Connect with us

Dvgsuddi Kannada | online news portal | Kannada news online

ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಚುನಾವಣೆ: ಪಟ್ಟಕ್ಕೇರಲು ಕಾಂಗ್ರೆಸ್ , ಬಿಜೆಪಿ ನಡುವೆ ಬಿಗ್ ಫೈಟ್ ..!

ಪ್ರಮುಖ ಸುದ್ದಿ

ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಚುನಾವಣೆ: ಪಟ್ಟಕ್ಕೇರಲು ಕಾಂಗ್ರೆಸ್ , ಬಿಜೆಪಿ ನಡುವೆ ಬಿಗ್ ಫೈಟ್ ..!

ಡಿವಿಜಿ ಸುದ್ದಿ, ದಾವಣಗೆರೆ:  ತೀವ್ರ ಕುತೂಹಲ ಮೂಡಿಸಿರುವ ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ ನಾಳೆ (ಫೆ.19 ) ನಡೆಯಲಿದೆ. ಅಧಿಕಾರಕ್ಕೇರಲು ಕಾಂಗ್ರೆಸ್, ಬಿಜೆಪಿ ಜಿದ್ದಾಜಿದ್ದಿಗೆ ಬಿದ್ದಿವೆ. ನಾಳೆಯ ಮೇಯರ್, ಉಪಮೇಯರ್  ಚುನಾವಣೆ  ಕೊನೆ ಕ್ಷಣದಲ್ಲಿ ಏನಾಗುತ್ತೆ ಎಂದು ಯಾರು ಕೂಡ ಉಹಿಸಿಕೊಳ್ಳಲು ಸಾಧ್ಯವಿಲ್ಲ. ಒಂದು ಕಡೆ ಬಿಜೆಪಿ  ಈ ಬಾರಿ ಪಾಲಿಕೆ ಪಟ್ಟಕ್ಕೇರದು ನಾವೇ ಎಂದು ಹೇಳುತ್ತಿದ್ದರೆ, ಇನ್ನೊಂದೆಡೆ ಕಾಂಗ್ರೆಸ್ ಕೂಡ ಸುಮ್ಮನಿಲ್ಲ. ಕೊನೆ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎಂಬುದು ಕಾಂಗ್ರೆಸ್ ಲೆಕ್ಕಾಚಾರದಲ್ಲಿದೆ.

ದಾವಣಗೆರೆ ಮಹಾನಗರಪಾಲಿಕೆಯ 21ನೇ ಅವಧಿಗೆ ಮೇಯರ್ ಮತ್ತು ಉಪಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿಗಳಿಗೆ ಸದಸ್ಯರನ್ನು ಆಯ್ಕೆ ಮಾಡಲು ಫೆ.19 ರಂದು ಬೆಳಿಗ್ಗೆ 11.30 ಕ್ಕೆ ಮಹಾ ನಗರಪಾಲಿಕೆಯ ಸಭಾಂಗಣದಲ್ಲಿ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಲಿದೆ ಎಂದು ಮಹಾನಗರಪಾಲಿಕೆಯ ಆಯುಕ್ತ ವಿಶ್ವನಾಥ್ ಮುದಜ್ಜಿ ತಿಳಿಸಿದ್ದಾರೆ. ಇನ್ನು ಮತದಾನ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಪಾಲಿಯ ಒಟ್ಟು 45 ವಾರ್ಡ್ ಗಳಲ್ಲಿ ಕಾಂಗ್ರೆಸ್ 22, ಬಿಜೆಪಿ 17, ಪಕ್ಷೇತರರು 5 ಜೆಡಿಎಸ್ 1 ಸ್ಥಾನ ಗೆದ್ದಿವೆ. ರಾಜ್ಯ ಸರ್ಕಾರ ಗೆಜೆಟ್ ನಲ್ಲಿ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಮತದಾನ ಮಾಡಲು ಸಂಸದರು, ಶಾಸಕರು , ಎಂಎಲ್ಸಿಗಳು ಸೇರಿ ಒಟ್ಟು 62 ಮತದಾರರು ಅರ್ಹರಿದ್ದಾರೆ ಎಂದು ಪ್ರಕಟಿಸಿದೆ. ಈ ಪಟ್ಟಿಯಲ್ಲಿ 14 ಎಂಲ್ಸಿಗಳು, 2 ಶಾಸಕರು, 1 ಸಂಸದರು, 45 ಪಾಲಿಕೆ ಸದಸ್ಯರು ಮತದಾನಕ್ಕೆ ಅರ್ಹರಿದ್ದಾರೆ .

