ಡಿವಿಜಿ ಸುದ್ದಿ, ದಾವಣಗೆರೆ: ಕೊರೊನಾ ಸಾಂಕ್ರಾಮಿಕ ರೋಗವು ತೀವ್ರತರವಾಗಿ ಹರಡುತ್ತಿದ್ದು, ದಾವಣಗೆರೆ ಜಿಲ್ಲೆಯಲ್ಲಿ ಮೂರನೇ ಹಂತ ತಲುಪಿದರೂ ಸಹ ಪರಸ್ಥಿತಿಯನ್ನು ನಿಯಂತ್ರಿಸಲು ಜಿಲ್ಲಾಡಳಿತವು ಸಕಲ ಸಿದ್ಧತೆ ಮಾಡಿಕೊಂಡು ಸನ್ನದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ಭಾನುವಾರ ಸಂಜೆ ಜಿಲ್ಲಾಡಳಿತ ಭವನದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ಕುರಿತು ತೆಗೆದುಕೊಂಡ ಮುಂಜಾಗೃತಾ ಕ್ರಮ ಕುರಿತು ಉನ್ನತ ಮಟ್ಟದ ಅಧಿಕಾರಿಗಳ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
5 ಕಿ.ಮೀ ಬಫರ್ ಜೋನ್
ಈಗಾಗಲೇ ಜಿಲ್ಲಾಡಳಿತದಿಂದ ಜಿಲ್ಲೆಯಲ್ಲಿರುವ ನುರಿತ ವೈದ್ಯರು, ನರ್ಸ್‍ಗಳ ಹಾಗೂ ಪ್ಯಾರಾ ಮೆಡಿಕಲ್ ಸಿಬ್ಬಂದಿಗಳು ಹಾಗೂ ಅಗತ್ಯವಿರುವ ಕಟ್ಟಡಗಳು, ಬೆಡ್‍ಗಳ ವ್ಯವಸ್ಥೆ, ತಾಲ್ಲೂಕು ಮಟ್ಟಗಳಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಈಗಾಗಲೇ ಗುರುತಿಸಿರುವ ಕೋವಿಡ್ ಸೋಂಕಿತರ ನಿಗಾಗೆ ಪ್ರಥಮ ಹಾಗೂ ದ್ವೀತಿಯ ಹಂತದವರ ಪರೀಕ್ಷೆ ಮುಂತಾದವನ್ನು ಮಾಡಲಾಗುತ್ತಿದ್ದು, ಎರಡು ಎಪಿಸೆಂಟರ್‍ಗಳಾದ ನಿಜಲಿಂಗಪ್ಪ ಬಡಾವಣೆ ಹಾಗೂ ಜಿಎಂಐಟಿ ಸುತ್ತಲಿನ ಮೂರು ಕಿ.ಮೀ ಪ್ರದೇಶದಲ್ಲಿ ಬರುವ ವಿನೋಬನಗರ, ಎಲ್ಲಮ್ಮನಗರ, ಎಂಸಿಸಿ ಎ ಬ್ಲಾಕ್‍ಗಳು ಕಂಟೈನ್‍ಮೆಂಟ್ ಜೋನ್ ವ್ಯಾಪ್ತಿಯಲ್ಲಿ ಬರಲಿದ್ದು, ಈ ಕಂಟೈನ್‍ಮೆಂಟ್ ಜೋನ್‍ನಲ್ಲಿ ತಪಾಸಣೆ ನಡೆಸಲಾಗುತ್ತಿದ್ದು, 5 ಕಿ.ಮೀ ಪ್ರದೇಶವನ್ನು ಬಫರ್ ಜೋನ್ ಎಂದು ಗುರುತಿಸಲಾಗಿದೆ.
ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ತೆರಳಿ 60 ಜನರ ಫ್ಲೂ ಸರ್ವೇ ಮುಕ್ತಾಯವಾಗಿದೆ. ಹಾಗೂ ಯಾವುದೇ ಲೋಕಲ್ ಟ್ರಾನ್ಸ್‍ಮೀಷನ್ ಆಗಿರುವುದಿಲ್ಲ .ಸ್ವಯಂ ಸೇವಕರನ್ನು ಪಟ್ಟಿಯನ್ನು ತಯಾರಿಸಲಾಗಿದ್ದು, ಕಾರ್ಮಿಕ ಮುಖಂಡರು, ರಾಜಕೀಯ ಮುಖಂಡರು, ಎನ್‍ಎಸ್‍ಎಸ್ ಸ್ವಯಂ ಸೇವಕರ ತಂಡವನ್ನು ಸಜ್ಜುಗೊಳಿಸಲಾಗಿದೆ. ನಗರದ 45 ವಾರ್ಡುಗಳಲ್ಲಿ 250 ರಿಂದ 300 ತಳ್ಳುಗಾಡಿಗಳ ಮೂಲಕ ತರಕಾರಿ ವಿತರಿಸಲಾಗುತ್ತಿದೆ. ಸೂಪರ್ ಮಾರ್ಕೆಟ್, ರಿಲೆಯನ್ಸ್ ಮಾರ್ಕೆಟ್‍ಗಳಲ್ಲಿ 5 ಜನರು ಮಾತ್ರ ಒಳ ಹೋಗಿ ಖರೀದಿಸಲು ಅವಕಾಶ ಮಾಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿದೆ.
