ಡಿವಿಜಿ ಸುದ್ದಿ, ಬೆಂಗಳೂರು: ಅನರ್ಹ 17 ಶಾಸಕರಲ್ಲಿ 16 ಶಾಸಕರು ಇಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡರು. ಈ ಮೂಲಕ ಅತಂತ್ರ ಸ್ಥಿತಿಯಲ್ಲಿದ್ದ ಅನರ್ಹ ಶಾಸಕರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಮುರುಳಿಧರ ರಾವ್ ನೇತೃತ್ವದಲ್ಲಿ ಪಕ್ಷಕ್ಕೆ ಬರ ಮಾಡಿಕೊಳ್ಳಲಾಯಿತು.
ಅನರ್ಹ ಶಾಸಕರನ್ನು ಪಕ್ಷಕ್ಕೆ ಬರ ಮಾಡಿಕೊಂಡ ನಂತರ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ನಾವು ಕೊಟ್ಟಿರುವ ಭರವಸೆಯನ್ನು ಅಕ್ಷರಶಃ ಈಡೇರಿಸುತ್ತೇವೆ. ಯಾವುದೇ ರೀತಿಯ ವಿಶ್ವಾಸ ದ್ರೋಹ ಮಾಡಲ್ಲ. ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪರವಾಗಿ ಮುಖ್ಯಮಂತ್ರಿಯಾಗಿ ಭರವಸೆ ಕೊಡುತ್ತೇನೆ ಎಂದರು.
ನೀವು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತ್ಯಾಗ ಮಾಡಿದ್ದೀರಿ. ಸುಪ್ರೀಂಕೋರ್ಟ್ ತೀರ್ಪಿನ ನಂತರ ಅಧಿಕೃತವಾಗಿ ಬಿಜೆಪಿ ಸದಸ್ಯತ್ವ ಪಡೆದುಕೊಂಡಿದ್ದಾರೆ. ರಾಜೀನಾಮೆ ಕೊಟ್ಟು ನಮ್ಮ ಜೊತೆಗೆ ಬಂದಿರುವ ಶಾಸಕರಿಗೆ ಕೊಟ್ಟಿರುವ ಭರವಸೆ ಈಡೇರಿಸುತ್ತೇವೆ.
ಡಿ.5ಕ್ಕೆ ಚುನಾವಣೆ, 9ಕ್ಕೆ ಫಲಿತಾಂಶ ಹೊರಬೀಳಲಿದೆ. ಗೆದ್ದ ಎಲ್ಲ ಶಾಸಕರಿಗೆ ದೊಡ್ಡ ಮೈದಾನದಲ್ಲಿ 1 ಲಕ್ಷ ಜನರನ್ನು ಸೇರಿಸಿ ಸನ್ಮಾನ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ.15ಕ್ಕೆ 15 ಕ್ಷೇತ್ರಗಳಲ್ಲಿ ನೂರಕ್ಕೆ ನೂರು ಗೆಲುವು ಸಾಧಿಸುತ್ತೇವೆ. ದೇಶದ ರಾಜಕಾರಣದಲ್ಲಿ ಈ ರೀತಿ 16–17 ಮಂದಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಬಂದ ಉದಾಹರಣೆ ಇಲ್ಲ. ಬಿಜೆಪಿ ಕಾರ್ಯಕರ್ತರು ಮತ್ತುಮುಖಂಡರು ಒಡಕಿನ ಮಾತನಾಡದೆ, ಎಲ್ಲ ರೀತಿಯ ಸಹಕಾರ ನೀಡಿ, ಅಭ್ಯರ್ಥಿ ಗೆಲುವಿಗೆ ಕಾರಣಕರ್ತರಾಗಿ ಎಂದು ಬಿಜೆಪಿ ಕಾರ್ಯಕರ್ತರಲ್ಲಿ ಮನವಿ ಮಾಡಿದರು



