ್ವಕ್ಕೆ ‘ಶಾಂತಿಧೂತ’ರೆನಿಸಿದ್ದಾರೆ.

ರೈತ ಮೆಚ್ಚಿದ ತರಳಬಾಳು ಶ್ರೀಗಳು 

ನಾಡಿನ ಅನ್ನದಾತನ ಮೇಲೆ ಅಪಾರ ಮಮತೆ ಮತ್ತು ವಾತ್ಸಲ್ಯವುಳ್ಳ ಶ್ರೀಗಳು ರೈತ ಸಂಕಷ್ಟದಿ ಸಿಲುಕಿ ಆತ್ಮಹತ್ಯೆಯ ಹಾದಿ ಹಿಡಿದಾಗ ಆತ್ಮಸ್ಥೈರ್ಯವನ್ನು ತುಂಬಿ ರೈತಪರ ಯೋಜನೆಗಳ ಆಧುನಿಕ ಭಗೀರಥರೆಸಿದ್ದಾರೆ.

ಉಬ್ರಾಣಿ ಏತ ನೀರಾವರಿ ಯೋಜನೆಯ ಭಗೀರಥ 

ಒಣಗಿ ನಿಂತ ಅಡಿಕೆ ಮರಗಳ ಸಾಲು ತೋಟವನ್ನು ಉಳಿಸಿಕೊಳ್ಳಲು ವ್ಯರ್ಥ ಪ್ರಯತ್ನದ 800 ರಿಂದ 1000 ಅಡಿಗಳ ವರೆಗೂ ಕೊಳವೆ ಬಾವಿ ಕೊರೆಸಿದರೂ ದೊರಕದ ಗಂಗೆ ಇಂತಹ ವಿಷಮ ಪರಿಸ್ಥಿತಿ ಚನ್ನಗಿರಿ ತಾಲೂಕಿನ ೪೮ ಹಳ್ಳಿಗರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ತಾಲೂಕಿನ ಅಮೃತಾಪುರ ಹೋಬಳಿಯ 29 ಹಳ್ಳಿಗಳ ರೈತರ ಬವಣೆಯಾಗಿತ್ತು. ಈ ವಿಷಯ ಶ್ರೀಗಳವರ ಗಮನಕ್ಕೆ ಬಂದಿದ್ದೆ ಶ್ರೀಗಳವರೇ ಸ್ಪಷ್ಟ ಯೋಜನೆಯೊಂದನು ನಿರ್ಮಿಸಿ ಸರ್ಕಾರದಿಂದ ನೈರಾರಯ ಕೋಟಿಗಳ ಅನುದಾನ ತಂದು ಯೋಜನೆಯು ಅನುಷ್ಠನಗೊಳ್ಳಲು ಇದ್ದ  ಎಲ್ಲ ಆಡಳಿತಾತ್ಮಕ ಮತ್ತಯ ತಾಂತ್ರಿಕ ಅಡೆ ತಡೆಗಳಿಗೆ ಸಲಹೆ ಸೂಚನೆ ನೀಡಿ ಚನ್ನಗಿರಿ ತಾಲೂಕಿನ ೮೯ ಕೆರೆಗಳಿಗೆ ತರಿಕೆರೆ ತಾಲೂಕಿನ 57 ಕೆರೆಗಳಿಗೆ ಭದ್ರೆಯನ್ನು ಹರಿಸಿದ 2013ರಲ್ಲಿ ಯೋಜನೆಯ ಸಂಪೂರ್ಣ ಕಾಮಗಾರಿ ಯಶಸ್ವಿಯಾಗಿ ಪೂರ್ಣಗೊಂಡು ರೈತರ ಮೊಗದಲ್ಲಿ ಸಂತಸದ ಹೊನಲು ಹರಿಸಿದ ಆಧುನಿಕ ಭಗೀರಥರೆನಿಸಿದ್ದಾರೆ.

ಜಗಳೂರು – ಭರದ ನಾಡಿನ ಕೆರೆಗಳಿಗೆ ನೀರು ತುಂಬಿಸಿದ ಭಗೀರಥ ತರಳಬಾಳು ಶ್ರೀ

ಆಡಳಿತ ನಡೆಸಿದ ಎಲ್ಲ ಪಕ್ಷಗಳ ಶಾಸಕರು ಹಾಗೂ ಇಚ್ಛಾಶಕ್ತಿಯ ಕೊರತೆಯ ಅಧಿಕಾರಿಗಳ ಪರಿಣಾಮವೇ ಶಾಶ್ವತ ಭೀಕರ ಬರ ಪೀಡಿತ ತಾಲೂಕು ಎಂಬ ಹಣೆ ಪಟ್ಟಿಯ ಜೊತೆಗೆ ಹಿಂದುಳಿ ತಾಲೂಕೆಂಬ ಅಪಖ್ಯಾತಿ ಹೊತ್ತಿದ್ದು ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕು. ಈ ಭಾಗದ ರೈತರ ಶೋಚನೀಯ ಪರಿಸ್ಥಿತಿಯನ್ನು ಮನಗಂಡು “ಕಾಯಕವೇ ಕೈಲಾಸ – ಕರ್ತವ್ಯದ ಉದ್ಧೇಶ ಎನ್ನುವ ಬಸವಣ್ಣನವರ ಅಣತಿಯಂತೆ ಕಾಯಕ ಜ್ಯೋತಿಯಾಗಿ ಜಗಳೂರು ತಾಲೂಕಿನ ೪೬ ಕರೆಗಳನ್ನು ತುಂಬಿಸುವ ರೂ.1000 ಕೋಟಿಗಳ ಬೃಹತ್ ಯೋಜನೆಯನ್ನು ರೂಪಿಸಿ ಎಲ್ಲಾ ಸಮಸ್ಯೆಗಳಿಗೆ ಪರಿಹಾರದ ಸೂತ್ರ ನೀಡಿ ಈ ಯೋಜನೆಗೆ  ಸರ್ಕಾರದಿಂದ ಮಂಜೂರಾತಿ ಪಡೆಯುವ ಮೂಲಕ ಬರದ ನಾಡಿಗೆ ಬರ ಬಾರದೇ ಮಳೆ ಮಾತ್ರ ಬರಲಿ ಎಂಬ ಶ್ರೀಗಳ ಸಂಕಲ್ಪದಂತೆ ಈಗಾಗಲೇ 20ಕ್ಕಿಂತ ಹೆಚ್ಚು ಕೆರೆಗಳು ಜಲಪೂರ್ಣಗೊಂಡು, ಮುಂದುವರಿದ ಭಾಗವಾಗಿ 52ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸುವ ಕಾರ್ಯ ಪ್ರಗತಿಯಲ್ಲಿರುವುದು ಶ್ರೀಗಳಿಗೆ ರೈತನ ಮೇಲೆ ಇರುವ ಕಾಳಜಿ ದ್ಯೋತಕವಾಗಿದೆ.

ಸಿರಿಗೆರೆ-ಭರಮಸಾಗರ ಏತನೀರಾವರಿ ಯೋಜನೆ

ಕಳೆದ 12 ವರ್ಷಗಳಿಂದ ಬರದ ಸಮಸ್ಯೆ ಎದುರಿಸುತ್ತಿದ್ದ ಈ ಭಾಗದ ರೈತರ ಬವಣೆಗೆ ಬೆಂಬಲದ ಧ್ವನಿಯಾಗಿ  ನೇತೃತ್ವವಹಿಸಿದ್ದು ಡಾ||ಶಿವಮೂರ್ತಿ ಶ್ರೀಗಳವರು ತುಂಗಭದ್ರಾ ನದಿಯಿಂದ ಏತ ನೀರಾವರಿಯ ಮೂಲಕ ನೀರು ತುಂಬಿಸುವ ಈ ಯೀಜನೆಯನ್ನು ಶ್ರೀಗಳೇ ರೂಪಿಸಿ ಸರ್ಕಾರದ  ಅನುದಾನ ಪಡೆಯುವಲ್ಲಿ ಸಫಲರಾಗಿ 2017ರಲ್ಲಿಯೇ ಯೋಜನೆ ಪ್ರಾರಂಭವಾಗಲು ಪ್ರೇರಣೆಯಾಗುವುದರ ಜೊತೆ ತಾಂತ್ರಿಕ ಸಮಸ್ಯೆಗಳಿಗೆ ಸ್ಫಷ್ಟ ಸಲಹೆಗಳನ್ನು ನೀಡಿ ಯೋಜನೆಯ ಪರಿಶೀಲನೆಯಲ್ಲಿ ಮಗ್ನರಾಗಿರುವುದಲ್ಲೆ ಸರ್ಕಾರದಿಂದ ೫೨೫ ಕೋಟಿ ಹಣ ಬಿಡುಗಡೆಯಾಗಿದ್ದು, ಭರಮಸಾಗರ ಸಿರಿಗೆರೆ ವ್ಯಾಪ್ತಿಯ ೪೧ ಕೆರೆಗಳನ್ನು  ಕೆರೆ ತುಂಬಿಸುವ  ಕಾಮಗಾರಿ ಭರದಿಂದ ಸಾಗುತ್ತಿದೆ ಇದು  ಶ್ರೀಗಳ ರೈತಮುಖಿ ಕಾರ್ಯಕ್ಕೆ ಮತ್ತೊಂದು ಉದಾಹರಣೆ.

