ಡಿವಿಜಿ ಸುದ್ದಿ, ದಾವಣಗೆರೆ: ರಾಜ್ಯ ಸರ್ಕಾರದ ಆದೇಶ ಮತ್ತು ಸುತ್ತೋಲೆಗಳನ್ವಯ ಕೊರೊನಾ ವೈರಸ್ ತಡೆಗಟ್ಟಲು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶಿಸಿದ್ದಾರೆ.
ಸಾರ್ವಜನಿಕರು ಪಾಲಿಸಬೇಕಾದ ನಿಯಮಗಳು
- ದಾವಣಗೆರೆ ಜಿಲ್ಲೆಗೆ ಆಗಮಿಸುವ ಎಲ್ಲಾ ವಿದೇಶಿ ಪ್ರಯಾಣಿಕರನ್ನು (ಭಾರತೀಯರು ಹಾಗೂ ವಿದೇಶಿಯರು) ರೋಗ ಲಕ್ಷಣ ಇಲ್ಲದಿದ್ದರೂ ಸಹ 14 ದಿನಗಳ ಕಾಲ ತಮ್ಮ ಮನೆಯಲ್ಲಿ ಪ್ರತ್ಯೇಕವಾಗಿ ಇರಿಸತಕ್ಕದ್ದು
- ಸಿನಿಮಾ ಮಂದಿರಗಳು ,ಮಾಲ್‍ಗಳು, ರಂಗಮಂದಿರಗಳು, ಪಬ್‍ಗಳು, ನೈಟ್ ಕ್ಲಬ್‍ಗಳು, ಸಂಗೀತ ಹಬ್ಬಗಳು ಹಾಗೂ ಕ್ರೀಡಾಂಗಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ವೀಕ್ಷಿಸುವ ಕ್ರೀಡಾ ಕೂಟ ರದ್ದುಗೊಳಿಸುವುದು
- ಹೆಚ್ಚಿನ ಸಂಖ್ಯೆಯ ಜನರು ಸೇರುವಂತಹ ಮದುವೆ ಹಾಗೂ ಇತರೆ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸದಿರುವಂತೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಆದಷ್ಟು ಕಡಿಮೆ ಸಂಖ್ಯೆಯ ಜನರು ಭಾಗವಹಿಸುವಂತೆ ನೋಡಿಕೊಳ್ಳುವುದು
- ಈಜುಕೊಳ, ಜಿಮ್, ಬೇಸಿಗೆ ಶಿಬಿರ ಮುಂತಾದವುಗಳನ್ನು ಮುಚ್ಚತಕ್ಕದ್ದು. ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳು, ಕೋಚಿಂಗ್ ಸೆಂಟರ್‍ಗಳನ್ನು ಮುಚ್ಚಲು ಸರ್ಕಾರವು ಹೊರಡಿಸಿರುವ ಸುತ್ತೋಲೆ/ಆದೇಶ/ಅಧಿಸೂಚನೆಗಳಂತೆ ಕಡ್ಡಾಯವಾಗಿ ಕ್ರಮ ಕೈಗೊಳ್ಳತಕ್ಕದ್ದು.
- ಖಾಸಗಿ ವೈದ್ಯರುಗಳು, ಖಾಸಗಿ ಆಸ್ಪತ್ರೆಗಳು ಹಾಗೂ ನರ್ಸಿಂಗ್ ಹೋಂಗಳು 2020 ರ ಫೆಬ್ರವರಿ 20 ರ ನಂತರ ವಿದೇಶದಿಂದ ಬಂದು ರೋಗ ಲಕ್ಷಣಗಳಿರುವ ರೋಗಿಗಳು ಇದ್ದಲ್ಲಿ ತಡಮಾಡದೇ ಜಿಲ್ಲಾ ಆರೋಗ್ಯಾಧಿಕಾರಿಗೆ (ದೂ.ಸಂ: 9449843051) ಫೋನ್/ಫ್ಯಾಕ್ಸ್/ವಾಟ್ಸ್ಯಾಪ್ ಅಥವಾ ಸಹಾಯವಾಣಿ ಸಂಖ್ಯೆ 104ಕ್ಕೆ ತಿಳಿಸತಕ್ಕದ್ದು
- ಕೋವಿಡ್-19 ಸೋಂಕು ಪೀಡಿತರಿಗೆ ಸರ್ಕಾರ ನಿಗದಿಪಡಿಸಿದ ಮಾರ್ಗಸೂಚಿಯಂತೆ(ಎಸ್‍ಓಪಿ) ವೈದ್ಯಕೀಯ ಉಪಚಾರ ಒದಗಿಸಲು ಜಿಲ್ಲೆಯ ಎಲ್ಲಾ ಸರ್ಕಾರಿ/ಖಾಸಗಿ ಆಸ್ಪತ್ರೆಗಳಲ್ಲಿ ಅಗತ್ಯವಿರುವ ಎಲ್ಲಾ ಸೌಲಭ್ಯಗಳು, ಮಾನವ ಸಂಪನ್ಮೂಲ ಇತ್ಯಾದಿ ವ್ಯವಸ್ಥೆಯನ್ನು ಕೈಗೊಳ್ಳತಕ್ಕದ್ದು
- ಈ ಮೇಲಿನ ಸೂಚನೆಗಳನ್ನು ಪ್ರಜ್ಞಾಪೂರ್ವಕವಾಗಿ ಉಲ್ಲಂಘಿಸುವವರು ಭಾರತೀಯ ದಂಡ ಸಂಹಿತೆ 188 ರನ್ವಯ ಶಿಕ್ಷೆಗೆ ಅರ್ಹರಾಗಿರುತ್ತಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪರೀಕ್ಷಾ ಕೇಂದ್ರ ಸುತ್ತಮುತ್ತ ನಿಷೇಧಾಜ್ಞೆ
ಮಾ.15 ರಂದು ಪರವಾನಿಗೆ ಭೂಮಾಪಕರ ಸೇವೆಯನ್ನು ಪಡೆಯಲು ಆನ್‍ಲೈನ್ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳು ದಾವಣಗೆರೆ ನಗರದ ಬಾಪೂಜಿ ಪಾಲಿಟೆಕ್ನಿಕ್ ಕಾಲೇಜು, ಶಾಮನೂರು ಮತ್ತು ಜಿ.ಎಂ.ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಲಾಜಿ ಕಾಲೇಜು, ಪಿ.ಬಿ.ರೋಡ್ ಪರೀಕ್ಷಾ ಕೇಂದ್ರದಲ್ಲಿ ನಡೆಯಲಿದ್ದು, ಈ ಪರೀಕ್ಷೆಯು ಸುಗಮವಾಗಿ ನಡೆಯುವ ದೃಷ್ಠಿಯಿಂದ ಪರೀಕ್ಷಾ ಕೇಂದ್ರದ ಸುತ್ತಮುತ್ತ 200ಮೀ ಪರಿಧಿ ವ್ಯಾಪ್ತಿ ಪ್ರದೇಶವನ್ನು ಸಾರ್ವಜನಿಕರಿಗೆ ನಿಷೇಧಿತ ಪ್ರದೇಶವೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶಿಸಿದ್ದಾರೆ.



