ಡಿವಿಜಿ ಸುದ್ದಿ, ನ್ಯಾಮತಿ: ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ ವತಿಯಿಂದ ನ್ಯಾಮತಿ ತಾಲ್ಲೂಕು ರಾಮೇಶ್ವರ ಗ್ರಾಮದಲ್ಲಿ ಕೇಂದ್ರ ಸರ್ಕಾರದ ಪಾರಂಪರಿಕ ಕೃಷಿ ವಿಕಾಸ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.
ಯೋಜನೆಯಡಿ 2020-21 ನೇ ವರ್ಷ ಚಟುವಟಿಕೆಗಳ ಪ್ರಾರಂಭಿಸಿದ್ದು ಸಾವಯವ ಪದ್ಧತಿಗಳಲ್ಲಿ ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಜೀವಾಮೃತ ತಯಾರಿಕೆ, ಎರೆಗೊಬ್ಬರ ತಯಾರಿಕೆ, ಹಸಿರೆಲೆಗೊಬ್ಬರ ಸಸಿಗಳನ್ನು ಬೆಳೆಯುವುದು ಮತ್ತು ಸ್ಥಳೀಯವಾಗಿ ದೊರೆಯುವ ಕೃಷಿ ತ್ಯಾಜ್ಯಗಳನ್ನು ಗೊಬ್ಬರವಾಗಿ ಪರಿವರ್ತಿಸಿ ಕೃಷಿಗೆ ಬಳಸುವ ಪ್ರಾತ್ಯಕ್ಷಿಕೆಗಳನ್ನು ಪ್ರಾರಂಭಿಸಲಾಗಿದೆ.ರೈತರು ಈ ಪದ್ಧತಿಗಳಿಂದ ವಿಷ ಮುಕ್ತ ಆಹಾರ ಬೆಳೆಗಳನ್ನು ಬೆಳೆಯುವುದರ ಜೊತೆಗೆ ರಾಸಾಯನಿಕ ಗೊಬ್ಬರದ ಖರ್ಚುನ್ನು ಕಡಿಮೆ ಮಾಡಬಹುದಾಗಿದೆ.
ಯೋಜನೆಯ ಅನುಷ್ಠಾನಗೊಳಿಸುತ್ತಿರುವ ವಿಜ್ಞಾನಿ ಶ್ರೀ ಬಸವನಗೌಡ ಎಂ.ಜಿ. ಮಾತನಾಡಿ, ಪೂರ್ವಜರು ರಾಸಾಯನಿಕಗಳಿಲ್ಲದೆ ಸಾವಯವ ಪದ್ಧತಿಯಲ್ಲಿ ಪೋಷಕಾಂಶಗಳನ್ನು ನೀಡಿ ಆರೋಗ್ಯಕರ ಬೆಳೆಗಳನ್ನು ಬೆಳೆಯುತ್ತಿದ್ದರು ಮತ್ತು ಇಂತಹ ಯೋಜನೆಗಳಿಂದ ಉತ್ತಮ ಹಳೆಕಾಲದ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ರೈತರಿಗೆ ಅವಕಾಶ ದೊರೆತಿದೆ. ಸಾವಯವ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಬೆಲೆ ದೊರೆತರೆ ರೈತರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ತಿಳಿಸಿದರು.