ಮಲ್ಲಶೆಟ್ಟಿಹಳ್ಳಿ ನೂತನ ಕೆರೆ ನಿರ್ಮಿಸಿದ ಜಲಋಷಿ

22 ಕೆರೆಗಳ ಏತ ನೀರಾವರಿ ಯೋಜನೆ ಪೂರ್ಣಗೊಂಡರೂ ಸಮಮರ್ಪಕವಾಗಿ ಕೆರೆಗಳಿಗೆ ನೀರು ಹರಿದುಬರುತ್ತಿರಲಿಲ್ಲ. ಇದರಿಂದ ಈ ಯೋಜನೆ ವಿಫಲವಾಗಿದೆ ಎನ್ನುವ ಸ್ಥಿತಿಗೆ ಬಂದಿತ್ತು. ಆಗ  ಶ್ರೀಗಳು ನೀರಾವರಿ ನಿಗಮದ ಉನ್ನತ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಬ್ಯಾರೇಜ್ ಮತ್ತು ಹೊಸ ಕೆರೆ ನಿರ್ಮಾಣಕ್ಕೆ ಸರ್ಕಾರದಿಂದ ಹಣವನ್ನು ಮಂಜೂರು ಮಾಡಿಸಿದರು. ೨೨ ಕೆರೆಗಳ ಏತ ನೀರಾವರಿ ಯೋಜನೆ ಪೂರ್ಣಗೊಂಡರೂ ಸಮಮರ್ಪಕವಾಗಿ ಕೆರೆಗಳಿಗೆ ನೀರು ಹರಿದುಬರುತ್ತಿರಲಿಲ್ಲ. ಇದರಿಂದ ಈ ಯೋಜನೆ ವಿಫಲವಾಗಿದೆ ಎನ್ನುವ ಸ್ಥಿತಿಗೆ ಬಂದಿತ್ತು.  ಶ್ರೀಗಳು ನೀರಾವರಿ ನಿಗಮದ ಉನ್ನತ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಬ್ಯಾರೇಜ್ ಮತ್ತು ಹೊಸ ಕೆರೆ ನಿರ್ಮಾಣಕ್ಕೆ ಸರ್ಕಾರದಿಂದ ಹಣವನ್ನು ಮಂಜೂರು ಮಾಡಿಸಿದ್ದರು. ರಾಜನಹಳ್ಳಿ ಜಾಕ್ವೆಲ್ 1ಕ್ಕೆ ತುಂಗಭದ್ರಾ ನದಿಯಿಂದ ನೀರು ಕೆಳಗಿನಿಂದ ಮೇಲೆ ಹರಿಯಲು ಸಾಧ್ಯವಾಗುವಂತೆ ೧೫ ಕೋಟಿ ರೂ.ಗಳ ವೆಚ್ಚದಲ್ಲಿ ಬ್ಯಾರೇಜ್ ನಿರ್ಮಾಣ ಮಾಡಲು ಚುನಾವಣಾ ನೀತಿ ಸಂಹಿತೆಯ ಎರಡು ದಿನಗಳ ವೊದಲು ಕಾಮಗಾರಿ ಆರಂಭವಾಗಿದೆ. ಜಾಕ್ವೆಲ್ 1 ನದಿ ಪಾತ್ರದಿಂದ ಎತ್ತರದಲ್ಲಿರುವುದರಿಂದ ಜಾಕ್ವೆಲ್ಗೆ ನೀರು ಹರಿದು ಹೋಗಲು ಸಾಧ್ಯವಾಗುತ್ತಿರಲಿಲ್ಲ. ಬ್ಯಾರೇಜ್ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಶೀಘ್ರದಲ್ಲೇ ನದಿಯ ನೀರು ಸರಾಗವಾಗಿ ಜಾಕ್ವೆಲ್ಗೆ ಹರಿದುಬರಲಿದೆ. ಮಲ್ಲಶೆಟ್ಟಿಹಳ್ಳಿ ಬಳಿ ಹೊಸಕೆರೆ ನಿರ್ಮಾಣ ಕಾರ್ಯ ೧೬ ಎಕರೆ ಪ್ರದೇಶದಲ್ಲಿ ಆರಂಭಗೊಂಡಿದ್ದು, ಮಳೆಗಾಲದೊಳಗೆ ನಿರ್ಮಾಣ ಮುಗಿಯಲಿದ್ದು, ಮಳೆಗಾಲದಲ್ಲಿ ಕೆರೆಗೆ ನೀರು ಹೆಚ್ಚು ಸಂಗ್ರಹವಾದರೆ ೨೨ ಕೆರೆಗಳಿಗೆ ನೀರು ಸಮರ್ಪಕವಾಗಿ ಹರಿದುಬರಲಿದೆ. ಕಳೆದ ಬಾರಿ ಜಗಳೂರಿನಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಜನಪ್ರತಿನಿಧಿಗಳು ನೀಡಿದ ಭರವಸೆಯಂತೆ ಈಗ ಜಗಳೂರು ಏತನೀರಾವರಿ ಯೋಜನೆ ಮತ್ತು ಭರಮಸಾಗರ ಏತನೀರಾವರಿ ಯೋಜನೆಗೆ ಮಂಜೂರಾತಿ ದೊರೆತಿದ್ದು, 1,200 ಕೋಟಿ ರೂ. ಬಿಡುಗಡೆಯಾಗಿದೆ.

ಶ್ರೀ ತರಳಬಾಳು ಜಗದ್ಗುರು ವನ ಸಂವರ್ಧನಾ ಸಮಿತಿ 

ಸೃಷ್ಟಿಕರ್ತ  ನರ‍್ಮಿಸಿದ ಈ ಸೃಷ್ಟಿಯಲ್ಲಿ ಪರಿಸರವನ್ನು ಸ್ವಚ್ಛವಾಗಿ ಕಪಾಡಿಕೊಳ್ಳಬೇಕೆ ಹೊರತು ಅದರ ವಿರುದ್ಧವಾಗಿ ಹೋಗುವ ಪ್ರಯತ್ನ ಮಾಡಿದಲ್ಲಿ ವ್ಯತಿರಿಕ್ತ ಪರಿಣಾಮ ಕಟ್ಟಿಟ್ಟ ಬುತ್ತಿ. ಪರಿಸರ ನಮ್ಮ ಮನೆ. ಮನೆಯನ್ನು ಹೇಗೆ ಸ್ವಚ್ಛ ಪರಿಶುದ್ದವಾಗಿ ಇಟ್ಟುಕೊಳ್ಳುತ್ತೇವೊ ಅದೆ ಕಾಳಜಿ ಪರಿಸರದ ಬಗ್ಗೆ ಇರಬೇಕು. ಆದಷ್ಟು ಮನೆಯ ಸುತ್ತ ಮುತ್ತ ಗಿಡ ಮರ ಬೆಳೆಸಿ, ಪ್ಲಾಸ್ಟಿಕ್ ಬಳಕೆ ಬಿಟ್ಟು ತಾನು, ತನ್ನ ಮನೆ, ತನ್ನ ಬೀದಿ, ತನ್ನ ಊರು ಹೀಗೆ ಎಲ್ಲದರ ಕುರಿತು ಮನುಷ್ಯನಲ್ಲಿ ಪರಿಸರದ ಬಗ್ಗೆ ಕಾಳಜಿ ಸ್ವ ಇಚ್ಛೆಯಿಂದ ಹೊರಹೊಮ್ಮಿದಲ್ಲಿ ಮಾತ್ರ ಪರಿಸರವನ್ನು ಕಾಪಾಡಲು ಸಾಧ್ಯ.ಈ ನಿಟ್ಟಿನಲ್ಲಿ ಕಳೆದ ವರ್ಷ ೧೦ ಲಕ್ಷ ಬೀಡದುಂಡೆಗಳನ್ನು ಶ್ರೀ ತರಳಬಾಳು ಜಗದ್ಗುರು ವನ ಸಂವರ್ಧನಾ ಸಮಿತಿಯಿಂದ ತಯಾರಿಸಿ ಪರಮ ಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರ ನೇತೃತ್ವದಿ ಭೂ ತಾಯಿಯ ಒಡಲಿಗೆ ಸಮರ್ಪಿಸಿದ್ದು ಹಚ್ಚ ಹಸಿರಾಗಿರುವ ಸಮಯದಲ್ಲೇಯೇ ಮತ್ತೊಮ್ಮೆ ಹಸಿರಿನ ದಿನ ಬಂದಿದ್ದು ಸಾರ್ಥಕ ಕಾರ್ಯಕ್ಕೆ ವಸಂತ ಒಂದು ಸಂದಿದ್ದು ಸಂತೋಷ ತಂದಿದೆ.

