ಡಿವಿಜಿ ಸುದ್ದಿ, ದಾವಣಗೆರೆ : ದಾವಣಗೆರೆ ಮಹಾನಗರ ಪಾಲಿಕೆಯ ಮೇಯರ್ ಚುನಾವಣೆ ಫೆ .19 ರಂದು ನಡೆಯಲಿದ್ದು, ಅಧಿಕಾರಕ್ಕೇರಲು ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳು ಜಿದ್ದಾಜಿದ್ದಿಗೆ ಬಿದ್ದಿವೆ. ಈ ಬಾರಿ ಪಾಲಿಕೆ ಅಧಿಕಾರ ಪಡೆಯಲೇಬೇಕು ಎನ್ನುವ ಹಠಕ್ಕೆ ಬಿದ್ದಿರುವ ಎರಡು ಪಕ್ಷಗಳು, ಮತದಾನಕ್ಕಾಗಿ ಭಾರೀ ಹೈಡ್ರಾಮಾ ನಡೆಸುತ್ತಿವೆ.

45 ಪಾಲಿಕೆ ಸದಸ್ಯರನ್ನೊಳಗೊಂಡ ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಸಂಸದರು, ಶಾಸಕರ ಜೊತೆ 14 ಎಂಎಲ್ಸಿಗಳು ಮತದಾನಕ್ಕೆ ಅರ್ಹರು ಎಂದು ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ. ಈ ಬಗ್ಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದ ಕಾರಣ ಇಂದು ಚುನಾವಣಾ ಪರಿವೀಕ್ಷಕರಾಗಿ ಬಂದ ಹರ್ಷಗುಪ್ತಾ ಅವರು, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸಹಯೋಗದೊಂದಿಗೆ ವಿಧಾನ ಪರಿಷತ್ ಸದಸ್ಯರ ವಿಳಾಸ ಪರಿಶೀಲನೆ ನಡೆಸಿದರು.

ವಿಳಾಸ ಪರಿಶೀಲನೆ ವೇಳೆ ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸಸ್ಯರಾದ ಕೆ.ಸಿ. ಕೊಂಡಯ್ಯ, ಬಿಜೆಪಿಯ ಡಾ. ತೇಜಸ್ವಿನಿಗೌಡ ಅವರು ಸಣ್ಣ ಸಣ್ಣ ಕೊಠಡಿ ವಿಳಾಸ ಕೊಟ್ಟಿರುವುದು ಬೆಳಕಿಗೆ ಬಂದಿದೆ. ಮೂರನೇ ಮಹಡಿಯಲ್ಲಿರುವ ಸಣ್ಣ ಸಣ್ಣ ಕೊಠಡಿ ಕಂಡ ಜಿಲ್ಲಾಧಿಕಾರಿಗಳು ಎಲ್ಲಿಗೆ ಎಂಎಲ್ಸಿಗಳು ಬರ್ತಾರಾ ಅಂತ ಮನೆ ಮಾಲೀಕರನ್ನು ವಿಚಾರಿಸಿದರು. ಮನೆಯ ಮಾಲೀಕ ಯಾವಾಗದರೂ ಒಮ್ಮೆ ಬರ್ತಾರೆ ಎಂದರು.
ಒಟ್ಟು 45 ವಾರ್ಡ್ ನಲ್ಲಿ ಬಿಜೆಪಿ 17, ಕಾಂಗ್ರೆಸ್ 22 , ಪಕ್ಷೇತರರು 5 , ಜೆಡಿಎಸ್ 1 ಸ್ಥಾನ ಪಡೆದುಕೊಂಡಿವೆ. ಮೇಯರ್ ಚುನಾವಣೆಯಲ್ಲಿ ಮತದಾನ ಮಾಡಲು 62 ಸದಸ್ಯರು ಅರ್ಹರೆಂದು ಗೆಜೆಟ್ ಹೊರಡಿಸಲಾಗಿದೆ. ಅದರಲ್ಲಿ45 ಪಾಲಿಕೆ ಸದಸ್ಯರು, 14 ಎಂಎಲ್ಸಿಗಳು, 2 ಶಾಸಕರು, 1 ಸಂಸದರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.



