ಡಿವಿಜಿ ಸುದ್ದಿ, ಬೆಂಗಳೂರು: ಇಡೀ ದೇಶಕ್ಕೆ ಗಂಡಾಂತರ ಎದುರಾಗಿದ್ದು, ಕಾಂಗ್ರೆಸ್ ನಿರ್ದಿಷ್ಟ ಕಾರ್ಯ ಯೋಜನೆ ಹಾಕಿಕೊಂಡು ಪ್ರಾದೇಶಿಕ ಪಕ್ಷಗಳನ್ನು ಬಲಪಡಿಸುವ ಅಗತ್ಯವಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.
ನಗರದ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಕೆಲವೊಂದು ನಿರ್ಧಾರದಿಂದ ಪಕ್ಷಕ್ಕೆ ಹಿನ್ನಡೆ ಉಂಟಾಗಿದೆ. ಆದರೆ, ಇದನ್ನು ಸವಾಲಾಗಿ ತೆಗೆದುಕೊಳ್ಳಬೇಕಾಗಿದೆ ಎಂದರು.
ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ಬಲ ಕಡಿಮೆಯಾಗಿದೆ. ಇದರಂದಾಗಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬರುವಂತಾಗಿದೆ. ಇದರಿಂದ ಮುಸ್ಲಿಂ ಸಮುದಾಯವನ್ನು ಎರಡನೇ ದರ್ಜೆ ನಾಗರಿಕರನ್ನಾಗಿ ಪರಿಗಣಿಸಲಾಗುತ್ತಿದೆ. ಕಾಶ್ಮೀರದ ಮುಖಂಡರನ್ನು ಆರು ತಿಂಗಳಿಂದ ಗೃಹಬಂಧನದಲ್ಲಿ ಇಟ್ಟಿದ್ದಾರೆ. ಇದು ಕೇಂದ್ರ ಸರ್ಕಾರದ ಅತ್ಯಂತ ಕೆಟ್ಟ ನಿರ್ಣಯ. ಕೇಂದ್ರದ ಈ ನಿರ್ದಾರವನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ ಎಂದರು .
ಕುಮಾರಸ್ವಾಮಿ ತಮ್ಮ ಆರೋಗ್ಯ ಸರಿ ಇಲ್ಲದಿದ್ದರೂ, ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದಾರೆ, ಆದರೆ, ಉಪಚುನಾವಣೆಯಲ್ಲಿ ಪಕ್ಷಕ್ಕೆ ಸೋಲಾಗಿದೆ, ಪಕ್ಷವನ್ನು ಮತ್ತೆ ಕಟ್ಟಿ ಬೆಳೆಸಬೇಕಿದೆ . ಹೀಗಾಗಿ ಸಭೆ ಕರೆದಿದ್ದೇವೆ. ಪಕ್ಷದಲ್ಲಿ ಮಹಿಳೆಯರಿಗೆ ಅಧಿಕಾರ ಕೊಟ್ಟ ತೃಪ್ತಿ ಇದೆ. ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಕರುಣಿಸುವ ಮಸೂದೆಯನ್ನು ನಾನು 1996ರಲ್ಲಿ ಮಂಡಿಸಿದೆ. ಆದರೆ, ಇದುವರೆಗೂ ಸಂಪೂರ್ಣ ಜಾರಿಯಾಗಿಲ್ಲ.