Connect with us

Dvgsuddi Kannada | online news portal | Kannada news online

ಜಯದೇವ ಶ್ರೀಗಳು ಅನ್ಯ ಧರ್ಮ ಸಹಿಷ್ಣುಗಳಾಗಿದ್ದರು: ಮುರುಘ ಶ್ರೀ

ದಾವಣಗೆರೆ

ಜಯದೇವ ಶ್ರೀಗಳು ಅನ್ಯ ಧರ್ಮ ಸಹಿಷ್ಣುಗಳಾಗಿದ್ದರು: ಮುರುಘ ಶ್ರೀ

ಡಿವಿಜಿ ಸುದ್ದಿ, ದಾವಣಗೆರೆ:  ಕಾಯಕಯೋಗಿ ಬಸವಣ್ಣನವರ ತತ್ವಾದರ್ಶಗಳನ್ನು ಅಕ್ಷರಶಃ ಪಾಲಿಸಿದ್ದ ಜಯದೇವ ಮುರುಘರಾಜೇಂದ್ರ ಶ್ರೀಗಳು ಅನ್ಯ ಜಾತಿ, ಧರ್ಮ ಸಹಿಷ್ಣುಗಳಾಗಿದ್ದರು ಎಂದು ಮುರುಘ ಮಠದ ಡಾ. ಶ್ರೀ ಶಿವಮೂರ್ತಿ ಮುರುಘ ಶರಣರು ಆರ್ಶೀವಚನದಲ್ಲಿ ತಿಳಿಸಿದರು.

ನಗರದ ಬಸವಕೇಂದ್ರದಲ್ಲಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್ ಆಯೋಜಿಸಿದ್ದ ಲಿಂ.ಶ್ರೀ ಜಯದೇವ ಮುರುಘರಾಜೇಂದ್ರ ಸ್ವಾಮೀಜಿ ಅವರ 63 ನೇ ಸ್ಮರಣೋತ್ಸವ- 2020, ಜಯದೇವಶ್ರೀ ಹಾಗೂ ಶೂನ್ಯ ಪೀಠ ಪ್ರಶಸ್ತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಸವಣ್ಣನವರು ಅನುಭವ ಮಂಟಪದಲ್ಲಿ ಅಲ್ಲಮ ಪ್ರಭುವನ್ನು ಶೂನ್ಯ ಪೀಠಾಧಿಪತಿಯನ್ನಾಗಿಸಿ ಎಲ್ಲಾ ಸಮಾಜದ ಶರಣರನ್ನು ಬೆಳೆಸಿದರು. ಅದೇ ರೀತಿ ಜಯದೇವ ಮುರುಘರಾಜೇಂದ್ರ ಸ್ವಾಮೀಜಿ ಅವರು, ತನ್ನ ಸಮಾಜದ ಶ್ರಯೋಭಿವೃದ್ಧಿಯ ಜೊತೆಗೆ ಅನ್ಯ ಧರ್ಮೀಯರನ್ನು ಪ್ರೋತ್ಸಾಹಿಸಿದರು.  ದಲಿತ ಸಮಾಜದ ವಿದ್ಯಾರ್ಥಿ ನಿಲಯ ತೆರೆದರು. ಇದಲ್ಲದೆ ಮುಸ್ಲಿಂ ಸಮುದಾಯಕ್ಕೆ ಮಸೀದಿ ಕಟ್ಟಲು ಭೂಮಿ ದಾನ ನೀಡಿದ್ದಾರೆ. ಹೀಗೆ ತನ್ನ ಸಮಾಜ ಸಹಿಷ್ಣತೆ ಜೊತೆಗೆ ಅನ್ಯ ಧರ್ಮ ಮತ್ತು ಜಾತಿಯನ್ನು ಸಹಿಷ್ಣುತೆಯಿಂದ ಕಂಡರು ಎಂದರು.

ಜಯದೇವ ಶ್ರೀಗಳು ಮೈಸೂರು ಮಹಾರಾಜರಿಂದ ಸಾಮಾನ್ಯ ಜನರಿಗೂ ತಲುಪುವ ಶ್ರೀಗಳಾಗಿದ್ದರು. ಅವರು  53 ವರ್ಷದಲ್ಲಿ ಮಾಡಿದ ಕೆಲಸಗಳು ಇಂದಿಗೂ ಅವಿಸ್ಮರಣೀಯ. ಮಠ ಪರಂಪರೆಯಲ್ಲಿಯೇ ಮುರುಘ ಮಠವು ಅತಿ ಹೆಚ್ಚು ವೈದ್ಯಕೀಯ ಕಾಲೇಜು, ಆಸ್ಪತ್ರೆಯನ್ನು ತೆರೆದ ಕೀರ್ತಿ ಸಲ್ಲುತ್ತದೆ. ಬೆಂಗಳೂರಿನ ಜಯದೇವ ಆಸ್ಪತ್ರೆ ತೆರೆಯಲು ಶ್ರೀಗಳು ಕಾರಣೀಕರ್ತರಾಗಿದ್ದರು ಎಂದು ತಿಳಿಸಿದರು.

