ಇಸ್ಲಾಮಾಬಾದ್: ಭಾರತ ಪ್ರಧಾನಿ ನರೇಂದ್ರ ಮೋದಿ ಅಧಿಕಾರದಲ್ಲಿ ಇರೋವರೆಗೂ ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಕ್ರಿಕೆಟ್ ಸರಣಿ ನಡೆಯಲ್ಲ ಎಂದು ಪಾಕಿಸ್ತಾನ ಮಾಜಿ ಆಟಗಾರ ಶಾಹೀದ್ ಅಫ್ರಿದಿ ಅಭಿಪ್ರಾಯ ಪಟ್ಟಿದ್ದಾರೆ.

ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಪಾಕ್-ಭಾರತ ನಡುವೆ ಸರಣಿ ನಡೆಯದಿರಲು ಪ್ರಧಾನಿ ನರೇಂದ್ರ ಮೋದಿ ಕಾರಣ. ಅವರು ಅಧಿಕಾರದಲ್ಲಿ ಇರೋ ವರೆಗೂ ಟೂರ್ನಿ ನಡೆಸಲು ಬಿಡಲ್ಲ. ಮೋದಿ ಪಾಕಿಸ್ತಾನದ ವಿರುದ್ಧ ಯಾವಾಗಲೂ ನಕರಾತ್ಮಕವಾಗಿ ಯೋಚನೆ ಮಾಡುತ್ತಾರೆ. ಅವರ ಈ ನಿರ್ಧಾರದಿಂದಲೇ ಎರಡು ದೇಶಗಳ ನಡುವಿನ ಸ್ನೇಹ ವಾತಾವರಣ ನಿರ್ಮಾಣವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ಕ್ರಿಕೆಟ್ ಟೂರ್ನಿ ಆಯೋಜಿಸಲು ಪಿಸಿಬಿ ಪ್ರಯತ್ನ ಮೆಚ್ಚುವಂತಹದು. ಅಲ್ಲದೇ ಈ ಬಾರಿಯ ಪಾಕಿಸ್ತಾನ್ ಸೂಪರ್ ಲೀಗ್ ಕ್ರಿಕೆಟ್‍ನಲ್ಲಿ ವಿವಿಧ ದೇಶಗಳ ಕ್ರಿಕೆಟಿಗರು ಭಾಗಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ತಂಡಗಳು ಪಾಕ್ ಪ್ರವಾಸವನ್ನು ಕೈಗೊಳ್ಳಲಿವೆ. ಪಾಕಿಸ್ತಾನದಲ್ಲಿ ಈ ವರ್ಷದ ಅಂತ್ಯದ ವೇಳೆಗೆ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ನಡೆಯಲಿದೆ ಎಂದು ತಿಳಿಸಿದರು.
ಭಾರತ ಈ ಟೂರ್ನಿಯಲ್ಲಿ ಭಾಗಿಯಾಗದಿದ್ದರೆ ಮುಂದಿನ ವರ್ಷ ಭಾರತದಲ್ಲಿ ನಡೆಯುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ಭಾಗವಹಿಸುವುದಿಲ್ಲ ಎಂದು ಪಿಸಿಬಿ ಹೇಳಿದೆ. ಆದರೆ ಪಿಸಿಬಿಯ ಎಚ್ಚರಿಕೆಗಳಿಗೆ ಬಿಸಿಸಿಐ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 2012ರಿಂದ ದ್ವಿಪಕ್ಷೀಯ ಸರಣಿಯಿಂದ ದೂರ ಉಳಿದಿರುವ ಟೀಂ ಇಂಡಿಯಾ ಐಸಿಸಿ, ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗಳಲ್ಲಿ ಮಾತ್ರ ಎದುರಾಗುತ್ತಿವೆ.