ತರಳಬಾಳು ಗೋಶಾಲೆ  

ಉತ್ಸವಗಳಿಂದ  ಸಮಾಜದ ಅಭಿವೃದ್ಧಿ ಮಾಡುವುದಕ್ಕಿಂತ ಉತ್ಸವಗಳ ಸಾರ್ಥಕತೆಯ ನೆನಪಿಗೆ  ಸಮಾಜದ ಅಭ್ಯುದಯಕ್ಕೆ ಶ್ರಮಿಸುವ ವಿಶೇಷ ಆಶಯ ಹೊಂದಿ ಆ ಕಾರ್ಯದಲ್ಲಿ  ಯಶಸ್ಸು ಗಳಿಸಿದ ಕೀರ್ತಿ ತರಳಬಾಳು ಶ್ರೀ ಜಗದ್ಗುರುವರ್ಯರದು. ಪರಂಪರೆಗೆ ಮತ್ತು ಅಪಾರ ಶಿಷ್ಯಬಳಗದ ಮನಸ್ಸಿಗೆ ಘಾಸಿ ಮಾಡದಂತೆ ಎಲ್ಲರಿಗೂ ಅನುಕೂಲ ತರುವ ಸರ್ವರೂ ಒಪ್ಟಲೇಬೇಕಾದ ಕಾರ್ಯಕ್ರಮಗಳನ್ನು ಜಾರಿಯ ಅನುಷ್ಠಾನದ  ಅಪರೂಪದ ವ್ಯಕ್ತಿತ್ವ  ಚಿಂತಕ ಶ್ರೇಷ್ಠರಾದ ಶ್ರೀ ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳವರದು . ನಾಡಿನ ಧಾರ್ಮಿಕ ಸಮಾರಂಭಗಳಿಗೆ ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಮಾತೃಸ್ವರೂಪದಂತಹ  ಸ್ಥಾನವಿದೆ. ಸಮಾರಂಭದ ಸಾರ್ಥಕತಗೆ  ನೂರಾರು ಸಮಾಜ ಮುಖಿ ಕಾರ್ಯಗಳು  ಸಾಕ್ಷಿಯಾಗಿವೆ . ಅಂತಹ  ಜನಮುಖಿ ಕಾರ್ಯಗಳಲ್ಲಿ   ಸಾವಿರಾರು ಕೋಟಿಗಳ ವೆಚ್ಚದಲ್ಲಿ ನೂರಾರು ಕೆರೆಗಳಿಗಳ ಒಡಲಿಗೆ  ಗಂಗೆ ಹರಿದು ರೈತರ ನೆಮ್ಮದಿಗೆ ಕಾರಣವಾಗಿರುವುದು ಪ್ರಮುಖವಾದುದು.

ಆರು ದಶಕಗಳಿಂದಲೂ  ಸರ್ವರ  ಜನಾಧರಣೆಯ ಸಮಾರಂಭವಾಗಿ  ಆಯಾ ಕಾಲದ ಸಮಸ್ಯೆಗಳಿಗೆ ಸ್ಪಂದಿಸುವ ಮಹೋತ್ಸವವಾಗಿದೆ. ಈ ವರ್ಷದ ತರಳಬಾಳು ಹುಣ್ಣಿಮೆ  ಮಹೋತ್ಸವ  ಹೊಯ್ಸಳರ ನಾಡಾದ ಹಳೇಬೀಡಿನಲ್ಲಿ  ಆಚರಿಸುವ ಶ್ರೀಗಳ ಆಶಯಕ್ಕೆ ಆ ಭಾಗದ ಭಕ್ತರು ತುದಿಗಾಲಲ್ಲಿ ನಿಂತಿದ್ದರು.ಭೀಕರ ಬರಗಾಲದ ಛಾಯೆಯನ್ನು ಮನಗಂಡು  ಕಾರ್ಯಕ್ರಮಗಳಿಗೆ ಕಾರ್ಯಕ್ರಮವಾಗಬಾರದು ಆ ಭಾಗದ ಜ್ವಲಂತ ಸಮಸ್ಯೆಗಳಿಗೆ ತರಳಬಾಳು ಹುಣ್ಣಿಮೆ ಮಹೋತ್ಸವದ ಮೂಲಕ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಶ್ರೀಗಳು ಹಳೇಬೀಡು ವ್ಯಾಪ್ತಿಯ ಕೆರೆಗಳಿಗೆ ಶಾಶ್ವತವಾಗಿ ನೀರು ತುಂಬಿಸುವ ಯೋಜನೆ ಕಾರ್ಯಪಾಲನೆಯ ನಂತರ ಹುಣ್ಣಿಮೆ ಮಹೋತ್ಸವ ಆಚರಿಸುವ ಅರ್ಥಪೂರ್ಣ ನಿರ್ಧಾರ ಕೈಗೊಂಡು ಆ ನಿಟ್ಟಿನಲ್ಲಿ ಹೆಜ್ಜೆ ಹಾಕಿದರು. ಪರಂಪರೆಯಂತೆ ಸಾಂಕೇತಿಕವಾಗಿ ಸರಳವಾಗಿ   2019ರ   ಫೆಬ್ರುವರಿ 19ರಂದು ಸಿರಿಗೆರೆಯಲ್ಲಿ  ತರಳಬಾಳು ಹುಣ್ಣಿಮೆ ಮಹೋತ್ಸವ  ಆಚರಣೆಯ ಜೊತೆಗೆ ನಾಡಿನ ಗೋವುಗಳ ಪಾಲನೆಗೆ ಅಂದೇ ಗೋಶಾಲೆಯ ಉದ್ಘಾಟಿನೆಯ ಕೈಂಕರ್ಯಕ್ಕೆ ಶ್ರೀ ಜಗದ್ಗುವರ್ಯರು ಮನಸ್ಸು ಮಾಡಿರುವುದು ಅತ್ಯಂತ ಸಂದರ್ಭೋಚಿತವಾದುದಾಗಿದೆ.ಶ್ರೀಗಳ ದೂರದರ್ಶಿತ್ವ ಹೇಗಿದೆ ಎಂದರೆ. ಈ ವರ್ಷ ಬರದ ಮುನ್ಸೂಚನೆ ಅರಿತ ಶ್ರೀಗಳವರು    ಪುಣ್ಯಕೋಟಿ ಉಳಿಸುವ ಅಭಿದಾನಕ್ಕೆ ಕೈ ಹಾಕಿ ಆರು ತಿಂಗಳಿAದ ಕರ್ತವ್ಯ ಮಗ್ನರಾಗಿ ನೂರಾರು ಲೋಡ್ ಮೇವನ್ನು ಭಕ್ತರ ಮೂಲಕ ಸಂಗ್ರಹಿಸಿ ಕಾಮಧೇನುಗಳ ಸ್ವಾಗತಕ್ಕೆ ಕಾದು ಕುಳಿತಿದ್ದಾರೆ. ಸಿರಿಗೆರೆ ಸಮೀಪದ ಶಾಂತಿವನದಲ್ಲಿ    ಶ್ರೀ ಮಠದ ಒಡೆತನದ ಸಾವಿರಾರು ಎಕರೆ ಭೂ ಪ್ರದೇಶವನ್ನು ಶಿವಕುಮಾರ ವನವನ್ನಾಗಿಸಿ ಹತ್ತಾರು ವನ್ಯಜೀವಿಗಳಿಗೆ  ಆಶ್ರಯ ತಾಣವಾಗಿರುವ ಪ್ರದೇಶದಲ್ಲಿ ತರಳಬಾಳು ಗೋಶಾಲೆ ನಿರ್ಮಾಣವಾಗುತ್ತಿದೆ.

ಹೇಗಿರುತ್ತದೆ ಗೋಶಾಲೆ..?