ಜಯದೇವ ಶ್ರೀಗಳ ಸಾಮಾಜಿಕ ಕಾರ್ಯಕ್ಕೆ ಮನಸೋತ ರಾಷ್ಟ್ರಪಿತ ಮಹಾತ್ಮ ಗಾಂಧಿಜಿ ಅವರು ಮರುಘ ಮಠಕ್ಕೆ ಭೇಟಿ ಜಯದೇವ ಶ್ರೀಗಳನ್ನು ಭೇಟಿ ಮಾಡಿದ್ದರು.  ಮಹಾತ್ಮ ಗಾಂಧಿಜಿ ಅವರು ನೀಡಿದ ಸಲಹೆಯಂತೆ ಶ್ರೀಗಳು  ಆದಿ ದ್ರಾವಿಡ ವಿದ್ಯಾರ್ಥಿ ನಿಲಯ ಸ್ಥಾಪಿಸಿದರು. ಇದಲ್ಲದೆ ರಾಜಕೀಯವಾಗಿ ಮುಖ್ಯಮಂತ್ರಿಗಳಾದ ಎಸ್. ನಿಜಲಿಂಗಪ್ಪ, ಜೆ.ಎಚ್. ಪಾಟೀಲ್, ಬಿ.ಡಿ. ಜತ್ತಿ ಅಂತಹ ಮಹಾನ್ ನಾಯಕರನ್ನು ಬೆಳೆಸಿದರು ಎಂದರು.

ಕೆಲವರು ಹುಟ್ಟುತ್ತಲೇ ದೊಡ್ಡವರಾಗುತ್ತಾರೆ. ಇನ್ನು ಕೆಲವರು ಹುಟ್ಟಿ ದೊಡ್ಡವರಾಗಿ ಸಮಾಜಕ್ಕೆ ಎಲ್ಲಾ ತ್ಯಾಗ ಮಾಡುತ್ತಾರೆ. ಮತ್ತೆ ಕೆಲವರು ತಾವು ದೊಡ್ಡವರಾಗಿದ್ರೂ, ಬೇರೆಯವರನ್ನು ದೊಡ್ಡವರನ್ನಾಗಿ ಬೆಳೆಸುತ್ತಾರೆ. ಅದೇ ರೀತಿ ಬಸವಣ್ಣನವರು ತನ್ನಲ್ಲಿ ಅನುಭವ ಮಂಟಪದ ಪೀಠಾಧಿಪತಿ ಆಗುವ ಎಲ್ಲಾ ಅರ್ಹತೆ ಇದ್ದರೂ, ಅಲ್ಲಮಪ್ರಭು ಶರಣರನ್ನು  ಪೀಠಾಧಿಪತಿಯನ್ನಾಗಿಸಿದರು. ಹಾಗೆಯೇ ಜಯದೇವ ಶ್ರೀಗಳು ತಾವು ದೊಡ್ಡವರಾಗಿದ್ದರೂ, ಬೇರೆಯವರನ್ನು ಬೆಳೆಸಲು ಸದಾ ಕ್ರಿಯಾಶೀಲರಾಗಿದ್ದರು ಎಂದು ಸ್ಮರಿಸಿದರು.

ಜಯದೇವ ಶ್ರೀ, ಶೂನ್ಯ ಪೀಠ ಪ್ರಶಸ್ತಿ ಪ್ರದಾನ

ಜಯದೇವಶ್ರೀ ಪ್ರಶಸ್ತಿ- ಎಚ್.ಎಂ ರೇವಣ್ಣ, ವಿಧಾನ ಪರಿಷತ್ ಸದಸ್ಯರು

ಶೂನ್ಯ ಪೀಠ ಪ್ರಶಸ್ತಿ- ಎಚ್.ಸಿ ಪ್ರಭಾಕರ್, ಉದ್ಯಮಿಗಳು

ಶೂನ್ಯ ಪೀಠ ಚನ್ನಬಸವ ಪ್ರಶಸ್ತಿ- ಡಾ. ನಾಗರಾಜ್ ಬಿ. ಸಜ್ಜನ್ , ಹೊಳಲ್ಕೆರೆ

ಜಯದೇವ ಪ್ರಶಸ್ತಿ ಪುರಸ್ಕೃತ ಎಂಎಲ್ ಸಿ  ಎಚ್.ಎಂ. ರೇವಣ್ಣ ಮಾತನಾಡಿ, ಮರುಘ ಶ್ರೀಗಳು ಮೌಢ್ಯತೆ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವುದರ ಜೊತೆ ಜೊತೆಗೆ ಸಮಾಜವನ್ನು ಜಾಗೃತವನ್ನಾಗಿಸಿದ್ದಾರೆ. ಮಹಾತ್ಮ ಗಾಂಧಿಜಿ, ಬಸವಣ್ಣ ತತ್ವಗಳನ್ನು ಪಾಲಿಸುತ್ತಿರುವ ಶ್ರೀ ಮಠದಿಂದ ಜಯದೇವ ಶ್ರೀ ಪ್ರಶಸ್ತಿ ಪಡೆದಿರುವುದು ನನ್ನ ಪೂರ್ವ ಜನ್ಮದ ಪುಣ್ಯವಾಗಿದೆ. ನಾನು ಈ ಮಟ್ಟಕ್ಕೆ ಬೆಳೆಯಲು ಸಿದ್ದಗಂಗಾ ಶ್ರೀ ಆರ್ಶೀವಾದವೇ ಕಾರಣ. ಮುರುಘ ಮಠ ಎಲ್ಲಾ ಮಠಗಳಿಗೂ ಮಾದರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಧಾರವಾಡ ಮುರುಘ ಮಠದ ಶ್ರೀ. ಮಲ್ಲಿಕಾರ್ಜುನ ಸ್ವಾಮೀಜಿ, ಬಸವ ಕೇಂದ್ರದ ಶ್ರೀ ಬಸವಪ್ರಭು ಸ್ವಾಮೀಜಿ ಉಪಸ್ಥಿತರಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top