ಡಿವಿಜಿ ಸುದ್ದಿ, ಸಿರಿಗೆರೆ: ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಪಡೆಯಲು ಆಂಧ್ರಪ್ರದೇಶದ ನಂದ್ಯಾಲಕ್ಕೆ ಹೋಗಿ, ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿದ ನೂರಾರು ವಿದ್ಯಾರ್ಥಿಗಳಿಗೆ ಸಿರಿಗೆರೆಯ ತರಳಬಾಳು ಬೃಹನ್ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ನೆರವು ನೀಡಿದ್ದಾರೆ.
ಆಂಧ್ರಪ್ರದೇಶದ ನಂದ್ಯಾಲದಲ್ಲಿ ಸ್ಫರ್ಧಾತ್ಮಪರೀಕ್ಷಾ ತರಬೇತಿಗಳಿಗೆ ರಾಜ್ಯದಿಂದ ತೆರಳಿದ್ದ ಸುಮಾರು ಒಂದು ನೂರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಲಾಕ್ ಡೌನ್ ನಿಂದ ಸಂಕಟಕ್ಕೆ ಸಿಲುಕಿದ್ದರು. ಇತ್ತ ಊರಿಗೂ ಬರಲಾಗದೆ, ಅಲ್ಲಿಯೇ ಇರಲಾಗದೇ ಅತಂತ್ರ ಸ್ಥಿತಿಯಲ್ಲಿದ್ದರು. ರಾಜ್ಯಕ್ಕೆ ಬರಲು ತಅವಕಾಶ ಕಲ್ಪಿಸಬೇಕು ವಿದ್ಯಾರ್ಥಿಗಳು ತರಳಬಾಳು ಶ್ರೀಗಳಲ್ಲಿ ಮೊರೆ ಇಟ್ಟಿದ್ದರು. ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆ ತರಲು ಆಂಧ್ರ ಮುಖ್ಯಮಂತ್ರಿ ಹಾಗೂ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೊತೆ ತರಳಬಾಳು ಶ್ರೀಗಳು ಮಾತನಾಡಿದ್ದು, ಶ್ರೀಘ್ರವೇ ರಾಜ್ಯಕ್ಕೆ ಕರೆ ತರುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಕೆಲವರು ಬಾಡಿಗೆ ಮನೆಗಳಲ್ಲಿ ಪೇಯಿಂಗ್ ಗೆಸ್ಟ್ ಗಳಾಗಿದ್ದು ಮನೆಯ ಮಾಲೀಕರು ಮನೆ ಖಾಲಿ ಮಾಡಬೇಕೆಂದು ಒತ್ತಾಯಿಸುತ್ತಿರುವುದರಿಂದ ಒಪ್ಪತ್ತಿನ ಊಟವು ಇಲ್ಲದೆ ಹಸಿವಿನಿಂದ ಕಂಗಾಲಾಗಿದ್ದಾರೆ. ಇವರಲ್ಲಿ ಕೆಲವರು ಸಿರಿಗೆರೆಯಲ್ಲಿ ಓದಿದ ವಿದ್ಯಾರ್ಥಿಗಳಾಗಿದ್ದು ಈ ವಿಪತ್ತಿನಿಂದ ತಮ್ಮನ್ನು ಪಾರುಮಾಡಬೇಕೆಂದು ದೂರವಾಣಿ ಕರೆ ಮಾಡಿ ಸಿರಿಗೆರೆಯ ಶ್ರೀ ತರಳಬಾಳು ಬೃಹನ್ಮಠದ ಪೀಠಾಧಿಪತಿ ಶ್ರೀ ತರಳಬಾಳು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಅವರಲ್ಲಿ ಮೊರೆ ಹೊಕ್ಕಿದ್ದಾರೆ. ಶ್ರೀಗಳು ದೂರವಾಣಿಯಲ್ಲಿ ಮಾತನಾಡಿ ಭಯಭೀತಿಗೊಂಡಿರುವ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ್ದಾರೆ. ಇಂದು ಮಧ್ಯಾಹ್ನದಿಂದ ಸಂಜೆಯವರೆಗೆ ವಿದ್ಯಾರ್ಥಿಗಳೊಂದಿಗೆ, ಆಂಧ್ರಪ್ರದೇಶದ ತರಳಬಾಳು ಮಠದ ಭಕ್ತರೊಂದಿಗೆ, ಎರಡೂ ರಾಜ್ಯಗಳ ಆಡಳಿತ ವ್ಯವಸ್ಥೆಯ ಅಧಿಕಾರಿಗಳೊಂದಿಗೆ, ಮುಖ್ಯಮಂತ್ರಿಗಳವರೊಂದಿಗೆ ಮಾತನಾಡಿ ಸುರಕ್ಷಿತವಾಗಿ ಕರೆ ತರುವುದಾಗಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ತುರ್ತು ಸೌಕರ್ಯ ಕಲ್ಪಿಸಲು ಆಂದ್ರದ ಭಕ್ತರಿಗೆ ಸೂಚನೆ