ಕರ್ನಾಟಕದ ಅನೇಕ ಪ್ರದೇಶಗಳು ಪದೇ ಪದೇ ಬರಗಾಲಕ್ಕೆ ತುತ್ತಾಗುವ ಸ್ಥಿತಿ ಇದೆ. ಮನುಷ್ಯರು ಹೇಗಾದರೂ ಬದುಕಿಕೊಳ್ಳುತ್ತಾರೆ. ಆದರೆ ದನಕರುಗಳು ಮೇವು ನೀರಿಲ್ಲದೆ ಕಂಗಾಲಾಗುತ್ತವೆ. ಚಾಮರಾಜ ನಗರದ ಬಳಿ ಮೇವು ನೀರಿಲ್ಲದೆ ಎಲ್ಲೆಂದರಲ್ಲಿ ದನಕರುಗಳು ಸತ್ತಿರುವ ವರದಿಗಳು ದುಃಖದಾಯಕ ವರದಿಗೆ ಮನನೊಂದ ಶ್ರೀಗಳು  ಸಿರಿಗೆರೆ ಸಮೀಪ ಇರುವ ಶಾಂತಿವನದ ನೂರಾರು  ಎಕರೆ ಅರಣ್ಯ ಪ್ರದೇಶದಲ್ಲಿ ಬೃಹತ್ ಗೋಶಾಲೆಯನ್ನು ಆರಂಭಿಸುವ ಯೋಜನೆಯನ್ನು ಶ್ರೀ ತರಳಬಾಳು ಜಗದ್ಗುರು ಡಾ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಸಂಕಲ್ಪಿಸಿದರು. ಇದೊಂದು ಖಾಯಂ ವ್ಯವಸ್ಥೆಯಾಗಿದ್ದು, ಈ ಕಾರ್ಯಕ್ಕಾಗಿ ೨ ಕೋಟಿ ರೂಗಳನ್ನು ಮೀಸಲಿರಿಸಲಾಗಿದೆ. ಈ ಕಾಡಿನಲ್ಲಿ ಹರಿಯುವ ಹಳ್ಳಕ್ಕೆ ಚೆಕ್ ಡ್ಯಾಂ ನಿರ್ಮಾಣ ಮಾಡಿ ಜಾನುವಾರುಗಳಿಗೆ ನೀರನ್ನು ಒದಗಿಸಲಾಗುವುದಲ್ಲದೆ ಆಧುನಿಕ ತಂತ್ರಜ್ಞಾನವನ್ನು ಬಳಸಿ ಮೇವನ್ನು ಬೆಳೆಸಲಾಗುವುದು. ನೀರನ್ನು ಪಂಪ್ ಮಾಡಲು ಸೋಲಾರ್ ವಿದ್ಯತ್ ಉತ್ಪಾದನೆಯ ಬಗ್ಗೆಯೂ ಚಿಂತಿಸಲಾಗುತ್ತಿದೆ. ಕಾಡಿನಲ್ಲಿರುವ ಮೃಗಗಳಿಂದ ಜಾನುವಾರುಗಳಿಗೆ ತೊಂದರೆ ಆಗದಂತೆ  ಬೇಲಿಯನ್ನು ನಿರ್ಮಿಸಲಾಗುವುದು. ರಾಜ್ಯದ ಯಾವುದೇ ಭಾಗದ ರೈತರೂ ಇದರ ಪ್ರಯೋಜನ ಪಡೆಯಬಹುದು. ರೈತರು ಬಯಸಿದರೆ ಜಾನುವಾರುಗಳನ್ನು ಗೋಶಾಲೆಗೆ ತರಲು ಮಠದಿಂದ ಲಾರಿಯನ್ನು ಕಳುಹಿಸುವ ವ್ಯವಸ್ಥೆ ಮಾಡಲಾಗುವುದು. ಬರ ಪ್ರದೇಶದ ರೈತರು ಇಲ್ಲಿಗೆ ದನಕರುಗಳನ್ನು ತಂದು ಮಳೆಗಾಲ ಬರುವ ತನಕ ಮೇವು ಮತ್ತು ನೀರನ್ನು ಪಡೆದು ಸಾಕಬಹುದು. ರಾಸುಗಳೊಂದಿಗೆ ಬರುವ ರೈತರಿಗೂ ಮಠದಿಂದ ಆಹಾರ ಮತ್ತು ವಸತಿಯನ್ನು ನೀಡಲಾಗುವುದು.

ಸಿರಿಗೆರೆಯ ತರಳಬಾಳು ಬೃಹನ್ಮಠದ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ ಪುಣ್ಯಸ್ಮರಣೆ ಅಂಗವಾಗಿ ಸಿರಿಗೆರೆಯಲ್ಲಿ ಏರ್ಪಡಿಸಿದ್ದ ರಾಸು ತಪಾಸಣಾ ಶಿಬಿರದಲ್ಲಿ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಜಾನುವಾರಿಗೆ ಲಸಿಕೆ ಹಾಕಿದರು.

ಭೂಮಿ ಆನ್ ಲೈನ್ ಪರಿಹಾರ ತಂತ್ರಾಂಶ ರೂವಾರಿ ತರಳಬಾಳು ಶ್ರೀಗಳು 

ಬರವನ್ನೆ ಬಂಡವಾಳಮಾಡಿಕೊಳ್ಳುವ ಅದೆಷ್ಟೊ ಅಧಿಕಾರಿಗಳು ಮತ್ತು ಪ್ರಜಾಪ್ರತಿನಿಧಿಗಳು ಬರಗಾಲವನ್ನೆ ಇಷ್ಟಪಡುತ್ತಾರೆ.ಕಾರಣ ಬರಗಾಲದಲ್ಲಿ ದೊರಕುವ ಪರಿಹಾರ ಧನ ತಮಗೂ ಧಕ್ಕುವುದೆಂಬ ಖುಷಿ,ಬೆಳೆಗಾಗಿ, ಬದುಕಿಗಾಗಿ ಮಾಡಿದ ಸಾಲವನ್ನು ತೀರಿಸಲಾಗದೇ ಸಾವಿರಾರೂ ಅನ್ನದಾತರು ಬೆಳೆ ಕೈಕೊಟ್ಟ ಕಾರಣ ಮರ್ಯಾದೆಗೆ ಅಂಜಿ ಆತ್ಮಹತ್ಯೆಯ ಜಾಡು ಹಿಡಿಯುವ ರೈತ ಸಮುದಾಯ ಅತ್ಯಂತ ಶೋಷಣೆಯಲ್ಲೆ ಬದುಕುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪರಿಗಾರ “ಆನೆಯ ಹೊಟ್ಟೆಗೆ ಅರೆಕಾಸಿ ಮಜ್ಜಿಗೆ ಎಂಬಂತಾಗಿದೆ” ಪರಿಹಾರ ಬಿಡುಗಡೆಯಾದರೂ ಸರಯಾದ ಸಮಕ್ಕೆ ಫಲಾನುಭವಿ ರೈತರಿಗೆ ಸಿಗದೆ ಕಂಗಾಲಾದ ವಿಷಮ ಪರಿಸ್ಥಿತಿಯಲ್ಲಿ ರೈತರಿಗೆ ಬೆಳದಿಂಗಳಾಗಿ ಬಂದವರೆ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳವರು 2016ರ ಸೆಪ್ಟಂಬರ್ 19 ರಂದು ಬೆಳೆ ಪರಿಹಾರ ಸಂವಾದ ಏರ್ಪಡಿಸಿ ಬರಗಾಲಕ್ಕೆ ತುತ್ತಾಗಿರುವ ರೈತರಿಗೆ ಪರಿಹಾರ ಒದಗಿಸುವ ಬೆಳೆ ವಿಮಾ ಕಂಪನಿಗಳ ಬೇಜವಬ್ದಾರಿತನದ ಬಗ್ಗೆ ಅಸಮಧಾನ ವ್ಯಕ್ತಪಡಿಸಿ ಹಳೆಯ ಶಾನುಭೋಗರ ಪದ್ದತಿಯನ್ನು ಕೈಬಿಟ್ಟು ಸರ್ಕಾರದಿಂದ ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ರೈತರ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡುವ ದೇಶದಲ್ಲೆ ಪ್ರಪ್ರಥಮ ಹಾಗೂ ಮಾದರಿ ಯೋಜನೆಯನ್ನು ಕರ್ನಾಟಕ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು ಸರ್ಕಾರದ ಅಧಿಕಾರಿಗಳ ತಂಡದೊಂದಿಗೆ ಸ್ವತಃ ಕಾರ್ಯ ನಿರ್ವಹಿಸಿ ಭೂಮಿ ಆನ್ ಲೈನ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಿ ಸಾವಿರಾರು ಕೋಟಿ ರೂಪಾಯಿಗಳ ಮೊತ್ತವನ್ನು ನೇರವಾಗಿ ರೈತರ ಖಾತೆಗಳಿಗೆ ಜಮಾವಾಗುಂತೆ ಯಶಸ್ವಿಯಾಗಿ ಉಳುವ ಯೋಗಿಯ ಮೊಗದಲ್ಲಿ ಸಂತಸ ಇಮ್ಮಡಿಗೊಳಿಸುವಲ್ಲಿ ಶ್ರೀಗಳ ಶ್ರಮ ಅಪಾರವಾದುದರ ಜೊತೆ ಬರ ಪರಿಹಾರಕ್ಕೆ ಶಾಶ್ವತ ಪರಿಹಾರ ಕಲ್ಪಿಸಿದ ಕಲ್ಪವೃಕ್ಷವಾಗಿ ದಯವೇ ಧರ್ಮದ ಮೂಲವಯ್ಯ ಎಂಬುದನ್ನು ಜಗತ್ತಿಗೆ ಸಾರಿ ತೋರಿಸಿಕೊಟ್ಟಿದ್ದಾರೆ.

