ಡಿವಿಜಿಸುದ್ದಿ.ಕಾಂ, ಹೊನ್ನಾಳಿ: ಒಂದೇ ಕೋಣಕ್ಕಾಗಿ ಎರಡು ಗ್ರಾಮದ ಗ್ರಾಮಸ್ಥರು ಜಿದ್ದಿಗೆ ಬಿದ್ದಿದ್ದಾರೆ. ಈ ಸುದ್ದಿ ಇದೀಗ ರಾಜ್ಯ ಮಟ್ಟದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಇಬ್ಬರ ಜಗಳದಲ್ಲಿ ಬಾಯಿ ಇಲ್ಲದ ಕೋಣ ಬಡವಾಗಿದೆ.
ಹೊನ್ನಾಳಿ ತಾಲ್ಲೂಕಿನ ಬೇಲಿಮಲ್ಲೂರು ಹಾಗು ಶಿವಮೊಗ್ಗ ತಾಲ್ಲೂಕಿನ ಹಾರನಹಳ್ಳಿ ಗ್ರಾಮದ ನಡುವೆ ಕೋಣನ ವಾರುಸುದಾರಿಕೆ ಭಾರೀ ಜಿದ್ದಾಜಿದ್ದು ನಡೆಯುತ್ತಿದೆ. ಈ ಜಿದ್ದಾಜಿದ್ದು ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಈ ಸಮಸ್ಯೆ ಸೌಹರ್ದಯುತವಾಗಿ ಪರಿಹರಿಸಲು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಮುಂದಾಗಿದ್ದರೂ, ಸಮಸ್ಯೆ ಬಗೆಹರಿದಿಲ್ಲ.
ಎರಡು ಗ್ರಾಮದವರನ್ನು ಸಮಾಧಾನಪಡಿಸಿ ವಿವಾಧಕ್ಕೆ ತೆರೆ ಎಳೆಯಲು ಹಾರನಹಳ್ಳಿಗೆ ತೆರಳಿದ ದಾವಣಗೆರೆ ಪೊಲೀಸರು ಹಾರನಹಳ್ಳಿ ಗ್ರಾಮಸ್ಥರ ಮನವೊಲಿಸಿ ಕೋಣನ ವಶಕ್ಕೆ ಪಡೆದಿದ್ದಾರೆ. ಹೊನ್ನಾಳಿ ಸರ್ಕಲ್ ಇನ್ಸಪೆಕ್ಟರ್ ದೇವರಾಜ್ ನೇತೃತ್ವದಲ್ಲಿ 20 ಕ್ಕೂ ಹೆಚ್ಚು ಪೊಲೀಸರು ಹಾರನಹಳ್ಳಿ ಗ್ರಾಮದಲ್ಲಿ ಸಭೆ ನಡೆಸಿ ಡಿಎನ್ ಎ ಪರೀಕ್ಷೆಗೆ ಒಪ್ಪಿಸಿದ್ದಾರೆ.
ಕೋಣ ನ ಡಿ ಎನ್ ಎ ಟೆಸ್ಟ್ ನಂತರ ಯಾರಿಗೆ ಸೇರಿದ್ದು ಎಂದು ನಿರ್ಧಾರದ ನಂತರ ಗ್ರಾಮ ದೇವತೆ ಜಾತ್ರೆಗೆ ಒಪ್ಪಿಸುವುದಾಗಿ ಎರಡು ಗ್ರಾಮದವರಿಗೆ ತಿಳಿಹೇಳಿದ್ದಾರೆ. ಎರಡು ಗ್ರಾಮಸ್ಥರ ಕೋರಿಕೆಯಂತೆ ಡಿಎನ್ ಎ ಟೆಸ್ಟ್ ತಾಳೆ ನೋಡಲು ಎರಡು ಗ್ರಾಮದ ತಾಯಿ ಎಮ್ಮೆ ಡಿ ಎನ್ ಎ ಮಾದರಿಯನ್ನು ಪಶುವೈದ್ಯಾಧಿಕಾರಿಗಳ ಮೂಲಕ ಹೈದರಾಬಾದ್ ಪ್ರಯೋಗಕ್ಕೆ ಕಳಿಸಲಾಗಿದೆ.
ಈ ವರದಿ ಬಂದ ನಂತರವಷ್ಟು ನಿಜವಾದ ವಾರಸುದಾರ ಯಾರು ಎಂಬುದು ಗೊತ್ತಾಗಲಿದೆ. ಅಲ್ಲಿ ವರೆಗೂ ಕೋಣವನ್ನು ತಟಸ್ಥ ಸ್ಥಳಕ್ಕೆ ಕೋಣ ರವಾನೆ ಮಾಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಹೇಳಿದ್ದಾರೆ.