ಹಾಲಿನ ಉತ್ಪಾದಕರು, ಹಾಲು ಖರ್ಚಾಗದೇ ಇರುವುದರಿಂದ ಉಳಿಯುವ ಹಾಲನ್ನು ನೀಡಲು ಮುಂದೆ ಬಂದಿರುತ್ತಾರೆ. ಆ ಹಾಲನ್ನು ಕೇಂದ್ರ, ಅನಾಥಾಶ್ರಮ, ವೃದ್ದಾಶ್ರಮಗಳಿಗೆ ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ. ಇಂದಿನಿಂದ ರಸ್ತೆ ಬದಿ ವಾಸಿಸುವ ಅಲೆಮಾರಿಗಳು, ನಿರಾಶ್ರಿತರು, ವಿವಿಧ ಸಂಘ ಸಂಸ್ಥೆಗಳ ನೆರವಿನಿಂದ ಆಹಾರ ಪೊಟ್ಟಣಗಳನ್ನು ವಿತರಿಸಲಾಗಿದ್ದು, ಒಟ್ಟು 608 ಆಹಾರ ಪೊಟ್ಟಣಗಳನ್ನು ವಿತರಿಸಲಾಗಿದೆ ಎಂದರು.
ಕಿರಾಣಿ ಅಂಗಡಿಗಳಿಗೆ ದಾಸ್ತಾನು ಸರಿಯಾದ ಸಮಯಕ್ಕೆ ಲಭ್ಯವಾಗುವಂತೆ ಹೋಲ್‍ಸೇಲ್ ಅಂಗಡಿಗಳಿಗೆ ಮಾರ್ಗದರ್ಶನ ಮಾಡಿ ಪಡಿತರ ವಿತರಣೆಯಲ್ಲಿ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗಳಿಗೆ ತೆರಳಿ ಪಡಿತರ ತಲುಪಿಸುತ್ತಿದ್ದಾರೆ. ಹಾಗೂ ರೈತರಿಗೆ ಗೊಬ್ಬರ, ಔಷಧ, ಬೀಜ, ಯಾವುದೇ ತೊಂದರೆಯಾಗದಂತೆ ಅಂಗಡಿಗಳನ್ನು ತೆರೆಯಿಸಲಾಗಿದೆ. ಈ ಕುರಿತು ಈಗಾಗಲೇ ಹೋಲ್‍ಸೇಲ್ ಮಾರಾಟಗಾರರು, ಕಿರಾಣಿ ಅಂಗಡಿಗಳ ಮಾಲೀಕರು, ರೈಸ್ ಮಿಲ್ ಮಾಲೀಕರು, ಕಾರ್ಮಿಕ ಸಂಘಟನೆಗಳು, ಐಎಂಎ ದವರು ಎಲ್ಲರನ್ನು ಸಭೆ ಕರೆದು ಯಾವುದೇ ಅವಶ್ಯಕ ಸೇವೆಗಳು ವ್ಯತ್ಯಯವಾಗದಂತೆ ನೋಡಿಕೊಳ್ಳಲು ಮಾರ್ಗದರ್ಶನ ಮಾಡಲಾಗಿದೆ.