ಗಣಕ ಋಷಿ 

ಕಲೆ ವಿಜ್ಞಾನಗಳ ಸಂಗಮದಂತೆ ಶ್ರೀಗಳು ಕಂಪ್ಯೂಟರ್ ಕ್ಷೇತ್ರದಲ್ಲಿ ಪ್ರಾವೀಣ್ಯತೆ ಸಾಧಿಸಿದವರು.ಶರಣರ ಸಾವಿರಾರು ವಚನಗಳನ್ನು ಎರಡು ದಶಕಗಳ ಹಿಂದೆಯೇ ಅಂತರ್ಜಾಲಕ್ಕೆ ಅಳವಡಿಸಿ ವಿಶ್ವದವರೆಲ್ಲರೂ ವಚನಗಳ ಸ್ವಾರಸ್ಯವನ್ನು ತಮ್ಮ ಭಾಷೆಯಲ್ಲಿ ಓದುವಂತೆ ಕೇಳುವಂತೆ ಮಾಡಿ ವಚನ ಸಾಹಿತ್ಯಕ್ಕೆ ವಿಶ್ವ ಮಾನ್ಯತೆ ಕರುಣಿಸಿದ್ದು ಪೂಜ್ಯರ ಸಾಧನೆಗಳಲ್ಲೊಂದು.

ಸಂಸ್ಕೃತದ ಮೇರು ಗ್ರಂಥಗಳೊಲ್ಲೊಂದಾದ ಪಾಣಿನಿಯ ಅಷ್ಟಾಧ್ಯಾಯಿನಿಯನ್ನು ಗಣಕಾಷ್ಟಾಧ್ಯಾಯಿ ತಂತ್ರಾಂಶ ರೂಪಿಸಿ ಸಂಸ್ಕೃತ ವಿದ್ವಾಂಸರಿಗೆ ಪ್ರಪಂಚದಾದ್ಯಂತ ಅಚ್ಚರಿ ಸೃಷ್ಟಿಸಿ ಜಗತ್ತಿನ ಸರ್ವ ಜ್ಞಾನವನ್ನು ಪಡೆದಿರುವ ನಿಜಾರ್ಥದ ಜಗದ್ಗುರುಗಳಾಗಿದ್ದಾರೆ.

ಶ್ರೀ ಮಠದ ಎಲ್ಲಾ ವ್ಯವಹಾರಗಳನ್ನು ಮತ್ತು ಶ್ರೀ ತರಳಬಾಳು ವಿದ್ಯಾ ಸಂಸ್ಥೆಯ ಎಲ್ಲಾ ಶಾಲಾ ಕಾಲೇಜುಗಳ ಆಡಳಿತವನ್ನು ದಶಕಗಳ ಹಿಂದೆಯೇ ಗಣಕೀಕರಣಗೊಳಿಸುವುದರ ಜೊತೆ ವಿದ್ಯಾ ಸಂಸ್ಥೆಯ ಸಾವಿರಾರೂ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣವನ್ನು ಕಡ್ಡಾಯಗೊಳಿಸಿದ್ದಾರೆ.

ಶ್ರೀ ತರಳಬಾಳು ಜಗದ್ಗುರು ವಿದ್ಯಾ ಸಂಸ್ಥೆ

ಕರ್ನಾಟಕದ ಬಹುಮುಖ್ಯ ಶಿಕ್ಷಣ ಸಂಸಥೆಗಳಲ್ಲಿ ಒಂದಾದ ಶ್ರೀ ತರಳಬಾಳು ಜಗದ್ಗುರು ವಿದ್ಯಾ ಸಂಸ್ಥೆಯು ಶೈಕ್ಷಣಿಕ ರಂಗದಲ್ಲಿ ಸಲ್ಲಿಸುತ್ತಿರಯವ ಸೇವೆ ಅಪೂರ್ವವಾದುದು, ಶರಣರ ಹಾದಿಯಲ್ಲಿ ನಡೆದು ಬಂದಿರುವ ಶ್ರೀ ಬೃಹನ್ಮಠದ ಗುರು ಪರಂಪರೆಯು ಗ್ರಾಮೀಣ ಜನರಿಗೆ ಶಿಕ್ಷಣ ನೀಡಲು ಮೊದಲಿನಿಂದಲೂ ಅವಿರತವಾಗಿ ಶ್ರಮಿಸುತ್ತಾ ಬಂದಿದೆ. ೧೯೧೭ರಲ್ಲಿ ಶ್ರೀ ಮಠದ ೧೯ನೇಯ ಜಗದ್ಗುರುವರ್ಯರಾದ ಶ್ರೀ ಗುರುಶಾಂತ ರಾಜದೇಶಿಕೆಂದ್ರ ಮಹಾಸ್ವಾಮಿಗಳವರು ಶಿಕ್ಷಣ ಪ್ರೇಮಿಗಳು ಪೂರ್ವಾಶ್ರಮದಲ್ಲಿ ಸ್ವತಃ ಶಿಕ್ಷಕರಾಗಿದ್ದ ಶ್ರೀಗಳು ಶ್ರೀ ಮಠದ ಆವರಣದಲ್ಲಿ ೧೯೧೭ರಲ್ಲಿಯೆ ಪ್ರಾಥಮಿಕ ಶಾಲೆಯನ್ನು  ತೆರೆದು ವಿದ್ಯಾದಾನಕ್ಕೆ ನಾಂದಿ ಹಾಡಿದರು.ಉನ್ನತ ವಿದ್ಯಾಬ್ಯಾಸಕ್ಕಾಗಿ ನಗರ ಪ್ರದೇಶಗಳಿಗೆ ಹೋಗುವ ಹಳ್ಳಿಯ ಮಕ್ಕಳಿಗೆ ಅನುಕೂಲವಾಗಲೆಂದು ದಾವಣಗೆರೆಯಲ್ಲಿ 1924 ರಲ್ಲಿ ವಿದ್ಯಾರ್ಥಿನಿಲಯವನ್ನು ಸ್ಥಾಪಿಸಿದರು.

ಪೂಜ್ಯರ ತರುವಾಯ 25ನೇಯ ಜಗದ್ಗುರುಗಳಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಗಳವರು 1945 ರಲ್ಲಿ ಪಟ್ಟಾಭಿಷಿಕ್ತರಾದರು ಅವರಿ ಕಾಶಿಯಲ್ಲಿ ಉನ್ನತ ವಿದ್ಯೆಯನ್ನು ಪಡೆಯಲು ತೆರಳಿದ್ದಾಗ ಹಲವು ತೊಂದರೆಗಳನ್ನು ಅನುಭವಿಸಬೇಕಾಯಿತು. ಈ ತೊಂದರೆಗಳನ್ನು ಮುಂದಿನ ತಲೆಮಾರು ಅನುಭವಿಸ ಕೂಡದು ಎಂಬ ಆಶಯದಿಂದ ಗ್ರಾಮೀಣ ಭಾಗದಲ್ಲಿ ವ್ಯಾಪಕವಾಗಿ ವಿದ್ಯಾದಾನಕ್ಕೆ ಮುಂದಾದರು.ದೇಶಕ್ಕೆ ಸ್ವಾತಂತ್ಯ ದೊರೆಯುವ ಪೂರ್ವದಲ್ಲಿಯೇ ೧೯೪೬ ರಲ್ಲಿ ಸಿರಿಗೆರೆಯಲ್ಲಿ ಪ್ರೌಢಶಾಲೆ ಮತ್ತು ವಿಧ್ಯಾರ್ಥಿ ನಿಲಯವನ್ನು ಸ್ಥಾಪಿಸಿದರು. ಸಹಪಂಕ್ತಿ ಭೋಜನದ ಮೂಲಕ ಜತಿಭೇಧ ಮತ್ತು ಲಿಂಗಭೇಧವನ್ನು ತೊಡೆದು ಹಾಕಿ ಕ್ರಾಂತಿಕಾರಕ ನಿಲುವುಗಳನ್ನ ಪ್ರತಿಪಾದಿಸಿ ದೇಶದ ಸಂವಿಧಾನ ರಚನೆಯ ಪೂರ್ವದಲ್ಲಿಯೇ ಅದರ ಆಶಗಳನ್ನು ಜಾರಿಗೊಳಿಸುವ ಮೂಲಕ ವಿದ್ಯೆಯನ್ನು ಧಾರೆ ಎರೆದರು. 25 -08- 1946 ರಲ್ಲಿಯೇ ಶ್ರೀ ತರಳಬಾಳು ಜಗದ್ಗುರು ವಿದ್ಯಾ ಸಂಸ್ಥೆಯನ್ನು ನೋಂದಾಯಿಸಿ ನೂರಾರು ಶಾಲಾ ಕಾಲೇಜುಗಳನ್ನು ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ತೆರೆದರು.

