ಡಿವಿಜಿ ಸುದ್ದಿ, ದಾವಣಗೆರೆ: ನಗರದೇವತೆ ದುರ್ಗಾಂಬಿಕ ದೇವಿ ಜಾತ್ರೆಗೆ ಇಂದಿನಿಂದ ಅಧಿಕೃತ ಚಾಲನೆ ಸಿಕ್ಕಿದ್ದು, ಬೆಳಗ್ಗೆ ದೇವಿಗೆ ಪಂಚಾಮೃತ ಅಭಿಷೇಕ ನೆರವೇರಿಸಿ ಕಂಕಣಧಾರಣೆ ಮೂಲಕ ಜಾತ್ರೆಗೆ ಅದ್ಧೂರಿಯಾಗಿ ಚಾಲನೆ ನೀಡಲಾಯಿತು.
ಶ್ರೀ ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್ ಮತ್ತು ಗೌಡರು, ಶಾಮಭೋಗರು, ರೈತರು , ಬಣಕಾರರು, ಬಾಬುದಾರರ ನೇತೃತ್ವದಲ್ಲಿ ದುಗ್ಗಮ್ಮನ ಜಾತ್ರೆ ಅದ್ಧೂರಿಯಾಗಿ ನಡೆಲಿದೆ. ಫೆ.28 ರಂದು ಹಂದರ ಕಂಬದ ಪೂಜೆ ನೆರವೇರಿಸಲಾಗಿತ್ತು. ಇಂದು ಅಭಿಷೇಕದೊಂದಿಗೆ ಕಂಕಣಧಾರಣೆ ನಡೆಸಲಾಯಿತು. ಇದರೊಂದಿಗೆ ದುಗ್ಗಮ್ಮನ ಹಬ್ಬ ಎದುರು ನೋಡುತ್ತಿದ್ದ ಭಕ್ತರಲ್ಲಿ ಸಂಭ್ರಮ ಮನೆ ಮಾಡಿದೆ.
ಇಂದು (ಮಾ. )ರಾತ್ರಿ ಸಾರು ಹಾಕಲಿದ್ದು, ಮಂಗಳವಾರ ಬೆಳಗ್ಗೆ ದಾಸೋಹ ಮಹೋಪಕರಣ ಸಮಾರಂಭ ನಡೆಯಲಿದೆ. ಮಂಗಳವಾರ ರಾತ್ರಿ ದೇವಿಗೆ ಭಕ್ತಿ ಸಮರ್ಪಣೆ ನಡೆಯಲಿದೆ. ದೇವಿ ದರ್ಶನ ಪಡೆಯಲು ಅಪಾರ ಸಂಖ್ಯೆಯಲ್ಲಿ ಭಕ್ತರು ಬರುವುದರಿಂದ 3 ಕಡೆಯಿಂದ ದೇವಿಯ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ವಿಐಪಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ಬುಧವಾರ ಬೆಳಗ್ಗೆ ದುರ್ಗಾಂಬಿಕ ದೇವಿ ಮಹಾ ಪೂಜೆ ನಡೆಯಲಿದ್ದು, ಊರಿಗೆ ಚರಗ ಚೆಲ್ಲುವ ಕಾರ್ಯ ನಡೆಯಲಿದೆ. ದೇವಸ್ಥಾನದ ಸುತ್ತಮುತ್ತಲಿನ ಬೀದಿಗಳಲ್ಲಿ ವಿದ್ಯುತ್ ದೀಪ, ತೋರಣಗಳಿಂದ ಅಲಂಕಾರ ಮಾಡಲಾಗಿದೆ. 16.50 ಲಕ್ಷ ವೆಚ್ಚದಲ್ಲಿ ಮೈಸೂರು ಅರಮನೆ ಮಾದರಿಯ ಮಹಾ ಮಂಟಪ ನಿರ್ಮಾಣ ಮಾಡಲಾಗಿದೆ.
