ಡಿವಿಜಿಸುದ್ದಿ.ಕಾಂ, ದಾವಣಗೆರೆ: ದಕ್ಷಿಣ ಭಾರತ ಹಾಗೂ ಕರ್ನಾಟಕ ಮಕ್ಕಳ ಸಂಸ್ಥೆಯ ವಾರ್ಷಿಕ ಸಮ್ಮೇಳನ ನಾಳೆಯಿಂದ ಅ. 20 ರವರೆಗೆ ನಗರದ ಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಮಕ್ಕಳ ಸಂಸ್ಥೆ ಅಧ್ಯಕ್ಷ ಡಾ.ಎನ್.ಕೆ.ಕಾಳಪ್ಪನವರ್ ತಿಳಿಸಿದರು.
ಜೆಜೆಎಂ ಮೆಡಿಕಲ್ ಕಾಲೇಜು, ಎಸ್‌ಎಸ್ ಮೆಡಿಕಲ್ ಕಾಲೇಜ್, ದಾವಣಗೆರೆ ಮಕ್ಕಳ ಜಿಲ್ಲಾ ಘಟಕಗಳ ಸಹಯೋಗದಲ್ಲಿ ಕರ್ನಾಟಕ ಮಕ್ಕಳ ಸಂಸ್ಥೆ ವಾರ್ಷಿಕ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ನಾಳೆ ಬೆಳಗ್ಗೆ 9 ಕ್ಕೆ ಬಾಪೂಜಿ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿರುವ ಡಾ.ನಿರ್ಮಲಾ ಕೇಸರಿ ಹಾಲ್ ನಲ್ಲಿ ದಕ್ಷಿಣ ಭಾರತದ ಐಎಪಿಯ ಉಪಾಧ್ಯಕ್ಷ ಡಾ.ಶ್ರೀನಾಥ ಮುಗಳಿ ಕಾರ್ಯಾಗಾರ ಉದ್ಘಾಟಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೂರು ದಿನಗಳ ಕಾಲ ನಡೆಯುವ ಈ ಸಮ್ಮೇಳನದಲ್ಲಿ 250 ಸಂಪನ್ಮೂಲ ವ್ಯಕ್ತಿಗಳು ಆಗಮಿಸಲಿದ್ದು, ಅದರಲ್ಲಿ 10 ಮಂದಿ ವಿದೇಶಿ ವೈದ್ಯರು ಆಗಮಿಸಿದ್ದಾರೆ. ರಾಜ್ಯದಲ್ಲಿ ದಾವಣಗೆರೆ ತಾಯಿ ಎದೆ ಹಾಲುಣಿಸುವ ಕಾರ್ಯಕ್ರಮದ ಜಾಗೃತಿಯಲ್ಲಿ ಪ್ರಥಮ ಸ್ಥಾನ ಪಡೆದಿದೆ. ನಾಳೆಯಿಂದ ನಡೆಯುವ ಸಮ್ಮೇಳನದಲ್ಲಿ ಹೊಸ ಅನ್ವೇಷಣೆ ಬಗ್ಗೆ ಚರ್ಚೆ ನಡೆಯಲಿದೆ. ವಿಶೇಷವಾಗಿ ನಾಳೆ ಮಗುವಿಗೆ ಆಹಾರ ಪದ್ಧತಿಯ ಬಗ್ಗೆ ಕಾರ್ಯಾಗಾರ ನಡೆಯಲಿದೆ.
ನಾಳೆ ಬಾಪೂಜಿ ಮಕ್ಕಳ ಸಂಸ್ಥೆಯಲ್ಲಿ 10 ವಿವಿಧ ಕಾರ್ಯಾಗಾರಗಳು ಒಂದೇ ಸಮಯದಲ್ಲಿ ಜರುಗಲಿದೆ. 400 ಶಿಬಿರಾರ್ಥಿಗಳು ತುರ್ತು ಚಿಕಿತ್ಸೆಯಿಂದ ಹಿಡಿದು ತಾಯಿ ಎದೆಹಾಲು ಉಣಿಸುವ ಎಲ್ಲಾ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೌಶಲ್ಯ ಭರಿತರನ್ನಾಗಿಸುವ ಕ್ರಿಯಾ ಯೋಜನೆ ಹಾಕಿಕೊಳ್ಳಲಾಗಿದೆ.
