ಡಿವಿಜಿ ಸುದ್ದಿ, ದಾವಣಗೆರೆ : ದೇಶದಾದ್ಯಂತ ಲಾಕ್ ಡೌನ್ ಆಗಿದ್ದು, ನಗರದಲ್ಲಿ ಜನರ ಓಡಾಡ ನಿಂತಿಲ್ಲ. ಹೀಗಾಗಿ ನಗರದಲ್ಲಿ ಮಿಲಿಟರಿ ನಿಯೋಜನೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕ.ಎಸ್. ಈಶ್ವರಪ್ಪ ಹೇಳಿದರು.
ಕೊರೊನಾ ವೈರಸ್ ನಿಯಂತ್ರಣ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಧಿಕಾರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಮಾತನಾಡಿದ ಅವರು, ಸಾರ್ವಜನಿಕರು ಅನವಶ್ಯಕವಾಗಿ ಓಡಾಟ ಮಾಡುತ್ತಿದ್ದಾರೆ. ಇದರಿಂದ ಕೊರೊನಾ ಇನ್ನಷ್ಟು ಹರಡುವ ಸಾಧ್ಯತೆ ಇದೆ. ಹೀಗಾಗಿ ಸಾರ್ವಜನಿಕರ ಓಡಾಟ ನಿಯಂತ್ರಣಕ್ಕೆ ತರಲು ಮಿಲಿಟರಿ ನಿಯೋಜನೆ ಮಾಡಲು ಚಿಂತನೆ ನಡೆದಿದೆ ಎಂದರು.

ಸಾರ್ವಜನಿಕರು ಮನೆಯಿಂದ ಹೊರ ಬಂದರೆ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು.ಶೇ 90 ರಷ್ಟು ಜನ ಮನೆಯಲ್ಲಿದ್ದರೇ 10 % ಜನ ಮನೆ ಬಿಟ್ಟು ಓಡಾಡುತ್ತಿದ್ದಾರೆ.ಇವರಿಂದಾಗಿ ದಾವಣಗೆರೆ ಜನರಲ್ಲಿ ಆತಂಕ ಮನೆ ಮಾಡಿದೆ. ಖಾಸಗಿ ಆಸ್ಪತ್ರೆಯಲ್ಲಿ ಲ್ಯಾಬ್ ಇದ್ದು, ಕಿಟ್ ತೆಗೆದು ಕೊಳ್ಳಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ನಗರದ ಎಸ್ ಎಸ್ ಆಸ್ಪತ್ರೆ, ಜೆ ಜೆ ಎಂ ಆಸ್ಪತ್ರೆ, ಚಿಗಟೇರಿ ಆಸ್ಪತ್ರೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಅಲೆಮಾರಿಗಳ ಸಂಘದ ಸಭೆ ಕರೆದಿದ್ದು, ಅವರಿಗೆಲ್ಲಾ ಆಹಾರ ಕೊಡಿಸುವ ವ್ಯವಸ್ಥೆ ಮಾಡಲಾಗಿದೆ.ಗ್ರಾಮ ಪಂಚಾಯಿತಿಯಲ್ಲಿ ಕೊರೊನಾ ಸೊಂಕು ತಡೆಗಟ್ಟಲು ಗ್ರಾಮಪಂಚಾಯಿತಿ ಅಧ್ಯಕ್ಷರ ನೇತೃತ್ವದಲ್ಲಿ ಟಾಸ್ಟ್ ಪೊರ್ಸ್ ರಚಿಸಲಾಗಿದೆ. ಅವರು ನೀಡುವ ವರದಿ ಮೇಲೆ ಅವರಿಗೆ ಹಣ ನೀಡಲು ಜಿಲ್ಲಾ ಪಂಚಾಯ್ತಿ ಸಿಇಓ ಸೂಚನೆ ನೀಡಲಾಗಿದೆ ಎಂದರು.



