ಡಿವಿಜಿ ಸುದ್ದಿ, ಬೆಂಗಳೂರು: ಮಂಗಳೂರಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ಅಮಾನವೀಯವಾಗಿ ಗುಂಡು ಹಾರಿಸಿದ್ದು, ಪ್ರತಿಭಟನೆ ಹತ್ತಿಕ್ಕುವ ಅಧಿಕಾರ ಪೊಲೀಸರಿಗೆ ಯಾರು ಕೊಟ್ಟರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಾಂತಿಯುತ ಪ್ರತಿಭಟನೆ ಹತ್ತಿಕ್ಕುವ ಅಧಿಕಾರವನ್ನು ಸಂವಿಧಾನದಲ್ಲಿ ಯಾರಿಗೂ ಕೊಟ್ಟಿಲ್ಲ. ದೇಶದ ಅನೇಕ ರಾಜ್ಯಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಜನರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಒಂದು ಕಡೆ ಮುಖ್ಯಮಂತ್ರಿ ಯಡಿಯೂರಪ್ಪ ಗುಂಡು ಹಾರಿಸಬೇಡಿ ಅಂತ ಹೇಳಿದ್ದೇನೆ ಅಂತಾರೆ. ಅವರ ಆದೇಶ ಇದ್ರೂ ಪೊಲೀಸರು ಗುಂಡು ಹಾರಿಸ್ತಾರೆ ಅಂದ್ರೆ ಏನು ಇದರ ಅರ್ಥ. ಮುಖ್ಯಮಂತ್ರಿ ಆದೇಶಕ್ಕೆ ಪೊಲೀಸರು ಕಿಮ್ಮತ್ತು ಕೊಡ್ತಿಲ್ಲ. ಯಡಿಯೂರಪ್ಪ ಸುಳ್ಳು ಹೇಳುತ್ತಿರಬೇಕು ಅಥವಾ ಅವರ ಮಾತನ್ನು ಪೊಲೀಸರು ಕೇಳುತ್ತಿಲ್ಲ. ಗುಂಡು ಹಾರಿಸಿದ್ದೇವಿ ಯಾರು ಕೂಡ ಸಾಯ್ತಿಲ್ಲ ಎನ್ನುವ ಪೊಲೀಸ್ ಅಧಿಕಾರಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇನ್ನೊಂದೆಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರನ್ನು ಪೊಲೀಸರು ಬಲವಂತವಾಗಿ ಎಳೆದುಕೊಂಡು ಹೋದ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಯಡಿಯೂರಪ್ಪ ಏನು ಅನ್ನೋತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೈಕೋರ್ಟ್ ನ್ಯಾಯಮೂರ್ತಿಯಿಂದ ತನಿಖೆಗೆ ಆಗ್ರಹ
ಸರ್ಕಾರದ ಗಮನಕ್ಕೆ ತಾರದೆ ಗೋಲಿಬಾರ್ ಮಾಡಲು ಸಾಧ್ಯವಿಲ್ಲ. ಇವರ ಉದ್ದೇಶವೇನು ಅಂದರೆ ಎರಡು ಧರ್ಮಗಳ ನಡುವೆ ಬೆಂಕಿ ಹಚ್ಚಿ ರಾಜಕೀಯ ಲಾಭ ಪಡೆದುಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ. ಜನರ ಹಕ್ಕು ಮತ್ತು ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಇದು. ಅಮಾನವೀಯವಾಗಿ ಇಬ್ಬರು ಅಮಾಯಕರನ್ನು ಗುಂಡು ಹಾರಿಸಿ ಕೊಂದಿದ್ದಾರೆ. ಇದನ್ನು ತೀವ್ರವಾಗಿ ಖಂಡಿಸುತ್ತೇನೆ. ಈ ಜವಾಬ್ದಾರಿಯನ್ನು ಸರ್ಕಾರ ಹೊರಬೇಕು. ಹೈಕೋರ್ಟ್ ನ್ಯಾಯಮೂರ್ತಿಯಿಂದ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.