ಅ. 18 ರಿಂದ ಮೂರು ದಿನ ನಿರಂತರ ಚರ್ಚೆಗಳು ಮಕ್ಕಳ ಕಾಯಿಲೆಯ ಚಿಕಿತ್ಸಾ ವಿಧಾನಗಳನ್ನು ಸಂಪನ್ಮೂಲ ವ್ಯಕ್ತಿಗಳು ಮಂಡಿಸಲಿದ್ದಾರೆ. ಮುಖ್ಯವಾಗಿ ಎಚ್ 1ಎನ್ 1, ಡೆಂಗ್ಯೂ, ಮಕ್ಕಳಲ್ಲಿ ಮೂರ್ಛೆರೋಗ, ರಕ್ತಹೀನತೆ ಹೀಗೆ ಅನೇಕ ಕಾಯಿಲೆಗಳಿಗೆ ಚಿಕಿತ್ಸೆ ವಿಧಾನಗಳನ್ನು ಉಪನ್ಯಾಸ ನೀಡಲಿದ್ದಾರೆ. ಬೆಳಗ್ಗೆ 9.30 ಕ್ಕೆ ಐಎಪಿ ರಾಷ್ಟ್ರಾಧ್ಯಕ್ಷ ಡಾ.ಬಕುಲ್ ಪರೇಕ್ ಉದ್ಘಾಟಿಸಲಿದ್ದಾರೆ. ಡಾ.ರವೀಂದ್ರಜೋಶಿ, ಡಾ.ವಿನಯ್ ಕುಲಕರ್ಣಿ ಭಾಗವಹಿಸಲಿದ್ದಾರೆ.
ಅ. 19 ರಂದು ಸಂಜೆ 7 ಗಂಟೆಗೆ ನಡೆಯುವ ಕಾರ್ಯಕ್ರಮಕ್ಕೆ ಬಾಪೂಜಿ ವಿದ್ಯಾಸಂಸ್ಥೆಯ ಅಧ್ಯಕ್ಷ ಶಾಸಕರಾದ ಶಾಮನೂರು ಶಿವಶಂಕರಪ್ಪ ಚಾಲನೆ ನೀಡಲಿದ್ದಾರೆ. ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಐಎಪಿ ರಾಷ್ಟ್ರೀಯ ಅಧ್ಯಕ್ಷ ಡಾ.ದಿಗಂತ್ ಶಾಸ್ತ್ರಿ, ಎಸ್‌ಎಸ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎಸ್.ಪ್ರಸಾದ್ ಮತ್ತಿತರರು ಭಾಗವಹಿಸಲಿದ್ದಾರೆ. ಕಾರ್ಯಾಗಾರದಲ್ಲಿ ಹಿರಿಯ ಮಕ್ಕಳ ವೈದ್ಯರಿಗೆ ಸನ್ಮಾನ ನಡೆಯಲಿದೆ. ಸಂಜೆ ಕನ್ನಡ ಕೋಗಿಲೆ ಖ್ಯಾತಿಯ ಖಾಸಿಂ ಅಲಿ ಸಂಗೀತ ಸಂಜೆ ನಡೆಯಲಿದೆ.
ರಾಜ್ಯ ಮಕ್ಕಳ ಸಂಸ್ಥೆಯ ಕಾರ್ಯದರ್ಶಿ ಡಾ.ಮಧುಪೂಜಾರ್, ಹಿರಿಯ ಮಕ್ಕಳ ತಜ್ಞ ಡಾ.ಸಿ.ಆರ್.ಬಾಣಪುರ ಮಠ, ಎಸ್‌ಎಸ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎಸ್.ಪ್ರಸಾದ್, ಡಾ.ಬಸಂತ್ ಕುಮಾರ್, ಡಾ.ವರುಣ್ ಕುಸಗೂರು, ಡಾ. ಜಿ.ಎಸ್.ಲತಾ ಮತ್ತಿತರರು ಉಪಸ್ಥಿತರಿದ್ದರು.
.