ಅಂಕಿಯ ಆಟದಲ್ಲಿ ಗೆಲ್ಲೋದು ಯಾರು..?

ಕಾಂಗ್ರೆಸ್ 22 ಪಾಲಿಕೆ ಸದಸದ್ಯರ ಜೊತೆ 1 ಪಕ್ಷೇತರ ಅಭ್ಯರ್ಥಿ ಗುರುತಿಸಿಕೊಂಡಿದ್ದು, 1 ಶಾಸಕ, 6 ಎಂಎಲ್ಸಿಗಳು ಮತದಾನಕ್ಕೆ ಅರ್ಹರಾಗಿದ್ದಾರೆ. ಇದರಿಂದ ಕಾಂಗ್ರೆಸ್ ಬಲ 30 ಆಗುತ್ತದೆ.  ಒಂದು ವೇಳೆ ಕಾಂಗ್ರೆಸ್ ಗೆ ಜೆಡಿಎಸ್ ಬೆಂಬಲ ನೀಡಿದರೆ, 31 ಸ್ಥಾನಗಳು ಕಾಂಗ್ರೆಸ್ ಲೆಕ್ಕಾಚಾರದಲ್ಲಿವೆ. ಇನ್ನು ಬಿಜೆಪಿ 17 ಪಾಲಿಕೆ ಸದಸ್ಯರು, 4 ಪಕ್ಷೇತರರು ಬಿಜೆಪಿ ಜೊತೆ ಗುರುತಿಸಿಕೊಂಡಿದ್ದು,1 ಸಂಸದರು , 1 ಶಾಸಕರು, 8 ಎಂಎಲ್ಸಿಗಳು ಒಳಗೊಂಡಂತೆ ಒಟ್ಟು 31 ಸ್ಥಾನ ಆಗುತ್ತದೆ.

ಎರಡು ಕಡೆ ಲೆಕ್ಕಾಚಾರ ಸಮವಾಗಲಿದಲ್ಲಿ ಕೊನೆ ಕ್ಷಣದಲ್ಲಿ ಚುನಾವಣೆ ಅಧಿಕಾರಿಗಳ ನಿರ್ಧಾರದ ಮೇಲೆ ನಿಂತಿದೆ. ಒಂದು ವೇಳೆ ಜೆಡಿಎಸ್ ಕಾಂಗ್ರೆಸ್  ಪಕ್ಷಕ್ಕೆ ಬೆಂಬಲ ನೀಡದಿದ್ದರೆ ಬಿಜೆಪಿ ಗೆಲ್ಲಲಿದೆ.  ಕೊನೆ ಕ್ಷಣದಲ್ಲಿ ಒಬ್ಬ ಪಕ್ಷೇತರ ಅಡ್ಡ ಮತದಾನ ಮಾಡಿದರೂ  ಎರಡೂ ಪಕ್ಷಗಳಿಗೆ ಅಧಿಕಾರ ಕೈ ತಪ್ಪುವ ಸಾಧ್ಯತೆಯನ್ನು ತಳ್ಳಿ ಹಾಕಿವಂತಿಲ್ಲ.

ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಅಕ್ರಮವಾಗಿ 8 ಎಂಎಲ್ಸಿಗಳನ್ನು ಸೇರಿಸಿದೆ  ಎಂದು ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯರು ಫೆ. 17 ರಂದು ಮತದಾರಪಟ್ಟಿ ವೀಕ್ಷಣೆಗೆ ಬಂದ ಹಿರಿಯ ಐಎಎಸ್ ಅಧಿಕಾರಿ ಹರ್ಷಗುಪ್ತ ಅವರಿಗೆ ಮನವಿ ಸಲ್ಲಿಸಿದ್ದರು. ಅವರು ಮತದಾರರ ವಿಳಾಸ ಪರಿಶೀಲನೆ ನಡೆಸಿದಾಗ ಮತದಾರರು ಸಲ್ಲಿಸಿದ ವಿಳಾಸದಲ್ಲಿ ಯಾರು ಕೂಡ ಇಲ್ಲದಿದ್ದರಿಂದ ಜಿಲ್ಲಾಧಿಕಾರಿಗಳು ಎಂಎಲ್ಸಿಗಳಿಗೆ ನೋಟಿಸ್ ನೀಡಿದ್ದರು. ಇಂದು ಸಂಜೆ 5 ಗಂಟೆಗೆ ತಮ್ಮ ನಿರ್ಧಾರ ತಿಳಿಸುವುದಾಗಿ ಜಿಲ್ಲಾಧಿಕಾರಿಗಳು ಹೇಳಿದ್ದರು.