ಬೇಸಿಗೆ ಕಾಲದಲ್ಲಿ ಮೋಟಾರು ಪಂಪುಗಳು ಸುಟ್ಟುಹೋಗುವ ಕಾರಣ ಜಿಲ್ಲಾದ್ಯಂತ 36 ವೈಂಡಿಂಗ್ ಶಾಪ್‍ಗಳನ್ನು ಗುರುತಿಸಲಾಗಿದೆ. ಹಾಗೂ ಕೊರೊನಾ ಸೋಂಕು ಎದುರಿಸಲು ಜಿಲ್ಲೆಯಲ್ಲಿ ಕಂಟಿನ್‍ಜೆನ್ಸಿ ಪ್ಲಾನ್ ತಯಾರಾಗಿದ್ದು, ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಜಿಲ್ಲೆಯಲ್ಲಿ ಭತ್ತ ಕಟಾವಿಗೆ ಬಂದಿದ್ದು, ಭತ್ತ ಕತ್ತರಿಸುವ ಯಂತ್ರಗಳನ್ನು ಯಾವುದೇ ಅಡೆತಡೆ ಇಲ್ಲದೆ ಜಿಲ್ಲೆಗೆ ಬರಲು ಕ್ರಮ ಕೈಗೊಳ್ಳಲಾಗಿದೆ. ಹಾಗೂ ವಲಸಿಗರಿಗೆ, ನಿರಾಶ್ರಿತರಿಗೆ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.
ವಿದ್ಯಾನಗರದ ಅಪಾರ್ಟ್‍ಮೆಂಟ್ ಒಂದರಲ್ಲಿ ಬಾಡಿಗೆ ಇರುವ ಬನಾರಸ್‍ನ ನಿವಾಸಿಯೋರ್ವರು ಬನಾರಸ್‍ಗೆ ಹೋಗಿ ಬಂದ ಕಾರಣ ಅವರ ಮನೆ ಮಾಲೀಕರು ತೊಂದರೆ ಕೊಡುತ್ತಿದ್ದಾರೆಂದು ತಿಳಿದು ಬಂದ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ಕಳುಹಿಸಿ ಅವರಿಗೆ ಮಾರ್ಗದರ್ಶನ ಹಾಗೂ ಎಚ್ಚರಿಕೆ ನೀಡಲಾಗಿದೆ.
ರಸ್ತೆಯಲ್ಲಿ ಅನಗತ್ಯ ಓಡಾಟವನ್ನು ನಿಯಂತ್ರಿಸಲು ಬೀಟ್ ಪೊಲೀಸರು ಶ್ರಮಿಸುತ್ತಿದ್ದು, ಇಂದು ನಗರದಲ್ಲಿ ಎರಡು ಬಾರಿ ಪಥ ಸಂಚಲನ ಮಾಡಲಾಗಿದೆ. ದಿನನಿತ್ಯ ಬರುವ ಸರ್ಕಾರಿ ಆದೇಶಗಳು, ನಿರ್ದೇಶನಗಳನ್ನು ಸಮರ್ಪಕವಾಗಿ ಜಾರಿ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥತಿಯನ್ನು ಎದುರಿಸಲು ಎಲ್ಲರೂ ಸೇನಾನಿಗಳಂತೆ ಕರ್ತವ್ಯದಲ್ಲಿ ನಮ್ಮನ್ನು ನಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೇವೆ. ಇಡೀ ತಂಡ ಯುದ್ದೋಪಾದಿಯಲ್ಲಿ ಸನ್ನದ್ದರಾಗಿದ್ದೇವೆ ಎಂದರು.
ಜಿ.ಪಂ ಸಿಇಓ ಪದ್ಮಾ ಬಸವಂತಪ್ಪ ಮಾತನಾಡಿ, ಅಂಗನವಾಡಿ ಮಕ್ಕಳಿಗೆ 15 ದಿನಗಳ ಆಹಾರ ಧಾನ್ಯವನ್ನು ಮನೆಗಳಿಗೆ ತಲುಪಿಸಲಾಗುವುದು. ಹಾಗೂ ಶಾಲಾ ಮಕ್ಕಳ ಬಿಸಿಯೂಟದ ಆಹಾರ ಧಾನ್ಯಗಳನ್ನು 15 ದಿನಗಳ ಮುಂಗಡವಾಗಿ ಅವರ ಮನೆಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು.
ಸಭೆಯಲ್ಲಿ ಎಸ್‍ಪಿ ಹನುಮಂತರಾಯ, ಎಸಿ ಮಮತಾ ಹೊಸಗೌಡರ್, ಡಿಹೆಚ್‍ಓ ಡಾ.ರಾಘವೇಂದ್ರಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್, ಸ್ಮಾರ್ಟ್‍ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ನಗರಾಭಿವೃದ್ಧಿ ಕೋಶದ ಯೋಜನಾ ನಜ್ಮಾ, ಡಿಎಸ್ ಡಾ. ನಾಗರಾಜ್ ಮತ್ತಿತರೆ ಅಧಿಕಾರಿಗಳು ಹಾಜರಿದ್ದರು.