ಹೈದರಾಬಾದ್: ಪಶು ವೈದ್ಯೆ ದಿಶಾ ಸಾಮೂಹಿಕ ಅತ್ಯಾಚಾರ, ಕೊಲೆ ಆರೋಪಿಗಳ ಮೇಲೆ ನಾವು ಎನ್‍ಕೌಂಟರ್ ನಡೆಸಿಲ್ಲ. ಪಿಸ್ತೂಲ್ ಕಸಿದುಕೊಂಡು ನಮ್ಮ ಮೇಲೆಯೇ ಹಲ್ಲೆಗೆ ಯತ್ನಿಸಿದ್ದಕರು. ಹೀಗಾಗಿ ನಮ್ಮ ಆತ್ಮರಕ್ಷಣೆಗಾಗಿ ಆರೋಪಿಗಳ ಮೇಲೆ ಶೂಟೌಟ್ ನಡೆಸಿದ್ದೇವೆಂದು ಸೈಬರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನರ್ ಹೇಳಿದ್ದಾರೆ.
#WATCH Telangana Police briefs the media on today's encounter https://t.co/wMljp3hapb
— ANI (@ANI) December 6, 2019
ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸ್ಟಡಿಯಲ್ಲಿದ್ದ ಆರೋಪಿಗಳಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಲು ದಿಶಾರ ಮೊಬೈಲ್ ಫೋನ್, ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲು ಘಟನಾ ಸ್ಥಳಕ್ಕೆ ಕರೆತರಲಾಗಿತ್ತು. ಸ್ಥಳ ಪರಿಶೀಲನೆ ವೇಳೆ ಸರಿಯಾದ ಮಾಹಿತಿ ನೀಡದೆ ಸಮಯ ವ್ಯರ್ಥ ಮಾಡುತ್ತಿದ್ದರು. ಆ ಬಳಿಕ ಸ್ಥಳದಲ್ಲಿ ದೊರೆತ ಕಲ್ಲು, ದೊಣ್ಣೆಗಳನ್ನು ಹಿಡಿದು ಪೊಲೀಸರ ಮೇಲೆ ಹಲ್ಲೆ ನಡೆಸಿ, ಪೊಲೀಸರ 2 ಪಿಸ್ತೂಲ್ ಕಿತ್ತುಕೊಂಡರು.
ಪ್ರಕರಣ ಎ1 ಮತ್ತು ಎ2 ಆರೋಪಿಗಳಾದ ಆರಿಫ್, ಚನ್ನಕೇಶವಲು ಪೊಲೀಸರ ಮೇಲೆ ಫೈರ್ ಮಾಡಿದ್ದರು. ಈ ಸಂದರ್ಭದಲ್ಲಿ ಇಬ್ಬರು ಪೊಲೀಸರಿಗೆ ಗಾಯವಾಗಿದ್ದು, ಎಚ್ಚರಿಕೆ ನೀಡಿದರೂ ಪೊಲೀಸರ ಮೇಲೆ ದಾಳಿ ನಡೆಸಿದರು. ಅನಿವಾರ್ಯವಾಗಿ ಪ್ರತಿದಾಳಿ ನಡೆಸಬೇಕಾಯಿತು. ಸ್ವಲ್ಪ ಸಮಯದ ಬಳಿಕ ಸ್ಥಳ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ನಾಲ್ವರು ಸಾವನ್ನಪ್ಪಿದ್ದು ಖಚಿತವಾಗಿತ್ತು ಎಂದು ವಿವರಿಸಿದರು.

ಆರೋಪಿಗಳ ಮೇಲೆ ಹಲವು ಅಪರಾಧ ಪ್ರಕರಣಗಳಿದ್ದು, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಂದ ಮಾಹಿತಿ ಸಂಗ್ರಹಿಸಿದ್ದೇವೆ. ಈ ಹಿಂದೆ ಯಾವ ಯಾವ ಸ್ಥಳಗಳಲ್ಲಿ ಮಹಿಳೆಯರ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂಬ ಬಗ್ಗೆಯೂ ತನಿಖೆ ನಡೆಸಿದ್ದೇವೆ ಎಂದರು.
ಪ್ರಕರಣದಲ್ಲಿ ಪೊಲೀಸ್ ಎಸ್‍ಐ ಸೇರಿದಂತೆ ಮತ್ತೊಬ್ಬ ಅಧಿಕಾರಿಯ ತಲೆಗೆ ಗಂಭೀರ ಪೆಟ್ಟಾಗಿದ್ದು, ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಮೊದಲು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೇರೆಡೆ ಶಿಫ್ಟ್ ಮಾಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮೊದಲು ತೆಲುಗಿನಲ್ಲಿ ವಿವರಣೆ ನೀಡಿದರು. ಬಳಿಕ ಇಂಗ್ಲಿಷ್, ಹಿಂದಿಯಲ್ಲಿ ನೀಡಿ ಕೊನೆಗೆ ಕನ್ನಡದಲ್ಲೂ ಘಟನೆಯನ್ನು ವಿವರಿಸಿ ಕನ್ನಡ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.