62 ಸದಸ್ಯರು ಮತದಾನಕ್ಕೆ ಅರ್ಹರು : ಜಿಲ್ಲಾಧಿಕಾರಿ  

ಪಾಲಿಕೆ ಚುನಾವಣೆಯಲ್ಲಿ ಜಿಲ್ಲಾಧಿಕಾರಿಗಳ ನಿರ್ಧಾರ ಬಹಳ ಪ್ರಾಮುಖ್ಯತೆ ಪಡೆದುಕೊಂಡಿತ್ತು. ಜಿಲ್ಲಾಧಿಕಾರಿಗಳು ಸಂಜೆ ನಿರ್ಧಾರ ತಿಳಿಸುವುದಾಗಿ ಇಂದು ಮಧ್ಯಾಹ್ನ ಭೇಟಿಯಾದ ಕಾಂಗ್ರೆಸ್ ಪಾಲಿಕೆ ಸದಸ್ಯರಿಗೆ ತಿಳಿಸಿದ್ದರು. ರಾತ್ರಿ 9 ಗಂಟೆ ವರೆಗೆ  ಜಿಲ್ಲಾಧಿಕಾರಿಗಳು ತಮ್ಮ ನಿರ್ಧಾರ ಪ್ರಕಟಿಸಿದ್ದು,62 ಸದಸ್ಯರು ಮತದಾನ ಮಾಡಲು ಅರ್ಹರು ಎಂದರು.

ವಿಚಾರಣೆ ಮುಂದೂಡಿದ ಹೈಕೋರ್ಟ್

ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಚುನಾವಣೆಯಲ್ಲಿ ಅಕ್ರಮ ಮತದಾರ ಪಟ್ಟಿ ವಿಚಾರವಾಗಿ ಸಲ್ಲಿಕೆಯಾಗಿದ್ದ ದೂರನ್ನು ವಿಚಾರಣೆ ನಡೆಸಿದ ಹೈಕೋರ್ಟ್, ನಾಳೆಯೇ (ಫೆ. 19 ) ಚುನಾವಣೆ ಇರುವುದರಿಂದ ನ್ಯಾಯಾಲಯ ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲವೆಂದು ವಿಚಾರಣೆಯನ್ನು ಫೆ. 24 ಕ್ಕೆ ಮುಂದೂಡಿದೆ.

ನಾಳೆಯೇ ಪಾಲಿಕೆಯ ಚುನಾವಣೆ ನಡೆಯುವುದರಿಂದ ನ್ಯಾಯಾಲಯ ಮಧ್ಯ ಪ್ರವೇಶಿಸುವುದಿಲ್ಲ. ಆದರೆ ಮತದಾರರ ಪಟ್ಟಿ ಪರಿಷ್ಕರಣೆ ಅಧಿಕಾರಿ  ಹರ್ಷಗುಪ್ತಾ ಅವರು ಜಿಲ್ಲಾಧಿಕಾರಿಗಳಿಗೆ ಸಮರ್ಪಕ ತನಿಖೆಗೆ ಆದೇಶಿಸಿದೆ. ಜಿಲ್ಲಾಧಿಕಾರಿಗಳು ಮತ್ತು ಸರ್ಕಾರ ತೆಗೆದುಕೊಳ್ಳುವ ನಿರ್ಧಾರವನ್ನು ಕೋರ್ಟ್ ಗಮನಿಸುತ್ತದೆ ಎಂದು ಕೋರ್ಟ್  ಪ್ರಕರಣವನ್ನು ಫೆ. 24ಕ್ಕೆ ಮುಂದೂಡಿದೆ.

ಒಟ್ನಲ್ಲಿ ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅದೃಷ್ಟ ಲಕ್ಷ್ಮಿ ಯಾರ ಕಡೆ ಇದೆ ಎಂಬುದಕ್ಕೆ ನಾಳೆ (ಫೆ. 19) ವರೆಗೆ ಕಾಯಲೇಬೇಕಿದೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top