ಡಿವಿಜಿ ಸುದ್ದಿ, ಹಾವೇರಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಅನಾಮಧೇಯ ವ್ಯಕ್ತಿಯೊಬ್ಬ ಬಂದು ಬ್ಯಾಗ್ ಇಟ್ಟಿರೋದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಬಗ್ಗೆ ಸಮಗ್ರ ತನಿಖೆಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಶಿಗ್ಗಾವಿಯ ಜಾನಪದ ವಿಶ್ವ ವಿದ್ಯಾಲಯದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅನಾಮಧೇಯ ವ್ಯಕ್ತಿ ಆಟೋದಲ್ಲಿ ಬಂದು, ಬ್ಯಾಗ್ ಇಟ್ಟಿದ್ದಾನೆ. ಈ ದೃಶ್ಯಗಳು ಸಿಸಿಟಿವಿ ಸೆರೆಯಾಗಿದೆ. ಸಂಶಯಾಸ್ಪದವಾಗಿ ಕಂಡು ಬಂದ ಹಿನ್ನೆಲೆಯಲ್ಲಿ ಸಿಐಎಸ್ಎಫ್ ಪೊಲೀಸರು ಪರಿಶೀಲಿಸಿದಾಗ ಸಜೀವ್ ಬಾಂಬ್ ಪತ್ತೆಯಾಗಿದೆ.ಈ ಕೃತ್ಯದ ಹಿಂದೆ ಯಾರಿದ್ದಾರೆಂದು ಪತ್ತೆ ಹಚ್ಚಲು ಪೊಲೀಸರು ಕಾರ್ಯ ಪ್ರವೃತ್ತರಾಗಿದ್ದು, ತನಿಖೆ ನಡೆಸುವಂತೆ ಸೂಚಸಿದ್ದೇನೆ.
ನಮ್ಮ ದೇಶದ ಆರ್ಥಿಕ ಚಟುವಟಿಕೆಗಳಿಗೆ ಭಂಗ ತರುವ ಕೃತ್ಯವಿದು. ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಗಣರಾಜೋತ್ಸವ ಬಂದಾಗ ದೇಶದಲ್ಲಿ ಈ ರೀತಿಯ ಕೃತ್ಯಕ್ಕೆ ಪ್ರಯತ್ನ ನಡೆಸುತ್ತಾ ಬಂದಿದ್ದಾರೆ. ಅದನ್ನು ನಾವು ವಿಫಲ ಮಾಡುತ್ತ ಬಂದಿದ್ದೇವೆ ಎಂದರು. ಅದಕ್ಕಾಗಿ ಮಂಗಳೂರು, ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣ, ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ ಎಂದರು.



