ಡಿವಿಜಿ ಸುದ್ದಿ, ದಾವಣಗೆರೆ: ಶಾಲೆಗಳು ಭೌತಿಕ ಕಟ್ಟಡಗಳಲ್ಲ, ಭಾವನೆಗಳ ಕಟ್ಟಡಗಳು. ಶಿಕ್ಷಕರು, ವಿದ್ಯಾರ್ಥಿಗಳ ಭವ್ಯ ವ್ಯಕ್ತಿತ್ವದ ರೂವಾರಿಗಳು ಎಂದು ಸಾಹಿತಿ ಕಾಕನೂರು ನಾಗರಾಜ್ ಅಭಿಪ್ರಾಯಪಟ್ಟರು.
ಆದರ್ಶ ಶಿಕ್ಷಕ ಮತ್ತು ಮೌಲ್ಯಗಳು ಎಂಬ ವಿಷಯ ಕುರಿತು ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕೆಎಸ್ಎಸ್ ಶಿಕ್ಷಣ ಮಹಾವಿದ್ಯಾಲಯ ಸಹಯೋಗದೊಂದಿಗೆ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾರ್ವತ್ರಿಕವಾಗಿ ಶಾಲೆಗಳೆಂದರೆ ಜ್ಞಾನದೇಗುಲಗಳೆಂದು ಭಾವಿಸುವುದು ಸ್ವಾಭಾವಿಕ. ಇಂತಹ ಜ್ಞಾನದೇಗುಲಗಳಲ್ಲಿ ಆದರ್ಶ ಶಿಕ್ಷಕರ ಪಾತ್ರ ಬಹಳ ದೊಡ್ಡದು ಎಂದರು.
ಆದರ್ಶ ಶಿಕ್ಷಕರಲ್ಲಿ ವರ್ಚಸ್ಸು, ಪ್ರಸನ್ನತೆ, ಗಾಂಭೀರ್ಯತೆ , ಶುದ್ಧ ಮಾತು , ವಿಷಯದ ಪಾಂಡಿತ್ಯ ಇರಬೇಕು. ಭಾರತೀಯರ ಬುದ್ಧಿಮಟ್ಟ ವಿಶ್ವದಲ್ಲೇ ಉನ್ನತ ಸ್ಥಾನದಲ್ಲಿರಲು ಅದಕ್ಕೆ ಕಾರಣ ನಮ್ಮ ಶಿಕ್ಷಕರುಗಳು. ಪ್ರತಿಭೆಯನ್ನು ಸ್ವದೇಶದಲ್ಲಿ ಉಳಿಸಿಕೊಳ್ಳುವ ಬದ್ಧತೆ ಮತ್ತು ಶುದ್ಧತೆ ಕಲಿಸಬೇಕು. ಅವರಲ್ಲಿ ಆತ್ಮಸ್ಥೈರ್ಯ, ನೈತಿಕತೆ, ಸಂಸ್ಕಾರಯುತ ಜೀವನ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ದತ್ತಿ ದಾನಿಗಳಾದ ಎಂ. ದೇವೇಂದ್ರಪ್ಪ ಶ್ಯಾಗಲೆ ಇವರನ್ನು ಮತ್ತು ದಿನೇಶ್ ಅವರನ್ನು ಶಾಲು ಹೊದಿಸಿ,ಸಾಹಿತ್ಯ ಪರಿಷತ್ ವತಿಯಿಂದ ಗೌರವಿಸಲಾಯಿತು. ಕೆ.ಎಸ್.ಎಸ್. ಫೌಂಡೇಶನ್ ಆಡಳಿತಾಧಿಕಾರಿ ಸಿ.ಹೆಚ್. ಹಿರೇಗೌಡರ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ, ಕಾಲೇಜಿನ ಪ್ರಾಚಾರ್ಯ ಬಿ.ಎಸ್. ಚನ್ನಬಸಪ್ಪ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಪದಾಧಿಕಾರಿ ಸಾಲಿಗ್ರಾಮ ಗಣೇಶ್ ಶೆಣೈ, ಎಸ್.ಎಂ. ಮಲ್ಲಮ್ಮ, ಬಿ.ಎಂ. ಮುರಿಗೆಯ್ಯ ಕುರ್ಕಿ , ಬಿ.ಎಸ್. ಜಗದೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.