ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆಯಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 31ಕ್ಕೆ ಏರಿಕೆಯಾದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯ 45 ವಾರ್ಡ್ ಹಾಗೂ ಸುತ್ತಮುತ್ತಲಿನ 20 ಗ್ರಾಮ ಹಾಗೂ ಬಫರ್ ಝೋನ್ ವ್ಯಾಪ್ತಿಯ ಪ್ರದೇಶದಲ್ಲಿ 14 ದಿನಗಳ ಕಾಲ ಯಾವುದೇ ಅರ್ಥಿಕ ಚಟುವಟಿಕೆ ನಡೆಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 7 ರಿಂದ 1 ಗಂಟೆ ವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಈ ಸಮಯದಲ್ಲಿ ಅಗತ್ಯ ವಸ್ತುಗಳಾದ ಹಾಲು, ಹಣ್ಣು, ತರಕಾರಿ, ಕೃಷಿ ಪರಿಕರ ಖರೀದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇನ್ನುಳಿದ ಯಾವುದೇ ಅಂಗಡಿ ಮುಗ್ಗಟು ತೆರೆಯುವಂತಿಲ್ಲ ಎಂದು ಕಟ್ಟು ನಿಟ್ಟಿನ ಆದೇಶ ಹೊರಡಿಸಿದ್ದಾರೆ.
ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ 45 ವಾರ್ಡ್ ಹಾಗೂ ದಾವಣಗೆರೆ ಸುತ್ತಮುತ್ತಲಿನ 15 ರಿಂದ 20 ಗ್ರಾಮಗಳಿಗೆ ಈ ಆದೇಶ ಅನ್ವಯವಾಗಲಿದೆ. ಇದಲ್ಲದೆ ಬಫರ್ ಝೋನ್ ವ್ಯಾಪ್ತಿಯ ಬೇತೂರು, ಪುಟಗನಾಳ್ , ಆವರಗೊಳ್ಳ ವ್ಯಾಪ್ತಿ ವರೆಗೂ ಯಾವುದೇ ಆರ್ಥಿಕ ಚಟುವಟಿಗೆ ನಡೆಸುತಿಲ್ಲ. ಇದರ ಜೊತೆಗೆ ಬಾರ್ ಕೂಡ ತೆರೆಯುವಂತಿಲ್ಲ.
ಇನ್ನುಳಿದ ಹರಿಹರ, ಚನ್ನಗಿರಿ, ಹೊನ್ನಾಳಿ, ಜಗಳೂರು, ಮಾಯಕೊಂಡ ಪ್ರದೇಶದಲ್ಲಿ ಬಾರ್ ತೆರೆಯಲು ಯಾವುದೇ ಅಡ್ಡಿ ಇಲ್ಲ ಎಂದು ತಿಳಿಸಿದ್ದಾರೆ.
ಎಸ್ ಪಿ ಹನುಮಂತರಾಯ ಮಾತನಾಡಿ, ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಣ ಮಾಡಲು ಸಾರ್ವಜನಿಕರು ಸಹಕಾರ ನೀಡಬೇಕು. ಎರಡು ವಾರಗಳ ಕಾಲ ಕಟ್ಟು ನಿಟ್ಟಾಗಿ ಆದೇಶ ಪಾಲಿಸಬೇಕು. ಒಂದೇ ವೇಳೆ ಆದೇಶ ಮೀರಿದರೆ ದಂಡ ಹಾಕಲಾಗುವುದು ಎಂದರು.



