ಡಿವಿಜಿ ಸುದ್ದಿ,ಬೆಂಗಳೂರು: ಆಂಧ್ರಪ್ರದೇಶದಲ್ಲಿ ಅತ್ಯಾಚಾರಿಗಳಿಗೆ ಕೇವಲ 21 ದಿನದಲ್ಲಿ ಶಿಕ್ಷೆ ವಿಧಿಸುವ ದಿಶಾ ಮಸೂದೆಯಂತೆ ರಾಜ್ಯದಲ್ಲಿಯೂ ಇಂತಹ ಕಾನೂನು ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ.
ಈ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ನಮ್ಮ ರಾಜ್ಯದಲ್ಲಿ ಯಾವ ರೀತಿ ಕಾನೂನು ಇದೆ ಎಂಬುದನ್ನು ಪರಿಶೀಲನೆ ಮಾಡುವಂತೆ ಸೂಚಿಸಿದ್ದಾರೆ. ಆಂಧ್ರದಲ್ಲಿ ಈಗಾಗಲೇ ಜಾರಿಯಾಗಿರುವ ಕಾಯ್ದೆಯ ಪ್ರಕಾರ ಅತ್ಯಾಚಾರಿಗಳಿಗೆ ಕೇವಲ 14 ದಿನಗಳಲ್ಲಿ ತನಿಖೆ ಮುಗಿಸಿ 21 ದಿನಗಳಲ್ಲಿ ಶಿಕ್ಷೆ ಆಗುವಂತೆ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಜಾರಿಗೆ ತಂದಿದ್ದಾರೆ.

ಇತ್ತೀಚೆಗೆ ತೆಲಂಗಾಣ ರಾಜ್ಯದ ಪಶು ವೈದ್ಯೆ ದಿಶಾ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಸುದ್ದಿ ರಾಷ್ಟ್ರ ವ್ಯಾಪ್ತಿ ಸಂಚಲನ ಮೂಡಿಸಿತ್ತು. ಈ ಪ್ರಕರಣದಿಂದ ಎಚ್ಚೆತ್ತ ಆಂಧ್ರ ಸರ್ಕಾರ ದಿಶಾ ಹೆಸರಿನಲ್ಲಿ ಕಾಯ್ದೆ ಜಾರಿಗೆ ತಂದಿದೆ.



