ಡಿವಿಜಿ ಸುದ್ದಿ, ಹೊಸಪೇಟೆ: ವೀರಶೈವ ಲಿಂಗಾಯತ ಸಮುದಾಯದ ಒಂದು ಮತವೂ ಬೇರೆ ಪಕ್ಷಕ್ಕೆ ಹೋದರೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕೆನ್ನೆಗೆ ಹಾಗೂ ಕಲ್ಲಿನಿಂದ ಹೊಡೆದಂತಾಗುತ್ತದೆ ಎಂದು ಪ್ರಚೋದನೆ ಹೇಳಿಕೆ ನೀಡಿ ನೀತಿ ಸಂಹಿತಿ ಉಲ್ಲಂಘಿಸಿರುವ ಕಾನೂನು ಸಚಿವ ಮಾಧುಸ್ವಾಮಿಯನ್ನು ಸಚಿವ ಸಂಪುಟದಿಂದ ಕೈ ಬಿಡಬೇಕೆಂದು ಕಾಂಗ್ರೆಸ್ ಹಿರಿಯ ಮುಖಂಡ ಬಸವರಾಜ ರಾಯರೆಡ್ಡಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮವಾರ ಹೊಸಪೇಟೆಯಲ್ಲಿ ಚುನಾವಣೆ ಪ್ರಚಾರದ ವೇಳೆ ಮಾಧುಸ್ವಾಮಿ ಮತದಾರಿಗೆ ಪ್ರಚೋದಿಸುವ ಹೇಳಿಕೆ ನೀಡಿದ್ದಾರೆ. ಇದು ಚುನಾವಣೆ ನೀತಿ ಸಂಹಿತಿ ಸ್ಪಷ್ಟ ಉಲ್ಲಂಘನೆಯಾಗಿದ್ದು, ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರನ್ನು ಚುನಾವಣಾ ಆಯೋಗ ಕೂಡಲೇ ಬಂಧಿಸಬೇಕು. ರಾಜ್ಯಪಾಲರ ಸಚಿವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಕುರಿತು ಚುನಾವಣಾ ಆಯೋಗಕ್ಕೆ ಕೆಪಿಸಿಸಿ ವತಿಯಿಂದ ದೂರು ಕೊಡಲಾಗುವುದು. ಆಯೋಗ ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಲಯದ ಮೊರೆ ಹೋಗಲಾಗುವುದು. ಮಾಧುಸ್ವಾಮಿ ಜೊತೆ ಸಭೆಯಲ್ಲಿ ಪಾಲ್ಗೊಂಡಿದ್ದ ವಸತಿ ಸಚಿವ ವಿ. ಸೋಮಣ್ಣ ಬಿಜೆಪಿಯ ಸಂಸದರು, ಶಾಸಕರು ಹಾಗೂ ಮುಖಂಡರ ವಿರುದ್ಧವೂ ಆಯೋಗ ಕ್ರಮ ಕೈಗೊಳ್ಳಬೇಕು ಎಂದರು.
ಬೆಳಗಾವಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡ ಇದೇ ರೀತಿ ಮಾತಾಡಿದ್ದರು. ಅದರ ವಿರುದ್ಧ ಈಗಾಗಲೇ ಪಕ್ಷದ ವತಿಯಿಂದ ದೂರು ಕೊಡಲಾಗಿದೆ. ಲಿಂಗಾಯತರು ಸುಸಂಸ್ಕೃತರು, ವಿಚಾರವಂತರು. ಜಾತಿ ಆಧಾರದ ಮೇಲೆ ಎಂದೂ ಮತ ಚಲಾಯಿಸಿಲ್ಲ. ವಿಷಯಾಧಾರಿತವಾಗಿ ಮತದಾನ ಮಾಡಿದ್ದಾರೆ. ಮಾಧುಸ್ವಾಮಿ ಸಮಾಜದ ಹೆಸರು ದುರ್ಬಳಕೆ ಮಾಡಿಕೊಂಡು, ಇಡೀ ಸಮಾಜಕ್ಕೆ ಅಪಮಾನ ಮಾಡಿದ್ದು, ಅವರು ಸಮಾಜ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.