1979 ರಲ್ಲಿ 21 ನೇ ಜಗದ್ಗುರುಗಳಾಗಿ ಪಟ್ಟಾಧಿಕಾರಕ್ಕೆ ಬಂದ ಶ್ರೀ ತರಳಬಾಳು ಜಗದ್ಗುರು ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ದೇಶ ವಿದೇಶಗಳಲ್ಲಿ ಆಧುನಿಕ ಶಿಕ್ಷಣ ಪಡೆದ ಬಹು ಭಾಷಾ ವಿದ್ವಾಂಸರು ಶಿಕ್ಷಕರ ಬಗ್ಗೆ ವಿಶೇಷ ಕಾಳಜಿಯುಳ್ಳವರು.ಆಧುನಿಕ ಕಾಲಕ್ಕೆ ಅನುಗುಣವಾಗಿ ವಿದ್ಯಾ ಸಂಸ್ಥೆಯ ಕಾರ್ಯವ್ಯಾಪ್ತಿಯನ್ನು ಭೌತಿಕವಾಗಿ ಮತ್ತು ಗುಣಾತ್ಮಕವಾಗಿ ವಿಸ್ತರಿಸಿ ಜನತೆಯ ತುಂಬು ಕೃತಜ್ಞತೆಗೆ ಪಾತ್ರರಾಗಿದ್ದಾರೆ.ಶ್ರೀಗಳವರ ಮಾರ್ಗದರ್ಶನದಲ್ಲಿ ನರ್ಸರಿ ಮತ್ತು ಪ್ರಾಥಮಿಕ ಶಾಲೆಗಳು, ಮಾದರಿ ವಸತಿ ಶಾಲೆಗಳು ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನ ಪ್ರಾರಂಭಿಸಲಾಗಿದ್ದು ೧೫ ಜಿಲ್ಲೆಗಳಲ್ಲಿ ವಿದ್ಯಾ ಸಂಸ್ಥೆಯ 260 ಕ್ಕಿಂತಲೂ ಹೆಚ್ಚು ಪ್ರೌಢ ಶಾಲೆಗಳು, ಪದವಿ ಪೂರ್ವ ಕಾಲೇಜುಗಳು, ಇಂಜಿನಿಯರಿಂಗ್ ,ಪಾಲಿಟೆಕ್ನಿಕ್,ಪದವಿ ಕಾಲೇಜುಗಳು, ಶಿಕ್ಷಣ ಮತ್ತು ದೈಹಿಕ ಶಿಕ್ಷಣ ಕಾಲೇಜುಗಳು, ಸಂಸ್ಕೃತ ಮತ್ತು ವೇದ ಪಾಠ ಶಾಲೆಗಳು. ಸಿ.ಬಿ.ಎಸ್.ಸಿ ಮತ್ತು ಐ.ಸಿ.ಎಸ್.ಸಿ ಶಾಲೆಗಳು, ಪ್ರಸಾಧ ನಿಲಯಗಳು, ಅನಾಥ ಮಕ್ಕಳ ಗುರುಕುಲಗಳು, ಅಂಗನವಾಡಿ ಮತ್ತಯ ಕೈಗಾರಿಕಾ ತರಬೇತಿ ಕೇಂದ್ರಗಳು ಶ್ರೀ ತರಳಬಾಳು ವಿದ್ಯಾ ಸಂಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.

ಶ್ರೀ ತರಳಬಾಳು ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ಅಸಂಖ್ಯಾ ವಿದ್ಯಾರ್ಥಿಗಳು ಹಿಂದು ದೇಶ ವಿದೇಶಗಳಲ್ಲಿ ಆಡಳಿತಗಾರರಾಗಿ,ವಿಜ್ಞಾನಿಗಳಾಗಿ,ವೈದ್ಯರುಗಳಾಗಿ, ಅಭಿಯಂತರರಾಗಿ, ನ್ಯಾಯಧೀಶರಾಗಿ,ಅಖಿಲ ಭಾರತ ಸೇವಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಶ್ರೀ ಸಂಸ್ಥೆಯ ಶಾಲಾ ಕಾಲೇಜುಗಳಲ್ಲಿ ಸಾಂಪ್ರದಾಯಿಕ, ಶಿಕ್ಷಣದ ಜೊತೆಗೆ ನೈತಿಕ, ಸಾಂಸ್ಕೃತಿಕ ವೈಜ್ಞಾನಿಕ ಮೌಲ್ಯಗಳಿಗೆ ಇತ್ತು ನೀಡಲಾಗುತ್ತಿದ್ದು ನಾಡಿನ ತರಳರ ಬಾಳನ್ನು ಶಿಕ್ಷಣ ಜ್ಯೋತಿಯ ಮೂಲಕ ಉಜ್ವಲವಾಗಿ ಬೆಳಗುತ್ತಾ ತನ್ನ ಹೆಸರನ್ನು ಸಾರ್ಥಕ ಪಡಿಸಿಕೊಳ್ಳುತ್ತಿದ್ದು ನಾಡಿನ ವಿದ್ಯಾರ್ಥಿಗಳ ಹೆಮ್ಮೆಯ ಸಂಸ್ಥೆ ಎನಿಸಿದೆ.

ಸದ್ಧರ್ಮ ನ್ಯಾಯ ಪೀಠವೆಂಬ ಜನತಾ ನ್ಯಾಯಾಲಯ

ನಿತ್ಯ ಜೀವನದಲ್ಲಿ ಮನುಷ್ಯನಿಗೆ ಎದುರಾಗುವ ಸಮಸ್ಯೆಗಳು ಹಲವು ಕುಟುಂಬದಲ್ಲಿನ ಕೌಟುಂಬಿಕ ಭಿನ್ನಾಭಿಪ್ರಾಯ, ವ್ಯಹಾರದಲ್ಲಿ ವಂಚನೆ, ಸತಿ-ಪತಿಗಳಲ್ಲಿ ವಿಸರ, ಆಸ್ತಿ ವ್ಯಾಜ್ಯ ಈಗೆ ಹತ್ತು ಹಲವು ಸಮಸ್ಯೆಗಳು ಮನುಷ್ಯನ ಸಮಬಂಧಗಳನ್ನು ಹಳಸಿ ದ್ವೇಷ ಅಸೂಯೆಗೆ ಕಾರಣವಾಗಿ ಹಠಕ್ಕೆ ಬಿದ್ದು ಹಗೆತನ ಮಿತಿಮೀರಿ ಬೆಳೆದು ನ್ಯಾಯಾಲಯದ ಮಟ್ಟಿಲನ್ನು ಏರಿ ಜನ ಹಾಳಾಗುವುದು ಈಗಂತಲೂ ಸ್ವಾಭಾವಿಕವಾಗಿದೆ. ಈ ನಿಟ್ಟಿನಲ್ಲಿ ಸಿರಿಗೆರೆಯ ಬೃಹನ್ಮಠದ ಗುರು ಪರಂಪರೆಯಲ್ಲಿ ಸಾಗಿ ಬಂದ ಗುರುವರ್ಯರೆಲ್ಲರು ನ್ಯಾಯಧಾನಿಗಳಾಗಿ ಕರ್ತವ್ಯಮುಖಿಗಳಾಗಿದ್ದಾರೆ. ಸದ್ದರ್ಮ ನ್ಯಾಯಪೀಠಕ್ಕೆ ಪ್ರಾದೇಶಿಕ ವ್ಯಾಪ್ತಿ ಇಲ್ಲ,ಇಲ್ಲಿಗೆ ಬರುವ ಕ್ಕಷಿದಾರರು ವಕೀಲರನ್ನು ನೇಮಿಸಿಕೊಂಡು ಹಣ ಕೊಡಬೇಕಾಗಿಲ್ಲ,ಎಲ್ಲರಿಗೂ ಪ್ರಸಾದದ ವವಸ್ಥೆ ಇರುತ್ತದೆ. ಇದೊಂದು ಜನತಾ ನ್ಯಾಯಾಲಯವಾಗಿ ಪ್ರಖ್ಯಾತಿ ಗಳಿಸಿದೆ. ಈ ನ್ಯಾಯ ಪೀಠದ ಕಲಾಪಗಳನ್ನು ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಪ್ರತ್ಯಕ್ಷ ದರ್ಶಿಗಳಾಗಿ ವೀಕ್ಷೀಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರತಿ ಸೊಮವಾರ ಸಿರಿಗೆರೆಯಲ್ಲಿ ಜರುಗುವ  ಸದ್ದರ್ಮ ನ್ಯಾಯಪೀಠದ ಕರ‍್ಯಕಲಾಪಗಳು ಅಂತರಾಷ್ಟ್ರೀಯ ಜನಮನ್ನಣೆಗಳಿಸಿವೆ.ನ್ಯಾಯಾನ ಮಾಡುವ ಡಾ|| ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಜಿಗಳವರು ಕಾನೂನು ಅಧ್ಯಯನವನ್ನು ನಡೆಸಿದ್ದಾರೆ. ನ್ಯಾಯ ಪೀಠದ ಸಭಾಂಗಣದಲ್ಲಿ ಕಾನೂನು ಪುಸ್ತಕಗಳ ಬೃಹತ್ ಸಂಗ್ರಹವೇ ಇದೆ. ಸದ್ದರ್ಮ ನ್ಯಾಯಪೀಠದ ಅನೇಕ ನ್ಯಾಯ ತೀರ್ಪುಗಳನ್ನು ಸಾಂವಿಧಾನಿಕ ನ್ಯಾಯಾಲಯಗಳು ಎತ್ತಿ ಹಿಡಿದ ಅನೇಕ ಉದಾಹರಣೆಗಳನ್ನು ಕಾಣಬಹುದಾಗಿದೆ.  ಧರ್ಮಾಧಾರಿತ ನ್ಯಾಯಧಾನ ಪರಿಕಲ್ಪನೆಯಲ್ಲಿ ನ್ಯಾಯ ನಿರ್ಣಯ ಕೈಗೊಳ್ಳುವ ಶ್ರೀಗಳ ನ್ಯಾಯಧಾನ ವ್ವವಸ್ಥೆ ಎಲ್ಲಾ ಆಧುನಿಕ ವ್ಯವಸ್ತೆಯ ಅಡಿಯಲ್ಲಿ ಹತ್ತಾರು ಸಾವಿರ  ಜನಸಾಮನ್ಯರ ಸಮಸ್ಯೆಗಳಿಗೆ ತೀರ್ಪು ನೀಡಿ ಜನಸಾಮಾನ್ಯರ ಕಣ್ಣೀರು ಒರೆಸಿದ ಕೀರ್ತಿ ಶ್ರೀ ಜಗದ್ಜುರುರ‍್ಯರ ನೇತೃತ್ವದ ಸದ್ಧರ್ಮ ನ್ಯಾಯ ಪೀಠಕ್ಕಿದೆ.