ಭಯಭೀತರಾಗಿ, ಉಪವಾಸದಿಂದ ಅಸ್ವಸ್ತರಾಗಿರುವ ವಿದ್ಯಾರ್ಥಿಗಳ ರಕ್ಷಣೆ ಹಾಗೂ ಅಗತ್ಯ ಅನಕೂಲ ಕಲ್ಪಿಸಲು ಶ್ರೀ ಗಳು ಆಂಧ್ರಪ್ರದೇಶದಲ್ಲಿ
ನೆಲೆಸಿರುವ ತರಳಬಾಳು ಮಠದ ಭಕ್ತರಿಗೆ ಸೂಚಿಸಿದ್ದು.ಅನೇಕ ಭಕ್ತರು ಶ್ರೀಗಳ ಸೂಚನೆಯಂತೆ ಅವರೆಲ್ಲರ ಮಾಹಿತಿಯನ್ನು ಪಡೆದು ಈಗಾಗಲೇ ಕಾರ್ಯಮಗ್ನರಾಗಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರೊಂದಿಗೆ ಮಾತನಾಡಿ ವಿದ್ಯಾರ್ಥಿಗಳ ಸಂಕಟವನ್ನು ಚರ್ಚಿಸಿದ ಶ್ರೀಗಳು, ಆಂಧ್ರಪ್ರದೇಶದಲ್ಲಿ ಬ್ಯಾಂಕ್ ಪರೀಕ್ಷೆಯ ತರಬೇತಿ ಪಡೆಯಲು ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಲು ಹೋಗಿದ್ದ ವಿದ್ಯಾರ್ಥಿಗಳ ಪೈಕಿ ಸುಮಾರು 80 ಜನರು ಮಠದ ಸಂಪರ್ಕಕ್ಕೆ ಬಂದಿದ್ದಾರೆ. ಇವರನ್ನು ಕರ್ನಾಟಕಕ್ಕೆ ಕರೆಸಿಕೊಳ್ಳುವ ವಿಚಾರವಾಗಿ ಮಾತನಾಡಿದ್ದಾರೆ.ಮುಖ್ಯಮಂತ್ರಿಗಳು ಶ್ರೀಗಳ ಸಲಹೆಯಂತೆ ಮುಂದುವರೆದಿದ್ದಾರೆ.
ಆ ಎಲ್ಲಾ ವಿದ್ಯಾರ್ಥಿಗಳನ್ನು ಬಳ್ಳಾರಿಗೆ ಮತ್ತು ಬೆಂಗಳೂರಿಗೆ ಕರೆದುಕೊಂಡು ಬರುವ ವ್ಯವಸ್ಥೆ ಕಲ್ಪಿಸಿ ಬಳ್ಳಾರಿಗೆ ಬಂದಮೇಲೆ ಅವರಿಗೆ ಸೋಂಕು ಪರೀಕ್ಷೆ ಮಾಡಿಸುವುದಾಗಿಯೂ ಹೇಳಿದ್ದಾರೆ. ನಂದ್ಯಾಲ ದಲ್ಲಿರುವ ಆ ವಿದ್ಯಾರ್ಥಿಗಳ ಮಾಹಿತಿಯನ್ನು ಶ್ರೀಗಳು ಯಡಿಯೂರಪ್ಪನವರಿಗೆ ಕಳಿಸಿಕೊಟ್ಟಿದ್ದು ವಿದ್ಯಾರ್ಥಿಗಳನ್ನು ಕ್ಷೇಮವಾಗಿ ಕರೆತಂದು ಬೆಂಗಳೂರಿನಲ್ಲಿ ಮತ್ತು ಬಳ್ಳಾರಿಯಲ್ಲಿ ಅಗತ್ಯ ಆರೋಗ್ಯ ತಪಾಸಣೆ ನಡೆಸಿ 14 ದಿನ ನಿಗಾದಲ್ಲಿರಿಸಿ ನಂತರ ಅವರ ಊರುಗಳಿಗೆ ಕಳಿಸುವ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದಾರೆ.
ಆಂಧ್ರ ಸರ್ಕಾರದೊಂದಿಗೆ ಸಿಎಂ ಚರ್ಚೆ
ತರಳಬಾಳು ಶ್ರೀಗಳ ಸೂಚನೆಯಂತೆ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪನವರು ಆಂಧ್ರ ಪ್ರದೇಶ ಸಿಎಂ ಜೊತೆ ಚರ್ಚೆ ನಡೆಸಿದ್ದು ವಿದ್ಯಾರ್ಥಿಗಳಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಕೋರಿದ್ದು, ನಾಳೆ ಸಂಜೆಯ ಒಳಗೆ ಎಲ್ಲಾ ವಿದ್ಯಾರ್ಥಿಗಳು ಬಳ್ಳಾರಿ ಮತ್ತು ಬೆಂಗಳೂರಿಗೆ ಸುರಕ್ಷಿತವಾಗಿ ಮರಳಲಿದ್ದಾರೆ.
ವರದಿ: ಬಸವರಾಜ ಸಿರಿಗೆರೆ