ಡಿವಿಜಿ ಸುದ್ದಿ, ಬೆಂಗಳೂರು: ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಿ.ಕೆ ಶಿವಕುಮಾರ್ ಅವರನ್ನು ಹಿರಿಯ,ಕಿರಿಯರೆನ್ನದೆ ಎಲ್ಲರು ಬೆಂಬಲಿಸಬೇಕು ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಬೆಂಗಳೂರಿನ ಸದಾಶಿವ ನಗರದಲ್ಲಿರುವ ಮಲ್ಲಿಕಾರ್ಜುನ ಖರ್ಗೆಯವರ ನಿವಾಸಕ್ಕೆ ಭೇಟಿ ನೀಡಿದ ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಶೀರ್ವಾದ ಪಡೆದರು.
ನಂತರ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅವರ ಜೊತೆ ಎಲ್ಲರೂ ಯಂಗ್‍ಸ್ಟರ್ಸ್ ಇದ್ದಾರೆ. ಡಿಕೆ ಶಿವಕುಮಾರ್ ಪಕ್ಷದ ಬಲವರ್ಧನೆ ಮಾಡುವ ನಂಬಿಕೆ ಇದೆ. ಆದರೆ, ಒಬ್ಬ ವ್ಯಕ್ತಿಯಿಂದ ಪಕ್ಷ ಬಲಪಡಿಸಲು ಆಗಲ್ಲ. ಹಿರಿಯರು, ಮುಖಂಡರು ಹಾಗೂ ಕಾರ್ಯಕರ್ತರು ಡಿಕೆಶಿಗೆ ಬೆಂಬಲಿಸಬೇಕು. ಎಲ್ಲರೂ ಡಿಕೆಶಿಗೆ ಬೆಂಬಲಿಸಿದರೆ ಮಾತ್ರ ಕೆಲಸ ಮಾಡಲು ಸಾಧ್ಯ. ವ್ಯಕ್ತಿ ಎಷ್ಟೇ ಸಮರ್ಥ ಇದ್ದರೂ ಬೇರೆಯವರ ಬೆಂಬಲ ಅಗತ್ಯ ಎಂದರು.
ಬಳಿಕ ಮಾತಾಡಿದ ಡಿ.ಕೆ ಶಿವಕುಮಾರ್, ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಕೆಲಸ ಮಾಡುತ್ತೇನೆ. ನನಗೆ ಎಲ್ಲರೂ ಜೊತೆ ಇದ್ದರೆ ಮಾತ್ರ ಪಕ್ಷ ಕಟ್ಟಲು ಸಾಧ್ಯ. ಹಿರಿಯರು, ಕಿರಿಯರು, ಯುವಕರು, ಮಹಿಳೆಯರು ಎಲ್ಲರ ಪಾಲ್ಗೊಳ್ಳುವಿಕೆ ಬೇಕು. ದೆಹಲಿಗೆ ನಾನೊಬ್ಬನೇ ಹೋಗುವುದಿಲ್ಲ. ನಮ್ಮೆಲ್ಲ ನಾಯಕರನ್ನು ಕರೆದುಕೊಂಡು ಹೋಗ್ತೇನೆ. ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಮಾಡುವ ಸಂಬಂಧ ಎಲ್ಲರ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.