ಸಾಂಸ್ಕೃತಿಕ ದೂರದರ್ಶೀತ್ವದ ಪೂಜ್ಯರು 

ಶಿವ ಶರಣರ ಚಿಂತನೆ ಮತ್ತು ವಚನ ಸಾಹಿತ್ಯವನ್ನು ಸರಳವಾಗಿ ಜನ ಸಾಮಾನ್ಯರಿಗೆ ಅರ್ಥೈಸುವ ಆಶಯದ ಪೂಜ್ಯರ ಆಯ್ಕೆ ಸಾಂಸ್ಕೃತಿಕವಾದ ಕಾರ್ಯಗಳನ್ನು ನಿರಂತರವಾಗಿ ಮುನ್ನಡೆಸಿಕೊಂಡು ಬರುತ್ತಿರುವ ಶ್ರೀಗಳ ಕಾಳಾಜಿ ಅನನ್ಯವಾದುದು. ಕರ್ನಾಟಕದ ರಂಗಭೂಮಿಗೆ ಶ್ರೀ ತರಳವಾಳು ಜಗದ್ಗುರು ಬೃಹನ್ಮಠದ ಕೊಡುಗೆ ಅಪಾರವಾದುದು. ಆರು ದಶಕಗಳ ಹಿಂದೆಯೇ ಶ್ರೀ ತರಳಬಾಳು ಕಲಾ ಸಂಘ ಸ್ಥಾಪಿಸಿ ರಂಗಭೂಮಿಯು ಅತ್ಯಂತ ಪ್ರಭಲ ಮಾಧ್ಯವಾಗಿದ್ದ ಸಂದರ್ಭದಲ್ಲಿ ೧೨ನೇ ಶತಮಾನದ ವಚನಕಾರರ ಜೀವನ ಸಾಹಿತ್ಯದ ತತ್ವಾದರ್ಶಗಳನ್ನು ಜನ ಮನಕ್ಕೆ ತಲುಪಿಸುವ ಮಹೋನ್ನತ ಉದ್ಧೇಶದಲ್ಲಿ ಯಶಸ್ವಿಯದವರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಗಳವರು.ಸ್ವತಹ ಶರಣರನ್ನು ಕುರಿತು ನಾಟಕಗಳನ್ನು ರಚಿಸಿ ನಿರ್ದೇಶಿಸಿದರು.ಈ ನಾಟಕಗಳು ದೇಶಾದ್ಯಂತ ಪ್ರದರ್ಶಿಸಲ್ಪಟ್ಟು ಕರ್ನಾಟಕದ ಆಚೆ ವಚನಕಾರರ ಪರಿಚಯಕ್ಕೆ ಅವಕಾಶ ಮಡಿಕೊಟ್ಟವು.

1980ರ ದಶಕದಿಂದ ಡಾ||ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಕಲಾ ಸಂಘಕ್ಕೆ ಹೊಸ ರೂಪನೀಡಿ ನುರಿತ ರಂಗಕರ್ಮಿಗಳಿAದ ಹೊಸ ಅಲೆಯ ನಾಟಕಗಳನ್ನು ಸಿದ್ದಗೊಳಿಸಿ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಶ್ರೀ ಮಠವು ನಾಲ್ಕು ದಶಕಗಳಿಂದಲೂ ಸಿರಿಗೆರೆಯಲ್ಲಿ ಪ್ರತಿ ವರ್ಷ ವೀರಗಾಸೆ, ಭಜನೆ, ಸೋಬಾನೆ ಮೇಳಗಳನ್ನು ಆಯೀಜಿಸುತ್ತಾ ಬಂದಿದೆ.

ಜಾನಪದ ಸಿರಿ ಸಂಭ್ರಮ 2012 ನಮ್ಮ ನಾಡಿನ ವಿವಿಧ ಭಾಗಗಳಲ್ಲಿ ಪ್ರಚಲಿತದಲ್ಲಿರುವ ಪ್ರಮುಖ ಜಾನಪದ ಕಲೆಗಳನ್ನು ಯುವ ಜನಾಂಗಕ್ಕೆ ಪರಿಚಯಿಸುವ ಮಹಾಮಣಿಹವನ್ನು ಶ್ರೀಗಳು ಕೈಗೊಂಡು ಯಶಸ್ವಿಯಾಗಿರುವುದು ರುಜುವಾತಾಗಿದೆ.ವಿದ್ಯಾ ಸಂಸ್ಥೆಯ ೩೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ವಿಶೇಷ ಶಿಬಿರವನ್ನು ಏರ್ಪಡಿಸಿ ೨೫ಕ್ಕೂ ಹೆಚ್ಚು ಕಲಾ ಪ್ರಕಾರಗಳನ್ನು ಮೂಲ ಕಲಾವಿದರಿಂದ ತರಬೇತಿ ಕೊಡಿಸಿ, ಜಾನಪದ ಸಿರಿ ಸಂಭ್ರಮದ ಡಿಂಡಿಮವನ್ನು ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಬಾರಿಸುವ ಮೂಲಕ ಶ್ರೀ ಮಠಕ್ಕೂ ಹಾಗೂ ವಿದ್ಯಾ ಸಂಸ್ಥೆಗೂ ಕೀರ್ತಿ ತಂದಿದ್ದಾರೆ.

ಶ್ರೀಗಳ ಸಾಹಿತ್ಯ ಸಂವರ್ಧನೆ

ಶರಣರ ವಚನ ಸಾಹಿತ್ಯದ ಪ್ರಕಟಣೆ ಮತ್ತು ಪ್ರಸಾರಕ್ಕೆಂದು ಶ್ರೀ ತರಳಬಾಳು ಜಗದ್ಗುರು ನಿಧಿಯನ್ನು ಸ್ಥಾಪಿಸಿ ಕೊಟ್ಯಾಂತರ ಹಣವನ್ನು ಮೀಸಲಿಟ್ಟಿರುವ ಶ್ರೀಗಳವರು ನಾಡಿನ ಸಾಹಿತಿಗಳನ್ನು ಪ್ರೋತ್ಸಾಹಿಸಲು ನೂರಾರು ಲೇಖಕರ ಕೃತಿಗಳನ್ನು ಶ್ರೀ ಮಠದಿಂದ ಹೊರ ತಂದಿದ್ದಾರೆ. ಶ್ರೀಗಳವರೇ ಸ್ವಯಂ ಲೇಖಕರಾಗಿದ್ದು ಕಳೆದ ಹತ್ತು ವರ್ಷಗಳಿಂದ ಪ್ರತಿಷ್ಟಿತ ಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವ  ಬಿಸಿಲು ಬೆಳದಿಂಗಳು ಅಂಕಣ ಅಸಂಖ್ಯಾತ ಎಲ್ಲಾ ವಯೋಮಾನದ ಓದುಗರ ಮನ್ನಣೆಗೆ ಪಾತ್ರವಾಗುವುದರ ಜೊತೆ ನಾಡಿನ ಸಾಂದರ್ಭಿಕ ಸಮಸ್ಯೆಗಳಿಗೆ ಮಾರ್ಗದರ್ಶಿಯಾಗಿದೆ.