ನಗರದ ಜನತೆ ಈಗಾಗಲೇ ಹಬ್ಬಕ್ಕೆ ಬೇಕಾದ ಸಕಲ ಸಿದ್ಧತೆ ಮಾಡಿಕೊಂಡಿದ್ದು, ದೂರದ ಊರುಗಳಿಂದ ತಮ್ಮ ತಮ್ಮ ಬಂಧು ಮಿತ್ರರನ್ನು ಕರೆಸಿಕೊಂಡಿದ್ದಾರೆ. ಜಾತ್ರೆ ಮಹೋತ್ಸವದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತ ಮುಂಜಾಗೃತ ಕ್ರಮ ಕೈಗೊಂಡಿದ್ದು, ದೇವಾಲಯದ ಸುತ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಮಂಗಳವಾರ ಸಿಹಿ ಊಟ ನಡೆಯಲಿದ್ದು, ಬುಧವಾರ ಖಾರದ ಊಟಕ್ಕೆ ನಗರದೆಲ್ಲೆಡೆ ಭರ್ಜರಿ ಸಿದ್ಧತೆ ನಡೆದಿದೆ. ದೇವಿಗೆ ಹರಕೆ ತೀರಿಸಲು ಭಕ್ತರು ಸಕಲ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದು, ಪ್ರತಿಯೊಬ್ಬರ ಮನೆ ಮುಂದೆ ಕುರಿಗಳನ್ನು ಕಟ್ಟಿ ಹಾಕಿದ್ದಾರೆ. ತಳವಾರ ಕೇರಿ, ಹೊಂಡದ ಸರ್ಕಲ್, ಗಾಂಧಿನಗರ, ಎಸ್‌ಕೆಪಿ ರಸ್ತೆ, ಶಿವಾಜಿನಗರ, ಬೂದಾಳ್ ರಸ್ತೆ, ಜಾಲಿನಗರ, ವಿನೋಬ ನಗರ, ದೇವರಾಜ್ ಅರಸ್ ಬಡಾವಣೆ, ನಿಟುವಳ್ಳಿ ಸೇರಿದಂತೆ ಅನೇಕ ಕಡೆ ದುರ್ಗಾ ದೇವಿ ಜಾತ್ರೆಯ ಸಂಭ್ರಮ ಕಳೆಗಟ್ಟಿದೆ.
ಇಂದು ಪಂಚಾಮೃತ ಅಭಿಷೇಕ ಆಗಿರುವುದರಿಂದ ಬೆಳಗ್ಗೆಯಿಂದಲೇ ದೇವಸ್ಥಾನಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ. ರಾತ್ರಿ ಆಗುತ್ತಿದ್ದಂತೆ ದೇವಿ ದರ್ಶನಕ್ಕೆ ಭಕ್ತರು ಹರಿದು ಬರಲಿದ್ದಾರೆ. ಮಾ. 5 ರಿಂದ ಮಾ. 19 ವರೆಗೆ ಪ್ರತಿ ದಿನ ಸಂಜೆ 8 ಗಂಟೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾ. 06 ರಿಂದ 08ರವರೆಗೆ ನಗರದ ಪಿಬಿ ರಸ್ತೆಯ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಕುಸ್ತಿ ಪಂದ್ಯಗಳನ್ನು ಆಯೋಜಿಸಿದೆ. ಮಾ. 6ರಿಂದ 8 ವರೆಗೆ ರೇಣುಕಾ ಮಂದಿರದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.
ಕುಟುಂಬ ಸಮೇತ ದೇವಿ ದರ್ಶನ ಪಡೆದ ಸಂಸದರು
ಸಂಸದ ಜಿ.ಎಂ ಸಿದ್ದೇಶ್ವರ ಅವರು ಕುಟುಂಬ ಸಮೇತರಾಗಿ ಆಗಮಿಸಿ ನಗರ ದೇವತೆ ಶ್ರೀ ದುರ್ಗಾಂಬಿಕ ದೇವಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಉತ್ತಮ ಮಳೆ, ಬೆಳೆಯಾಗಿ ಜನರು ನೆಮ್ಮದಿಯಿಂದ ಬದುಕುವಂತಾಗಲಿ ಎಂದು ದೇವಿಯಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಮೇಯರ್ ಅಜಯ್ ಕುಮಾರ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತ್ ರಾವ್ ಜಾಧವ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ದುಗ್ಗಮ್ಮನ ಜಾತ್ರೆಗಾಗಿ ದಾವಣಗೆರೆ ಯುವಕರು ವಿಶೇಷ ಸಾಂಗ್ ಸಂಯೋಜಿಸಿದ್ದು, ಈಗಾಗಲೇ ಯುಟೂಬ್ ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಅಬ್ಬಾಬ್ಬಾ ..! ಅಬ್ಬಾಬ್ಬಾ ಬಂದೆ ಬಿಡ್ತು ದುಗ್ಗಮ್ಮನ ಜಾತ್ರೆ ಸಾಂಗ್ ಮೇಕಿಂಗ್ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಕಿ ಸೋಮ್ಲಿ ಸಾಹಿತ್ಯ ರಚಿಸಿದ್ದು, ಪವನ್ ಪಾರ್ಥ ಸಂಗೀತ ಸಂಯೋಜನೆ ಜೊತೆಗೆ ಹಾಡಿದ್ದಾರೆ.
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ...
Editor: munikondajji, MA journalism, contact number:7483892205, e-mail: dvgsuddi@gmail.com