ಹೊಸ ದಿಲ್ಲಿ: ಕೊರೊನಾ ವೈರಸ್ ತಡೆಯಲು ಇಂದು ರಾತ್ರಿ 12 ಗಂಟೆಯಿಂದ 21 ದಿನಗಳ ಕಾಲ ಇಡೀ ದೇಶ ಲಾಕ್ ಡೌನ್ ಆಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ದೇಶದ ಜನ, ಕುಟುಂಬ ರಕ್ಷಣೆಗೆ ಲಾಕ್ ಡೌನ್ ಅನಿವಾರ್ಯ ಎಂದಿದ್ದಾರೆ.

3 ವಾರಗಳ ಕಾಲ ಇಡೀ ದೇಶ ಲಾಕ್ ಡೌನ್ ಜಾರಿಯಲ್ಲಿ ಇರಲಿದ್ದು, ಯಾರು ಕೂಡಾ ಮನೆಯಿಂದ ಹೊರ ಬರುವಂತಿಲ್ಲ. ದೇಶದ ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಕಾನೂನು ಜಾರಿಗೆ ಬರಲಿದೆ. ಇದು ಕರ್ಫ್ಯೂಗಿಂತಲೂ ಕಠಿಣವಾಗಿದ್ದು, ಇದದಿ ಕರ್ಫ್ಯೂಗಿಂತ ಇದು ದೊಡ್ಡದು. ಈ 21 ದಿನಗಳ ಕಾಲ ನೀವು ಕಷ್ಟವನ್ನು ಸಹಿಸಿಕೊಳ್ಳದಿದ್ದರೆ , ನಮ್ಮ ದೇಶ 21 ವರ್ಷಗಳಷ್ಟು ಹಿಂದೆ ಹೋಗುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ. ಕೊರೊನಾ ವೈರಸ್ ವಿರುದ್ಧ ನಿರ್ಣಾಯಕ ಸಮರ ಎಂದು ಪ್ರಧಾನಿ ಕರೆ ನೀಡಿದ್ದಾರೆ.
ವೈದ್ಯರು, ದಾದಿಯರು, ಸಿಬ್ಬಂದಿ ನಮ್ಮೆಲ್ಲರನ್ನೂ ಬಚಾವ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅವರನ್ನು ಗೌರವಿಸಿ, ಅವರಿಗಾಗಿ ಪ್ರಾರ್ಥಿಸಿ, ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಕರೆ ನೀಡಿದರು. ಇನ್ನು ಕೊರೊನಾ ಬೈರಸ್ ಕುರಿತಾದ ಎಲ್ಲಾ ಬೆಳವಣಿಗೆಗಳನ್ನೂ ಜನರ ಮುಂದಿಡಲು ಹಗಲು-ರಾತ್ರಿ ಶ್ರಮಿಸುತ್ತಿರುವ ಮಾಧ್ಯಮದವರನ್ನೂ ಗೌರವಿಸಿ ಎಂದು ಮನವಿ ಮಾಡಿಕೊಂಡರು.