ಕವಿ ಹೃದಯದ ಸಾಹಿತ್ಯ ಪ್ರೇಮಿಯಾಗಿರುವ ಪೂಜ್ಯ ಶ್ರೀಗಳ ಲೇಖನಿಯಿಂದ ಹೊರಹೊಮ್ಮಿದ ಕೃತಿಗಳಿಗೆ ಬರವಿಲ್ಲ, ಶ್ರೀಗಳ ಕೃತಿಗಳು ಅಸಂಖ್ಯಾ ಓದುಗರನ್ನ ಸೃಷ್ಟಿಸಿರುವುದರ ಜೊತೆ ಹಲವಾರು ಬಾರಿ ಪುರ್ನಮುದ್ರಣಗೊಂಡಿವೆ.

ಪ್ರಶಸ್ತಿ ಪುರಸ್ಕಾರಗಳು

  • 1982  ರಲ್ಲಿ ಶಿಕ್ಷಣಕ್ಷೇತ್ರದ ಸಾಧನೆಗಾಗಿ ಡಾ|| ಟಿ. ಎಂ. ಪೈ ಸೇವಾ ವೈವಿಧ್ಯತಾ ಪ್ರಶಸ್ತಿ
  •   1982  ಪರಿಸರ ಸಂರಕ್ಷಣೆಯ ಕಾಳಜಿಗಾಗಿ ಭಾರತ ಸರ್ಕಾರದ ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ
  •  ಮದ್ಯಪಾನ ವಿರೋಧಿ ಆಂಧೋಲನದ ಯಶಸ್ವಿಗಾಗಿ ಕರ್ನಾಟಕ ಸ್ಪಂದನಾ ಪುರಸ್ಕಾರ
  • 2002   ವಿನಾಶದ ಅಂಚಿನಲ್ಲಿರುವ ಆರ್ಯುವೇದ ವೈದ್ಯಕೀಯ ಸಸ್ಯಗಳ ಸಂರಕ್ಷಣೆಗಾಗಿ“Certificate of Excellence”
  • ಪ್ರಶಸ್ತಿಯನ್ನು ದಕ್ಷಿಣ ಆಫ್ರಿಕಾದ ಜೋಹನ್ಸ್ಬರ್ಗನಲ್ಲಿನ  Equator Initiate Technical Advisor Committee at the Worlds Summit on Sustainable ಸಂಸ್ಥೆಯು ನೀಡಿ ಗೌರವಿಸುತ್ತಾರೆ.
  • 2003  ಕೋಮು ಸೌಹಾರ್ದತೆ ಶಾಂತಿಯಾತ್ರೆಗಾಗಿ “ವಿಶ್ವಶಾಂತಿ ಧೂತ” ಪುರಸ್ಕಾರವನ್ನು ಅಂತರಾಷ್ಟ್ರೀಯ ಧಾರ್ಮಿಕ ಪ್ರತಿನಿಧಿಗಳ ಒಕ್ಕೂಟ ನ್ಯೂಯಾರ್ಕ್ ಇವರು ನೀಡಿಗೌರವಿಸಿದ್ದಾರೆ.

ಸದಾ ಜನಮುಖಿ ಕಾರ್ಯಗಳಲ್ಲಿ ಸಂತೃಪ್ತಿ ಕಾಣುವ, ನಿತ್ಯವೂ ರೈತಬಂಧುಗಳ ಉನ್ನತಿಗೆ ಶ್ರಮಿಸುವ ಕನ್ನಡ ನಾಡಿನ ಅಪರೂಪದ ವಿದ್ವತ್ಪೂರ್ಣ, ಸಂತಶ್ರೇಷ್ಟರಾಗಿ ,ರೈತ ಮೆಚ್ಚಿದ ಮಹಾಗುರುವೆಂದೇ ಸುಪ್ರಸಿದ್ಧಿಯಾದ ಪರಮ ಪೂಜನೀಯ ಶ್ರೀ ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ  ಶಿವಾಚಾರ್ಯ ಮಹಾಸ್ವಾಮೀಜಿಗಳವರ ನೂರಾರು ಸಮಾಜಮುಖಿ ಸಾಧನೆಗಳಿಗೆ ಮತ್ತೊಂದು ಸೇರ್ಪಡೆ ಎನ್ನುವಂತೆ  ತರಳಬಾಳು ಶ್ರೀ ಮಠದ ಸಾವಿರಾರು ಎಕರೆ ಭೂಮಿಯಲ್ಲಿ ಸಕಲ ಸೌಲಭ್ಯಗಳಿಂದ ಕೂಡಿದ ಗೋಶಾಲೆಯ ನಿರ್ಮಾಣದ ತಯಾರಿ ಭರದಿಂದ ಸಾಗಿದೆ. ಅಕ್ಷರ, ಅನ್ನ,ಆಸರೆ,ಶಿಕ್ಷಣ,ಉದ್ಯೋಗ,ನ್ಯಾಯದಾನ, ಕನ್ನಡ ಜಾನಪದ ಕಲೆಗಳ ಪುನರುಜ್ಜೀವನ , ಸಾಮಾಜಿಕ ಕಾಳಜಿ,ಪರಿಸರ ರಕ್ಷಣೆ, ಶರಣ ಸಂಸ್ಕೃತಿಯನ್ನು ವಿಶ್ವಕ್ಕೆ ದರ್ಶಸಿದ ಗಣಕ ಋಷಿ ಎಂದೇ ನಾಮದೇಯರಾಗಿರುವ ಶ್ರೀ ಗುರುವರ್ಯರ ಸಾಧನೆಗಳ ಕುರಿತು ಬರೆಯುವುದೆಂದರೆ ಅದು ಸೂರ್ಯನನ್ನು ಕನ್ನಡಯಲ್ಲಿ ಹಿಡಿದಂತೆ..!

ತರಳಬಾಳು ಹುಣ್ಣಿಮೆ ಮಹೋತ್ಸವವು  ಜನಮುಖಿ ಅಭೀಪ್ಸೆಗಳ  ಸಾಕಾರದ, ಆರೋಗ್ಯಕರ ಸಮಾಜ ನಿರ್ಮಾಣದ, ಸಮಕಾಲೀನ ಸಮಸ್ಯೆಗಳಿಗೆ ಉತ್ತರದಾಯಿಯಾದ, ಸರ್ವಧರ್ಮದವರು ಸಹೋಧರತೆಯ ಸಂಭದ್ರಮದಿ ಒಂದೆಡೆ ಆಚರಿಸುವ, ಮನದೊಳಗಿನ ಕಸವನ್ನು ತೆಗೆದು, ಸುಜ್ಞಾನದ ಜ್ಯೋತಿ ಹೊತ್ತಿಸುವ ವಿಶೇಷ ಸಮಾರಂಭವಾಗಿದೆ. ಈ ಜ್ಞಾನ ಬುತ್ತಿಯನ್ನು ಉಣಬಡಿಸಲು ವಿವಿದ ಧರ್ಮಗುರುಗಳು, ವಿದ್ವಾಂಸರು,ವಿಜ್ಞಾನಿಗಳು, ವಿಚಾರವಂತ ಸಾಹಿತಿಗಳು, ಕಲಾವಿದರು,ಮುಖ್ಯಮಂತ್ರಿಗಳು, ರಾಷ್ಟ್ರೀಯ ಮತ್ತು ರಾಜ್ಯದ  ಮಂತ್ರಿ ಮಹೋದಯರು ಆಗಮಿಸಲಿದ್ದಾರೆ. ಈ ಮಹಾನ್ ಜ್ಞಾನದಾಸೋಹಕರ‍್ಯಕ್ರಮಕ್ಕೆ  ನೀವು  ಕೂಡ ಹಳೇಬೀಡಿಗೆ ಆಗಮಿಸುತ್ತೀರಲ್ಲವೇ?

 

-ಬಸವರಾಜ ಸಿರಿಗೆರೆ                                                                                                                          

 ಶಾಸಕರು ವಿಧಾನ ಪರಿಷತ್ತು

ಆಪ್ತ ಸಹಾಯಕರು,

ಮೊ:7975961874   

Click to comment

Leave a Reply

Your email address will not be published. Required fields are marked *

More in ಅಂಕಣ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top